ಬೆಂಗಳೂರು: ಹಣ ದುರ್ಬಳಕೆ ಆರೋಪಕ್ಕೆ ಗುರಿಯಾಗಿರುವ ವಿಧಾನಪರಿಷತ್‌ನ ಮಾಜಿ ಸದಸ್ಯ ಶ್ರೀಕಾಂತ್ ಎಲ್ ಘೋಟ್ನೇಕರ್ ಅವರ ವಿರುದ್ಧ ವಿಚಾರಣೆ ನಡೆಸಲು ರಾಜ್ಯಪಾಲರ ಥಾವರ್‌ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದಾರೆ.
ಸಮುದಾಯ ಭವನಕ್ಕಾಗಿ ರಾಜ್ಯಸರ್ಕಾರದಿಂದ ಮಂಜೂರಾಗಿದ್ದ ಅನುದಾನದ ಪೈಕಿ 36.25 ಲಕ್ಷ ರು. ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ ಲೋಕಾಯುಕ್ತ ತನಿಖೆಯು ಸಾಬೀತುಗೊಳಿಸಿತ್ತು. ಇದನ್ನಾಧರಿಸಿ ಕ್ರಮಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ 2022ರ ಮಾರ್ಚ್ 29ರಂದು ಲೋಕಾಯುಕ್ತ ರಿಜಿಸ್ಟ್ರಾರ್ ಉಷಾರಾಣಿ ಅವರಿಗೆ ಗೌಪ್ಯ ಪತ್ರ ಬರೆದಿದ್ದಾರೆ. ಇದರ ಪ್ರತಿ ಮತ್ತು ಲೋಕಾಯುಕ್ತ ತನಿಖಾ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಶ್ರೀಕಾಂತ್ ಎಲ್ ಘೋಟ್ನೇಕರ್ ಅವರು ಇತ್ತೀಚೆಗಷ್ಟೇ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತರಾಗಿದ್ದಾರೆ.
ಸಮುದಾಯ ಭವನಕ್ಕಾಗಿ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಆ ನಂತರ ಹಳಿಯಾಳದಲ್ಲಿ ತಮ್ಮದೇ ಹೆಸರಿನಲ್ಲಿರುವ ಎಸ್ ಎಲ್ ಘೋಟ್ನೇಕರ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪ ಕುರಿತು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ನಾಗೇಂದ್ರ ಜಿವೋಜಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ದೂರನ್ನಾಧರಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು ದೂರಿನಲ್ಲಿದ್ದ ಅಂಶಗಳನ್ನು ಸಾಬೀತುಗೊಳಿಸಿತ್ತು. ಈ ಸಂಬಂಧ ಲೋಕಾಯುಕ್ತಕ್ಕೆ 2021ರ ಡಿಸೆಂಬರ್ 6ರಂದು ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು. ವರದಿ ಸಲ್ಲಿಸಿದಾಗ ಶ್ರೀಕಾಂತ್ ಎಲ್ ಘೋಟ್ನೇಕರ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು ಎಂಬುದು ತಿಳಿದು ಬಂದಿದೆ.
ಈ ಕುರಿತು ಲೋಕಾಯುಕ್ತ ಸಂಸ್ಥೆಯ ಎಸ್‌ಪಿ 2021ರ ಜೂನ್ 14ರಂದು ತನಿಖಾ ವರದಿ ಸಲ್ಲಿಸಿದ್ದರು. ಜತೆಗೆ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ಕೋಶವೂ ವರದಿ ನೀಡಿತ್ತು. ಇದನ್ನಾಧರಿಸಿ ಹಣ ದುರ್ಬಳಕೆ ಆರೋಪದಡಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಎ ನೊಂದಿಗೆ ಐಪಿಸಿ ಸೆಕ್ಷನ್ 120 ಬಿ, 403, 406 ಅನ್ವಯ ಘೋಟ್ನೆಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಶೇ. 10 ರಷ್ಟು ಬಡ್ಡಿಯೊಂದಿಗೆ 5 ಲಕ್ಷ ರೂ. ವಸೂಲಿ ಮಾಡಬೇಕೆಂದು ಹಿಂದಿನ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ಶಿಫಾರಸು ಮಾಡಿದ್ದರು.
ಆದರೆ ಶ್ರೀಕಾಂತ್ ಎಲ್ ಘೋಟ್ನೇಕರ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಈ ಸಂಬಂಧ 2021ರ ಅಕ್ಟೋಬರ್ 29ರಂದು ಹೇಳಿಕೆಯನ್ನೂ ನೀಡಿದ್ದರಲ್ಲದೆ ದೂರನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ಪ್ರಸ್ತುತ ಶಾಲೆ ನಡೆಸುತ್ತಿರುವ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ರಾಯಣ್ಣ ಸೋಮನಿಂಗ ಅವರಿಂದಲೂ ವಾರ್ಷಿಕ ಶೇ. 10 ರಷ್ಟು ಬಡ್ಡಿಯೊಂದಿಗೆ ರೂ. 36.25 ಲಕ್ಷ ಹಣ ವಸೂಲಿ ಮಾಡಬೇಕೆಂದು ಲೋಕಾಯುಕ್ತರು ಶಿಫಾರಸು ಮಾಡಿದ್ದರು.
ಹಳಿಯಾಳದಲ್ಲಿ ಕ್ಷತ್ರಿಯ ಮರಾಠ ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದ ಘೋಟ್ನೆಕರ್ ಅವರು ಅದನ್ನು ತಮ್ಮ ಹೆಸರಿನಲ್ಲಿರುವ ಶಾಲೆಯ ಕಟ್ಟಡದ ಮೊದಲ ಮಹಡಿ ನಿರ್ಮಾಣಕ್ಕೆ ಬಳಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಶ್ರೀ ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ಸಂಸ್ಥೆಗೆ ಹಾಗೂ ಘೋಟ್ನೇಕರ ಮತ್ತು ರಾಯಣ್ಣ ಸಂಬಂಧಿತ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ಯಾವುದೇ ಉದ್ದೇಶಕ್ಕೆ ಅನುದಾನ ಬಿಡುಗಡೆ ಮಾಡದಂತೆ ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪ್ರಸ್ತುತ ಬೀದರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಗಿನ ಕಾರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಜಿಲ್ಲಾಧಿಕಾರಿ, ಬಸವರಾಜ ಮಹಾದೇವ ಬಡಿಗೇರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಲೋಕಾಯುಕ್ತ ಸೂಚಿಸಿದೆ.