ಮಧ್ಯ ವಾ‍ರ್ಷಿಕ ಪರೀಕ್ಷೆ; ಸುತ್ತೋಲೆ ಹಿಂಪಡೆದ ಮಂಡಳಿಯ ಹುಚ್ಚಾಟ, ವಿದ್ಯಾರ್ಥಿಗಳಿಗೆ ಪೀಕಲಾಟ

ಬೆಂಗಳೂರು; ಯಾವುದೇ ಪೂರ್ವಭಾವಿ ಸಿದ್ಧತೆಯಿಲ್ಲದೇ ಮಧ್ಯಂತರ ಪರೀಕ್ಷೆ ನಡೆಸಲು ಆತುರದ ನಿರ್ಧಾರ ಕೈಗೊಂಡು ಅಷ್ಟೇ ವೇಗದಲ್ಲಿ ಪರೀಕ್ಷೆಯನ್ನು ಪಿಯು ಮಂಡಳಿಯು ಮುಂದೂಡಿ ಸುತ್ತೋಲೆ ಹೊರಡಿಸಿದ್ದ ಪದವಿ ಪೂರ್ವ ಶಿಕ್ಷಣ ಮಂಡಳಿಯು ಇದೀಗ ತಾನೇ ಹೊರಡಿಸಿದ್ದ ಸುತ್ತೋಲೆಯನ್ನೂ ಹಿಂಪಡೆದುಕೊಂಡಿದೆ. ಗಳಿಗೆಗೊಂದು ಸುತ್ತೋಲೆ ಹೊರಡಿಸುತ್ತಿರುವ ಮಂಡಳಿಯು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.

ತರಾತುರಿಯಲ್ಲಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಸಲು ಮುಂದಾಗಿದ್ದ ಮಂಡಳಿಯ ನಿರ್ಧಾರಕ್ಕೆ ಉಪನ್ಯಾಸಕರು ಮತ್ತು ಪೋಷಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪರೀಕ್ಷೆಯನ್ನು ಮುಂದೂಡಿತ್ತು.

2021ರ ನವೆಂಬರ್‌ 29ರಿಂದ ಡಿಸೆಂಬರ್‌ 10ರವರೆಗೆ ನಡೆಸಲು ಉದ್ಧೇಶಿಸಿದ್ದ ಮಧ್ಯಂತರ ಪರೀಕ್ಷೆಗಳನ್ನು ಮುಂದೂಡಿ 2021ರ ಡಿಸೆಂಬರ್‌ 13ರಿಂದ 24ರವರೆಗೆ ಪರೀಕ್ಷೆ ನಡೆಸಲು 2021ರ ನವೆಂಬರ್‌ 17ರ ಸಂಜೆ ಸುತ್ತೋಲೆ ಹೊರಡಿಸಿತ್ತು.  ಆದರೀಗ ಅದೇ ಸುತ್ತೋಲೆಯನ್ನೇ ಹಿಂಪಡೆದುಕೊಂಡಿದೆ. ಮಧ್ಯಂತರ ಪರೀಕ್ಷೆ ನಡೆಸುವ ಸಂಬಂಧ ಪಿಯು ಮಂಡಳಿಯು ಯಾವುದೇ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ನವೆಂಬರ್‌ 29ರಿಂದ ಪರೀಕ್ಷೆ ನಡೆಸಿದ್ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನೊಳಗೊಂಡ ಕಾಲೇಜುಗಳ ಕಾರ್ಯಚಟುವಟಿಕೆಗಳಿಗೆ ಬಾಧಕವಾಗುತ್ತಿತ್ತು. ಹೀಗಾಗಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

ಮಧ್ಯಂತರ ಪರೀಕ್ಷೆ ನಡೆಸುವ ಸಂಬಂಧ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರುಗಳೊಂದಿಗೆ ಮಂಡಳಿಯು ಸಮಾಲೋಚನೆಯನ್ನೇ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಅಲ್ಲದೆ ವಾಸ್ತವ ನೆಲೆಗಟ್ಟಿನಲ್ಲಿ ಕಾರ್ಯಸಾಧುವಾಗುವಂತಹ ಯೋಜನೆಗಳನ್ನು ರೂಪಿಸಿಕೊಳ್ಳದೆಯೇ ಮಂಡಳಿಯು ಏಕಪಕ್ಷೀಯವಾಗಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಮುಂದಾಗಿತ್ತು. ಇದು ಬೋಧಕ ವರ್ಗದಲ್ಲಿ ಗೊಂದಲಕಾರಿ ಮತ್ತು ವಿದ್ಯಾರ್ಥಿಗಳಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

ದ್ವಿತೀಯ ಪಿಯು ಪ್ರತಿ ತರಗತಿ/ವಿಭಾಗ/ ಸೆಕ್ಷನ್‌ಗೆ 2 ಅಥವಾ 2ಕ್ಕಿಂತ ಹೆಚ್ಚಿನ ಸಂಖ್ಯೆಗಳಲ್ಲಿ ಉಪನ್ಯಾಸಕರು ಪಾಠ ಮಾಡಲು ಪಠ್ಯಕ್ರಮ ಹಂಚಿಕೊಂಡಿರುತ್ತಾರೆ. ಅಂತಹ ಕಾಲೇಜುಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯು ಸೂಚಿತ ಕ್ರಮಕ್ಕೆ ಅನುಗುಣವಾಗಿ ಪಠ್ಯಕ್ರಮಗಳನ್ನು ಬೋಧಿಸಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಇಂತಹ ಕಾಲೇಜುಗಳಲ್ಲಿ ಮಧ್ಯವಾರ್ಷಿಕ ಪರೀಕ್ಷೆ ನಡೆಯುವಷ್ಟರಲ್ಲಿ ಶೇ.50ರಷ್ಟು ಪಠ್ಯಕ್ರಮ ಬೋಧನೆಯಾಗಿದ್ದರೂ ಇಲಾಖೆ ತಿಳಿಸಿರುವ ವಿಭಜಿತ ಪಠ್ಯಕ್ರಮಕ್ಕೆ ಅನುಗುಣವಾಗಿ ಬೋಧನೆ ಮಾಡಲು ಸಾಧ್ಯವಾಗುವುದೇ ಇಲ್ಲ. ಆದರೂ ಪಿಯು ಮಂಡಳಿಯು ಅವೈಜ್ಞಾನಿಕವಾಗಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆಯೇ ಮಧ್ಯ ವಾರ್ಷಿಕ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡುತ್ತಿದೆಯಲ್ಲದೆ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಉಪನ್ಯಾಸಕ ವಲಯವು ಗಂಭೀರವಾಗಿ ಆರೋಪಿಸಿದೆ.

ಅಲ್ಲದೆ ಪಿಯು ಮಂಡಳಿ ನಡೆಸಲು ಉದ್ದೇಶಿಸಿದ್ದ 12 ದಿನಗಳ ಪರೀಕ್ಷಾ ಅವಧಿಯಲ್ಲಿ ಹಾಗೂ ನಂತರ ನಡೆಯುವ ಮೌಲ್ಯಮಾಪನಕ್ಕೆ 8 ದಿನಗಳು ಬಳಕೆಯಾಗಲಿತ್ತು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಶೈಕ್ಷಣಿಕ ಅವಧಿ ಕುಂಠಿತವಾಗಿರುವ ಕಾರಣ ಸುಮಾರು 20 ದಿನಗಳ ಬೋಧನಾ ಅವಧಿಯೂ ನಷ್ಟವಾಗಲಿದೆ. ಅದೇ ರೀತಿ ಇಲಾಖೆಯು ಪ್ರಚುರಪಡಿಸಿರುವ ಪ್ರಶ್ನೆ ಪತ್ರಿಕೆಯ ಮಾದರಿಯು ಬಹುತೇಕ ಉಪನ್ಯಾಸಕರಿಗೆ ಮಾಹಿತಿಯೇ ಇಲ್ಲವೆಂದು ಹೇಳಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಉಪನ್ಯಾಸಕರಿಗೆ ಮತ್ತು ಕಾರ್ಯಾಗಾರ ನಡೆಸದೆಯೇ ಪ್ರಶ್ನೆಪತ್ರಿಕೆ ಸಿದ್ದಪಡಿಸುವುದು ಅವೈಜ್ಞಾನಿಕ ಎಂಬ ವಾದವನ್ನು ಮುಂದೊಡ್ಡುತ್ತಾರೆ ಉಪನ್ಯಾಸಕರು.

ಇನ್ನು, ಪ್ರತಿ ಜಿಲ್ಲೆಗೆ ಬೇರೆ ಬೇರೆ ಪ್ರಶ್ನೆಪತ್ರಿಕೆ ತಯಾರಿಕೆಗೆ ಬೇಕಾದ ಜವಾಬ್ದಾರಿ ಹೊರುವ ತಂಡ ಮತ್ತು ಗುಣಮಟ್ಟದ ಪ್ರಶ್ನೆಪತ್ರಿಕೆ ತಯಾರಿಸುವ ತಂಡದ ಸದಸ್ಯರನ್ನು ಗುರುತಿಸಿಲ್ಲ. ಸೂಕ್ತ ತರಬೇತಿಯನ್ನೂ ನೀಡದೆ ಏಕಾಏಕಿ ಪ್ರಶ್ನೆಪತ್ರಿಕೆ ತಯಾರಿಕೆಗೆ ಉಪನ್ಯಾಸಕರನ್ನು ತರಾತುರಿಯಲ್ಲಿ ಆಹ್ವಾನಿಸಿತ್ತು.

ಪ್ರತಿ ಜಿಲ್ಲೆಯಲ್ಲಿಯೂ ಸುಮಾರು 20ಕ್ಕೂ ಹೆಚ್ಚು ವಿಷಯಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರುವುದನ್ನು ಮುದ್ರಿಸಿ ಕಾಲೇಜುಗಳಿಗೆ ವಿತರಿಸಬೇಕು. ಪ್ರತಿಜಿಲ್ಲೆಗಳಿಗೂ ಬರುವ ಪ್ರಶ್ನೆಪತ್ರಿಕೆ ಬೇರೆಬೇರೆಯಾಗಿರುವುದರಿಂದ ಪ್ರತಿ ಜಿಲ್ಲೆಗೆ ನೀಡುವ ಪ್ರಶ್ನೆಪತ್ರಿಕೆಗಳು ಒಂದೇ ಗುಣಮಟ್ಟದಲ್ಲಿ ಇಲ್ಲದಿದ್ದಲ್ಲಿ ಆಗುವ ವ್ಯತ್ಯಾಸಗಳಿಗೆ ವಿದ್ಯಾರ್ಥಿಗಳನ್ನು ಬಲಿಪಶು ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.

ಕೋವಿಡ್‌ ಮೊದಲ ಅಲೆ ಅಪ್ಪಳಿಸಿದ್ದ ಸಂದರ್ಭದಲ್ಲಿ 2020-21ರ ಶೈಕ್ಷಣಿಕ ವರ್ಷ ಬೋಧನಾ ಚಟುವಟಿಕೆಗಳು ನಡೆದಿರಲಿಲ್ಲ. ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಹಂತಗಳಲ್ಲಿ ಶೇಕಡ 30ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಿ ಉಳಿದಂತೆ ಶೇಕಡ 70ರಷ್ಟು ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ನಿಗದಿಗೊಳಿಸಿ ಎಡವಟ್ಟಿಗೆ ಕಾರಣವಾಗಿತ್ತು.

ಅಲ್ಲದೇ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಪಠ್ಯಕ್ರಮದಲ್ಲಿ ಶೇಕಡ 30ರಷ್ಟನ್ನು ಕಡಿತಗೊಳಿಸುವಾಗ ಅವೈಜ್ಞಾನಿಕ ನಿರ್ಧಾರವಾಗಿತ್ತಲ್ಲದೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲದೆ ಪಠ್ಯಕ್ರಮಗಳನ್ನು ಕಡಿತಗೊಳಿಸಿದ್ದರಿಂದ ನಿಗದಿತ ಶೇಕಡ 70ರಷ್ಟು ಪಠ್ಯಕ್ರಮವನ್ನು ಪಾಠ ಮಾಡುವಾಗ ನಿರಂತರತೆಯೂ ಇರಲಿಲ್ಲ. ಹೀಗಾಗಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪರದಾಡಿದ್ದರು. ಅದರಲ್ಲೂ ತುಂಬಾ ಮುಖ್ಯವಾಗಿ ವಿಜ್ಞಾನ ವಿಭಾಗದಲ್ಲಿ ದೂರಗಾಮಿ ದುಷ್ಪರಿಣಾಮಗಳು ಉಂಟಾಗಿದ್ದವಲ್ಲದೆ ಸ್ಪರ್ಧಾತ್ಪಕ ಪ್ರವೇಶ ಪರೀಕ್ಷೆಗಳಲ್ಲಿ ಮತ್ತು ನಂತರದ ಕಲಿಕೆಯಲ್ಲಿ ತೊಡಕುಗಳು ಉಂಟಾಗಿದ್ದವು.

ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಇಷ್ಟೆಲ್ಲಾ ಪ್ರಮಾದಗಳು ಆಗಿದ್ದರೂ ಅದೇ ಪ್ರಮಾದಗಳನ್ನೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಪಿಯು ಮಂಡಳಿಯು ಮುಂದುವರೆಸುತ್ತಿದೆ. ಕೋವಿಡ್‌ 2ನೇ ಅಲೆ ತೀವ್ರಗತಿಯಲ್ಲಿದ್ದ ಅವಧಿಯಲ್ಲಿ ಅಂದರೆ 2021ರ ಏಪ್ರಿಲ್‌ 26ರಿಂದ 2021ರ ಆಗಸ್ಟ್‌ 23ರವರೆಗೆ ತರಗತಿಗಳನ್ನು ನಡೆಸಲು ಸರ್ಕಾರ ನಿರ್ಬಂಧಿಸಿತ್ತು. ಹೀಗಾಗಿ ಯಾವುದೇ ರೀತಿಯ ತರಗತಿಗಳೂ ನಡೆದಿರಲಿಲ್ಲ. ಹೀಗಾಗಿ 2021-22ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಅವಧಿ ಗಣನೀಯವಾಗಿ ಕುಂಠಿತಗೊಂಡಿದೆ.

ಆದರೂ ಪಿಯು ಮಂಡಳಿಯು ಇದಾವುದನ್ನೂ ಪರಿಗಣಿಸಿಲ್ಲ ಹಾಗೆಯೇ ಕುಂಠಿತಗೊಂಡಿರುವ ಶೈಕ್ಷಣಿಕ ಅವಧಿಗೆ ಶೈಕ್ಷಣಿಕ ಕ್ರಿಯಾ ಯೋಜನೆ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚೆಯನ್ನೂ ನಡೆಸಿಲ್ಲ ಎಂದು ತಿಳಿದು ಬಂದಿದೆ. ಮಧ್ಯವಾರ್ಷಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿರುವುದೇ ಅವೈಜ್ಞಾನಿಕ ಎಂದು ಉಪನ್ಯಾಸಕ ವಲಯವು ಪ್ರತಿಪಾದಿಸುತ್ತಿದೆ.

ಶೈಕ್ಷಣಿಕ ಪಠ್ಯಕ್ರಮವನ್ನು 4 ಭಾಗವನ್ನಾಗಿಸಿ ಮೊದಲ ಹಂತಕ್ಎಕ ವಿಭಜಿತ ಪಠ್ಯದ 1ನೇ ಹಾಗೂ 2ನೇ ಭಾಗ, 2ನೇ ಹಂತಕ್ಕೆ ವಿಭಜಿತ ಪಠ್ಯದ 3 ಮತ್ತು 4ನೇ ಭಾಗವನ್ನು ನಿಗದಿಗೊಳಿಸಿರುವುದು ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದರೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಸೃಷ್ಟಿಯಾಗಲಿದೆ ಎಂದು ಉಪನ್ಯಾಸಕ ವಲಯ ವಾದಿಸುತ್ತಿದೆ.

2020-21ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮಗಳಲ್ಲಿ ಅವೈಜ್ಞಾನಿಕ ಮತ್ತು ಗೊತ್ತುಗುರಿಯಿಲ್ಲದೆ ಕಡಿತಗೊಳಿಸಿ ಶೇ. 30ರಷ್ಟು ಪಠ್ಯಕ್ರಮವನ್ನು ಯಥಾಸ್ಥಿತಿಯಲ್ಲಿ ಇಡಿಯಾಗಿ ನಿಗದಿಗೊಳಿಸಿತ್ಉತ. ಪ್ರಸಕ್ತ 2021-22ನೇ ಶೈಕ್ಷಣಿಕ ವರ್ಷದಲ್ಲೂ ಎರಡನೇ ಹಂತದ ಕೊನೆಯ ಭಾಗವಾಗಿರುವ 4ನೇ ಭಾಗವನ್ನು ನಿಗದಿಗೊಳಿಸಿರುವುದು ಬೋಧಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಗೊಂದಲ ಉಂಟು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೊದಲ ಹಂತದ ಅಂತ್ಯಕ್ಕೆ ಮೊದಲೆರಡು ಬಾಗಗಳ ವಿಭಜಿತ ಪಠ್ಯಕ್ರಮವನ್ನು ಬೋಧನೆ ಮಾಡುವಾಗ ಪಾಠಗಳ ನಡುವೆ ನಿರಂತರತೆ ತಪ್ಪಿಸಲು ಎರಡನೇ ಹಂತದ ವಿಭಜಿತ ಪಠ್ಯಕ್ರಮದ ಕೊನೆಯ ಭಾಗವಾದ 4ನೇ ಭಾಗದ ಪಾಠಗಳನ್ನು ಎಳೆದು ತಂದು ಬಲವಂತವಾಗಿ ಬೋಧಿಸಲಾಗುತ್ತಿದೆ. ಇದಕ್ಕೆ ಬೋಧಕ ವೃಂದಕ್ಕೆ ಹೆಚ್ಚಿನ ಶ್ರಮ ಮತ್ತು ಸಮಯ ಬೇಕಾಗುತ್ತದೆ ಎಂಬ ವಾದವನ್ನು ಉಪನ್ಯಾಸಕ ವಲಯ ಮುಂದೊಡ್ಡಿದೆ.

ಇನ್ನು ಈ ಗೊಂದಲಗಳ ನಡುವೆಯೇ ಇಲಾಖೆಯು ಇತ್ತೀಚೆಗೆ ಅಂದರೆ ಅಕ್ಟೋಬರ್‌ ತಿಂಗಳಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿದೆ. ಹಾಗೆಯೇ ಕೆಲವು ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಸೆಪ್ಟಂಬರ್‌/ಅಕ್ಟೋಬರ್‌ ಅಂತ್ಯದವರೆಗೂ ಉಪನ್ಯಾಸಕರನ್ನು ನಿಯೋಜನೆ ಮಾಡಿದೆ. ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಈಗಲೂ ಇದೆ.

ನೂತನವಾಗಿ ನಿಯೋಜಿತವಾಗಿರುವ ಮತ್ತು ನೇಮಕಾತಿಯಾಗಿರುವ ಅತಿಥಿ ಉಪನ್ಯಾಸಕರಿಗೆ ಪಠ್ಯ ಬೋಧನೆಗೆ ಸಾಕಷ್ಟು ಕಾಲಾವಕಾಶವೂ ದೊರೆತಿಲ್ಲ. ಹೀಗಿದ್ದರೂ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಕಲಿಕೆ ಮತ್ತು ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ ಬಹುದೊಡ್ಡ ಲೋಪವೆಸಗಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

the fil favicon

SUPPORT THE FILE

Latest News

Related Posts