ಬಿಟ್‌ಕಾಯಿನ್ ಹಗರಣ; ಪೂರಕ ಸಾಕ್ಷ್ಯ, ಪುರಾವೆ ಒದಗಿಸಿದ್ದರೂ ಸಿಸಿಬಿ ಕ್ರಮ ವಹಿಸಲಿಲ್ಲವೇಕೆ?

ಬೆಂಗಳೂರು; ಬಿಟ್‌ಕಾಯಿನ್‌ ಹಗರಣ ಕುರಿತು ಸಾಮಾಜಿಕ ಕಾರ್ಯಕರ್ತ ಅಶೋಕ್‌ ಕುಮಾರ್‌ ಅಡಿಗ ಎಂಬುವರು 2021ರ ಜನವರಿ, ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿಯೇ ಹಲವು ಸಾಕ್ಷ್ಯಗಳನ್ನು ಸಿಸಿಬಿಯ ಜಂಟಿ ಆಯುಕ್ತರು ಮತ್ತು ಪ್ರಧಾನಿ ಕಚೇರಿಗೆ ಒದಗಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ಈ ಹಗರಣದ ಕುರಿತು ಸಚಿನ್‌ ಮಾಮನಿ ಎಂಬುವರು ಪ್ರಧಾನಿ ಕಚೇರಿಗೆ ಸಲ್ಲಿಸಿದ್ದಾರೆ ಎನ್ನಲಾಗಿರುವ ದೂರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಾದರೂ ಆ ದೂರಿನಲ್ಲಿ ವಿಳಾಸವಿರಲಿಲ್ಲ. ಆದರೆ ಅಶೋಕ್‌ ಕುಮಾರ್‌ ಅಡಿಗ ಅವರು ತಮ್ಮ ವಿಳಾಸವನ್ನು ನಮೂದಿಸಿ ಸಿಸಿಬಿ ಜಂಟಿ ಆಯುಕ್ತರು ಮತ್ತು ಪ್ರಧಾನಿ ಕಚೇರಿಗೆ ಹಲವು ಮಾಹಿತಿ ಮತ್ತು ದಾಖಲೆಗಳ ಸಮೇತ ಸಲ್ಲಿಸಿದ್ದ ದೂರು ಮುನ್ನೆಲೆಗೆ ಬಂದಿದೆ.

ಅಡಿಗ ಅವರು ಸಲ್ಲಿಸಿದ್ದ ದೂರನ್ನು ಸಿಸಿಬಿಯ ಜಂಟಿ ಆಯುಕ್ತರ ಕಚೇರಿ ಸ್ವೀಕರಿಸಿರಲಿಲ್ಲ. ಇದಾದ ನಂತರ ಸಿಸಿಬಿಯ ಡಿಸಿಪಿ ಅಂಗಡಿ ಅವರು ಅಡಿಗ ಅವರನ್ನು ಕರೆಸಿ ಮಾಹಿತಿ ಪಡೆದಿದ್ದರು. ಆದರೆ ಹಗರಣದ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅಡಿಗ ಅವರು ನೇರವಾಗಿ ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು ಎಂಬುದು ಗೊತ್ತಾಗಿದೆ. ಅಡಿಗ ಅವರು ಸಲ್ಲಿಸಿದ್ದ ದೂರಿನ ಪ್ರತಿ ದಿ ಫೈಲ್‌ ಗೆ ಲಭ್ಯವಾಗಿದೆ.

ಶ್ರೀಕಿ ಎಂಬಾತ ಸಿಸಿಬಿಯ ವಶದಲ್ಲಿದ್ದಾಗಲೇ 12,900 ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲಾಗಿತ್ತು. ಇದು ಸಾವಿರಾರು ಕೋಟಿ ರುಪಾಯಿಗಳ ಮೌಲ್ಯದ್ದು. ಕೆಲವನ್ನು ಸಿಸಿಬಿಯ ಕೆಳ ಹಂತದ ಅಧಿಕಾರಿಗಳು ಪಡೆದುಕೊಂಡಿದ್ದರು. ಇಡೀ ಪ್ರಕರಣದಲ್ಲಿ 17 ಮಂದಿ ಭಾಗಿಯಾಗಿದ್ದಾರೆ. 2021ರ ಜನವರಿ 3ರ ಹೊತ್ತಿಗೆ 9,600 ಬಿಟ್‌ಕಾಯಿನ್‌ಗಳನ್ನು ಸಿಸಿಬಿಯ ಪೊಲೀಸರು ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು ಎಂಬುದು ಅಶೋಕ್‌ ಕುಮಾರ್‌ ಅಡಿಗ ಅವರು ಸಿಸಿಬಿಯ ಜಂಟಿ ಆಯುಕ್ತರಿಗೆ ಸಲ್ಲಿಸಿದ್ದ ದೂರಿನಿಂದ ತಿಳಿದು ಬಂದಿದೆ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶ್ರೀಕಿ ಎಂಬಾತನನ್ನು2020ರ ಡಿಸೆಂಬರ್‌ನಲ್ಲಿಯೇ ಬಂಧಿಸಿದ್ದ ಹೊತ್ತಿನಲ್ಲೇ ಅಡಿಗ ಅವರು ಸಿಸಿಬಿಯ ಜಂಟಿ ಆಯುಕ್ತರಿಗೆ 2021ರ ಜನವರಿ 3 ಮತ್ತು ಏಪ್ರಿಲ್‌ 26 ರಂದು ದೂರು ಸಲ್ಲಿಸಿದ್ದರು.  ಬಿಟ್‌ಕಾಯಿನ್‌ನ ಅಧಿಕೃತ ವೆಬ್‌ಸೈಟ್‌ನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ಸಾವಿರಾರು ಸಂಖ್ಯೆಯ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯನ್ನೂ ಒದಗಿಸಿದ್ದರು ಎಂಬುದು ದೂರಿನಿಂದ ತಿಳಿದು ಬಂದಿದೆ.

‘ಈ ಸಂಬಂಧ ನೆದರ್‌ಲ್ಯಾಂಡ್‌ನ ಆ್ಯಮ್‌ಸ್ಟರ್ ಡ್ಯಾಮ್‌, ನಲ್ಲಿ ಶ್ರೀಕಿ ವಿರುದ್ಧ ಪ್ರಕರಣ ದಾಖಲಕಾಗಿದೆ. ನ್ಯಾಷನಲ್‌ ಪೊಲೀಸ್‌ ಕಾರ್ಪ್ಸ್‌ (ಎನ್‌ಪಿಸಿ) ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ವರ್ಗಾಯಿಸಿಕೊಂಡಿರುವ ಶ್ರೀಕಿಯನ್ನು ಈ ತನಿಖಾ ತಂಡ ಬೆನ್ನೆತ್ತಿದೆ. ಪ್ರತಿ ಬಿಟ್‌ಕಾಯಿನ್‌ನ ಯುನಿಕ್‌ ಐಡೆಂಟಿಫಿಕೇಷನ್‌ ನಂಬರ್‌ನ್ನು ಜಾಲಾಡುತ್ತಿದೆ. ಈ ಸಂಬಂಧ ಕೆಲ ದಾಖಲೆಗಳನ್ನು ನಾನು ಸಂಗ್ರಹಿಸಿದ್ದೇನೆ. ಅಲ್ಲದೆ ಅಮೇರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ ಗೆ ತಲುಪಿಸಲಿದ್ದೇನೆ,’ ಎಂಬ ಮಾಹಿತಿಯನ್ನು ಸಿಸಿಬಿಯ ಜಂಟಿ ಆಯುಕ್ತರಿಗೆ ಒದಗಿಸಿದ್ದರು ಎಂಬುದು ದೂರಿನಿಂದ ಗೊತ್ತಾಗಿದೆ.

‘ಈ ಹಗರಣಕ್ಕೆ ಸಂಬಂಧಿಸಿದಂತೆ 3 ಕಡತಗಳನ್ನು ಆ್ಯಮ್‌ಸ್ಟರ್ ಡ್ಯಾಮ್‌ನಿಂದ ಪಡೆದಿದ್ದೇನೆ. 2 ಕಡತಗಳನ್ನು ಅಮೇರಿಕದಿಂದ ಪಡೆದಿದ್ದೇನೆ. ಅಂದಾಜು 1,017 ವೇಲ್‌ ಅಲರ್ಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ತರಿಸಿಕೊಂಡಿದ್ದೇನೆ. ಸಿಂಗಾಪೂರ್‌ನಲ್ಲಿರುವ ಇಂಟರ್‌ಪೋಲ್‌ ಕಚೇರಿಗೆ 3 ಕಡತಗಳನ್ನು ರವಾನಿಸಿದ್ದೇನೆ,’ ಎಂಬ ಮಾಹಿತಿಯನ್ನೂ ಸಿಸಿಬಿಯ ಜಂಟಿ ಆಯುಕ್ತರಿಗೆ ಬರೆದಿರುವ ದೂರಿನಲ್ಲಿ ಅಡಿಗ ಅವರು ತಿಳಿಸಿದ್ದರು ಎಂಬುದು ಅವರು ಸಲ್ಲಿಸಿರುವ ದೂರಿನಿಂದ ತಿಳಿದು ಬಂದಿದೆ.

ಆರೋಪಿ ಶ್ರೀಕಿ ತೇಲುವ ದೋಣಿ ಮತ್ತು ಹಡಗಿನಲ್ಲಿ ನಡೆಯುತ್ತಿದ್ದ ಮೋಜು ಮಸ್ತಿಯ ಮತ್ತು ವಿಲಾಸಿ ಔತಣ ಕೂಟಗಳಲ್ಲಿ ಭಾಗಿಯಾಗಿದ್ದ. ಇದಕ್ಕಾಗಿ ಅರ್ಕಾ ಸೈಲಿಂಗ್‌ ಬೋಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 10 ಲಕ್ಷ ರು.ಗಳನ್ನು ಈತನ ಸೂಚನೆಯಂತೆ ಪಾವತಿಯಾಗಿತ್ತು ಎಂಬುದನ್ನು ದೋಷಾರೋಪಣೆ ಪಟ್ಟಿಯು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿ ನೀಡಿರುವ ಸ್ವ ಇಚ್ಛಾ ಹೇಳಿಕೆಯು ರಂಜನೀಯ ಮತ್ತು ವೈಭವ ರೂಪ ಪಡೆದುಕೊಂಡಿದೆ. ಈತನ ಸ್ವ ಇಚ್ಛಾ ಹೇಳಿಕೆಯನ್ನು ರಂಜನೀಯವಾಗಿ ವೈಭವೀಕರಿಸುವುದರಲ್ಲಿಯೇ ಮಗ್ನವಾಗಿರುವ ತನಿಖಾ ತಂಡವು, ಆತ ಬಿಟ್‌ ಕಾಯಿನ್‌ ವ್ಯವಹಾರದಲ್ಲಿ ದೋಚಿದ್ದಾನೆ ಎಂದು ಹೇಳಲಾಗುತ್ತಿರುವ ಅಕ್ರಮ ಸಂಪನ್ಮೂಲವನ್ನು ಪತ್ತೆ ಹಚ್ಚುವುದರತ್ತ ಒಂದೇ ಒಂದು ಹೆಜ್ಜೆಯನ್ನಿರಿಸಿಲ್ಲ. ಆತ ನೀಡಿರುವ ಸ್ವ ಇಚ್ಛಾ ಹೇಳಿಕೆಯನ್ನು ಒಂದಿನಿತೂ ಪರಾಮರ್ಶಿಸದಿರುವ ಬಗ್ಗೆ ಕಾನೂನು ತಜ್ಞರ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿತ್ತು.

ಬಿಟ್‌ ಕಾಯಿನ್‌ ಹಗರಣ ಕುರಿತು ಐಪಿಎಸ್‌ ಅಧಿಕಾರಿಗಳೊಂದಿಗೆ ತನಿಖಾ ತಂಡವು ಮಾಹಿತಿ ಸೋರಿಕೆ ಮಾಡುತ್ತಿರುವುದನ್ನು ‘ದಿ ಫೈಲ್‌’ ಹೊರಗೆಡವುತ್ತಿದ್ದಂತೆ ಅಧಿಕಾರಿಗಳ ವಲಯದಲ್ಲಿ ತೀವ್ರ ಸಂಚಲನ ಹುಟ್ಟಿಸಿತ್ತು.

the fil favicon

SUPPORT THE FILE

Latest News

Related Posts