ನಿವೃತ್ತ ನ್ಯಾಯಾಧೀಶೆ ಇಂದ್ರಕಲಾ, ಎನಿತ್‌ಕುಮಾರ್‌ ವಿರುದ್ಧದ ದೂರರ್ಜಿ ಸಿಬಿಐಗೆ ವರ್ಗಾವಣೆ

ಬೆಂಗಳೂರು; ಸಂವಿಧಾನಾತ್ಮಕ ಸಂಸ್ಥೆಗಳಲ್ಲಿನ ಉನ್ನತ ಹುದ್ದೆಗಳನ್ನು ಪಡೆಯುವ ಸಲುವಾಗಿ 8.27 ಕೋಟಿ ರುಪಾಯಿಯನ್ನು ಲಂಚದ ರೂಪದಲ್ಲಿ ನೀಡಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಮತ್ತು ಎನಿತ್‌ ಕುಮಾರ್‌ ಎಂ ಸಿ ಅವರ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನು ಭ್ರಷ್ಟಾಚಾರ ನಿಗ್ರಹ ದಳ ಇದೀಗ ಸಿಬಿಐಗೆ ವರ್ಗಾವಣೆ ಮಾಡಿದೆ.

ರಾಜ್ಯಪಾಲರ ಹುದ್ದೆ ಮತ್ತು ಕೇಂದ್ರೀಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹುದ್ದೆಗೆ ಲಂಚ ನೀಡಿದ್ದ ಇಂದ್ರಕಲಾ ಮತ್ತು ಎನಿತ್‌ಕುಮಾರ್‌ ಅವರ ವಿರುದ್ಧದ ದೂರರ್ಜಿ ಸಿಬಿಐಗೆ ವರ್ಗಾವಣೆ ಆಗಿರುವುದು ಯುವರಾಜಸ್ವಾಮಿ ಪ್ರಕರಣ ಮಹತ್ವ ಪಡೆದುಕೊಂಡಂತಾಗಿದೆ.

ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ 2018ರ ಕಲಂ 8ರ ಅನ್ವಯ ಇಂದ್ರಕಲಾ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನಾಧಿಕಾರ ಸಂಘರ್ಷ ಸಮಿತಿಯು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿತ್ತು. ಈ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಬೇಕಿದ್ದ ಎಸಿಬಿಯು ಇದೀಗ ದೂರರ್ಜಿಯನ್ನೇ ಸಿಬಿಐಗೆ ವರ್ಗಾವಣೆ ಮಾಡಿದೆ. ಈ ಸಂಬಂಧ ಎಸಿಬಿಯ ಡಿವೈಎಸ್ಪಿ ತಮ್ಮಯ್ಯ ಎಂ ಕೆ ಅವರು ದೂರುದಾರ ಸಂಸ್ಥೆಯಾದ ಜನಾಧಿಕಾರ ಸಂಘರ್ಷ ಪರಿಷತ್‌ಗೆ 2021ರ ನವೆಂಬರ್‌ 11ರಂದು ಹಿಂಬರಹ ನೀಡಿದೆ. ಹಿಂಬರಹದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಇಂದ್ರಕಲಾ ಬಿ ಎಸ್‌ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುವ ಸಲುವಾಗಿ ಯುವರಾಜ್‌ ಸ್ವಾಮಿ ಎಂಬುವರಿಗೆ 8.27 ಕೋಟಿ ರು.ಗಳನ್ನು ಲಂಚವಾಗಿ ನೀಡಿರುತ್ತಾರೆ ಎಂದು ಆಪಾಧಿಸಿ ಈ ಬಗ್ಗೆ ಕ್ರಮ ಜರುಗಿಸುವಂತೆ ಕೋರಿದ್ದು ಸರಿಯಷ್ಟೇ. ಈ ದೂರು ಅರ್ಜಿಯು ಭ್ರಷ್ಟಾಚಾರ ನಿಗ್ರಹ ದಳದ ವ್ಯಾಪ್ತಿಗೆ ಬಾರದ ಕಾರಣ ನಿಮ್ಮ ದೂರು ಅರ್ಜಿಯನ್ನು ಸೂಕ್ತ ಕ್ರಮವಾಗಿ ಸಿಬಿಐಗೆ ವರ್ಗಾವಣೆ ನೀಡಲಾಗಿರುತ್ತದೆ,’ ಎಂದು ಹಿಂಬರಹದಲ್ಲಿ ಹೇಳಲಾಗಿದೆ.

ಅದೇ ರೀತಿ ಎನಿತ್‌ ಕುಮಾರ್‌ ಎಂ ಸಿ ಅವರು ಸಹ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಅಧ್ಯಕ್ಷ ಹುದ್ದೆ ಪಡೆಯುವ ಸಲುವಾಗಿ ಯುವರಾಜ್‌ ಸ್ವಾಮಿಗೆ 30 ಲಕ್ಷ ರು.ಗಳನ್ನು ಲಂಚವಾಗಿ ನೀಡಿರುತ್ತಾರೆ ಎಂದು ಆಪಾದಿಸಿ ಸಲ್ಲಿಸಿದ್ದ ದೂರು ಅರ್ಜಿಯನ್ನೂ ಸಿಬಿಐಗೆ ವರ್ಗಾವಣೆ ಮಾಡಿರುವುದು ಹಿಂಬರಹದಿಂದ ತಿಳಿದು ಬಂದಿದೆ.

ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ ಜಾರಿಯಾದ ನಂತರ ಲಂಚ ಕೊಡುವುದು ಕೂಡ ಘೋರ ಅಪರಾಧ. ಹೀಗಾಗಿ ಈ ಕಾಯ್ದೆಯಡಿಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಈ ದೂರನ್ನು ಸಲ್ಲಿಸಿತ್ತು. ತಿದ್ದುಪಡಿ ಕಾಯ್ದೆ ಪ್ರಕಾರ ಲಂಚ ಕೊಡುವುದು ಕಲಂ 8ರ ಪ್ರಕಾರ ಅಪರಾಧ. ಲಂಚ ಕೊಟ್ಟವರು 7 ದಿನದೊಳಗೆ ಎಸಿಬಿ ಅಥವಾ ನ್ಯಾಯಾಂಗಕ್ಕೆ ದೂರು ನೀಡದೇ ಇದ್ದಲ್ಲಿ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇದನ್ನು ಆಧರಿಸಿ ದೂರು ಸಲ್ಲಿಕೆಯಾಗಿತ್ತು.

ಇಂದ್ರಕಲಾರಿಂದ 8.27 ಕೋಟಿ ಲಂಚ

ನಿವೃತ್ತ ಎಸ್‌ ಪಿ ಪಾಪಯ್ಯ ಎಂಬುವರ ಮೂಲಕ 2018ರಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ‘ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುತ್ತೀರಾ,’ ಎಂದು ಭವಿಷ್ಯ ಹೇಳಿದ್ದ. ಆ ಮೂಲಕ ಅವರಲ್ಲಿ ಆಸೆ ಹುಟ್ಟಿಸಿದ್ದ ಯುವರಾಜಸ್ವಾಮಿ ಪಾರ್ಟಿ ಫಂಡ್‌ಗಾಗಿ ಹಣ ನೀಡಬೇಕು ಎಂದು ತಿಳಿಸಿ ಅವರಿಂದ ಹಂತ ಹಂತವಾಗಿ 3,77,50,002 ರು.ಗಳನ್ನು ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ ಪಡೆದುಕೊಂಡಿದ್ದ.

ಈ ಪೈಕಿ ಇಂದ್ರಕಲಾ ಅವರ ಸ್ನೇಹಿತರಾದ ಸುನೀತಾ ಅವರ ಖಾತೆಯಿಂದ 25,00,00 ರು.ಗಳನ್ನು ಪರಿಮಳ ಎಂಬುವರ ಖಾತೆಯಿಂದ 25,00,000 ರು.ಗಳನ್ನು ಯುವರಾಜಸ್ವಾಮಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.

ಅಲ್ಲದೆ ಇಂದ್ರಕಲಾ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಸಹದ್ಯೋಗಿಗಳಿಂದ 4,50,00,000 ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದನಲ್ಲದೆ ಅವರ ಸ್ನೇಹಿತರಾಗಿದ್ದ ನಾಗರಬಾವಿಯ ವಿನಯ್‌ ಎಂಬುವರಿಂದಲೂ 30,00,000 ರು.ಗಳನ್ನು ಪಡೆದಿದ್ದ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಸುದೀಂಧ್ರ ರೆಡ್ಡಿ ಎಂಬುವರಿಗೆ (ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಮೊಕದ್ದಮೆ ಸಂಖ್ಯೆ 40/2020) 1 ಕೋಟಿ ವಂಚಿಸಿದ್ದ ಎಂಬ ಆರೋಪ ಕುರಿತು ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಸಿಲ್ಕ್‌ ಬೋರ್ಡ್‌ ಅಧ್ಯಕ್ಷ ಹುದ್ದೆಗೆ 1.5 ಕೋಟಿ ಲಂಚ

ಆನಂದ್‌ಕುಮಾರ್‌ ಕೋಲಾ ಎಂಬುವರನ್ನು ಕೇಂದ್ರದ ಸಿಲ್ಕ್‌ ಬೋರ್ಡ್‌ ಚೇರ್‌ಮನ್‌ ಮಾಡಿಸುವುದಾಗಿ ನಂಬಿಸಿದ್ದ ಯುವರಾಜಸ್ವಾಮಿ 2015ರಲ್ಲೇ 1.5 ಕೋಟಿ ರು.ಗಳನ್ನು ನಗದು ಮತ್ತು ಅಕೌಂಟ್‌ ಮೂಲಕ ಪಡೆದುಕೊಂಡಿದ್ದ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 1.5 ಕೋಟಿ ಪಡೆದ ನಂತರ ಕೋಲಾ ಅವರಿಗೆ ಯಾವುದೇ ಹುದ್ದೆಯನ್ನು ಕೊಡಿಸಿರಲಿಲ್ಲ ಮತ್ತು ಹಣವನ್ನೂ ವಾಪಸ್‌ ನೀಡಿರಲಿಲ್ಲ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts