ಹಳಿ ತಪ್ಪಿದ ಆಡಳಿತ; ಸಭಾಪತಿ ಆದೇಶಗಳ ಪಾಲಿಸದೇ ಅಗೌರವ ತೋರಿದ ಕಾರ್ಯದರ್ಶಿ

ಬೆಂಗಳೂರು; ಹೊರಗುತ್ತಿಗೆ ನೌಕರರಿಗೆ ನಿಯಮಬಾಹಿರವಾಗಿ 48 ಲಕ್ಷ ರು. ಹೆಚ್ಚುವರಿ ವೇತನ ನೀಡಿರುವ ಪ್ರಕರಣವೂ ಸೇರಿದಂತೆ ಹಲವು ರೀತಿಯ ಸರ್ಕಾರಿ ಆದೇಶ, ಮಾರ್ಗಸೂಚಿಗಳ ಉಲ್ಲಂಘನೆಗಳು, ಕರ್ತವ್ಯಲೋಪ ಮತ್ತು ಸಭಾಪತಿ ಹೊರಟ್ಟಿ ಅವರು ನೀಡಿದ್ದ ನಿರ್ದೇಶನಗಳನ್ನು ಪಾಲಿಸದೇ ಅಗೌರವ ತೋರಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಗುರಿಯಾಗಿದ್ದಾರೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟವಾಗಿ ಬಸವರಾಜ ಹೊರಟ್ಟಿ ಅವರು 2021ರ ಆಗಸ್ಟ್‌ 10ರಂದು ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.

ವಿಧಾನ ಪರಿಷತ್‌ನ ಕಾರ್ಯಾಲಯದ ಸುಗಮ ಕಾರ್ಯನಿರ್ವಹಣೆ ಮತ್ತು ಪಾರದರ್ಶಕ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಸೂಚನೆ, ಆದೇಶಗಳನ್ನು ಸಭಾಪತಿ ಹೊರಟ್ಟಿ ಅವರು ಕಾರ್ಯದರ್ಶಿಗಳಿಗೆ ನೀಡಿದ್ದರು. ಆದರೆ ಬಹುತೇಕ ಆದೇಶ ಮತ್ತು ಸೂಚನೆಗಳನ್ನು ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ಪಾಲಿಸಿಲ್ಲ ಎಂಬ ಸಂಗತಿ ಪತ್ರದಿಂದ ತಿಳಿದು ಬಂದಿದೆ.

‘ಹಲವು ವಿಷಯಗಳು ಮತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಮಾಹಿತಿ ನೀಡದೇ ಇರುವುದು ಅಥವಾ ಅಪೂರ್ಣ ಮಾಹಿತಿ ನೀಡುವುದು ಮತ್ತು ಸೌಜನ್ಯಕ್ಕಾದರೂ ವಿಳಂಬದ ಬಗ್ಗೆ ವಿವರಣೆ ನೀಡದೇ ಇರುವುದು ಅತ್ಯಂತ ಬೇಸರದ ವಿಷಯವಾಗಿರುತ್ತದೆ. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಸಿ ತುರ್ತಾಗಿ ಅನುಪಾಲನ ವರದಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಕಾನೂನಿನ ಪ್ರಕಾರ ಕ್ರಮಗಳು ಅನಿವಾರ್ಯವಾಗಬಹುದು ‘ ಎಂದು ಪತ್ರದಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ ಎಂದು ಗೊತ್ತಾಗಿದೆ.

ನಿಯಮಗಳ ಉಲ್ಲಂಘನೆಗಳ ಪಟ್ಟಿ

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು ನಿಯಮ 3(1)(i) 3(5)(iii), 3(5)(iv), 3(5)(ix) ಮತ್ತು ನಿಯಮ 20, ನಿಯಮ 20(3), ನಿಯಮ 13ರ ಸ್ಪಷ್ಟ ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

ಸಭಾಪತಿ ಬೇಸರ

‘ಆಡಳಿತಕ್ಕೆ ಸಂಬಂಧಿಸಿದಂತೆ ಮತ್ತು ಅದರ ಮೌಲ್ಯಗಳನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಹಲವು ಬಾರಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸೂಕ್ಷ್ಮವಾಗಿ ತಿಳಿಸಿದ್ದರೂ ಸಹ ಕೇಳಿದ ಮಾಹಿತಿಗಳಿಗೆ ಸ್ಪಷ್ಟವಾದ ಮತ್ತು ಸಮಂಜಸವಾದ ವಿವರಗಳು ಮತ್ತು ಉತ್ತರಗಳನ್ನು ನೀಡುವ ಬದಲು ಅನಾವಶ್ಯಕ ಚರ್ಚೆಗಳನ್ನು ಮಾಡುವುದು ಸಹ ನಾನು ಗಮನಿಸಿದ್ದೇನೆ. ಿದು ಸಭ್ಯ ಸರ್ಕಾರಿ ನೌಕರರಿಗೆ ಇರಬೇಕಾದ ನೀತಿ,ನಿಷ್ಠೆ,ಕರ್ತವ್ಯ , ಶ್ರದ್ಧೆ, ಉನ್ನತ ನೈತಿಕ ಆದರ್ಶ, ಉತ್ತರದಾಯಿತ್ವ, ಪಾರದರ್ಶಕತೆ, ಸೌಜನ್ಯತೆ ಮತ್ತು ಸ್ಪಂದನಾಶೀಲತೆಗಳ ಕೊರತೆ ಮೇಲ್ನೋಟಕ್ಕೆ ಎದ್ದು ಕಾಣಿಸುವಂತೆ ಭಾಸವಾಗುತ್ತಿರುವುದು ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳ ಉಲ್ಲಂಘನೆಯಾಗಿರುತ್ತದೆ,’ ಎಂದು ಸಭಾಪತಿ ಹೊರಟ್ಟಿ ಅವರು ಆರೋಪಿಸಿರುವುದು ಪತ್ರದಿಂದ ಗೊತ್ತಾಗಿದೆ.

ಪತ್ರದಲ್ಲಿರುವ ಪ್ರಮುಖ ವಿಚಾರಗಳಿವು

ಪರಿಷತ್ತಿನಲ್ಲಿ ಅಕ್ರಮ ನೇಮಕ ಮತ್ತು 48 ಲಕ್ಷ ರು.ಗಳ ಹೆಚ್ಚುವರಿ ವೇತನ ನೀಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು. ಇದೇ ಪ್ರಕರಣದಲ್ಲಿ ಸ್ವಜನಪಕ್ಷಪಾತ ಇತ್ಯಾದಿ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಲು ಆದೇಶಿಸಿದ್ದರೂ ವಿಷಯದ ಬಗ್ಗೆ ವಾಸ್ತವಾಂಶ ಮರೆಮಾಚಿ ಏನೂ ಅಕ್ರಮ ನಡೆದಿಲ್ಲವೆಂದು ಬಿಂಬಿಸುವ ರೀತಿ ವರದಿ ನೀಡಿರುವುದು.

ಆರ್ಥಿಕ ಇಲಾಖೆಯ ಸಹಮತಿ ಇಲ್ಲದೆಯೇ ಕಾನೂನುಬಾಹಿರವಾಗಿ ಕಿಯೋನಿಕ್ಸ್‌ ಸಂಸ್ಥೆಯೊಂದಿಗೆ ಕರಾರು ಮಾಡಿಕೊಂಡು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಅಧಿಸೂಚನೆಗೆ ವಿರುದ್ಧವಾಗಿ ವೇತನ ಪಾವತಿ ಮಾಡಿ ಆರ್ಥಿಕ ನಷ್ಟ ಉಂಟಾಗಿರುವುದು

ಆರ್ಥಿಕ ಇಲಾಖೆ ಈಗಾಗಲೇ ಆಕ್ಷೇಪಣೆ ನೀಡಿದ್ದರೂ ಸಹ ಆರ್ಥಿಕ ನೀತಿ ಸಂಹಿತೆ ವಿರುದ್ಧವಾಗಿ ಸಭಾಪತಿಗಳ ಅನುಮತಿ ಪಡೆಯದೇ ಆರ್ಥಿಕ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿ 16.21 ಲಕ್ಷ ರುಗ.ಳನ್ನು ಬಿಡುಗಡೆ ಮಾಡಿಸಿಕೊಂಡಿರುವುದು ಸರಿಯೇ?

ಪರಿಷತ್ತಿನ ನೌಕರರು ಎರಡು ಸರ್ಕಾರಿ/ಸರ್ಕಾರಿ ಸ್ವಾಮ್ಯದ ವಸತಿಗೃಹ ಪಡೆದುಕೊಂಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ನೌಕರರ ಮೇಲೆ ಕಾನೂನು ರೀತಿ ಕ್ರಮಕೈಗೊಂಡು ಅನುಪಾಲನ ವರದಿ ಸಲ್ಲಿಸಲು ಆದೇಶಿಸಿ ಹಲವು ತಿಂಗಳಾಗಿದ್ದರೂ ಸಹ ಇಲ್ಲಿಯವರೆಗೂ ವಿಷಯಕ್ಕೆ ಸಂಬಂಧಿಸಿದಂತೆ ನೌಕರರ ವಿರುದ್ಧ ಕ್ರಮ ಜರುಗಿಸದಿರುವುದು ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಅನುಪಾಲನ ವರದಿ ಸಲ್ಲಿಸಿಲ್ಲವೇಕೆ?

ಪರಿಷತ್ತಿನ ಚರ್ಚಾ ಸಂಪಾದಕರ ಹುದ್ದೆಯಿಂದ ಮುಖ್ಯ ಸಂಪಾದಕರ ಹುದ್ದೆಗೆ ಪದನ್ನೋತಿ ನೀಡುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ವಿರುದ್ಧವಾಗಿ 3 ವರ್ಷಗಳಿಂದ 2 ವರ್ಷಗಳು ಎಂದು ನಿಯಮಬಾಹಿರವಾಗಿ ಅಧಿಸೂಚನೆ ಹೊರಡಿಸಿರುವುದು. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಅಂದಿನ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರಗಳನ್ನು ಸಭಾಪತಿಗಳಿಗೆ ನೀಡದಿರುವುದು.
ಗಣಕ ಯಂತ್ರದ ಬಿಡಿಭಾಗಗಳು, ಜೆರಾಕ್ಸ್‌ ಯಂತ್ರದ ಬಿಡಿಭಾಗಗಳು, ಕಾರ್ಟ್‌ರಿಡ್ಜ್‌ಗಳು ಮತ್ತು ಸ್ಟೇಷನರಿ ವಸ್ತುಗಳ ಖರೀದಿ ಸಂಬಂಧ ಸಂದಾಯವಾಗಿರುವ ಹಣದ ವಿವರಗಳನ್ನು ಒದಗಿಸದಿರುವುದು

ಪರಿಷತ್ತಿನಲ್ಲಿ 2020ರ ಡಿಸೆಂಬರ್‌ 15ರಂದು ನಡೆದಿದ್ದ ಅಹಿತಕರ ಘಟನೆ ಮತ್ತು ಧರ್ಮೇಗೌಡರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಪಾರದರ್ಶಕ ತನಿಖೆ ನಡೆಸುವ ಸಲುವಾಗಿ ತನಿಖಾ ಸಂಸ್ಥೆಯಾದ ಸಿಐಡಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು,ವಿವರಗಳು ಮತ್ತು ಇತರ ಸಾಕ್ಷ್ಯಗಳನ್ನು ತುರ್ತಾಗಿ ನೀಡದಿರುವುದು. ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿ ಮುಖ್ಯವಾಗಿ ಸದನ ಸಮಿತಿ ನೀಡಿರುವ ಮಧ್ಯಂತರ ವರದಿಯನ್ನು ಉದ್ದೇಶಪೂರ್ವಕವಾಗಿ ನೀಡದಿರುವುದು.

ಪರಿಷತ್ತಿನಲ್ಲಿ ಅಧಿಕಾರಿಗಳು ಮತ್ತು ನೌಕರರು ಬಯೋಮೆಟ್ರಿಕ್‌ ಹಾಜರಾತಿ ವಿವರ ಮತ್ತು ಗೈರು, ತಡವಾಗಿ/ ಕಚೇರಿ ವೇಳೆ ಮುಗಿಯುವ ಮುನ್ನ ನಿರ್ಗಮಿಸುವ ತಪ್ಪಿತಸ್ಥ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಈವರೆಗೂ ತೆಗೆದುಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡದಿರುವುದು
ವಿಧಾನ ಪರಿಷತ್‌ನ ಕೆಲವು ಅಧಿಕಾರಿಗಳಿಗೆ ಪದನ್ನೋತಿ ನೀಡುವ ಸಲುವಾಗಿ ನಡೆದಿದ್ದ ಇಲಾಖಾ ಪದನ್ನೋತಿ ಸಮಿತಿ ಸಭೆ ನಡೆಸಲು ಕಾನೂನಿನ ಪ್ರಕಾರ ಕ್ರಮ ವಹಿಸದಿರುವುದು.

ಕೆಲವು ಅಧಿಕಾರಿಗಳಿಗೆ ಮಾತ್ರ ಪದನ್ನೋತಿ ನೀಡಲು ಕಡತ ಮಂಡಿಸಿ ಉಳಿದವರಿಗೆ ಪದನ್ನೋತಿ ನೀಡದೇ ಪಕ್ಷಪಾತದಿಂದ ವರ್ತಿಸಿರುವುದು. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಕ್ಕೂ ಸಭಾಪತಿಗಳ ಆದೇಶ ಪಡೆಯದೇ ಇತರೆ ಇಲಾಖೆಗಳೊಂದಿಗೆ ಅಸಂಬದ್ಧ ಪತ್ರ ವ್ಯವಹಾರಗಳನ್ನು ಮಾಡುತ್ತ ಕಾಲಹರಣ ಮಾಡಿ ಇತರೆ ಅಧಿಕಾರಿ, ನೌಕರರಿಗೆ ಮಾನಸಿಕ ಹಿಂಸೆ ನೀಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಸಭಾಪತಿ ಹೊರಟ್ಟಿ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts