ಬೆಂಗಳೂರು; ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್ ಮಾಡಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜೈ ಪ್ರಕಾಶ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಕಡತವು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ತೆವಳುತ್ತಿದ್ದರೆ ಇತ್ತ ಜೈಪ್ರಕಾಶ್ ಅವರ ಸೇವಾವಧಿ ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಕಡತ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರು ನಿರ್ದೇಶಿಸುವ ಮೂಲಕ ಕಡತಕ್ಕೆ ಚಿರತೆ ವೇಗ ನೀಡಿದ್ದಾರೆ.
ಈ ಕುರಿತು 2022ರ ಮೇ 21ರಂದು ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ. ಕೆ ಜೈಪ್ರಕಾಶ್ ಅವರು ಇದೇ ಮೇ 31ಕ್ಕೆ ನಿವೃತ್ತಿಯಾಗುತ್ತಿದ್ದು ಇವರ ಸೇವಾವಧಿಯನ್ನು ಇನ್ನೂ 2 ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಜೆ ಸಿ ಮಾಧುಸ್ವಾಮಿ ಅವರು 2022ರ ಮೇ 17ರಂದು ಬರೆದಿದ್ದ ಪತ್ರ ಆಧರಿಸಿ ಕಡತ ಮಂಡಿಸಲು ನಿರ್ದೇಶಿಸಿದ್ದಾರೆ ಎಂಬುದು ಪತ್ರದಿಂದ ತಿಳಿದು ಬಂದಿದೆ.
ಇದೇ ಮೇ 31ಕ್ಕೆ ನಿವೃತ್ತಿಯಾಗುತ್ತಿರುವ ಜೈಪ್ರಕಾಶ್ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಗಳ ಕುರಿತು ಕ್ರಮ ಕೈಗೊಳ್ಳುವ ಸಂಬಂಧ ವಿಚಕ್ಷಣಾ ದಳಕ್ಕೆ ವಹಿಸಲು ಅಧೀನ ಕಾರ್ಯದರ್ಶಿಯು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಡತ ರವಾನಿಸಿದ್ದಾರೆ. ಅದರೆ ಸಂಬಂಧಪಟ್ಟ ಅಧಿಕಾರಿಗೆ ಇನ್ನೂ ಕಡತ ಹಿಂದಿರುಗಿಲ್ಲ ಎಂದು ಗೊತ್ತಾಗಿದೆ. ಈ ಬೆಳವಣಿಗೆ ಮಧ್ಯೆಯೇ ಅವರ ಸೇವಾವಧಿ ವಿಸ್ತರಿಸುವ ಸಂಬಂಧ ಕಡತವನ್ನು ಮಂಡಿಸಲು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿರುವುದು ಕೆಳಹಂತದ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಕೆ ಜೈಪ್ರಕಾಶ್ ವಿರುದ್ಧ ದೂರಿನ ಅಂಶಗಳೇನು?
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜಯಪ್ರಕಾಶ್ ಮತ್ತು ಪ್ರಧಾನ ವ್ಯವಸ್ಥಾಪಕ ಗಂಗಾಧರ್ ಅವರ ವಿರುದ್ಧ ಜವರೇಗೌಡ ಎಂಬುವರು ಎಸಿಬಿಗೆ ದೂರು ಸಲ್ಲಿಸಿದ್ದರು. ಭಾರೀ ನೀರಾವರಿ ಯೋಜನೆಗಳ ಟೆಂಡರ್ ಮತ್ತು ಎಲ್‌ಒಸಿ ಬಿಡುಗಡೆಯಲ್ಲಿ ದೊಡ್ಡಮೊತ್ತದ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.
ಕೆ ಜೈಪ್ರಕಾಶ್ ಅವರು ತಮ್ಮ ಮಗನನ್ನು ಬಿಎಸ್‌ಆರ್ ಮತ್ತು ಸ್ಟಾರ್ ಬಿಲ್ಡರ್ ಕಂಪನಿಯಲ್ಲಿ ಪಾಲುದಾರರನ್ನಾಗಿ ಮಾಡಿ, ಹೇಮಾವತಿ, ಗೊರೂರು ವಲಯದಲ್ಲಿ ಎಲ್ಲಾ ಭಾರೀ ನೀರಾವರಿ ಯೋಜನೆಗಳ ಟೆಂಡರ್‌ನಲ್ಲಿ ಗೋಲ್‌ಮಾಲ್ ಮಾಡಿರುತ್ತಾರೆ ಎಂದು ಜವರೇಗೌಡ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.
ಜೈಪ್ರಕಾಶ್ ಮತ್ತು ಪ್ರಧಾನ ವ್ಯವಸ್ಥಾಪಕ ಬಿ ಕೆ ಗಂಗಾಧರ್ ಸೇರಿ ಈ ಎರಡೂ ಕಂಪನಿಗಳಿಗೆ ಆದ್ಯತೆ ಮೇಲೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿರುತ್ತಾರೆ. ಮತ್ತು ಟೆಂಡರ್ ಪರಿಮಾಣಗಳನ್ನು ಮೀರಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಪರಿಗಣಿಸಿ ಈ ಎರಡೂ ಕಂಪನಿಗಳಿಗೆ ನೀಡಿ ಕಿಕ್‌ಬ್ಯಾಕ್ ಪಡೆದಿರುತ್ತಾರೆ. ಇವರ ಅಧಿಕಾರವಾಧಿಯಲ್ಲಿ ಟೆಂಡರ್‌ಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಯಲಿಗೆಳೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸಿಬಿಗೆ ದೂರಿದ್ದರು.
ಎಸಿಬಿ ಮಾಡಿದ್ದೇನು?
ಈ ದೂರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಜಲಸಂಪನ್ಮೂಲ ಇಲಾಖೆಯ ವಿಚಕ್ಷಣಾ ದಳದ ಮೂಲಕ ತನಿಖೆ ನಡೆಸಬೇಕು ಎಂದು ಎಸಿಬಿಯ ಎಡಿಜಿಪಿಗೆ ಎಸ್ಪಿ ಯತೀಶ್‌ಚಂದ್ರ ಅವರು 2021ರ ಆಗಸ್ಟ್ 16ರಂದು ಪತ್ರ ಬರೆದಿದ್ದರು.
ಈ ಅರ್ಜಿಯನ್ನು ಪರಿಶೀಲಿಸಿದ್ದ ಎಸಿಬಿಯು ‘ ಅರ್ಜಿಯಲ್ಲಿನ ವಿಷಯವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡದೇ ಇರುವುದರಿಂದ ಇಲಾಖೆಯ ಆಡಳಿತಾತ್ಮಕ ವಿಷಯವಾಗಿರುವುದರಿಂದ ದೂರು ಅರ್ಜಿಯಲ್ಲಿ ಜಾಗೃತ ಅಧಿಕಾರಿಗಳ ಪರಿಶೀಲನೆ ಸಲುವಾಗಿಜಲಸಂಪನ್ಮೂಲ ಇಲಾಖೆಗೆ ಕಳಿಸಿಕೊಡಬೇಕು ಎಂದು ಎಸಿಬಿ ಎಡಿಜಿಪಿ ಕಚೇರಿಗೆ ವರದಿ ಸಲ್ಲಿಸಿದ್ದರು ಎಂಬುದು ಪತ್ರದಿಂದ ತಿಳಿದು ಬಂದಿದೆ.
‘ಪೊಲೀಸ್ ಇನ್ಸ್‌ಪೆಕ್ಟರ್ ಸಲ್ಲಿಸಿರುವ ವರದಿಯಂತೆ ಎಸ್ ಎಂ ಜವರೇಗೌಡ ಅವರು ನೀಡಿರುವ ದೂರು ಅರ್ಜಿಯಲ್ಲಿನ ಆರೋಪಗಳ ಬಗ್ಗೆ ಜಲಸಂಪನ್ನೂಲ ಇಲಾಖೆಯ ಜಾಗೃತ ಅಧಿಕಾರಿಗಳಿಂದ ಪರಿಶೀಲನೆ ಕೈಗೊಳ್ಳಬೇಕು. ಇದನ್ನು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿಕೊಡಬೇಕು,’ ಎಂದು ಎಸಿಬಿಯ ಎಸ್ಪಿ ಯತೀಶ್ ಚಂದ್ರ ಅವರು 2021ರ ಆಗಸ್ಟ್ 16ರಂದು ಎಸಿಬಿಯ ಎಡಿಜಿಪಿ ಅವರಿಗೆ ಪತ್ರ ಬರೆದಿದ್ದರು.