8 ತಿಂಗಳಲ್ಲಿ ರಾಜ್ಯಕ್ಕೆ 3.54 ಕೋಟಿ ಲಸಿಕೆ ಸರಬರಾಜು; ದರದ ಮಾಹಿತಿ ಲಭ್ಯವಿಲ್ಲವೇ?

ಬೆಂಗಳೂರು; ಭಾರತ ಸರ್ಕಾರವು ಲಸಿಕೆಗಳನ್ನು ಯಾವ ದರದಲ್ಲಿ ಖರೀದಿಸಿದೆ ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿದೆ.

18-44 ವರ್ಷದವರಿಗೆ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ್ದ ಒಟ್ಟು ಗುರಿ ಪೈಕಿ 2021ರ ಆಗಸ್ಟ್‌ 27ರವರೆಗೆ ಶೇ.44.4ರಷ್ಟು ಮತ್ತು ಇದೇ ವಯೋಮಾನದವರಿಗೆ 2ನೇ ಡೋಸ್‌ ನೀಡಿಕೆಗೆ ನೀಡಿದ್ದ ಗುರಿ ಪೈಕಿ ಶೇ. 5.0ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖೆಯು ಒದಗಿಸಿರುವ 48 ಪುಟಗಳ ಉತ್ತರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ಕೋವಿಡ್‌ ಲಸಿಕೆಗಳನ್ನು ಒಕ್ಕೂಟ ಸರ್ಕಾರವೇ ನೇರವಾಗಿ ಖರೀದಿಸಿ ರಾಜ್ಯಕ್ಕೆ ಸರಬರಾಜು ಮಾಡಿತ್ತು. ಲಸಿಕೆ ತಯಾರಕ ಕಂಪನಿಗಳು ಸಹ ಕೇಂದ್ರ, ರಾಜ್ಯ ಮತ್ತು ಖಾಸಗಿ ವಲಯಕ್ಕೆ ದರವನ್ನು ನಿಗದಿಪಡಿಸಿತ್ತು. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಭಾರತ ಸರ್ಕಾರವು ಖರೀದಿಸಿದ ಲಸಿಕೆಗಳ ದರದ  ಮಾಹಿತಿ ರಾಜ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಉತ್ತರಿಸಿದೆ. ಲಸಿಕೆಗಳ ಖರೀದಿ ದರವನ್ನು ರಾಜ್ಯಗಳಿಂದ ಕೇಂದ್ರ ಸರ್ಕಾರವು ಮುಚ್ಚಿಟ್ಟಿತೇ ಎಂಬ ಅನುಮಾನಕ್ಕೆ ಆರೋಗ್ಯ ಇಲಾಖೆಯು ನೀಡಿರುವ ಉತ್ತರವು ದಾರಿಮಾಡಿಕೊಟ್ಟಿದೆ.

ಲಸಿಕೆ ನೀಡಿಕೆ ಗುರಿ, ದಾಸ್ತಾನು, ಸಾಧನೆ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಇಲಾಖೆಯು ಒದಗಿಸಿದೆ. ಇಲಾಖೆಯು ಒದಗಿಸಿರುವ ಮಾಹಿತಿ ಪ್ರಕಾರ 2021ರ ಜನವರಿಯಿಂದ ಆಗಸ್ಟ್‌ 27ರವರೆಗೆ ರಾಜ್ಯಕ್ಕೆ ಸರಬರಾಜು ಆಗಿರುವ ಲಸಿಕೆಗಳ ಒಟ್ಟು ಸಂಖ್ಯೆ 3,54,16,370 ಎಂದು ತಿಳಿಸಿದೆ.

ಜನವರಿ ತಿಂಗಳಿನಲ್ಲಿ 17,18, 240, ಫೆಬ್ರುವರಿಯಲ್ಲಿ 11, 66, 500, ಮಾರ್ಚ್‌ನಲ್ಲಿ 26, 16, 570, ಏಪ್ರಿಲ್‌ನಲ್ಲಿ  47, 69, 660, ಮೇನಲ್ಲಿ 37, 41, 040, ಜೂನ್‌ನಲ್ಲಿ  60, 76, 090, ಜುಲೈನಲ್ಲಿ 69, 23, 210, ಆಗಸ್ಟ್‌ ನಲ್ಲಿ  84, 25, 060 (ಆಗಸ್ಟ್‌ 27, 2021ರವರೆಗೆ) ಲಸಿಕೆಗಳು ಸರಬರಾಜಾಗಿದೆ ಎಂದು ಉತ್ತರಿಸಿದೆ.

ಮತ್ತೊಂದೆಡೆ ಇಲಾಖೆಯು 2021ರ ಆಗಸ್ಟ್‌ 27ರವರೆಗೆ ಭಾರತ ಸರ್ಕಾರದಿಂದ ಒಟ್ಟು 3, 28, 13, 010 ಕೋವಿಡ್‌ ಲಸಿಕೆಗಳು ಸರಬರಾಜಾಗಿದೆ ಎಂದು ಇದೇ ಉತ್ತರದಲ್ಲಿ ಮಾಹಿತಿ ಒದಗಿಸಿದೆ. ಇದರ ಪ್ರಕಾರ 26.03 ಲಕ್ಷ ವ್ಯತ್ಯಾಸವಿದೆ. ಹೀಗಾಗಿ ಲಸಿಕೆ ಸರಬರಾಜಿನ ಕುರಿತು ಇಲಾಖೆಯು ನೀಡಿರುವ ಮಾಹಿತಿಯೇ ಗೊಂದಲಕಾರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇನ್ನು 2021ರ ಆಗಸ್ಟ್‌ 27ರವರೆಗೆ ರಾಜ್ಯವು 26, 03, 360 ಲಸಿಕೆಗಳನ್ನು ಖರೀದಿಸಿದೆ. ಲಸಿಕೆಗಳಲ್ಲಿ ಒಟ್ಟು 21, 67, 320 ಕೋವಿಶೀಲ್ಡ್‌ ಮತ್ತು 4, 36, 040 ಕೊವಾಕ್ಸಿನ್‌ ಡೋಸ್‌ಗಳಿವೆ ಎಂದು ಸಮಿತಿಗೆ ಇಲಾಖೆಯು ಲೆಕ್ಕ ಕೊಟ್ಟಿದೆ.

ಹಾಗೆಯೇ 2021ರ ಆಗಸ್ಟ್‌ 27ರವರೆಗೆ ಒಟ್ಟು 3, 89, 09, 290 ಡೋಸ್‌ ಲಸಿಕೆಗಳನ್ನು ನೀಡಲಾಗಿದೆ. ಈ ಪೈಕಿ 2, 95, 93, 337 ಫಲಾನುಭವಿಗಳು ಮೊದಲ ಡೋಸ್‌ ಪಡೆದಿದ್ದರೆ 93, 15, 953 ಫಲಾನುಭವಿಗಳು ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ಒದಗಿಸಿದೆ.

ರಾಜ್ಯದಲ್ಲಿರುವ 3, 26, 75, 660 (18ರಿಂದ 44 ) ಪೈಕಿ ಆಗಸ್ಟ್‌ 27ರವರೆಗೆ 1, 45, 13, 045 ಫಲಾನುಭವಿಗಳು ಮೊದಲ ಡೋಸ್‌ ಪಡೆದಿದ್ದರೆ 16, 44, 841 ಫಲಾನುಭವಿಗಳು ಎರಡನೇ ಡೋಸ್‌ ಪಡೆದಿದ್ದಾರೆ. ಹಾಗೆಯೇ 45 ವರ್ಷ ಮೇಲ್ಪಟ್ಟವರ ಪೈಕಿ 1, 33, 81, 524 ಫಲಾನುಭವಿಗಳಿಗೆ ಮೊದಲ ಡೋಸ್‌ ನೀಡಿದ್ದರೆ 65, 88, 791 ಫಲಾನುಭವಿಗಳಿಗೆ ಎರಡನೇ ಡೋಸ್‌ ನೀಡಲಾಗಿದೆ. ಎರಡನೇ ಡೋಸ್‌ಗೆ ಸಂಬಂಧಿಸಿದಂತೆ ಒಟ್ಟು ಶೇ. 38.5ರಷ್ಟು ಸಾಧನೆ ತೋರಿರುವುದು ಇಲಾಖೆ ಒದಗಿಸಿರುವ ಉತ್ತರದಿಂದ ಗೊತ್ತಾಗಿದೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 18ರಿಂದ 44 ವರ್ಷ, 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್‌ ನೀಡಿಕೆಯಲ್ಲಿ ಶೇ. 59.4ರಷ್ಟು ಮತ್ತು ಎರಡನೇ ಡೋಸ್‌ ನೀಡಿಕೆಯಲ್ಲಿ ಶೇ. 18.7ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

the fil favicon

SUPPORT THE FILE

Latest News

Related Posts