ರಾಜ್ಯಸಭಾ ಚುನಾವಣೆ ಕುದುರೆ ವ್ಯಾಪಾರ; ಕುಪೇಂದ್ರರೆಡ್ಡಿ V/s ಲೆಹರ್‌ ಸಿಂಗ್‌ ಪೈಪೋಟಿ?

ಬೆಂಗಳೂರು; ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಇನ್ನೂ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಅಧಿಕೃತವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನವೇ ನಾಲ್ಕನೇ  ಅಭ್ಯರ್ಥಿ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ನಾಯಕರನ್ನು ಭೇಟಿ ಮಾಡುತ್ತಿರುವುದು ರಾಜ್ಯಸಭೆ ಚುನಾವಣೆಗೆ ರಂಗು ತಂದಿದೆ.

 

ಈ ಚುನಾವಣೆ ಮೂಲಕವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮುಖಭಂಗಕ್ಕೀಡು ಮಾಡುವುದಲ್ಲದೇ ಅವರ ವರ್ಚಸ್ಸನ್ನು ಕುಂದಿಸಲು ಕಾಂಗ್ರೆಸ್‌ನ ಒಂದು ಬಣವು ವ್ಯವಸ್ಥಿತವಾಗಿ ತಂತ್ರಗಾರಿಕೆಯನ್ನು ರೂಪಿಸುತ್ತಿರುವ ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ.

 

ಜೆಡಿಎಸ್‌ನ ಅಭ್ಯರ್ಥಿ ಎಂದು ಹೇಳಲಾಗಿರುವ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ಹಿನ್ನೆಲೆ ಇರುವ ಕುಪೇಂದ್ರರೆಡ್ಡಿ ಮತ್ತು ಬಿಜೆಪಿಯಿಂದ ನಾಲ್ಕನೇ  ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿರುವ ಲೆಹರ್‌ಸಿಂಗ್‌ ಮಧ್ಯೆ ಭಾರೀ ಪೈಪೋಟಿ ಶುರುವಾಗಿದೆ. ಈಗಾಗಲೇ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್‌ನ ಕದ ತಟ್ಟುವ ಮೂಲಕ ಮತ ಖರೀದಿಸಲು ದುಂಬಾಲು ಬೀಳುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ.

 

ಕರ್ನಾಟಕದ ಹಿತಾಸಕ್ತಿಗಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಗಂಭೀರವಾಗಿ ಚಿಂತಿಸದ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯು ರಿಯಲ್‌ ಎಸ್ಟೇಟ್‌ ಅಥವಾ ಇನ್ನಿತರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೇ ಮಣೆ ಹಾಕಲಿದೆ ಎಂಬುದು ನಿಚ್ಚಳವಾಗಿ ಗೋಚರಿಸಲಾರಂಭಿಸಿದೆ.

 

ಅದರಲ್ಲೂ ವಿಶೇಷವಾಗಿ ಬಿಜೆಪಿಯ ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದೇ ಹೇಳಲಾಗಿರುವ ಲೆಹರ್‌ಸಿಂಗ್‌ ಅವರ ಗೆಲುವು ಅಷ್ಟು ಸುಲಭವೂ ಅಲ್ಲ. ಮತ ಖರೀದಿ ಹೊರತುಪಡಿಸಿದರೆ ಬೇರೆ ದಾರಿಯೂ ಅವರಿಗಿಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

 

ರಾಜಕಾರಣದಲ್ಲಿ ನೈತಿಕತೆ ಕುರಿತು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿಯ ಕೇಂದ್ರ ವರಿಷ್ಠರು, ಕರ್ನಾಟಕದ ಮಟ್ಟಿಗೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅನಿವಾರ್ಯವಾಗಿ ಅನೈತಿಕ ದಾರಿಯನ್ನೇ ಹಿಡಿದರೆ ಅಚ್ಚರಿಯೇನಿಲ್ಲ.

 

ಹಾಗೆಯೇ ಕಾಂಗ್ರೆಸ್‌ ಈಗಾಗಲೇ ಕೇಂದ್ರದ ಮಾಜಿ ಸಚಿವ ಜೈರಾಂರಮೇಶ್‌ ಅವರನ್ನು ಮೊದಲ ಅಭ್ಯರ್ಥಿ ಎಂದು ನಿರ್ಧರಿಸಿದೆಯಾದರೂ ಎರಡನೇ ಅಭ್ಯರ್ಥಿ ಎಂದು ಯಾರನ್ನೂ ನಿರ್ಧರಿಸಿಲ್ಲ. ಹೀಗಾಗಿ ಕಾಂಗ್ರೆಸ್‌ ಶಾಸಕರು ಜೆಡಿಎಸ್‌ನ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು ಹೈಕಮಾಂಡ್‌ ಏನಾದರೂ ಸೂಚಿಸಿದರೆ ಅದು ಹೊಂದಾಣಿಕೆ ಮಾತ್ರವಲ್ಲ, ಕುದುರೆ ವ್ಯಾಪಾರಕ್ಕೂ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಕಾಂಗ್ರೆಸ್‌ನ ಶಾಸಕರೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

 

ಅಲ್ಲದೆ ಈ ಬಾರಿ ನಡೆಯಲಿರುವ ರಾಜ್ಯಸಭೆ ಚುನಾವಣೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಡಿ ಕೆ ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ ಕೆ ಹರಿಪ್ರಸಾದ್‌ ಅವರ ಗುಂಪು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹಣಿಯಲು ತಂತ್ರಗಾರಿಕೆಯನ್ನೂ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ನಡುವೆಯೇ ಜೆಡಿಎಸ್‌ನ ಅಭ್ಯರ್ಥಿ ಎಂದು ಹೇಳಲಾಗುತ್ತಿರುವ ಕುಪೇಂದ್ರರೆಡ್ಡಿ ಅವರು ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಕದ ತಟ್ಟಿರುವುದು ಈ ಎಲ್ಲಾ ಮಾತುಗಳಿಗೆ ಪುಷ್ಠಿ ದೊರೆತಂತಾಗಿದೆ.

 

ಜೆಡಿಎಸ್‌ನೊಂದಿಗೆ ಮುಂದಿನ ಯಾವುದೇ ಚುನಾವಣೆಯಲ್ಲಿಯೂ ಕೈಜೋಡಿಸುವುದಿಲ್ಲ ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ ಇದೀಗ ಜೆಡಿಎಸ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿರುವ ಕುಪೇಂದ್ರರೆಡ್ಡಿ ಅವರು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆಯಲ್ಲದೆ ಈ ಚುನಾವಣೆ ಮೂಲಕ ಡಿ ಕೆ ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ ಕೆ ಹರಿಪ್ರಸಾದ್‌ ಅವರು ಮೇಲುಗೈ ಸಾಧಿಸಲು ಕಾರಣವಾಗಲಿದೆ ಎಂಬ ಮಾತುಗಳೂ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

 

 

ಜೆಡಿಎಸ್‌ ಬಳಿ ಸಂಖ್ಯಾಬಲ ಇಲ್ಲದಿದ್ದರೂ ಕುಪೇಂದ್ರ ರೆಡ್ಡಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಕುಪೇಂದ್ರ ರೆಡ್ಡಿ ಅವರು ಮೂಲತಃ ಕಾಂಗ್ರೆಸ್‌ನ ಮತ್ತೊಬ್ಬ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗ ಎನ್ನಲಾಗಿದೆ. ಹೀಗಾಗಿಯೇ ಖರ್ಗೆ ಅವರ ಮತ್ತೊಬ್ಬ ಬೆಂಬಲಿಗ ಎಂದು ಬಿಂಬಿತವಾಗಿರುವ ವಿಧಾನಪರಿಷತ್‌ ಸದಸ್ಯ ಯು ಬಿ ವೆಂಕಟೇಶ್‌ ಅವರೊಂದಿಗೆ ಬಿ ಕೆ ಹರಿಪ್ರಸಾದ್‌ ಅವರನ್ನು ಕುಪೇಂದ್ರರಡ್ಡಿ ಭೇಟಿ ಮಾಡಿದ್ದಾರೆ.

 

ಈ ಮಧ್ಯೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ನ ವರಿಷ್ಠ ಎಚ್‌ ಡಿ ಕುಮಾರಸ್ವಾಮಿ ಅವರು ದಿಢೀರ್‌ ಎಂದು ಸಿಂಗಾಪೂರಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಕುಪೇಂದ್ರರೆಡ್ಡಿ ಅವರನ್ನು ಜೆಡಿಎಸ್‌ನ ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮಾಜಿ ಪ್ರಧಾನ ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ರೇವಣ್ಣ ಅವರು ನಿರ್ಧಾರದಿಂದ ಅಸಮಾಧಾನಗೊಂಡಿರುವ ಎಚ್‌ ಡಿ ಕುಮಾರಸ್ವಾಮಿ ಅವರು ಸಿಂಗಾಪೂರಕ್ಕೆ ತೆರಳಿದ್ದಾರೆ.

 

ಅಲ್ಲದೆ ಈ ಹಿಂದೆ ರಾಜ್ಯಸಭಾ ಚುನಾವಣೆ ಸ್ಪರ್ಧಿಸಿ ಸೋಲು ಅನುಭವಿಸಿದ್ದ ವಿಧಾನಪರಿಷತ್‌ನ ಜೆಡಿಎಸ್‌ನ ಸದಸ್ಯ ಬಿ ಎಂ ಫಾರೂಕ್‌ ಕೂಡ ಅಸಮಾಧಾನಿತರಾಗಿದ್ದಾರೆ. ಕಳೆದ ಬಾರಿಯೇ ರಾಜ್ಯಸಭೆ ಪ್ರವೇಶಿಸಲು ಸಾಕಷ್ಟು ಕಸರತ್ತು ನಡೆಸಿದ್ದ ಫಾರೂಕ್‌ ಈ ಬಾರಿ ತಮಗೆ ಅವಕಾಶ ಸಿಗಬಹುದು ಎಂದು ಲೆಕ್ಕಾಚಾರ ಹಾಕಿದ್ದರು.

 

ಸಿದ್ದರಾಮಯ್ಯ ಅವರೊಂದಿಗೆ ಎಚ್‌ ಡಿ ರೇವಣ್ಣಉತ್ತಮ ರಾಜಕೀಯ ಗೆಳೆತನ ಹೊಂದಿದ್ದಾರೆ. ಹೀಗಾಗಿಯೇ ರೇವಣ್ಣ ಅವರು ಕುಪೇಂದ್ರರೆಡ್ಡಿ ಅವರಿಗೆ ಕಾಂಗ್ರೆಸ್‌ ಬೆಂಬಲ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಲಿದ್ದಾರೆ. ಆದರೆ ಜೆಡಿಎಸ್‌ನೊಂದಿಗೆ ಯಾವುದೇ ಚುನಾವಣೆಯಲ್ಲಿಯೂ ಮೈತ್ರಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಸಿದ್ದರಾಮಯ್ಯ ಅವರು ಜೆಡಿಎಸ್‌ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಬೆಂಬಲ ನೀಡಲಿದ್ದಾರೆಯೇ ಅಥವಾ ತಮ್ಮ ಹೇಳಿಕೆಗೆ ಬದ್ಧರಾಗುವವರೇ ಎಂಬುದು ಕುತೂಹಲ ಮೂಡಿಸಿದೆ.

 

ಇನ್ನು, ಬಿಜೆಪಿಯು ಸಹ ಇನ್ನೂ ತನ್ನ ಅಭ್ಯರ್ಥಿ ಎಂದು ಇದುವರೆಗೂ ಘೋಷಿಸಿಲ್ಲ. ವಿಧಾನಪರಿಷತ್‌ನ ಮಾಜಿ ಸದಸ್ಯ ಲೆಹರ್‌ಸಿಂಗ್‌ ಕೂಡ ರಾಜ್ಯಸಭೆ ಪ್ರವೇಶಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿಯ ಕೇಂದ್ರ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಂದಿರುವ ಲೆಹರ್‌ಸಿಂಗ್‌, ಮೊದಲ ಅಭ್ಯರ್ಥಿಯಾಗುವ ಉಮೇದಿನಲ್ಲಿದ್ದರು. ಆದರೀಗ ನಾಲ್ಕನೇ ಅಭ್ಯರ್ಥಿಯಾಗಲು ಅಂತಿಮ ಕಸರತ್ತು ನಡೆಸಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ.

 

ಲೆಹರ್‌ಸಿಂಗ್‌ ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಬೆಂಬಲವೂ ಅವರಿಗಿರಲಿದೆ. ಲೆಹರ್‌ಸಿಂಗ್‌ ಕಣಕ್ಕಿಳಿಯುವುದರ ಹಿಂದೆಯೂ ಡಿ ಕೆ ಶಿವಕುಮಾರ್‌ ಅವರ ತಂತ್ರಗಾರಿಕೆಯೂ ಢಾಳಾಗಿ ಇರಲಿದೆ. ಬಿಜೆಪಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಜತೆ ಡಿ ಕೆ ಶಿವಕುಮಾರ್‌ ಸಹ ಈಗಾಗಲೇ ರಹಸ್ಯ ಮಾತುಕತೆ ನಡೆಸಿದ್ದು ಲೆಹರ್‌ಸಿಂಗ್‌ ರನ್ನು ಮೂರನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ರಾಜಕೀಯ ಲೆಕ್ಕಾಚಾರಗಳನ್ನೂ ನಡೆಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

 

ದಶಕಗಳಿಂದಲೂ ಕರ್ನಾಟಕವನ್ನು ಪ್ರತಿನಿಧಿಸಿರುವವರು ರಾಜ್ಯಸಭೆಯಲ್ಲಿ ಅವರ ಭಾಗವಹಿಸುವಿಕೆ ಮತ್ತು ಕೊಡುಗೆ ಬಗ್ಗೆ ಮೌಲ್ಯಮಾಪನ ಮಾಡಿದರೆ ಬಹುಶಃ ಫಲಿತಾಂಶವೇ ನೀರಸವಾಗಿರುತ್ತವೆ. ಇದು ಒಂದು ಕಾಲದಲ್ಲಿ ಅತ್ಯಂತ ಉತ್ತಮವಾಗಿ ಆಡಳಿತ ನಡೆಸುತ್ತಿದ್ದ ಕರ್ನಾಟಕ ಪ್ರಗತಿಪರ ರಾಜ್ಯಕ್ಕೆ ಮಾಡಿದ ಅವಮಾನವಲ್ಲದೇ ಬೇರೇನೂ ಅಲ್ಲ ಎನ್ನುತ್ತಾರೆ ವಿಧಾನಪರಿಷತ್‌ನ ಮತ್ತೊಬ್ಬ ಸದಸ್ಯರೊಬ್ಬರು.

the fil favicon

SUPPORT THE FILE

Latest News

Related Posts