ಪಠ್ಯ ಪರಿಷ್ಕರಿಸಿದ ರೋಹಿತ್‌ ಚಕ್ರತೀರ್ಥ ವರದಿ ಸುತ್ತ ‘ದಿ ಫೈಲ್‌’ನ 10 ವರದಿಗಳು

ಬೆಂಗಳೂರು; ಆರರಿಂದ ಹತ್ತನೇ ತರಗತಿವರೆಗಿನ ಸಮಾಜ ವಿಜ್ಞಾನ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿನ ಪಠ್ಯವನ್ನು ಪರಿಶೀಲಿಸಿ ಮರು ಪರಿಷ್ಕರಿಸಲು ವರದಿ ನೀಡಿರುವ ರೋಹಿತ್‌ ಚಕ್ರತೀರ್ಥ ಅವರನ್ನು ಸಮಿತಿಯಿಂದಲೇ ವಜಾಗೊಳಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ.

 

ಪಠ್ಯ ಪುಸ್ತಕ ಪರಿಷ್ಕರಿಸಲು ಸರ್ಕಾರವು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ‘ದಿ ಫೈಲ್‌’ ಮೊದಲ ಬಾರಿಗೆ ವರದಿ ಪ್ರಕಟಿಸುವ ಮೂಲಕ ವರದಿ ಹೇಗಿರಲಿದೆ ಎಂದು ಗಮನ ಸೆಳೆದಿತ್ತು. ಆ ನಂತರ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬೆನ್ನೆತ್ತಿದ್ದ ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದೆ.

 

ಇದುವರೆಗೂ 10 ವರದಿಗಳನ್ನು ಪ್ರಕಟಿಸಿದೆ. ಅದರ ಸ್ಥೂಲ ನೋಟವನ್ನು ಇಲ್ಲಿ ಕೊಡಲಾಗಿದೆ.
ಹೊಸ ಧರ್ಮಗಳ ಉದಯ ಕುರಿತಾದ ಪಠ್ಯ ವಿಷಯಗಳನ್ನು ಕಡಿತಗೊಳಿಸಲು ಸರ್ಕಾರವು ರೋಹಿತ್‌ ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿ ರಚಿಸಿ ಹೊರಡಿಸಿದ್ದ ಆದೇಶದ ಕುರಿತು ‘ದಿ ಫೈಲ್‌’ 2021ರ ಸೆ.9ರಂದು ಮೊದಲ ವರದಿ ಪ್ರಕಟಿಸಿತ್ತು. ಈ ಸಮಿತಿಯಲ್ಲಿ ಯಾರ್ಯಾರಿದ್ದಾರೆ ಎಂಬ ವಿವರವನ್ನೂ ಈ ವರದಿಯಲ್ಲಿ ನೀಡಿತ್ತು.

ಹೊಸಧರ್ಮಗಳ ಉದಯ ಪಠ್ಯ ಕಡಿತ; ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆ

 

ಚಕ್ರತೀರ್ಥ ನೇತೃತ್ವದ ಸಮಿತಿಯು ರಚನೆಯಾಗಿ 2 ತಿಂಗಳಾದರೂ ವರದಿ ಸಲ್ಲಿಸಿರಲಿಲ್ಲ. ಅಲ್ಲದೆ ವರದಿ ಸಲ್ಲಿಸಲು ಸಮಯಾವಕಾಶವನ್ನು ವಿಸ್ತರಿಸಲು ಸರ್ಕಾರವನ್ನು ಕೋರಿರಲಿಲ್ಲ. ಈ ಕುರಿತು ಕರ್ನಾಟಕ ಪಠ್ಯ ಪುಸಕ್ತ ಸಂಘದ ವ್ಯವಸ್ಥಾಪಕ ನಿರ್ದೇಶಕ ಬೋರೇಗೌಡ ಅವರು ನೀಡಿದ್ದ ಮಾಹಿತಿಯನ್ನಾಧರಿಸಿ 2021ರ ನವೆಂಬರ್‌ 30ರಂದು ವರದಿ ಪ್ರಕಟಿಸಿತ್ತು.

ಪಠ್ಯ ಕಡಿತ; ಗಡುವು ಮೀರಿದರೂ ವರದಿ ಸಲ್ಲಿಸದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ

ಈ ಕುರಿತಾದ ವರದಿ ಪ್ರಕಟವಾದ 2 ತಿಂಗಳ ನಂತರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ವರದಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು 2021ರ ಡಿಸೆಂಬರ್‌ 31ರಂದು ಸೂಚಿಸಿತ್ತು. ಈ ಸಂಬಂಧ 2022ರ ಜನವರಿ 2ರಂದು ವರದಿ ಪ್ರಕಟಿಸಿತ್ತು.

ಪಠ್ಯದಲ್ಲಿ ವೈದಿಕ ಧರ್ಮದ ಟೀಕೆ; ಜರೂರಾಗಿ ಪರಿಶೀಲನಾ ಸಮಿತಿ ವರದಿ ಸಲ್ಲಿಸಲು ಸೂಚನೆ

ಆ ನಂತರ ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಸಮಿತಿಯು ಪರಿಷ್ಕರಿಸಿರುವ ಪಾಠಾಂಶವನ್ನು ಅಳವಡಿಸಬೇಕು ಎಂದು ಸರ್ಕಾರವು ಸೂಚಿಸಿತ್ತು. 2022ರ ಮಾರ್ಚ್‌ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಬಹಿರಂಗಗೊಳಿಸಿರಲಿಲ್ಲ. ಈ ಕುರಿತು 2022ರ ಮಾರ್ಚ್‌ 24ರಂದು ವರದಿ ಪ್ರಕಟಿಸಿತ್ತು.

ಪಠ್ಯಪುಸ್ತಕ ಪರಿಷ್ಕರಣೆ ವರದಿ; ರೋಹಿತ್‌ ಚಕ್ರತೀರ್ಥ ಸಮಿತಿ ಪರಿಷ್ಕರಿಸಿರುವ ಪಾಠಾಂಶ ಅಳವಡಿಕೆಗೆ ಆದೇಶ

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಪಾಠಾಂಶವನ್ನು ಕೈಬಿಟ್ಟಿದ್ದರ ಕುರಿತು ದಾಖಲೆ ಸಮೇತ 2022ರ ಮಾರ್ಚ್‌ 29ರಂದು ವರದಿ ಪ್ರಕಟಿಸಿತ್ತು.

ಟಿಪ್ಪುವಿನ ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶ ಕೈಬಿಟ್ಟ ಚಕ್ರತೀರ್ಥ ಸಮಿತಿ

ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು. ಈ ಕುರಿತು 2022ರ ಏಪ್ರಿಲ್‌ 23ರಂದು ಪ್ರಕಟಿಸಿತ್ತು.

ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ; ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದ ಕಿತ್ತೊಗೆದ ಸಮಿತಿ

ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರು. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು ಎಂಬ ಕುರಿತಾಗಿ ಆರ್‌ಟಿಐ ದಾಖಲೆ ಸಮೇತ 2022ರ ಏಪ್ರಿಲ್‌ 26ರಂದು ವರದಿ ಪ್ರಕಟಿಸಿತ್ತು.

ಪಠ್ಯ ಪರಿಷ್ಕರಣೆ ಪರಿಣಾಮ ; 2.5 ಕೋಟಿ ನಷ್ಟ, ಮುದ್ರಿತ 6.76 ಲಕ್ಷ ಪುಸ್ತಕಗಳು ಅನುಪಯುಕ್ತ, ಹರಾಜಿಗೂ ನಕಾರ

6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕವನ್ನು ಪರಿಷ್ಕರಿಸಿರುವ ರೋಹಿತ್‌ ಚಕ್ರತೀರ್ಥ ಸಮಿತಿಗೆ ಪಿಯು ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಲು ವಹಿಸಲು ಸರ್ಕಾರ ಸೂಚಿಸಿತ್ತು. ಈ ಕುರಿತು ಸಚಿವ ಬಿ ಸಿ ನಾಗೇಶ್‌ ಅವರು ಬರೆದಿದ್ದ ಪತ್ರ ಮತ್ತು ಪಿಯು ಮಂಡಳಿ ನಿರ್ದೇಶಕರು ಬರೆದಿದ್ದ ಪತ್ರವನ್ನಾಧರಿಸಿ 2022ರ ಮೇ 23ರಂದು ವರದಿ ಪ್ರಕಟಿಸಿತ್ತು.

ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ; ರೋಹಿತ್‌ ಚಕ್ರತೀರ್ಥ ಸಮಿತಿಗೆ ವಹಿಸಲು ಸೂಚನೆ

ರೋಹಿತ್‌ ಚಕ್ರತೀರ್ಥ ಅವರನ್ನು ನೇಮಿಸಿದ್ದು ಬಿ ಸಿ ನಾಗೇಶ್‌ ಅವರಲ್ಲ, ಬದಲಿಗೆ ಹಿಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್‌ಕುಮಾರ್ ಎಂಬ ಸಂಗತಿಯನ್ನು ‘ದಿ ಫೈಲ್‌’ ಆರ್‌ಟಿಐ ದಾಖಲೆ ಆಧರಿಸಿ ಹೊರಗೆಳೆದಿತ್ತು. ಈ ಕುರಿತು 2022ರ ಮೇ 25ರಂದು ವರದಿ ಪ್ರಕಟಿಸಿತ್ತು.

ಚಕ್ರತೀರ್ಥರನ್ನು ನೇಮಿಸಿದ್ದು ಸುರೇಶ್‌ಕುಮಾರ್‌; ಪರಾಮರ್ಶನೆಗೊಳಪಡದ ಮರುಪರಿಷ್ಕರಣೆ ವರದಿ?

ರೋಹಿತ್‌ ಚಕ್ರತೀರ್ಥ ಅವರು ಸೂಚಿಸಿದ್ದವರನ್ನೇ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿತ್ತು . ಹಾಗೆಯೇ ಈ ಸಮಿತಿಯು ನೀಡುವ ವರದಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನು ಹೆಸರಿಸಲಾಗುವುದು ಎಂದು ಅಂದಿನ ಸಚಿವ ಎಸ್‌ ಸುರೇಶ್‌ ಕುಮಾರ್‌ ಅವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಉನ್ನತ ಮಟ್ಟದ ತಜ್ಞರನ್ನು ನೇಮಿಸಲಾಗಿದೆಯೇ ಎಂಬ ಬಗ್ಗೆ ಕಡತದಲ್ಲಿ ಯಾವ ಮಾಹಿತಿಯೂ ಇಲ್ಲವಾಗಿದೆ. ಅದೇ ರೀತಿ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿಯು ನೀಡಿದ್ದ ವರದಿಯನ್ನು ಯಾರು ಪರಿಶೀಲಿಸಿದ್ದಾರೆ ಎಂಬ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿತ್ತು.

 

ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ತೀವ್ರ ಟೀಕೆಗೆ ಒಳಗಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಇದೀಗ ತನ್ನದೇ ಅಧ್ಯಕ್ಷತೆಯಲ್ಲಿರುವ ಸಮಿತಿಯು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವೇಶ್ವರರು ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಮತ್ತು ಲಿಂಗಾಯತ ಮಠಗಳನ್ನು ಹೆಸರಿಸದೇ ಕೇವಲ ಅಷ್ಟಮಠಗಳನ್ನು ಹೆಸರಿಸಿ ಪರಿಷ್ಕರಿಸಿರುವುದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಈ ಕುರಿತು ಮೇ 31ರಂದು ವರದಿ ಪ್ರಕಟಿಸಿತ್ತು.

ಬಸವಣ್ಣನಿಗೆ ಉಪನಯನ, ಲಿಂಗದೀಕ್ಷೆ, ಅಷ್ಟಮಠಗಳ ಉಲ್ಲೇಖಿಸಿ ಲಿಂಗಾಯತ ಮಠಗಳ ಹೆಸರಿಸದ ಚಕ್ರತೀರ್ಥ

ಕುವೆಂಪು ಅವರನ್ನು ನಿಂದಿಸಿದ್ದಕ್ಕೆ ಒಕ್ಕಲಿಗ ಸಮುದಾಯ ಪ್ರಭಾವಿ ಮಠ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮತ್ತು ಒಕ್ಕಲಿಗರ ಅಧಿಕಾರಿ ಮತ್ತು ನೌಕರರ ಸಂಘವು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ ರೋಹಿತ್‌ ಚಕ್ರತೀರ್ಥರನ್ನು ಸಮಿತಿಯಿಂದಲೇ ವಜಾಗೊಳಿಸಬೇಕು ಎಂದು ಪತ್ರ ಬರೆದಿರುವ ಬೆನ್ನಲ್ಲೇ ಬಸವೇಶ್ವರ ಕುರಿತಾಗಿಯೂ ತಪ್ಪು ಮಾಹಿತಿಯನ್ನು ಪಠ್ಯದಲ್ಲಿ ಸೇರಿಸಿರುವುದು ಲಿಂಗಾಯತ ಸಮುದಾಯದಿಂದಲೂ ತೀವ್ರ ಟೀಕೆಗೆ ಗುರಿಯಾಗಿತ್ತು.

SUPPORT THE FILE

Latest News

Related Posts