ಬೆಂಗಳೂರು; ಪೊಲೀಸ್ ಗೃಹ 2025 ಯೋಜನೆಗೆ ಚಾಲನೆ, ಬಹುಮಹಡಿ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ, ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ಆಡಳಿತ ಕಚೇರಿ ಸ್ಥಾಪನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಒಟ್ಟು 89.46 ಲಕ್ಷ ರು.ಗಳನ್ನು ಜಾಹೀರಾತಿಗೆ ಖರ್ಚು ಮಾಡಿದೆ.
ಇದೇ ಸೆಪ್ಟಂಬರ್ ತಿಂಗಳಲ್ಲಿ ದಾವಣಗೆರೆಯಲ್ಲಿರುವ ಪೊಲೀಸ್ ಪಬ್ಲಿಕ್ ಸ್ಕೂಲ್ ಉದ್ಘಾಟನೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಉದ್ಘಾಟನೆಗೆ ಅಮಿತ್ ಶಾ ಅವರು ಭೇಟಿ ನೀಡುತ್ತಿರುವ ಬೆನ್ನಲ್ಲೇ 2021ರ ಜನವರಿ 18ರಂದು ಆಗಮಿಸಿದ್ದ ಸಂದರ್ಭದಲ್ಲಿ ಜಾಹೀರಾತಿಗೆ ಖರ್ಚು ಮಾಡಿದ್ದ ವೆಚ್ಚದ ವಿವರವು ಮುನ್ನೆಲೆಗೆ ಬಂದಿದೆ.
2021ರ ಜನವರಿ 18ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಮಿತ್ ಶಾ ಅವರು ಪೊಲೀಸರ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕುರಿತು ಪತ್ರಿಕಾ ಜಾಹೀರಾತನ್ನು ನೇರವಾಗಿ ಏಜೆನ್ಸಿಗಳಿಗೆ ಬಿಡುಗಡೆ ಮಾಡಿತ್ತು ಎಂದು ತಿಳಿದು ಬಂದಿದೆ. ಬಹುವರ್ಣದಲ್ಲಿ ಒಳಪುಟಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಶೇ.25ರಷ್ಟು ಹೆಚ್ಚುವರಿ ದರ ಅನ್ವಯವಾಗಿತ್ತು.
ಜಾಹೀರಾತು ಸಂಸ್ಥೆಗಳಿಗೆ ಪಾವತಿಸಿರುವ ಮೊತ್ತದ ವಿವರ
ಎಂ ಸಿ ಎ ಬೆಂಗಳೂರು – 19, 66, 277 ರು.
ಆಡ್ವಿಟ್ ಇಂಡಿಯಾ ಬೆಂಗಳೂರು- 13, 06, 286 ರು.
ಬ್ರಾಂಜ್ ಕಮ್ಯುನಿಕೇಷನ್ ಬೆಂಗಳೂರು 9, 63, 850 ರು.
ಶ್ರೇಷ್ಠ ಕಮ್ಯುನಿಕೇಷನ್ ಬೆಂಗಳೂರು- 6, 50, 890 ರು.
ಯಕ್ಷಿ ಕಮ್ಯುನಿಕೇಷನ್ ಬೆಂಗಳೂರು – 5, 50, 805 ರು.
ಝೇಂಕಾರ್ ಅಡ್ವರ್ಟೈಸಿಂಗ್ ಬೆಂಗಳೂರು – 1, 64, 850 ರು.
ಝೇಂಕಾರ್ ಅಡ್ವರ್ಟೈಸಿಂಗ್ ಬೆಂಗಳೂರು – 1, 64, 850 ರು.
ಫೋರ್ ವಿಂಡ್ಸ್ ಮಾಸ್ ಕಮ್ಯುನಿಕೇಷನ್ಸ್ – 5, 34, 114 ರು.
ಆವಂತಿ ಅಡ್ವರ್ಟೈಸಿಂಗ್ ಬೆಂಗಳೂರು – 5, 98, 182 ರು.
ಸ್ಪಾನ್ ಕಮ್ಯುನಿಕೇಷನ್ ಬೆಂಗಳೂರು – 5, 34, 773 ರು.
ಆಕಾರ್ ಅಡ್ವರ್ಟೈಸಿಂಗ್ ಬೆಂಗಳೂರು – 13, 07, 773 ರು.
ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.
ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.