ಬೆಂಗಳೂರು: ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯಗಳ ವಾಣಿಜ್ಯ ಮೇಳದ ಪ್ರಚಾರಕ್ಕೆ ವಾರ್ತಾ ಇಲಾಖೆಯ ಅಧೀನ ಸಂಸ್ಥೆಗಳ ಒತ್ತಡಕ್ಕೆ ಮಣಿದಿದ್ದ ಕೃಷಿ ಇಲಾಖೆ ಆಯುಕ್ತರು ಕೃಷಿ ಭಾಗ್ಯ ಯೋಜನೆಯ ಅನುದಾನದಲ್ಲಿ ಉಳಿಕೆಯಾಗಿದ್ದ 2.27 ಕೋಟಿ ರು.ಗಳನ್ನು ನಿಯಮಬಾಹಿರವಾಗಿ ಬಳಕೆ ಮಾಡಿದ್ದರು ಎಂಬುದು ಇದೀಗ ಆರ್‌ಟಿಐ ಮೂಲಕ ಬಹಿರಂಗವಾಗಿದೆ.
ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯಗಳ ವಾಣಿಜ್ಯ ಮೇಳ-2018 ಪ್ರಚಾರ ಕಾರ್ಯಗಳಿಗಾಗಿ ಕೃಷಿ ವಾರ್ತಾ ಘಟಕವು ಲೆಕ್ಕ ಶೀರ್ಷಿಕೆ 2401-00-109-0-21-059 ರಡಿ 146.77 ಲಕ್ಷ ರು.ಗಳನ್ನು ಪಾವತಿಸಲು ಕೃಷಿ ಇಲಾಖೆಯ ವಾರ್ತಾ ಘಟಕವು ಅನುಮತಿ ನೀಡಿತ್ತು. ಆದರೆ ಈ ಲೆಕ್ಕ ಶೀರ್ಷಿಕೆಯಡಿ 2018-19ನೇ ಸಾಲಿನ ಅಂತ್ಯಕ್ಕೆ ಅನುದಾನ ಲಭ್ಯವಿಲ್ಲದ ಕಾರಣ ಪ್ರಚಾರ ಕಾರ್ಯಕ್ರಮ ಕೈಗೊಂಡಿತ್ತು.
ಅಲ್ಲದೆ ವಾರ್ತಾ ಇಲಾಖೆಯ ಅಧೀನ ಸಂಸ್ಥೆಗಳಿಂದ ಪ್ರಚಾರದ ವೆಚ್ಚ ಪಾವತಿಸುವಂತೆ ಒತ್ತಡ ಹೇರಿದ್ದ ಕಾರಣ ಕೃಷಿ ಭಾಗ್ಯ ಯೋಜನೆಯಲ್ಲಿ ಉಳಿದಿದ್ದ ಅನುದಾನದಿಂದ ವೆಚ್ಚ ಭರಿಸಲಾಗಿತ್ತು ಎಂದು ಕೃಷಿ ಆಯುಕ್ತರು ಒಪ್ಪಿಕೊಂಡಿರುವುದು ಆರ್ಥಿಕ ಇಲಾಖೆ ಆರ್‌ಟಿಐ ಮೂಲಕ ಒದಗಿಸಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ‘ದಿ ಫೈಲ್’ ಈ ಸಂಬಂಧ ಆರ್‌ಟಿಐ ಅರ್ಜಿ ಸಲ್ಲಿಸಿತ್ತು.
‘ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯಗಳ ವಾಣಿಜ್ಯ ಮೇಳ 2018ರ ಯೋಜನೆಯ ಪ್ರಚಾರ ಕಾರ್ಯಕ್ರಮಕ್ಕೆ 2017-18ರಲ್ಲಿ ಕೃಷಿ ವಾರ್ತಾ ಘಟಕ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ 2401-00-109-0-21-059 ರಡಿ 500.00 ಲಕ್ಷ ರು. ಅನುದಾನ ಒದಗಿಸಲಾಗಿತ್ತು. ಅದರಲ್ಇ 227.81 ಲಕ್ಷ ರು. ವೆಚ್ಚವಾಗಿತ್ತು. 272.19 ಲಕ್ಷ ಉಳಿಕೆ ಹಣವನ್ನು ಬಳಸದ ಇಲಾಖೆಯು ಕೃಷಿ ಭಾಗ್ಯ ಯೋಜನೆಯಡಿ ಅನುದಾನವನ್ನು ಸಾವಯವ ಸಿರಿಧಾನ್ಯಗಳ ವಾಣಿಜ್ಯ ಮೇಳದ ಪ್ರಚಾರಕ್ಕೆ ಬಳಸಿತ್ತು. ಘಟನೋತ್ತರ ಮಂಜೂರಾತಿ ನಿರೀಕ್ಷಿಸಿ ವೆಚ್ಚ ಭರಿಸಿದ್ದ ಕೃಷಿ ಇಲಾಖೆಗೆ ಆರ್ಥಿಕ ಇಲಾಖೆ ಘಟನೋತ್ತರ ಮಂಜೂರಾತಿ ನೀಡಿಲ್ಲದಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
‘ಒಂದು ಯೋಜನೆಗೆ ಒದಗಿಸಿರುವ ಅನುದಾನದಲ್ಲಿ ಬೇರೆ ಯೋಜನೆಗೆ ಅನುದಾನವನ್ನು ಉಪಯೋಗಿಸಿಕೊಂಡಿರುವುದಕ್ಕೆ ನಿಯಮಗಳಲ್ಲಿ ಅವಕಾಶಗಳಿಲ್ಲ. ಸದರಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ಉಳಿದಿರುವ ಅನುದಾನಗಳನ್ನು ಕರ್ನಾಟಕ ಬಜೆಟ್ ಮ್ಯಾನುಯಲ್ ಪ್ರಕಾರ ಹಾಗೂ ಆರ್ಥಿಕ ಇಲಾಖೆಯು ಪ್ರತಿ ಆರ್ಥಿಕ ಸಾಲಿನಲ್ಲಿ ಸರ್ಕಾರಕ್ಕೆ ಅದ್ಯರ್ಪಣೆ ಮಾಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತಿದೆ. ಕೃಷಿ ವಾರ್ತಾ ಘಟಕ ಕಾರ್ಯಕ್ರಮ ಲೆಕ್ಕ ಶೀರ್ಷಿಕೆ 2401-00-109-0-21-059 ಅಡಿಯಲ್ಲಿ ಉಳಿದ 272.19 ಲಕ್ಷ ರು.ಗಳನ್ನು ಸರ್ಕಾರಕ್ಕೆ ಅದ್ಯರ್ಪಿಸಲಾಗಿದೆಯೇ ಅಥವಾ ಆರ್ಥಿಕ ವರ್ಷದ ಕೊನೆಯಲ್ಲಿ ಉಳಿದಿರುವ ಅನುದಾನವನ್ನು ಉಪಯೋಗಿಸಿಕೊಂಡಿರುವ ಬಗ್ಗೆ ಕೃಷಿ ಆಯುಕ್ತರು ಸ್ಪಷ್ಟನೆ ನೀಡಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.
ಅದೇ ರೀತಿ ‘ ಒಂದು ಉದ್ದೇಶಕ್ಕೆ ಒದಗಿಸಿದ ಅನುದಾನವನ್ನು ಇನ್ನೊಂದು ಉದ್ದೇಶಕ್ಕೆ ಬಳಸುವುದು ಆರ್ಥಿಕ ನಿಯಮಗಳ ಸ್ಪಷ್ಟ ಉಲ್ಲಂಘನೆ. ಅನಿವಾರ್ಯ ಕಾರಣಗಳಿದ್ದಲ್ಲಿ ಮುಂಚಿತವಾಗಿಯೇ ಸರ್ಕಾರದಿಂದ ಹೆಚ್ಚುವರಿ ಅನುದಾನ ಅಥವಾ ಪುನರ್ ವಿನಿಯೋಗ ಮಾಡಿಕೊಳ್ಳಲು ಇಲಾಖೆಗೆ ಅವಕಾಶವಿದೆ. ಆದರೂ ಈ ಮಾರ್ಗ ಅನುಸರಿಸದೆ ಕೃಷಿ ಭಾಗ್ಯ ಯೋಜನೆಯಲ್ಲಿ ಉಳಿದಿರುವ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಸಿರುವುದು ಸಮಂಜಸವಾಗಿರುವುದಿಲ್ಲ. ಆದ್ದರಿಂದ ಇಂತಹ ಪ್ರಕರಣಗಳಿಗೆ ಘಟನೋತ್ತರ ಅನುಮೋದನೆ ನೀಡಲು ಸಾಧ್ಯವಿಲ್ಲವೆಂದು ತಿಳಿಸಬಹುದಾಗಿದೆ,’ ಎಂದು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೃಷಿ ಭಾಗ್ಯ ಯೋಜನೆಯಲ್ಲಿ ಉಳಿದಿದ್ದ 2.72 ಕೋಟಿಗೂ ಹೆಚ್ಚಿನ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಂಡು ಆರ್ಥಿಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಪ್ರಕರಣವನ್ನು ‘ದಿ ಫೈಲ್’ ಹೊರಗೆಡವಿದ್ದನ್ನು ಸ್ಮರಿಸಬಹುದು.
ಉಲ್ಲಂಘನೆ; ಕೃಷಿ ಭಾಗ್ಯ ಉಳಿಕೆ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಸಿದ ಬಿಜೆಪಿ ಸರ್ಕಾರ!
ಕೃಷಿ ಇಲಾಖೆ ಮರೆ ಮಾಚಿದ್ದೇಕೆ?
ಕೃಷಿ ಭಾಗ್ಯ ಯೋಜನೆಯ ಅನುದಾನವನ್ನು ಪ್ರಚಾರದ ಉದ್ದೇಶಕ್ಕೆ ಬಳಕೆ ಮಾಡಿರುವುದು ಆರ್ಥಿಕ ಇಲಾಖೆಯ ದಾಖಲೆ ಮೂಲಕ ರುಜುವಾತಾಗಿದ್ದರೂ ಅನುದಾನವನ್ನು ಪ್ರಚಾರದ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಕೃಷಿ ಇಲಾಖೆಯು ಆರ್‌ಟಿಐನಲ್ಲಿ ತಪ್ಪು ಉತ್ತರವನ್ನು ‘ದಿ ಫೈಲ್’ ಗೆ 2021ರ ಜುಲೈ 12ರಂದು ನೀಡಿತ್ತು.
2014-15ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಕೃಷಿ ಭಾಗ್ಯ ಯೋಜನೆಗೆ 2,734 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 30.63 ಕೋಟಿ ರು. ಉಳಿಕೆಯಾಗಿತ್ತು. 2019-20ರಿಂದ 2020-21ನೇ ಸಾಲಿನಲ್ಲಿ 285.4 ಕೋಟಿ ರು. ಅನುದಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ 2.72 ಕೋಟಿ ರು. ಉಳಿಕೆಯಾಗಿತ್ತು. ಉಳಿಕೆಯಾದ ಅನುದಾನವನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
2014-15ರಲ್ಲಿ 500 ಕೋಟಿ, 2015-16ರಲ್ಲಿ 351 ಕೋಟಿ, 2016-17ರಲ್ಲಿ 500 ಕೋಟಿ, 2017-18ರಲ್ಲಿ 640 ಕೋಟಿ, 2018-19ರಲ್ಲಿ 458 ಕೋಟಿ, 2019-20ರಲ್ಲಿ 250 ಕೋಟಿ, 2020-21ರಲ್ಲಿ 35.40 ಕೋಟಿ ರು. ಅನುದಾನ ಬಿಡುಗಡೆಯಾಗಿರುವುದು ಆರ್‌ಟಿಐನಿಂದ ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೊಂಡಿದ್ದ ಕೃಷಿ ಭಾಗ್ಯ ಯೋಜನೆಗೆ ಬಿಜೆಪಿ ಸರ್ಕಾರವು ಕಳೆದ 2 ವರ್ಷಗಳಲ್ಲಿ 285 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ ಕೃಷಿ ಭಾಗ್ಯ ಯೋಜನೆಯಲ್ಲಿ 921 ಕೋಟಿ ರು. ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ತನಿಖೆಗೆ ಆದೇಶಿಸಿದ್ದನ್ನು ಸ್ಮರಿಸಬಹುದು.