ಋತುಮತಿಯಾಗದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ;ಎಫ್ಐಆರ್‌ನಲ್ಲಿದೆ ಆಘಾತಕಾರಿ ಅಂಶಗಳು

ಬೆಂಗಳೂರು; ಕೋವಿಡ್‌ ಮೊದಲ ಅಲೆ ಸಂದರ್ಭದಲ್ಲಿಯೇ ಅಪ್ರಾಪ್ತೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಬೃಹನ್ಮಠದ ಮುರುಘಾ ಶರಣರು, ವಾರ್ಡನ್‌ ರಶ್ಮಿ ಸೇರಿದಂತೆ ಒಟ್ಟು 7 ಮಂದಿ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ತಡರಾತ್ರಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

 

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಬ್ಬರ ಪೈಕಿ ಒಬ್ಬ ಬಾಲಕಿಯು ಋತುಮತಿಯಾಗುವ ತನಕವೂ ಅಂದರೆ ಅವಳು 7ನೇ ತರಗತಿ ಓದುತ್ತಿರುವವರೆಗೂ ಸತತವಾಗಿ  ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬ ಆಘಾತಕಾರಿ ಅಂಶವು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಎಫ್‌ಐಆರ್‌ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿರುವ ಬಾಲಕಿಯರಿಬ್ಬರ ತಾಯಿಯು ಆರ್ಥಿಕವಾಗಿ ಶಕ್ತರಲ್ಲದ ಕಾರಣ ತನ್ನಿಬ್ಬರು ಮಕ್ಕಳನ್ನೂ ಮಠದಲ್ಲಿನ ವಸತಿ ನಿಲಯಕ್ಕೆ ಸೇರಿಸಿದ್ದರು. ಈ ಮಕ್ಕಳಿಬ್ಬರು ಹಿಂದುಳಿದ ಸಮುದಾಯಕ್ಕೆ ಸೇರಿದವರು  ಎಂಬ ಅಂಶವು ಎಫ್‌ಐಆರ್‌ನಿಂದ ತಿಳಿದು ಬಂದಿದೆ.

 

ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ಶರಣರ ಖಾಸಗಿ ಕೊಠಡಿಗೆ ಕಳಿಸಲಾಗುತ್ತಿತ್ತು. ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುವುದು ಮತ್ತು ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಅವರನ್ನು ಮುರುಘಾ ಶರಣರ ಸಹಾಯಕರು ಹೆದರಿಸುತ್ತಿದ್ದರು ಎಂಬ ಅಂಶವು ಎಫ್‌ಐಆರ್‌ನಿಂದ ಗೊತ್ತಾಗಿದೆ.

 

ಪೋಕ್ಸೋ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಮೊದಲನೇ ಆರೋಪಿಯನ್ನಾಗಿಸಲಾಗಿದೆ. ವಾರ್ಡನ್‌ ರಶ್ಮಿ (2ನೇ ಆರೋಪಿ), ಬಸವಾದಿತ್ಯ (ಮೂರನೇ ಆರೋಪಿ), ಪರಮಶಿವಯ್ಯ (4ನೇ ಆರೋಪಿ)ಗಂಗಾಧರಯ್ಯ (5ನೇ ಆರೋಪಿ), ಮಹಾಲಿಂಗ (6ನೇ ಆರೋಪಿ), ಕರಿಬಸಪ್ಪ (7ನೇ ಆರೋಪಿ) ಇತರೆ ಆರೋಪಿಗಳಾಗಿದ್ದಾರೆ.

 

ಎಫ್‌ಐಆರ್‌ನಲ್ಲೇನಿದೆ?

 

ನನಗೆ ಗಂಡನ ಆಸರೆ ಸಿಗದ ಕಾರಣ ನಾನು, ನನ್ನಮಕ್ಕಳು ನನ್ನ ಪೋಷಕರ ಆಶ್ರಯದಲ್ಲಿರುತ್ತೇನೆ. ನನ್ನ ಪೋಷಕರು ಆರ್ಥಿಕ ಹಿಂದುಳಿದವರಾಗಿದ್ದು ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾವು ಹಿಂದುಳಿದ ಜಾತಿಗೆ ಸೇರಿದವರಾಗಿರುತ್ತೇವೆ.

 

ನನ್ನ ಗಂಡ ತೊರೆದ ನಂತರ ನನಗೆ ಮಕ್ಕಳನ್ನು ಸಾಕಲು ತೊಂದರೆಯಾಗಿದ್ದರಿಂದ ನನ್ನಮಕ್ಕಳನ್ನು ಮುರುಘಾ ಮಠದ ಆಡಳಿತದಲ್ಲಿರುವ ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆಗೆ 2016ರಲ್ಲಿ 3ನೇ ತರಗತಿ ಮತ್ತು 1ನೇ ತರಗತಿಗೆ ಸೇರಿಸಿ ಮಠದ ಆಶ್ರಯದಲ್ಲಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿರುವ ಬಸವ ಮಕ್ಕಳ ವಸತಿ ನಿಲಯದಲ್ಲಿ ಆಶ್ರಯಕ್ಕಾಗಿ ದಾಖಲಿಸಿರುತ್ತೇನೆ. ನನ್ನ ಮಕ್ಕಳು ಹಾಸ್ಟೆಲ್‌ನಲ್ಲಿರುತ್ತಿದ್ದರು.

 

ನನ್ನ ಮೊದಲನೇ ಮಗಳು 7ನೇ ತರಗತಿ ಓದುತ್ತಿರುವಾಗ ಅಂದರೆ 2019ರಿಂದ ಹಾಗೂ 2 ನೇ ಮಗಳು ಸಹ ಓದುತ್ತಿರುವಾಗ ಕೋವಿಡ್‌ ರಜೆಯಲ್ಲಿದ್ದಾಗ 2020ರಲ್ಲಿ ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ವಾರ್ಡನ್‌ ರಶ್ಮಿ ಮುಖಾಂತರ ತಮ್ಮ ಖಾಸಗಿ ಕೋಣೆಗೆ ಕರೆಸಿಕೊಂಡು ಪ್ರಥಮವಾಗಿ ಲೈಂಗಿಕ ದೌರ್ಜನ್ಯವನ್ನು ಮಾಡಿರುತ್ತಾರೆ ಎಂದು ನನ್ನ ಮಕ್ಕಳು ನನಗೆ ತಿಳಿಸಿರುತ್ತಾರೆ.

 

ಶಿವಮೂರ್ತಿ ಮುರುಘ ಶರಣ ಸ್ವಾಮೀಜಿಯವರು ಅಂದಿನಿಂದಲೂ ಋತುಮತಿಯಾಗುವ ತನಕ ಅಂದರೆ ಅವಳು 7ನೇ ತರಗತಿ ಓದುತ್ತಿರುವವರೆಗೂ ಸತತವಾಗಿ ಲೈಂಗಿಕ ದೌರ್ಜನ್ಯ ಮಾಡಿರುತ್ತಾರೆ. ಇದರ ಜತೆಗೆ ಇದೇ ವಸತಿನಿಲಯದಲ್ಲಿರುವ 15 ವರ್ಷದ 10ನೇ ತರಗತಿ ಮತ್ತು 14 ವರ್ಷದ 9ನೇ ತರಗತಿ ಹಾಗ ಇನ್ನೂ ಮುಂತಾದ ಮಕ್ಕಳು ಅವರ ಹೆಸರುಗಳು ನನಗೆ ಸರಿಯಾಗಿ ನೆನಪಿಲ್ಲ.

 

ವಾರ್ಡನ್‌ ರಶ್ಮಿ ಮಕ್ಕಳ ಮೇಲೆ ಒತ್ತಡ ತಂದು ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಸಹ ಹೆದರಿಸಿ ಅವರುಗಳನ್ನು ಸ್ವಾಮೀಜಿಯವರ ಖಾಸಗಿ ಕೊಠಡಿಗೆ ಯಾವುದಾದರೊಂದು ಕಾರಣ ನೀಡಿ ಕಳಿಸುತ್ತಿದ್ದಳು ಎಂದು ಮಕ್ಕಳು ನನಗೆ ತಿಳಿಸಿರುತ್ತಾರೆ.

 

ಹಾಗೂ ಸ್ವಾಮೀಜಿವರ ಖಾಸಗಿ ಕೊಠಡಿಗೆ ಮಕ್ಕಳು ಹೋಗಲು ಒಪ್ಪದಿದ್ದ ಪಕ್ಷದಲ್ಲಿ ಮುರುಘಾ ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಇವರುಗಳು ಮಕ್ಕಳನ್ನು ಹೆಸರಿಸಿ ಒತ್ತಾಯ ಮಾಡಿ ಕಳಿಸುತ್ತಿದ್ದಳು. ಸ್ವಾಮೀಜಿಯ ಅಸಿಸ್ಟೆಂಟ್‌ ಆಗಿರುವ ಮಹಾಲಿಂಗ ಹಾಗೂ ಅಡುಗೆ ಭಟ್ಟ ಕರಿಬಸಪ್ಪ ಇವರುಗಳು ಮಕ್ಕಳನ್ನು ಸ್ವಾಮೀಜಿಯ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿ ಬಿಡುವುದು ಹಾಗೂ ಬಾಗಿಲಲ್ಲಿ ನಿಂತು ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುವುದು ಮತ್ತು ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಹೆದರಿಸುವುದು ಮಾಡುತ್ತಿದ್ದರು ಎಂದು ಬಾಲಕಿಯ ತಾಯಿಯು ದೂರಿನಲ್ಲಿ ವಿವರಿಸಿದ್ದಾರೆ.

 

12 ಮತ್ತು 14 ವರ್ಷದ ಬಾಲಕಿಯರಿಬ್ಬರು ತಮ್ಮ ತಾಯಿಯೊಂದಿಗೆ ಮೈಸೂರಿನ ಒಡನಾಡಿ ಸ್ಟಾನ್ಲಿ ಅವರನ್ನು ಸಂಪರ್ಕಿಸಿದ್ದರು. ಅವರ ಸಲಹೆ ಮೇರೆಗೆ ಮಕ್ಕಳು ಮತ್ತು ತಾಯಿಯು ಮೈಸೂರಿನ ಸಿಡಬ್ಲೂಸಿಯ ಮುಂದೆ ಹಾಜರಾಗಿದ್ದರು ಎಂದು ಗೊತ್ತಾಗಿದೆ.

 

ಸಿಡಬ್ಲ್ಯೂಸಿಯು ಮಕ್ಕಳಿಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಆ ನಂತರ ಸಂತ್ರಸ್ತೆ ಬಾಲಕಿಯರ ಹೇಳಿಕೆಗಳನ್ನು ಪಡೆದು ದಾಖಲಿಸಿ ತಕ್ಷಣವೇ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸಿಡಬ್ಲೂಸಿಯು ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts