ಸರ್ಕಾರಿ ವಕೀಲರ ಕಾರ್ಯಕ್ಷಮತೆ ಕುಸಿತ; ಸರ್ಕಾರದ ವಿರುದ್ಧ 1.95 ಲಕ್ಷ ಆದೇಶ

ಬೆಂಗಳೂರು; ಜಿಲ್ಲಾ, ತಾಲೂಕು ಮತ್ತು ಉಚ್ಛ ನ್ಯಾಯಾಲಯಗಳಿಗೆ ನೇಮಕವಾಗಿರುವ ಸರ್ಕಾರಿ ವಕೀಲರು, ಅಪರ ವಕೀಲರುಗಳಿಗೆ ಕಳೆದ 3 ವರ್ಷಗಳಲ್ಲಿ ಸಂಬಳ, ಸಾರಿಗೆ ಮತ್ತು ಪ್ರಕರಣಗಳನ್ನು ನಡೆಸಿಕೊಟ್ಟ ಸಂಭಾವನೆ ರೂಪದಲ್ಲಿ ಒಟ್ಟಾರೆ 44.83 ಕೋಟಿ ರು. ಪಾವತಿಸಿದ್ದರೂ ಸರ್ಕಾರದ ಪರವಾಗಿ ತೀರ್ಪುಗಳು ಕಡಿಮೆ ಸಂಖ್ಯೆಯಲ್ಲಿ ಬಂದಿರುವುದು ಇದೀಗ ಬಹಿರಂಗವಾಗಿದೆ.

ಹೈಕೋರ್ಟ್‌ವೊಂದರಲ್ಲೇ ಕಳೆದ ಮೂರು ವರ್ಷಗಳಲ್ಲಿ ಭೂ ವ್ಯಾಜ್ಯವೂ ಸೇರಿದಂತೆ 1,23,083 ಪ್ರಕರಣಗಳ ಪೈಕಿ 44,749 ಆದೇಶಗಳು ಸರ್ಕಾರದ ವಿರುದ್ಧವಾಗಿ ಪ್ರಕಟಗೊಂಡಿದ್ದರೆ 50,905 ಆದೇಶಗಳಷ್ಟೇ ಸರ್ಕಾರದ ಪರವಾಗಿ ಬಂದಿವೆ. ಅದೇ ರೀತಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,50,257 ಆದೇಶಗಳು ಸರ್ಕಾರದ ವಿರುದ್ಧವಾಗಿ ಬಂದಿವೆ. ಸರ್ಕಾರದ ಪರವಾಗಿ ಕೇವಲ 21,092 ಆದೇಶಗಳು ಬಂದಿವೆ. ಹೈಕೋರ್ಟ್‌, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟಾರೆ 1.95 ಲಕ್ಷ ಆದೇಶಗಳು ಸರ್ಕಾರದ ವಿರುದ್ಧ ಬಂದಿವೆ.

ಸರ್ಕಾರಿ ವಕೀಲರು ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ಸರಿಯಾಗಿ ವಾದಗಳನ್ನು ಮಂಡಿಸುತ್ತಿಲ್ಲ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ ಸರ್ಕಾರಿ ವಕೀಲರುಗಳ ಕಾರ್ಯಕ್ಷಮತೆಯು ಮುನ್ನೆಲೆಗೆ ಬಂದಿದೆ. ಸರ್ಕಾರದ ವಿರುದ್ಧವಾಗಿ ಬರುತ್ತಿರುವ ಆದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದ್ದರೂ ವಕೀಲರುಗಳ ಕಾರ್ಯಕ್ಷಮತೆ ಕುರಿತು ಸರ್ಕಾರವು ಇದುವರೆಗೂ ಗಂಭೀರವಾಗಿ ಪರಿಶೀಲಿಸಿಲ್ಲ.

ಜಿಲ್ಲಾ, ತಾಲೂಕು ಮತ್ತು ಉಚ್ಛ ನ್ಯಾಯಾಲಯಗಳಲ್ಲಿ ಸರ್ಕಾರಿ ವಕೀಲರುಗಳಿಗೆ ಪಾವತಿಸಿರುವ ಸಂಬಳ, ಸಾರಿಗೆ ಮತ್ತು ಸಂಭಾವನೆ ವೆಚ್ಚದ ಮಾಹಿತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಅಲ್ಲದೆ 2021ರ ಡಿಸೆಂಬರ್‌ 21ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಈ ಬಗ್ಗೆ ಲಿಖಿತ ಉತ್ತರವನ್ನು ಒದಗಿಸಿದ್ದಾರೆ.

ಸರ್ಕಾರಿ ವಕೀಲರುಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸರಿಯಾದ ರೀತಿಯಲ್ಲಿ ವಾದಗಳನ್ನು ಮಂಡಿಸುತ್ತಿಲ್ಲ ಎಂದು ರಾಜ್ಯದ ಹಲವು ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ. ಆದರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ರಾಜ್ಯದ ಅಡ್ಟೋಕೇಟ್‌ ಜನರಲ್‌ ಅವರೊಂದಿಗೆ ಸಭೆಯನ್ನೇ ನಡೆಸಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 2018ರಲ್ಲಿ ದಾಖಲಾಗಿದ್ದ ಒಟ್ಟು ಪ್ರಕರಣಗಳ ಪೈಕಿ ಸರ್ಕಾರದ ವಿರುದ್ಧ 44,383 ಆದೇಶಗಳು ಸರ್ಕಾರದ ವಿರುದ್ಧವಾಗಿದ್ದರೆ ಇದೇ ವರ್ಷದಲ್ಲಿ ಸರ್ಕಾರದ ಪರವಾಗಿ ಕೇವಲ 5,328 ಆದೇಶಗಳು ಬಂದಿವೆ. ಹಾಗೆಯೇ 2019ರಲ್ಲಿ 45,992 ಆದೇಶಗಳು ಸರ್ಕಾರದ ವಿರುದ್ಧವಾಗಿದ್ದರೆ 6,504 ಆದೇಶಗಳು ಸರ್ಕಾರದ ಪರವಾಗಿವೆ. 2020ರಲ್ಲಿ 59,952 ತೀರ್ಪುಗಳು ಸರ್ಕಾರದ ವಿರುದ್ಧವಾಗಿದ್ದರೆ ಸರ್ಕಾರದ ಪರವಾಗಿ ಕೇವಲ 9,260 ಆದೇಶಗಳು ಬಂದಿರುವುದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರ ತವರು ಜಿಲ್ಲೆ ತುಮಕೂರಿನಲ್ಲಿ 2018ರಲ್ಲಿ 1,618, 2019ರಲ್ಲಿ 1,312, 2,035 ಸೇರಿ ಒಟ್ಟಾರೆ 4,965 ಆದೇಶಗಳು ಸರ್ಕಾರದ ವಿರುದ್ಧವಾಗಿ ಬಂದಿವೆ. ವಿಶೇಷವೆಂದರೆ ಈ ಮೂರು ವರ್ಷಗಳಲ್ಲಿ ಸರ್ಕಾರದ ಪರವಾಗಿ ಒಂದೇ ಒಂದು ತೀರ್ಪು ಬಂದಿಲ್ಲ.

ಬಾಗಲಕೋಟೆಯಲ್ಲಿ 2018ರಲ್ಲಿ ಸರ್ಕಾರದ ವಿರುದ್ಧ 4,601, 2019ರಲ್ಲಿ 5,827, 2020ರಲ್ಲಿ 7,891 ಸೇರಿ ಒಟ್ಟಾರೆ 18,319 ಆದೇಶಗಳು ಸರ್ಕಾರದ ವಿರುದ್ಧವಾಗಿ ಬಂದಿವೆ. ಇದು ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ 2018ರಲ್ಲಿ 5,028, 2019ರಲ್ಲಿ 5,313, 2020ರಲ್ಲಿ 1,568 ಸೇರಿ ಒಟ್ಟಾರೆ 11,909 ಅದೇಶಗಳು ಸರ್ಕಾರದ ವಿರುದ್ಧವಾಗಿ ಬಂದಿವೆ. 2018ರಲ್ಲಿ ಸರ್ಕಾರದ ಪರ 5,328, 2019ರಲ್ಲಿ 6,504, 2020ರಲ್ಲಿ 9,260 ಸೇರಿ ಒಟ್ಟಾರೆ 21,092 ಆದೇಶಗಳಷ್ಟೇ ಸರ್ಕಾರದ ಪರವಾಗಿ ಬಂದಿವೆ.

ಕಳೆದ 3 ವರ್ಷಗಳಲ್ಲಿ ಸರ್ಕಾರಿ ವಕೀಲರು ರಾಜ್ಯದ ಉಚ್ಛ ನ್ಯಾಯಾಲಯಗಳಲ್ಲಿ ಒಟ್ಟು 1,23,083 ಪ್ರಕರಣಗಳನ್ನು ಪ್ರತಿನಿಧಿಸಿದ್ದರು. ಈ ಪೈಕಿ ಸರ್ಕಾರದ ಪರವಾಗಿ 50,905 ಮತ್ತು ಸರ್ಕಾರದ ವಿರುದ್ಧವಾಗಿ 44,749 ಪ್ರಕರಣಗಳಲ್ಲಿ ಆದೇಶ- ತೀರ್ಪು ಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಕೀಲರುಗಳಿಗೆ ಒಟ್ಟು 16.41 ಕೋಟಿ ರು. ಸಂಬಳ ನೀಡಲಾಗಿದೆ. 2018-19ರಲ್ಲಿ 5,45,87,351 ಕೋಟಿ ರು., 2019-20ರಲ್ಲಿ 5,57,80,094 ರು., 2020-21ರಲ್ಲಿ 5,44,36,883 ರು. ಸಂಬಳ ಪಾವತಿಸಲಾಗಿದೆ.

ಇದಲ್ಲದೆ ಸಾರಿಗೆ ವೆಚ್ಚವೆಂದು ಕಳೆದ 3 ವರ್ಷಗಳಲ್ಲಿ ಒಟ್ಟು 34,90,299 ರು. ಪಾವತಿಸಲಾಗಿದೆ. 2018-19ರಲ್ಲಿ 22,59,887 ರು., 2019-20ರಲ್ಲಿ 10,51,382 ರು., 2020-21ರಲ್ಲಿ 1,79,030 ರು. ನೀಡಲಾಗಿದೆ. ಹಾಗೆಯೇ ಕೇಸುಗಳನ್ನು ನಡೆಸಿಕೊಟ್ಟಿರುವ ವಕೀಲರುಗಳಿಗೆ ಕಳೆದ 3 ವರ್ಷಗಳಲ್ಲಿ ಒಟ್ಟು 14.38 ಕೋಟಿ ರು. ಸಂಭಾವನೆ ಪಾವತಿಸಲಾಗಿದೆ.

ರಾಜ್ಯದ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಕಳೆದ 3 ವರ್ಷಗಳಲ್ಲಿ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಕೀಲರಿಗೆ ಪಾವತಿಯಾಗಿರುವ ಸಂಭಾವನೆ 10.18 ಕೋಟಿ ರು. ಮತ್ತು ಹೆಚ್ಚಿನ ಸಂಭಾವನೆಯಾಗಿ 4.61 ಕೋಟಿ ರು ಪಾವತಿಸಿರುವುದು ತಿಳಿದು ಬಂದಿದೆ.


ಸರ್ಕಾರಿ ವಕೀಲರುಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ನ್ಯಾಯಾಲಯದ ಮುಂದೆ ಸರ್ಕಾರದ ಪರವಾಗಿ ಸರಿಯಾದ ರೀತಿ ವಾದಗಳನ್ನು ಮಂಡಿಸುತ್ತಿಲ್ಲವೆನ್ನವು ಅಂಶವನ್ನು ಜಿಲ್ಲಾಧಿಕಾರಿಗಳು ವ್ಯಕ್ತಪಡಿಸಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿಲ್ಲ ಎಂದು ಸಚಿವ ಜೆ ಸಿ ಮಾಧುಸ್ವಾಮಿ ಅವರು ಉತ್ತರಿಸಿದ್ದರೆ, ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರು ಸರ್ಕಾರದ ಪರವಾಗಿ ಸರಿಯಾದ ರೀತಿಯಲ್ಲಿ ವಾದ ಮಂಡಿಸುತ್ತಿಲ್ಲ ಎಂಬುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಉತ್ತರಿಸಿದ್ದಾರೆ.


ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮದನ್ವಯ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಸರ್ಕಾರದ ಪ್ರಕರಣಗಳನ್ನು ನಡೆಸಲು ಸರ್ಕಾರಿ ವಕೀಲರನ್ನು ನೇಮಕ ಮಾಡುವಾಗ ವಕೀಲರುಗಳ ಅನುಭವ ಮತ್ತು ವಿದ್ಯಾರ್ಹತೆ ಆಧಾರದ ಮೇಲೆ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ನ್ಯಾಯಾಧೀಶರು ನೀಡುವ ಅಭಿಪ್ರಾಯ ಮತ್ತು ಹೈಕೋರ್ಟ್‌ಗೆ ನೇಮಕ ಮಾಡುವಾಗ ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಸಮಾಲೋಚಿಸಿ ವಕೀಲರನ್ನು ನೇಮಿಸಲಾಗುತ್ತಿದೆ.


ಅಡ್ವೋಕೇಟ್‌ ಜನರಲ್‌ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ನೇಮಕ ಪ್ರಕ್ರಿಯೆ ನಡೆದಿದ್ದರೂ ನ್ಯಾಯಾಲಯಗಳಲ್ಲಿ ವಿಚಾರಣೆ ಸಂದರ್ಭಗಳಲ್ಲಿ ಸರಿಯಾಗಿ ಮತ್ತು ಪೂರಕ ಸಾಕ್ಷ್ಯ, ಪುರಾವೆಗಳ ಸಮೇತ ವಾದ ಮಂಡಿಸಬೇಕಿದ್ದ ಸರ್ಕಾರಿ ವಕೀಲರುಗಳು ಪ್ರಕರಣಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂಬ ಬಲವಾದ ಆರೋಪಗಳೂ ಇವೆ. ವಿಧಾನಮಂಡಲದ ಅರ್ಜಿ ಸಮಿತಿಯೂ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳು ಸರ್ಕಾರಿ ವಕೀಲರುಗಳ ಕಾರ್ಯಕ್ಷಮತೆ ಕುರಿತು ಎಲ್ಲಾಇಲಾಖೆಗಳ ಹಲವು ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ವಕೀಲರ ಕಳಪೆ ವಾದದ ಕುರಿತು ಮಾಹಿತಿ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ.

SUPPORT THE FILE

Latest News

Related Posts