ಪರಿಶಿಷ್ಟರಿಗೆ ಸೌಕರ್ಯ; 47 ಸಾವಿರ ಕೋಟಿ ಖರ್ಚಾದರೂ ಆರೋಗ್ಯ, ನೈರ್ಮಲ್ಯಕ್ಕಿಲ್ಲ ಒತ್ತು

ಬೆಂಗಳೂರು; ಕರ್ನಾಟಕ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯಡಿ ರಸ್ತೆ, ನೀರಾವರಿ ಯೋಜನೆ, ವಿದ್ಯುತ್‌ ಮತ್ತು ಇದೇ ವಲಯದ ಬೃಹತ್‌ ಯೋಜನೆ ಮತ್ತು ಕಾರ್ಯಕ್ರಮಗಳಡಿಯಲ್ಲಿ ಬಿಡುಗಡೆ ಮಾಡುತ್ತಿರುವ ಸಾವಿರಾರು ಕೋಟಿ ರುಪಾಯಿ ಅನುದಾನವು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಯಾವುದೇ ತಕ್ಷಣದ ಪ್ರಯೋಜನಗಳಾಗುತ್ತಿಲ್ಲ. ಪರಿಶಿಷ್ಟರ ಕಾಲೋನಿಯ ಪ್ರದೇಶಕ್ಕೆ ಉತ್ತಮ ವಾತಾವರಣ ಒದಗಿಸಲು ವೈಜ್ಞಾನಿಕ ಯೋಜನೆ ಮತ್ತು ಒಳಚರಂಡಿ ನಿರ್ವಹಣೆಗೆ ಹೆಚ್ಚಿನ ಗಮನ ನೀಡಿಲ್ಲ.

ಕುಡಿಯುವ ನೀರು, ನೈರ್ಮಲ್ಯ, ಸಿಮೆಂಟ್‌ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿ ಪರಿಶಿಷ್ಟರೊಂದಿಗೆ ಸಮಾಲೋಚಿಸುತ್ತಿಲ್ಲ ಎಂಬ ಅಂಶವನ್ನು ಕರ್ನಾಟಕ ಮೌಲ್ಯಮಾಪನ ಅಧ್ಯಯನ ವರದಿಯು ಹೊರಗೆಡವಿದೆ.
2014-15, 2015-16, 2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಉಪಹಂಚಿಕೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿನ ಮೂಲಸೌಕರ್ಯ ಸೌಲಭ್ಯಗಳ ಯೋಜನೆಯ ಕಾರ್ಯಕ್ಷಮತೆಯ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಹೈದರಾಬಾದ್‌ ಕರ್ನಾಟಕ ಸೆಂಟರ್‌ ಫಾರ್‌ ಲರ್ನಿಂಗ್‌ ಸೆಂಟರ್‌ ಸಂಸ್ಥೆಯು 2021ರ ಆಗಸ್ಟ್‌ನಲ್ಲಿ ಸಲ್ಲಿಸಿರುವ ಮೌಲ್ಯಮಾಪನ ವರದಿಯು ಉಪ ಯೋಜನೆಗಳ ಅನುಷ್ಠಾನದ ಮೇಲೆ ಬೆಳಕು ಚೆಲ್ಲಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅನುದಾನ ಹಂಚಿಕೆಯಾಗಿದ್ದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್‌ ಆಂಜನೇಯ ಅವರು ಅನುದಾನದ ಬಳಕೆ, ಕಾಮಗಾರಿ ಪರಿಶೀಲನೆ ಕುರಿತು ಗಮನ ಹರಿಸಿಲ್ಲ ಮತ್ತು ಕಾಮಗಾರಿ ನಡೆಸುವ ಮುನ್ನ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸದಿರುವುದೇ ಉತ್ತಮ ನಿದರ್ಶನ. ಇನ್ನು ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 4 ತಿಂಗಳಾದರೂ ಸಮಾಜ ಕಲ್ಯಾಣ ಸಚಿವ ಶ್ರೀನಿವಾಸ ಕೋಟ ಪೂಜಾರಿ ಅವರು ವರದಿಯಲ್ಲಿನ ಶಿಫಾರಸ್ಸುಗಳ ಪ್ರಗತಿ ಮತ್ತು ವರದಿಯ ವಿಶ್ಲೇಷಣೆ ಕುರಿತು ಸಭೆ ನಡೆಸಿಲ್ಲ ಎಂದು ತಿಳಿದು ಬಂದಿದೆ.

2019-2020ರ ಕರ್ನಾಟಕ ರಾಜ್ಯ ಆಯವ್ಯಯವು ಸಾಮಾಜಿಕ ಕಲ್ಯಾಣ ಮತ್ತು ಪೋಷಣೆಗಾಗಿ ತನ್ನ ಪಾಲಿನ ಶೇಕಡವಾರು ವೆಚ್ಚವನ್ನು ಶೇ.11ರಷ್ಟನ್ನು ನೀರು ಸರಬರಾಜು, ನೈರ್ಮಲ್ಯ, ವಸತಿ ಮತ್ತು ನಗರ ಅಭಿವೃದ್ಧಿಗೆ ಶೇ. 15ರಷ್ಟು ಹೆಚ್ಚಿಸಿದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶೇ. 4ರಷ್ಟು ಕಡಿಮೆಯಾಗಿತ್ತು. ನೀತಿ ಮತ್ತು ಅನುಷ್ಠಾನ ಮಟ್ಟದಲ್ಲಿನ ವಿವಿಧ ನ್ಯೂನತೆಗಳಿಂದಾಗಿ ಪರಿಶಿಷ್ಟ ಜಾತಿಗಳ ಆರ್ಥಿಕ ಅಭಿವೃದ್ದಿಗಾಗಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾರಂಭಿಸಲಾದ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ನಿರೀಕ್ಷಿತ ಪ್ರಮಾಣದಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಮೌಲ್ಯಮಾಪನ ಅಧ್ಯಯನ ವರದಿ ವಿವರಿಸಿದೆ.

ಪ್ರಾಥಮಿಕ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಪೋಷಣೆ, ಗ್ರಾಮೀಣ ವಸತಿ ಮತ್ತು ರಸ್ತೆಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳು ಮತ್ತು ಗ್ರಾಮಗಳಿಗೆ ವಿದ್ಯುದ್ದೀಕರಣದ ಕನಿಷ್ಠ ಸೇವೆ ಒದಗಿಸುವ ಯೋಜನೆಗಳಿಗೆ ನಿರೀಕ್ಷಿತ ಪ್ರಮಾಣದಂತೆ ಆದ್ಯತೆ ನೀಡಿಲ್ಲ.

ಈ ಮೂರು ವರ್ಷಗಳಲ್ಲಿ ಪರಿಶಿಷ್ಟರ ಕಾಲೋನಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು 2014-15ರಿಂದ 2016-17ನೇ ಸಾಲಿನವರೆಗೆ ಒಟ್ಟು 52,075.36 ಕೋಟಿ ರು. ಅನುದಾನ ಹಂಚಿಕೆ ಪೈಕಿ 47,703 ಕೋಟಿ ರು. ಖರ್ಚಾಗಿದೆ. ಆದರೆ ಪರಿಶಿಷ್ಟರ ಕಾಲೋನಿಗಳಲ್ಲಿ ಮಿನಿ-ಖನಿಜಯುಕ್ತ ಜಲಸ್ಥಾವರಗಳು, ಆರೋಗ್ಯಕರ ಕಿರು ಟ್ಯಾಂಕರ್‌ಗಳನ್ನು ಒದಗಿಸುವುದು ಮತ್ತು ಗುಣಮಟ್ಟದ ಕುಡಿಯುವ ನೀರಿನ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನೇ ಕೈಗೊಂಡಿಲ್ಲ ಎಂಬುದು ಮೌಲ್ಯಮಾಪನ ವರದಿಯಿಂದ ತಿಳಿದು ಬಂದಿದೆ.

ಗಡಿ ಜಿಲ್ಲೆ ಚಾಮರಾಜನಗರದಲ್ಲಿನ ಪರಿಶಿಷ್ಟರ ಕಾಲೋನಿಗಳಲ್ಲಿ ಲೋಕೋಪಯೋಗಿ ಇಲಾಖೆಯು ಒಟ್ಟು 58.86 ಕಿ ಮೀ ಉದ್ದದ ಕಾಮಗಾರಿಗಳಿಗೆ ಒಟ್ಟು 4,892.44 ಕೋಟಿ ರು. ಖರ್ಚು ಮಾಡಿದೆ. 2014-15ರಲ್ಲಿ 14.96 ಕಿ ಮೀ ಕಾಮಗಾರಿಗಳಿಗೆ 1,163.82 ಕೋಟಿ, 2015-16ರಲ್ಲಿ 26.08 ಕಿ.ಮೀ. ಕಾಮಗಾರಿಗೆ 2,059.49 ಕೋಟಿ, 2016-17ರಲ್ಲಿ 17.82 ಕಿ ಮೀ ಕಾಮಗಾರಿಗೆ 1,669.13 ಕೋಟಿ ರು. ಖರ್ಚಾಗಿದೆ. ಆದರೆ ಕುಡಿಯುವ ನೀರಿಗೆ ಸಂಬಂಧಿಸಿದ ಯಾವುದೇ ಮೂಲಸೌಕರ್ಯಗಳು ಅಷ್ಟಾಗಿ ಇಲ್ಲ. ಕುಡಿಯುವ ನೀರು, ನೈರ್ಮಲ್ಯ ಮತ್ತು ನೈರ್ಮಲ್ಯದ ಲಭ್ಯತೆಯ ಕೊರತೆಯು ಮಾರಣಾಂತಿಕ ಕಾಯಿಲೆ ಮತ್ತು ಇತರ ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನ ವರದಿಯು ವಿವರಿಸಿದೆ.

ಲೋಕೋಪಯೋಗಿ ಇಲಾಖೆಯು 2015-16ನೇ ಸಾಲಿನಲ್ಲಿ ಒಟ್ಟು 24,934.84 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಅದೇ ವರ್ಷದಲ್ಲಿ 8 ಜಿಲ್ಲೆಗಳಲ್ಲಿ 1,885 ಕಾಮಗಾರಿಗಳನ್ನು ಆರಂಭಿಸಿದೆ. ವಿಜಯಪುರ, ರಾಯಚೂರು ಮತ್ತು ಚಾಮರಾಜನಗರವನ್ನು ಇತರ ಜಿಲ್ಲೆಗಳಿಗೆ ಹೋಲಿಸಿದರೆ ಲೋಕೋಪಯೋಗಿ ಇಲಾಖೆಯುಕಡಿಮೆ ಸಂಖ್ಯೆಯ ಕಾಮಗಾರಿಗಳನ್ನು ಹಂಚಿಕೆ ಮಾಡಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

ಸಿಮೆಂಟ್‌ ರಸ್ತೆಗಳ ನಿರ್ಮಾಣದಿಂದ ಸಮುದಾಯದ ಮೇಲೆ ಒಟ್ಟಾರೆ ಪ್ರಭಾವ ಕಡಿಮೆಯಾಗಿದೆ ಎಂದು 17 ತಾಲೂಕುಗಳ ಪರಿಶಿಷ್ಟ ಕಾಲೋನಿಗಳ ಫಲಾನುಭವಿಗಳು ಮೌಲ್ಯಮಾಪನ ನಡಸಿದ ಅಧ್ಯಯನ ತಂಡಕ್ಕೆ ಹೇಳಿದ್ದಾರೆ. ಅದೇ ರೀತಿ ಶೇ. 16.7ರಷ್ಟು ಫಲಾನುಭವಿಗಳು ಕಾಲೋನಿಗಳಲ್ಲಿ ಒದಗಿಸುವ ಕುಡಿಯುವ ನೀರಿನ ಸೌಲಭ್ಯಗಳು ಕಳಪೆಯಾಗಿವೆ ಎಂದು ಹೇಳಿದ್ದಾರೆ. ನೀರು ಸರಬರಾಜು ಮತ್ತು ಗುಣಮಟ್ಟದ ಬಗ್ಗೆ ಕನಿಷ್ಠ ಅಂಕಗಳನ್ನು ಪಡೆದಿವೆ. ಬಹುತೇಕ ಫಲಾನುಭವಿಗಳು ನೀರಿನ ಟ್ಯಾಂಕ್‌ಗಳ ಸ್ವಚ್ಛತೆಯ ನಿರ್ವಹಣೆ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತಪಡಿಸಿದ್ದಾರೆ.

ಒಟ್ಟು 54 ತಾಲೂಕುಗಳಲ್ಲಿ ಸುಮಾರು ಮೂರನೇ ಎರಡರಷ್ಟು ತಾಲೂಕುಗಳಲ್ಲಿ ಒಳಚರಂಡಿ ಸೌಲಭ್ಯಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ನಡೆಸಿದ್ದರೂ ತ್ಯಾಜ್ಯ ನೀರನ್ನು ತಡೆಗಟ್ಟಲು ಮತ್ತು ಆ ಮೂಲಕ ಕಾಲೋನಿಯ ಪ್ರದೇಶಕ್ಕೆ ಉತ್ತಮ ವಾತಾವರಣ ಒದಗಿಸಲು ವೈಜ್ಞಾನಿಕ ಯೋಜನೆ ಮತ್ತು ಒಳಚರಂಡಿ ನಿರ್ವಹಣೆಗೆ ಹೆಚ್ಚಿನ ಗಮನ ನೀಡಿಲ್ಲ.

ಶುದ್ದ ಕುಡಿಯುವ ನೀರು ಲಭ್ಯತೆಗೆ ಸಂಬಂಧಿಸಿದಂತೆ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಲ್ಲಿ 8 ಜಿಲ್ಲೆಗಳಲ್ಲಿ ಮೌಲ್ಯಮಾಪನ ಅಧ್ಯಯನ ನಡೆಸಲಾಗಿದೆ. ವಿಜಯಪುರ ಜಿಲ್ಲೆಯು ಕುಡಿಯುವ ನೀರಿನ ಗುಣಮಟ್ಟದಲ್ಲಿ ಕಡಿಮೆ ಸೂಚ್ಯಂಕ ಶ್ರೇಯಾಂಕಗಳನ್ನು ಹೊಂದಿದೆ. ಚಾಮರಾಜನಗರ ಮತ್ತು ವಿಜಯಪುರ ದಲ್ಲಿ 0.50ರಷ್ಟು ಶ್ರೇಯಾಂಕ ಗಳಿಸಿದೆ. ಚಾಮರಾಜನಗರದಲ್ಲಿ ಕಡಿಮೆ ಶ್ರೇಯಾಂಕ ಅಂದರೆ 0.61 ದಾಖಲಿಸಿದೆ.

ಕಾಲೋನಿಗಳಲ್ಲಿನ ಕಾಮಗಾರಿಗಳನ್ನು ಗುರುತಿಸುವಲ್ಲಿ ಫಲಾನುಭವಿಗಳೊಂದಿಗೆ ಮಾಹಿತಿ ಮತ್ತು ಸಮಾಲೋಚನೆ ನಡೆಸಿಲ್ಲ. ಹೀಗಾಗಿ ಮೂಲಸೌಕರ್ಯ ಯೋಜನೆಯಡಿ ಗುರುತಿಸಲಾದ ಕಾಮಗಾರಿಗಳನ್ನು ಮರು ಪರಿಶೀಲಿಸುವ ಅಥವಾ ಬದಲಾಯಿಸುವ ಅಗತ್ಯವಿದೆ ಎಂದು ಬಹುತೇಕ ಫಲಾನುಭವಿಗಳು ಸೂಚಿಸಿದ್ದಾರೆ.

2014-15ರಿಂದ 2016-17ನೇ ಸಾಲಿನವರೆಗೆ ಒಟ್ಟು 52,075.36 ಕೋಟಿ ರು. ಅನುದಾನ ಹಂಚಿಕೆಯಾಗಿದೆ. 2014-15ರಲ್ಲಿ 11,518.99 ಕೋಟಿ, 2015-16ರಲ್ಲಿ 11,773.54 ಕೋಟಿ, 2016-17ರಲ್ಲಿ 14,253.26 ಕೋಟಿ ರು ಸೇರಿ ಒಟ್ಟು 37,545.79 ಕೋಟಿ. ಮತ್ತು ಬುಡಕಟ್ಟು ಉಪ ಯೋಜನೆಗೆ 2014-15ರಲ್ಲಿ 4,315.18 ಕೋಟಿ, 2015-16ರಲ್ಲಿ 4,582.72 ಕೋಟಿ, 2016-17ರಲ್ಲಿ 5,631.67 ಕೋಟಿ ಸೇರಿ ಒಟ್ಟು 14,529.57 ಕೋಟಿ ರು. ಹಂಚಿಕೆಯಾಗಿತ್ತು.

ರಾಜ್ಯದ 4 ವಿಭಾಗಗಳ 8 ಜಿಲ್ಲೆ ಮತ್ತು 54 ತಾಲೂಕುಗಳಲ್ಲಿ ಈ ಅಧ್ಯಯನ ನಡೆದಿದೆ. ಅಧ್ಯಯನ ತಂಡಕ್ಕೆ ಒಟ್ಟು 5,111 ಮಂದಿ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಶೇ. 72.2ರಷ್ಟು ಫಲಾನುಭವಿಗಳು ಪುರುಷರು, ಮತ್ತು ಶೇ. 27.8ರಷ್ಟು ಮಹಿಳಾ ಫಲಾನುಭವಿಗಳಿದ್ದಾರೆ. ಸರಾಸರಿ 40 ವಯಸ್ಸಿನ ಫಲಾನುಭವಿಗಳ ಸರಾಸರಿ ವಾರ್ಷಿಕ ಆದಾಯ 15,602. ರು.ಗಳಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಶೇ. 29.5ರಷ್ಟು ಮಂದಿ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಅವರಲ್ಲಿ ಶೇ. 26.5 ಶಾಲೆಗೆ ತೆರಳದವರ ಗುಂಪಿಗೆ ಸೇರಿರುತ್ತಾರೆ. ಶೇ. 13.6ರಷ್ಟು ಪದವಿಪೂರ್ವ ಶಿಕ್ಷಣವನ್ನು ಅಧ್ಯಯನ ಮಾಡಿದ್ದಾರೆ. ಅರಲ್ಲಿ ಶೇ. 13.4ರಷ್ಟು ಮಾಧ್ಯಮಿಕ ಶಾಲಾ ಶಿಕ್ಷಣ, ಶೇ.10.4ರಷ್ಟು ಮಂದಿ ಪದವಿ ಶಿಕ್ಷಣ ಪಡೆದಿದ್ದಾರೆ ಎಂಬ ವಿವರಣೆಯೂ ವರದಿಯಲ್ಲಿದೆ.

the fil favicon

SUPPORT THE FILE

Latest News

Related Posts