ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ ಕೃಷಿ ಭಾಗ್ಯ ಯೋಜನೆಯಲ್ಲಿ 921 ಕೋಟಿ ರು. ಅವ್ಯವಹಾರ ನಡೆದಿದೆ ಎಂಬ ಆರೋಪ ಸಂಬಂಧ ತನಿಖೆಗೆ ಆದೇಶಿಸಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕೃಷಿ ಭಾಗ್ಯ ಯೋಜನೆಯಲ್ಲಿ ಉಳಿದಿದ್ದ 2.72 ಕೋಟಿಗೂ ಹೆಚ್ಚಿನ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಂಡು ಆರ್ಥಿಕ ನಿಯಮಗಳನ್ನು ಉಲ್ಲಂಘಿಸಿದೆ. ಈ ಪ್ರಕರಣವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಒಂದು ಉದ್ದೇಶಕ್ಕೆ ಒದಗಿಸಿದ ಅನುದಾನವನ್ನು ಬೇರೊಂದು ಉದ್ದೇಶಕ್ಕೆ ಬಳಸುವುದು ಆರ್ಥಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ಬಿಜೆಪಿ ಸರ್ಕಾರವು ಕೃಷಿ ಭಾಗ್ಯ ಅನುದಾನವನ್ನು ಪ್ರಚಾರದ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಪ್ರಚಾರಕ್ಕೆ ಬಳಸಿದ್ದನ್ನು ಅನುಮೋದಿಸದ ಆರ್ಥಿಕ ಇಲಾಖೆ
ಕೃಷಿ ಭಾಗ್ಯ ಯೋಜನೆಗೆ ಒದಗಿಸಿದ್ದ ಅನುದಾನದಲ್ಲಿ ಉಳಿಕೆಯಾಗಿದ್ದ ಹಣವನ್ನು ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಆರ್ಥಿಕ ಇಲಾಖೆಯ ದಾಖಲೆಯಿಂದ ತಿಳಿದು ಬಂದಿದೆ. ‘ ಒಂದು ಉದ್ದೇಶಕ್ಕೆ ಒದಗಿಸಿದ ಅನುದಾನವನ್ನು ಇನ್ನೊಂದು ಉದ್ದೇಶಕ್ಕೆ ಬಳಕೆ ಬಳಸುವುದು ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಅನಿವಾರ್ಯ ಕಾರಣಗಳಿದ್ದಲ್ಲಿ ಮುಂಚಿತವಾಗಿಯೇ ಸರ್ಕಾರದಿಂದ ಹೆಚ್ಚುವರಿ ಅನುದಾನ ಅಥವಾ ಪುನರ್ ವಿನಿಯೋಗ ಮಾಡಿಕೊಳ್ಳಲು ಇಲಾಖೆಗೆ ಅವಕಾಶವಿದೆ. ಆದರೂ ಈ ಮಾರ್ಗ ಅನುಸರಿಸದೇ ಕೃಷಿ ಭಾಗ್ಯ ಯೋಜನೆಯಲ್ಲಿ ಉಳಿದಿರುವ ಅನುದಾನವನ್ನು ಪ್ರಚಾರ ಕಾರ್ಯಕ್ಕೆ ಬಳಸಿರುವುದು ಸಮಂಜಸವಾಗಿರುವುದಿಲ್ಲ. ಆದ್ದರಿಂದ ಘಟನೋತ್ತರ ಅನುಮೋದನೆ ನೀಡಲು ಸಾಧ್ಯವಿಲ್ಲ,’ ಎಂದು ಆರ್ಥಿಕ ಇಲಾಖೆ ತಿಳಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ತಪ್ಪು ಉತ್ತರ ನೀಡಿದ ಕೃಷಿ ಇಲಾಖೆ
ಕೃಷಿ ಭಾಗ್ಯ ಯೋಜನೆಯ ಅನುದಾನವನ್ನು ಪ್ರಚಾರದ ಉದ್ದೇಶಕ್ಕೆ ಬಳಕೆ ಮಾಡಿರುವುದು ಆರ್ಥಿಕ ಇಲಾಖೆಯ ದಾಖಲೆ ಮೂಲಕ ರುಜುವಾತಾಗಿದ್ದರೂ ಅನುದಾನವನ್ನು ಪ್ರಚಾರದ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಕೃಷಿ ಇಲಾಖೆಯು ಆರ್‌ಟಿಐನಲ್ಲಿ ತಪ್ಪು ಉತ್ತರವನ್ನು ‘ದಿ ಫೈಲ್’ ಗೆ 2021ರ ಜುಲೈ 12ರಂದು ನೀಡಿದೆ.
2014-15ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಕೃಷಿ ಭಾಗ್ಯ ಯೋಜನೆಗೆ 2,734 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 30.63 ಕೋಟಿ ರು. ಉಳಿಕೆಯಾಗಿತ್ತು. 2019-20ರಿಂದ 2020-21ನೇ ಸಾಲಿನಲ್ಲಿ 285.4 ಕೋಟಿ ರು. ಅನುದಾನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ 2.72 ಕೋಟಿ ರು. ಉಳಿಕೆಯಾಗಿತ್ತು. ಉಳಿಕೆಯಾದ ಅನುದಾನವನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
2014-15ರಲ್ಲಿ 500 ಕೋಟಿ, 2015-16ರಲ್ಲಿ 351 ಕೋಟಿ, 2016-17ರಲ್ಲಿ 500 ಕೋಟಿ, 2017-18ರಲ್ಲಿ 640 ಕೋಟಿ, 2018-19ರಲ್ಲಿ 458 ಕೋಟಿ, 2019-20ರಲ್ಲಿ 250 ಕೋಟಿ, 2020-21ರಲ್ಲಿ 35.40 ಕೋಟಿ ರು. ಅನುದಾನ ಬಿಡುಗಡೆಯಾಗಿರುವುದು ಆರ್‌ಟಿಐನಿಂದ ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೊಂಡಿದ್ದ ಕೃಷಿ ಭಾಗ್ಯ ಯೋಜನೆಗೆ ಬಿಜೆಪಿ ಸರ್ಕಾರವು ಕಳೆದ 2 ವರ್ಷಗಳಲ್ಲಿ 285 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ.
ಆದರೆ 2020-21ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಬಿಜೆಪಿ ಸರ್ಕಾರವು ರದ್ದುಗೊಳಿಸಿತ್ತು. ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆಯ ರಾಜ್ಯ ವಲಯ ಮತ್ತು ಕೇಂದ್ರ ಪುರಸ್ಕೃತ, ಬಾಹ್ಯನುದಾನಿತ ಯೋಜನೆಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಹೊರತುಪಡಿಸಿ ಉಳಿದ ಯೋಜನೆಗಳನ್ನು ಮುಂದುವರಿಸಿ 2021ರ ಏಪ್ರಿಲ್ 17ರಂದು ಆದೇಶ ಹೊರಡಿಸಿತ್ತು.
921 ಕೋಟಿ ಅವ್ಯವಹಾರ ಆರೋಪ
ಕಾಂಗ್ರೆಸ್ ಸರ್ಕಾರವು 2014-15ನೇ ಸಾಲಿನಲ್ಲಿ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯಲ್ಲಿ 921 ಕೋಟಿ ರು.ನಲ್ಲಿ ಅವ್ಯವಹಾರ ನಡೆದಿತ್ತು ಎಂಬ ಆರೋಪದ ಮೇರೆಗೆ ಯಡಿಯೂರಪ್ಪ ನೇತೃತ್ವದ ಸರ್ಕಾರವು ತನಿಖೆಗೆ ಒಳಪಡಿಸಿತ್ತು. ಆದರೆ ಈವರೆವಿಗೂ ತನಿಖೆಯ ಪ್ರಗತಿಯನ್ನು 2 ವರ್ಷಗಳಾದರೂ ಬಹಿರಂಗಗೊಳಿಸಿಲ್ಲ.
ಮಳೆಯಾಶ್ರಿತ ಒಣ ಭೂಮಿಯಲ್ಲಿ ತೇವಾಂಶ ಕಾಪಾಡುವ ದೃಷ್ಟಿಯಿಂದ ಇಳಿಜಾರಲ್ಲಿ ಒಡ್ಡು ನಿರ್ಮಿಸಿ ನೀರು ಸಂಗ್ರಹ, ಅಂತರ್ಜಲ ವೃದ್ಧಿ, ಕೃಷಿ ಹೊಂಡ ನಿರ್ಮಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕೃಷಿ ಭಾಗ್ಯ ಯೋಜನೆ ಜಾರಿಗೆ ತಂದಿತ್ತು.
ಕರ್ನಾಟಕದ ಶೇ.66 ಕೃಷಿ ಪ್ರದೇಶ ಮಳೆ ಆಧಾರಿತವಾಗಿದೆ. ಮಳೆ ಅವಲಂಬಿತ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳಲು ಕೃಷಿ ಹೊಂಡಗಳ ನಿರ್ವಣ, ಪಾಲಿಥಿನ್ ಹೊದಿಕೆ, ನೆರಳು ಪರದೆ, ಡೀಸಲ್ ಪಂಪ್ಗಳ ಅಳವಡಿಕೆ ಮುಂತಾದ ಸವಲತ್ತುಗಳನ್ನು ಒದಗಿಸುವ ಸಲುವಾಗಿ 2014-15ರಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು.
ಆದರೆ ಈ ಯೋಜನೆಯಲ್ಲಿ ಹಲವು ಗುರುತರ ಆರೋಪಗಳು ಕೇಳಿ ಬಂದಿದ್ದು, ಕೃಷಿ ಭಾಗ್ಯ ಯೋಜನೆಯಡಿ 2014-15ರಿಂದ 2017-18ರವರೆಗೆ ರಾಜ್ಯದ 131 ತಾಲೂಕುಗಳಲ್ಲಿ 2,15,130 ಕೃಷಿ ಹೊಂಡಗಳನ್ನು ನಿರ್ವಿುಸಲಾಗಿತ್ತು. ಇದಕ್ಕಾಗಿ 821,16,23,000 ರೂ. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ನೀಡಿದ್ದಾರೆ. ಆದರೆ ಈ ಮಾಹಿತಿ ಮೇಲ್ನೋಟಕ್ಕೆ ಸರಿಯಿಲ್ಲ ಮತ್ತು ಹಲವು ಕಡೆ ಕೃಷಿ ಹೊಂಡ ನಿರ್ಮಾಣ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ರೈತರು ಬೆಳೆಯುವಂಥ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಬೆಳೆ ನಷ್ಟವಾಗಬಾರದೆಂಬ ಉದ್ದೇಶದಿಂದ ಸರಕಾರ ಕೃಷಿಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಿಸಿ ಕೊಳ್ಳಲು ಸಹಾಯಧನ ನೀಡುತ್ತಿತ್ತು. ಆದರೆ, ಈ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಯೋಜನೆಯನ್ನು ಕೈಬಿಟ್ಟಿದ್ದನ್ನು ಸ್ಮರಿಸಬಹುದು.