ಹಿಜಾಬ್‌ ವಿವಾದ; ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯ ಮಾಹಿತಿ ಸಂಗ್ರಹಣೆಗೆ ಮುಂದಾದ ಸರ್ಕಾರ

photo credit; newsnext

ಬೆಂಗಳೂರು; ಶಾಲಾ, ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕೆಲ ವಿದ್ಯಾರ್ಥಿಗಳ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರವು ಇದೀಗ ರಾಜ್ಯದ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ  ಮುಸ್ಲಿಂ ವಿದ್ಯಾರ್ಥಿಗಳ ಬಲವನ್ನು ಸಂಗ್ರಹಿಸಲು ಮುಂದಾಗಿದೆ.

 

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ. ರಾಜ್ಯದಲ್ಲಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಲ್ಲಿನ ಒಟ್ಟು ವಿದ್ಯಾರ್ಥಿ ಬಲದ ಕುರಿತು ಮಾಹಿತಿ ಕಲೆ ಹಾಕುವುದರ ಜತೆಯಲ್ಲಿಯೇ ಮುಸ್ಲಿಂ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನೂ ಸಂಗ್ರಹಿಸಲಿದೆ ಎಂದು ತಿಳಿದು ಬಂದಿದೆ.

 

ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಸಂಖ್ಯೆ ಒಟ್ಟಾರೆ ಬಲದ ಕುರಿತು ಮಾಹಿತಿ ಕಲೆ ಹಾಕುತ್ತಿದೆ. ಹಿಜಾಬ್‌ ಕುರಿತು ಹೈಕೋರ್ಟ್‌ ನೀಡಿರುವ ತೀರ್ಪಿನ ನಂತರ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಎಷ್ಟು ಮಂದಿ ಹಿಜಾಬ್‌ ಧರಿಸಲು ಬೇಡಿಕೆ ಇರಿಸಿದ್ದಾರೆ ಮತ್ತು ಹಿಜಾಬ್‌ ಧರಿಸಲು ನಿರಾಕರಿಸಿರುವ ವಿದ್ಯಾರ್ಥಿನಿಯರ ಸಂಖ್ಯೆ ಕಲೆ ಹಾಕಲು ಇಲಾಖೆಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.

 

ವಿಶೇಷವಾಗಿ ಉಡುಪಿ, ಕುಂದಾಪುರದಲ್ಲಿನ ಒಟ್ಟಾರೆ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯನ್ನು ತುರ್ತಾಗಿ ಕಲೆ ಹಾಕಲು ಸೂಚಿಸಿದೆ ಎಂದು ತಿಳಿದು ಬಂದಿದೆ.

 

ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗುವುದಕ್ಕೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ನ ವಿಶೇಷ ಪೀಠ ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶವನ್ನು ಸಚಿವ ಬಿ ಸಿ ನಾಗೇಶ್‌ ಅವರು ಸಮರ್ಥಿಸಿಕೊಂಡಿದ್ದರು. ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೇಳಿ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಳೆದ ಗುರುವಾರವಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.

 

ಸಜೀದಾ ಬೇಗಂ ಅವರು ವಕೀಲರಾದ ತಲ್ಹಾ ಅಬ್ದುಲ್ ರಹಮಾನ್ ಮತ್ತು ಇತರರ ಮೂಲಕ ಸಲ್ಲಿಸಿದ ಹೊಸ ಅರ್ಜಿಯಲ್ಲಿ, ಹದಿಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ಹೋಗುವಾಗ ತಮ್ಮನ್ನು ತಾವು ಸಾಧಾರಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವುದರಿಂದ “ಸಾರ್ವಜನಿಕ ಸುವ್ಯವಸ್ಥೆಗೆ” ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದರು.

 

“ಸರ್ಕಾರಿ ಆದೇಶ ಹಿಜಾಬ್ ನಿಷೇಧಿಸುವುದಿಲ್ಲವಾದ್ದರಿಂದ ಹೈಕೋರ್ಟ್ ಆಡಳಿತತಾತ್ಮಕ ಕಾನೂನಿನ ಸರಳ ಅಂಶದ ಮೇಲೆ ಮಾತ್ರ ಸಮಸ್ಯೆಯನ್ನು ನಿರ್ಧರಿಸಬೇಕಿತ್ತು” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಸರ್ಕಾರದ ಆದೇಶವನ್ನು ಪುರಸ್ಕರಿಸಿ ತೀರ್ಪು ನೀಡಿದ್ದ ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಯನ್ನು ಹೋಳಿ ಹಬ್ಬದ ನಂತರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

 

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತ್ವತ್ವದ ನ್ಯಾಯಪೀಠ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಅರ್ಜಿ ಸಲ್ಲಿಕೆಯನ್ನು ಪುರಸ್ಕರಿಸಿ ಸದ್ಯದಲ್ಲಿಯೇ ಪರೀಕ್ಷೆಗಳು ಇರುವುದರಿಂದ ತುರ್ತು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

 

ಹಲವು ವಿದ್ಯಾರ್ಥಿನಿಯರಿಗೆ ಈಗ ಪರೀಕ್ಷೆಯ ಸಮಯ, ಹೀಗಾಗಿ ಹಿಜಾಬ್ ಅರ್ಜಿಯನ್ನು ತುರ್ತಾಗಿ ನಡೆಸಬೇಕೆಂದು ಹಿರಿಯ ವಕೀಲ ಸಂಜಯ್ ಹೆಗ್ಡೆ ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡಿದ್ದಾರೆ. ನಮಗೆ ಸ್ವಲ್ಪ ಸಮಯ ಕೊಡಿ, ನೋಡೋಣ, ಹೋಳಿ ಹಬ್ಬದ ನಂತರ ಅರ್ಜಿ ವಿಚಾರಣೆ ನಡೆಸೋಣ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts