ಸುಸ್ತಿಸಾಲದ ಖಾತೆಗೆ 3.56 ಕೋಟಿ ಹೊಂದಾಣಿಕೆ, ಬಡ್ಡಿ ಬಾಕಿಗೆ 20.65 ಕೋಟಿ ಪಾವತಿ

ಬೆಂಗಳೂರು; ಅವಧಿ ಸಾಲವು ಅನುತ್ಪಾದಕ ಆಸ್ತಿಯಾಗಿದ್ದರೂ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಗೆ ಅಪೆಕ್ಸ್‌ ಬ್ಯಾಂಕ್‌ 4500.00 ಲಕ್ಷ ರು.ಗಳ ದುಡಿಯುವ ಬಂಡವಾಳ ಮಂಜೂರು ಮಾಡಿರುವ ಪ್ರಕರಣವನ್ನು ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದಾರೆ.

2018-19ನೇ ಸಾಲಿಗೆ ಸಂಬಂಧಿಸಿದಂತೆ ಅಪೆಕ್ಸ್‌ ಬ್ಯಾಂಕ್‌ ಸಲ್ಲಿಸಿರುವ ಲೆಕ್ಕಪರಿಶೋಧನೆ ವರದಿಯಲ್ಲಿ ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆಯ ಸಾಲದ ವೃತ್ತಾಂತವನ್ನು ಬಿಚ್ಚಿಡಲಾಗಿದೆ.

ಸಾಲಗಾರ ಕಂಪನಿಯು ಸಾಲಕ್ಕಾಗಿ 2018ರ ಜುಲೈ 12ರಂದು ಅಪೆಕ್ಸ್‌ ಬ್ಯಾಂಕ್‌ಗೆ ಹೊಸ ಪ್ರಸ್ತಾವನೆ ಸಲ್ಲಿಸಿತ್ತು. 2018-19ನೇ ಸಾಲಿಗೆ ಕಬ್ಬು ಅರೆಯಲು ದುಡಿಯುವ ಬಂಡವಾಳ 4500 ಲಕ್ಷ ರು.ಗಳಲ್ಲಿ 1/3ರಷ್ಟು (1,500 ಲಕ್ಷ) ಪೂರ್ವ ಭಾವಿ ವೆಚ್ಚದ ಸಾಲ ಮಂಜೂರು ಮಾಡಲು ಮನವಿ ಮಾಡಿಕೊಂಡಿತ್ತು. 2018ರ ಜುಲೈ 27ರಂದು 4500 ಲಕ್ಷ ರು.ಗಳ ದುಡಿಯುವ ಬಂಡವಾಳ ಮಂಜೂರು ಮಾಡಲಾಗಿತ್ತು. ಇದರಲ್ಲಿ 2018ರ ಆಗಸ್ಟ್‌ 4ರಂದು 2500 ಲಕ್ಷ ರು.ಗಳನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ ಈ ಕಂಪನಿಯು 2018ರ ಜೂನ್‌ 30ರವರೆಗೆ ಹೊಂದಿದ್ದ ಅಸಲಿಗೆ ಸುಸ್ತಿಬಾಕಿಗೆ 7.89 ಕೋಟಿ ರು ಮತ್ತು 2018ರ ಜುಲೈ 31ರವರೆಗೆ ಬಾಕಿ ಇದ್ದ ಬಡ್ಡಿ ಬಾಕಿಗೆ ಈ ಹಣವನ್ನು ಹೊಂದಾಣಿಕೆ ಮಾಡಿಕೊಂಡಿರುವುದು ಲೆಕ್ಕ ಪರಿಶೋಧಕರ ವರದಿಯಿಂದ ತಿಳಿದು ಬಂದಿದೆ.

ಬ್ಯಾಂಕ್‌ನ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲೆಕ್ಕ ಪರಿಶೋಧಕರು ‘ಸಾಲ ಮಂಜೂರು ಮಾಡಿರುವ ಮೂಲ ಉದ್ದೇಶವನ್ನು ಖಾತರಿಸಿಪಡಿಸಿಕೊಂಡಿರುವುದಿಲ್ಲ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಖಾತೆಯನ್ನು ಪರಿಶೀಲಿಸಿರುವ ಲೆಕ್ಕ ಪರಿಶೋಧಕರು 3.56 ಕೋಟಿ ರು.ಗಳನ್ನು ಸುಸ್ತಿ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಬಹಿರಂಗಗೊಳಿಸಿದ್ದಾರೆ. ಇದಲ್ಲದೆ ಸಾಲಗಾರ ಕಂಪನಿಯು 4000 ಲಕ್ಷ ರು. ಒತ್ತೆ ಸಾಲ ಮತ್ತು ಇತರೆ ಸಮೂಹ ಬ್ಯಾಂಕ್‌ಗಳ ಸುಸ್ತಿ ಸಾಲವನ್ನು ತೀರಿಸಲು ಮಂಜೂರು ಮಾಡಲು ಮನವಿಯನ್ನೂ ಸಲ್ಲಿಸಿತ್ತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಪಡೆದಿದ್ದ ಸಾಲದ ಅಸಲು ಮತ್ತು ಬಡ್ಡಿ ಸೇರಿ 142.63 ಲಕ್ಷ ರು., ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಿಂದ ಒಟ್ಟು 1389.98 ಲಕ್ಷ ರು., ಬಿಜಾಪುರ ಡಿಸಿಸಿ ಬ್ಯಾಂಕ್‌ನಿಂದ 374.44 ಲಕ್ಷ ರು., ಬಜ್ಪೆ ವಿಎಸ್‌ಎಸ್‌ ನಿಂದ 66.24 ಲಕ್ಷ ರು. ಮತ್ತು ಬಸವೇಶ್ವರ ಸಹಕಾರಿ ಬ್ಯಾಂಕ್‌ನಿಂದ 92. 58 ಲಕ್ಷ ಸೇರಿದಂತೆ ಒಟ್ಟು 2065.87 ಲಕ್ಷ ರು.ಗಳ ಸಾಲ ಮಂಜೂರು ಮಾಡಿಸಿಕೊಂಡಿತ್ತು ಎಂಬ ಸಂಗತಿ ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

‘ಮಂಜೂರು ಮಾಡಿದ ಸಾಲದಲ್ಲಿ ಒಟ್ಟು 2,065 ಲಕ್ಷ ರು.ಗಳನ್ನು ವಿವಿಧ ಬ್ಯಾಂಕ್‌ಗಳ ಅಸಲು ಮತ್ತು ಬಡ್ಡಿ ಬಾಕಿಗೆ ಪಾವತಿಸಿದೆ. 376.77 ಲಕ್ಷ ರು.ಗಳನ್ನು ಬ್ಯಾಂಕ್‌ಗೆ ಬರಬೇಕಿರುವ ದುಡಿಯುವ ಬಂಡವಾಳ ಸಾಲದ ಬಡ್ಡಿಯ ಖಾತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಬ್ಯಾಂಕ್‌ ಒಟ್ಟು 2442.64 ಲಕ್ಷ ರು.ಗಳನ್ನು ಸಾಲಗಾರ ಕಂಪನಿಯ ದುಡಿಯುವ ಬಂಡವಾಳ ಸಾಲದ ಖಾತೆಯಿಂದ ಹೊಂದಾಣಿಕೆ ಮಾಡಿಕೊಂಡಿದೆ. ಇದು ಸಾಲ ಮಂಜೂರಾತಿಯ ಶೇ.61.07ರಷ್ಟು ಸುಸ್ತಿ ಸಾಲಗಳ ಮರುಪಾವತಿಯ ಕಡೆಗೆ ಪಾವತಿಸಿದಂತಾಗುತ್ತದೆ. ಹೀಗಾಗಿ ಕಂಪನಿಯ ಸಾಲದ ಉದ್ದೇಶವನ್ನು ಖಾತರಿಸಿಪಡಿಸಿಕೊಂಡಂತಾಗುವುದಿಲ್ಲ,’ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೃಹತ್‌ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ಸಹ-ಕಂಪನಿಗೆ ಸೇರಿರುವ ಸ್ಥಿರಾಸ್ತಿಯನ್ನು ಅಡಮಾನವಾಗಿರಿಸಿ 85.00 ಕೋಟಿ ರು. ಸಾಲವನ್ನು ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದನ್ನು ಸ್ಮರಿಸಬಹುದು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಷುಗರ್ಸ್‌ ಲಿಮಿಟೆಡ್‌ ಅಪೆಕ್ಸ್‌ ಬ್ಯಾಂಕ್‌ನಿಂದ ಮಂಜೂರು ಮಾಡಿಸಿಕೊಂಡ ಹೊಸ ಸಾಲದ ಮೊತ್ತದಲ್ಲಿ ಬಹುತೇಕ ಮೊತ್ತವನ್ನು ಹಳೇ ಸಾಲದ ಬಾಕಿಗೆ ಹೊಂದಾಣಿಕೆ ಮಾಡಿರುವುದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಅಪೆಕ್ಸ್‌ ಬ್ಯಾಂಕ್‌ ಸಾಲ ಮಂಜೂರಾತಿ ಮಾಡಿದ್ದ 50.00 ಕೋಟಿ ರು. ಪೈಕಿ 30.81 ಕೋಟಿ ರು. ಗಳನ್ನು ಹಳೇ ಬಾಕಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅಲ್ಲದೆ ಹೆಚ್ಚುವರಿ ಸಾಲ ಮಂಜೂರಾತಿಗೆ ಸಮೂಹ ಬ್ಯಾಂಕ್‌ಗಳಿಂದ ನಿರಾಪೇಕ್ಷಣಾ ಪತ್ರ ಪಡೆಯದ ಕಾರಣ, ಹೆಚ್ಚುವರಿ ಸಾಲದ ಹೊಣೆಯು ಅಪೆಕ್ಸ್‌ ಬ್ಯಾಂಕ್‌ ಮೇಲೆ ಬಿದ್ದಿದೆ ಎಂದು ಶಾಸನಬದ್ಧ ಲೆಕ್ಕಪರಿಶೋಧಕರು ಬಹಿರಂಗಗೊಳಿಸಿದ್ದನ್ನು ಸ್ಮರಿಸಬಹುದು.

ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ನಿರ್ದೇಶಕರಾಗಿರುವ ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಸಮೂಹ ಬ್ಯಾಂಕ್‌ಗಳಿಂದ ನಿರಪೇಕ್ಷಣಾ ಪತ್ರ ಬರುವ ಮೊದಲೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿತ್ತು.

ಬಾಲ್ಕೇಶ್ವರ ಷುಗರ್ಸ್‌ ಲಿಮಿಟೆಡ್‌ಗೆ ಅಪೆಕ್ಸ್‌ ಬ್ಯಾಂಕ್‌, ಪಿಎನ್‌ಬಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕಾರ್ಪ್‌ ಬ್ಯಾಂಕ್‌, ಐಒಬಿ ಸೇರಿದಂತೆ ಇನ್ನಿತರೆ ಬ್ಯಾಂಕ್‌ಗಳು ನೀಡಿದ್ದ ಒಟ್ಟು ಸಾಲದ ಪೈಕಿ 1,51,07,62,364.00 ರಷ್ಟು ಹೊರಬಾಕಿ ಇದ್ದರೂ ಆ ಎಲ್ಲಾ ಬ್ಯಾಂಕ್‌ಗಳು ನಿರಪೇಕ್ಷಣಾ ಪತ್ರ ನೀಡುವ ಮುನ್ನವೇ ಅಪೆಕ್ಸ್‌ ಬ್ಯಾಂಕ್‌ 60.00 ಕೋಟಿ ರು. ಸಾಲ ಮಂಜೂರು ಮಾಡಿದ್ದನ್ನು ಲೆಕ್ಕ ಪರಿಶೋಧನೆ ವರದಿ ಹೊರಗೆಡವಿತ್ತು.

ಕಣ್ವ ಫ್ಯಾಷನ್ಸ್‌ ಕಂಪನಿಗೆ ಸಂಬಂಧದಪಟ್ಟ ಖಾತೆಯಲ್ಲಿ ಯಾವುದೇ ವ್ಯಾಪಾರ ವ್ಯವಹಾರಗಳು ಕಂಡು ಬಂದಿಲ್ಲ. 5.60 ಕೋಟಿ ಸಾಲದಲ್ಲಿ ಕಣ್ವ ಫ್ಯಾಷನ್ಸ್‌ಗೆ 4.97ಕೋಟಿ (ಶೇ.89) ಪಾವತಿಯಾಗಿದ್ದರೆ ಉಳಿದ 0.63 ಕೋಟಿ ಕಣ್ವ ಸ್ಟಾರ್‌ ಮತ್ತು ಹೋಟೆಲ್‌ ಪ್ರೈ ಲಿಮಿಟೆಡ್‌ಗೆ ಪಾವತಿಯಾಗಿತ್ತು. ಅಲ್ಲದೆ 2018ರ ಜೂನ್‌ 27ರಂದು 20.00 ಲಕ್ಷ ರು.ಗಳು ನಗದು ರೂಪದಲ್ಲಿ ಡ್ರಾ ಆಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಲಾಗಿದೆ.

ಮಂಜೂರು ಮಾಡಿದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸಬೇಕು. ಆದರೆ ಕಣ್ವ ಗಾರ್ಮೆಂಟ್ಸ್‌ ಪ್ರೈ ಲಿಮಿಟೆಡ್‌ ಪ್ರಕರಣವನ್ನು ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಬೇರೆ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಂಜೂರಾತಿ ಉದ್ದೇಶವನ್ನು ಸಾಲಗಾರರದಿಂದ ಬ್ಯಾಂಕ್‌ ದೃಢಪಡಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ವಿಧಾನಪರಿಷತ್‌ ಸದಸ್ಯ ಕೆ ಪಿ ನಂಜುಂಡಿ ಅವರು ನಿರ್ದೇಶಕರಾಗಿರುವ ಲಕ್ಷ್ಮಿ ಗೋಲ್ಡ್‌ ಖಜಾನ ಪ್ರೈ ಲಿಮಿಟೆಡ್‌ ಕಂಪನಿಯು ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸ್ವತ್ತಿನ ಮೌಲ್ಯಮಾಪನವನ್ನು ಹೆಚ್ಚುವರಿಯಾಗಿ ಮೌಲ್ಯಮಾಪನ ಮಾಡಿಸಿತ್ತು. ಅಲ್ಲದೆ ಆದಾಯ ಇಲಾಖೆಯ ಜಫ್ತಿಗೊಳಪಟ್ಟಿದ್ದ ಸ್ವತ್ತನ್ನು ಸಾಲಕ್ಕೆ ಹೆಚ್ಚುವರಿ ಭದ್ರತೆಯನ್ನಾಗಿರಿಸಿತ್ತು ಎಂಬ ಸಂಗತಿಯನ್ನು ಲೆಕ್ಕ ಪರಿಶೋಧನೆ ವರದಿಯು ಬಹಿರಂಗಗೊಳಿಸಿತ್ತು.

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆಯು ಅಪೆಕ್ಸ್‌ ಬ್ಯಾಂಕ್‌ನಿಂದ ಪಡೆದಿದ್ದ ಸಾಲದ ಹೊರಬಾಕಿ ಇರಿಸಿಕೊಂಡಿದ್ದ 419.05 ಲಕ್ಷ ರು.ಗಳನ್ನು ಬಡ್ಡಿ ರಿಯಾಯಿತಿ ಯೋಜನೆಯಡಿ ಮನ್ನಾ ಮಾಡಿರುವುದನ್ನು ಬ್ಯಾಂಕ್‌ನ ಶಾಸನಬದ್ಧ ಲೆಕ್ಕ ಪರಿಶೋಧಕರು ಹೊರಗೆಡವಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts