ಅನುಷ್ಠಾನಗೊಳ್ಳದ ಶಿಫಾರಸ್ಸು; ಅಧಿವೇಶನ ಕಾರ್ಯಕಲಾಪಕ್ಕೆ ನಿರ್ಬಂಧ ವಿಧಿಸದ ಪರಿಷತ್‌

ಬೆಂಗಳೂರು; ವಿಧಾನಪರಿಷತ್‌ ಅಧಿವೇಶನದಲ್ಲಿ ಕಳೆದ ವರ್ಷ ನಡೆದಿದ್ದ ಕೋಲಾಹಲ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಹೊರಟ್ಟಿ (ಹಾಲಿ ಸಭಾಪತಿ) ಸೇರಿದಂತೆ ಮೂವರು ಸದಸ್ಯರನ್ನು ಎರಡು ಅಧಿವೇಶನಗಳ ಕಾರ್ಯಕಲಾಪಗಳಿಗೆ ನಿರ್ಬಂಧಿಸಬೇಕು ಎಂದು ಸದನ ಸಮಿತಿಯು ಮಾಡಿದ್ದ ಶಿಫಾರಸ್ಸು ಅನುಷ್ಠಾನಗೊಳಿಸುವುದರಲ್ಲಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕೋಲಾಹಲ ಪ್ರಕರಣದಲ್ಲಿ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ, ಕೆ ಟಿ ಶ್ರೀಕಂಠೇಗೌಡ, ಗೋವಿಂದರಾಜ್‌ ಸೇರಿದಂತೆ ಪರಿಷತ್‌ನ ಹಲವು ಸದಸ್ಯರು ಭಾಗಿಯಾಗಿದ್ದರು. 2021 ಜನವರಿಯಲ್ಲಿ ಸಲ್ಲಿಕೆಯಾಗಿದ್ದ ಮಧ್ಯಂತರ ವರದಿ ಶಿಫಾರಸ್ಸು ಪ್ರಕಾರ ಹೊರಟ್ಟಿ, ಕೆ ಟಿ ಶ್ರೀಕಂಠೇಗೌಡ, ಗೋವಿಂದರಾಜು ಅವರನ್ನು ಎರಡು ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧಿಸಲು ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.

ವರದಿ ಸಲ್ಲಿಕೆಯಾದ ನಂತರ ಮಾರ್ಚ್‌ನಲ್ಲಿ ಅಧಿವೇಶನ ನಡೆದಿತ್ತು. ಅಲ್ಲದೆ ಇದೇ ಸೆಪ್ಟಂಬರ್‌ 13ರಂದು ಅಧಿವೇಶನ ನಡೆಯಲಿದೆ. ಸದನ ಸಮಿತಿಯು ನೀಡಿರುವ ಮಧ್ಯಂತರ ವರದಿಯಲ್ಲಿನ ಶಿಫಾರಸ್ಸಿನ ಪ್ರಕಾರ ವಿಧಾನ ಪರಿಷತ್‌ನ ಹಾಲಿ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನಿಬ್ಬ ಸದಸ್ಯರಿಗೆ ಈ ಅಧಿವೇಶನದ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ನಿರ್ಬಂಧಿಸಬೇಕಿತ್ತು. ಆದರೆ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಅನುಷ್ಠಾನಗೊಳ್ಳದ ಕಾರಣ ಈ ಅಧಿವೇಶನದಲ್ಲಿಯೂ ಹಾಜರಾಗಲಿದ್ದಾರೆ!

ಕೈ ಸನ್ನೆ ಮಾಡಿದ್ದ ಹೊರಟ್ಟಿ

‘ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಕೆ ಟಿ ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ಅವರು ಉಪ ಸಭಾಪತಿಯವರನ್ನು ನಿಯಮಬಾಹಿರವಾಗಿ ಸಭಾಪತಿಯವರ ಪೀಠದಲ್ಲಿ ಕೂರಿಸಿ ಸದನವನ್ನು ನಡಾವಳಿ ನಿಯಮಗಳ ವಿರೋಧವಾಗಿ ನಡೆಸಲು ಮುಂದಾದರು. ಬಸವರಾಜ ಹೊರಟ್ಟಿ ಅವರು ಉಪ ಸಭಾಪತಿಯವರು ಪೀಠದಲ್ಲಿ ಕುಳಿತ ನಂತರ ಪೀಠದ ಸುತ್ತ ನಿಂತುಕೊಂಡಿದ್ದ ಸದಸ್ಯರನ್ನು ಹಿಂದಕ್ಕೆ ಸರಿಯುವಂತೆ ಕೈ ಸನ್ನೆ ಮಾಡುತ್ತಾ ನಿಯಮಬಾಹಿರವಾಗಿ ಸಭೆ ನಡೆಸಲು ಪ್ರಯತ್ನಿಸುತ್ತಿರುವುದು ಮತ್ತು ಕೆ ಟಿ ಶ್ರೀಕಂಠೇಗೌಡ ಮತ್ತು ಗೋವಿಂದರಾಜ್‌ ಅವರು ಉಪ ಸಭಾಪತಿಯವರನ್ನು ಪೀಠದಿಂದ ಎಳೆದು ಕೆಳಗಿಳಿಸಿದ ನಂತರ ಪುನಃ ಪೀಠಕ್ಕೆ ಕೂರಿಸಲು ಉಪ ಮುಖ್ಯಮಂತ್ರಿಗಳಾದ ಡಾ ಅಶ್ವಥ್‌ ನಾರಾಯಣ್‌ ಅವರು ಜೊತೆಗೂಡಿ ಹಿಡಿದು ಎಳೆದೊಯ್ಯುತ್ತಿರುವುದು ಸರ್ಕಾರಿ ಮತ್ತು ಖಾಸಗಿ ವಾಹಿನಿಗಳ ದೃಶ್ಯ ಮಾಧ್ಯಮಗಳ ಸಿ ಡಿ ಗಳ ವೀಕ್ಷಣೆಯಿಂದ ದೃಢಪಟ್ಟಿರುತ್ತದೆ. ಈ ಮೂವರು ಸದಸ್ಯರುಗಳನ್ನು ಎರಡು ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧಿಸಲು ಶಿಫಾರಸ್ಸು ಮಾಡುತ್ತದೆ,’ ಎಂದು ಸದನ ಸಮಿತಿಯು ಮಧ್ಯಂತರ ವರದಿಯಲ್ಲಿ ಹೇಳಿದೆ.

ದ್ವಾರದ ಚಿಲಕವನ್ನು ಕಾಲಿನಿಂದ ಮುಚ್ಚಿದ್ದರು

ಅದೇ ರೀತಿ ಸಭಾಪತಿಯವರು ಪ್ರವೇಶಿಸುವ ದ್ವಾರವನ್ನು ಮುಚ್ಚುವ ಮೂಲಕ ಸಭಾಪತಿಯವರು ಸದನ ಪ್ರವೇಶವನ್ನು ನಿರ್ಬಂಧಿಸುವ ಪ್ರಕ್ರಿಯೆಯಲ್ಲಿ ತೊಡಗಿ ಅಸಂಸದೀಯ ಮತ್ತು ಕಾನೂನುಬಾಹಿರ ನಡವಳಿಕೆ ಪ್ರದರ್ಶಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದ ಎಂ ಕೆ ಪ್ರಾಣೇಶ್‌, ಡಾ ವೈ ಎ ನಾರಾಯಣಸ್ವಾಮಿ, ಅರುಣ್‌ ಶಹಾಪುರ, ಚಂದ್ರಶೇಖರ ಬ ಪಾಟೀಲ್‌ ಮತ್ತು ಆಡಳಿತ ಪಕ್ಷದ ಸದಸ್ಯರು ಸಭಾಪತಿಯವರು ಪ್ರವೇಶಿಸುವ ದ್ವಾರದ ಚಿಲಕವನ್ನು ಕಾಲಿನಿಂದ ಮುಚ್ಚುವುದನ್ನು ಆಕ್ಷೇಪಿಸಿರುವುದು ಮತ್ತು ಉಪ ಸಭಾಪತಿಯವರನ್ನು ಪೀಠದಿಂದ ಎಳೆದು ತಂದ ಆರೋಪಕ್ಕೆ ಗುರಿಯಾಗಿದ್ದ ನಜೀರ್‌ ಅಹ್ಮದ್, ಪರಿಷತ್‌ನ ಮುಖ್ಯ ಸಚೇತಕ ಎಂ ನಾರಾಯಣಸ್ವಾಮಿ, ಶ್ರೀನಿವಾಸ ವಿ ಮಾನೆ, ಪ್ರಕಾಶ್‌ ಕೆ ರಾಥೋಡ್‌ ಇವರನ್ನು ಒಂದು ಅಧಿವೇಶನದ ಅವಧಿಯ ಕಾರ್ಯಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಸಮಿತಿಯು ಶಿಫಾರಸ್ಸು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ

ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಸಲ್ಲಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಸಭಾಪತಿಗಳು ತಿರಸ್ಕರಿಸಿದ್ದರು. ಮೇಲೆ ಚರ್ಚೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡದಂತೆ ಸದನದಲ್ಲಿ ಕಾಂಗ್ರೆಸ್‌ ಒತ್ತಾಯಿಸಿತ್ತು.

ಡಿಸೆಂಬರ್ 7ರಂದು ಆರಂಭವಾಗಿದ್ದ ವಿಧಾನಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 10ರಂದು ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿತ್ತು. ಗೋಹತ್ಯೆ ವಿಧೇಯಕ ಮಸೂದೆ ಮಂಡನೆಗೆ ಅವಕಾಶ ಮಾಡಿಕೊಡದ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾಗಿತ್ತು. ಆದರೆ ಅವಿಶ್ವಾಸ ನಿರ್ಣಯವನ್ನು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ಸಭಾಪತಿ ಅವರು ತಿರಸ್ಕರಿಸಿದ್ದರು. ಆಗ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿತ್ತು.

ವಿಧಾನಪರಿಷತ್‌ ಸಭಾಪತಿಯಾಗಿದ್ದ ಪ್ರತಾಪಚಂದ್ರಶೆಟ್ಟಿ ಅವರ ವಿರುದ್ಧ ಡಿಸೆಂಬರ್ 25 ರಂದು ಬಿಜೆಪಿ ಅವಿಶ್ವಾಸ ಮಂಡನೆ ನೋಟಿಸ್‌ ನೀಡಿತ್ತು. ನಿಯಮದ ಪ್ರಕಾರ 14 ದಿನಗಳ ಮೊದಲು ನೋಟಿಸ್‌ ನೀಡಬೇಕು. ಆದರೆ ಸಭಾಪತಿ ಚಳಿಗಾಲದ ಅಧಿವೇಶದ ಸಂದರ್ಭದಲ್ಲಿ ಅವಿಶ್ವಾಸನ ನಿರ್ಣಯ ಪ್ರಸ್ತಾವವನ್ನು ಮಂಡಿಸಲು ಅವಕಾಶ ನೀಡಿಲ್ಲ. ಅವಿಶ್ವಾಸನ ನಿರ್ಣಯದಲ್ಲಿ ಸಭಾಪತಿ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ನೋಟಿಸ್‌ ಸಂವಿಧಾನ ಬದ್ಧವಾಗಿಲ್ಲ ಎಂದು ಸಭಾಪತಿ ತಿರಸ್ಕಾರ ಮಾಡಿದ್ದರಲ್ಲದೆ ಅಧಿವೇಶನವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮತ್ತೊಮ್ಮೆ ಅಧಿವೇಶನ ನಡೆದಿತ್ತು. ವಿಧಾನ ಪರಿಷತ್‌ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಕಿತ್ತಾಟ, ತಳ್ಳಾಟ ನಡೆದಿತ್ತು.

ಹಿರಿಯರ ಮನೆ ಎಂದು ಕರೆಯಲ್ಪಡುವ ವಿಧಾನಪರಿಷತ್‌ನಲ್ಲಿ ಸದಸ್ಯರು ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಘಟನೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡಿತ್ತಲ್ಲದೆ ಹಾಗೂ ಸಮರ್ಥನೆಯನ್ನು ನೀಡಿತ್ತು. ಅಲ್ಲದೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts