ಆರಂಭಗೊಳ್ಳದ ಕಾಮಗಾರಿ; 65 ಕೋಟಿ ಬಿಡುಗಡೆಗೆ ಸಿಎಂ ಸಚಿವಾಲಯ ಒತ್ತಡ

ಬೆಂಗಳೂರು; ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಬಹುತೇಕ ಜಿಲ್ಲಾ ಪಂಚಾಯ್ತಿಗಳು ಕ್ರಿಯಾ ಯೋಜನೆಗಳನ್ನೇ ರೂಪಿಸಿಲ್ಲ. ಹಾಗೆಯೇ ಕಾಮಗಾರಿಯನ್ನೂ ಅನುಷ್ಠಾನಗೊಳಿಸಿಲ್ಲ. ಆದರೂ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರು. ಮೊತ್ತದ ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ಸಚಿವಾಲಯವು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ಕ್ರಿಯಾ ಯೋಜನೆ ತಯಾರಾಗದಿದ್ದ ಮೇಲೆ ಅನುದಾನವನ್ನು ಹೇಗೆ ಬಿಡುಗಡೆ ಮಾಡಬೇಕು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದರೆ, ಇತ್ತ ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ರಸ್ತೆ ಕಾಮಗಾರಿ ಸಂಬಂಧಿಸಿದಂತೆ 65 ಕೋಟಿ ರು.ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿರುವ ಮರಿಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ನಿಕಟವರ್ತಿಗಳು ಎಂಬ ಒಂದೇ ಕಾರಣಕ್ಕೆ ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿ ಮುತುವರ್ಜಿ ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಕಾಮಗಾರಿಗೆ ಅನುಮೋದನೆ ದೊರೆತಿದೆಯಾದರೂ ಇದನ್ನು ತುಂಡು ಗುತ್ತಿಗೆ ಕೊಡಬೇಕೇ ಅಥವಾ ನೇರವಾಗಿ ಟೆಂಡರ್‌ ಕರೆಯಬೇಕೆ ಎಂಬ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಯೂ ನಿರ್ಧರಿಸಿಲ್ಲ. ಕಾಮಗಾರಿ ನಡೆಸಲು ಟೆಂಡರ್‌ ಪ್ರಕ್ರಿಯೆ ನಡೆಯದೆಯೇ ಅಷ್ಟೊಂದು ಮೊತ್ತವನ್ನು ಏಕಾಏಕಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳುತ್ತಿದೆ. ಆದರೂ ಮುಖ್ಯಮಂತ್ರಿಗಳ ಸಚಿವಾಲಯವು ಹಣ ಬಿಡುಗಡೆ ಸಂಬಂಧ ಒತ್ತಡವನ್ನು ಮುಂದುವರೆಸಿದೆ.

ಕಳೆದ ಬಾರಿ ಬಿದ್ದ ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಹಾಳಾಗಿವೆ. ಬೊಕ್ಕಸದಲ್ಲಿ ಹಣವಿಲ್ಲ ಎಂಬ ನೆಪವನ್ನೊಡ್ಡುತ್ತಿರುವ ಸರ್ಕಾರ ರಸ್ತೆ ದುರಸ್ತಿಗೆ ಅನುದಾನ ನೀಡುತ್ತಿಲ್ಲ. ಅಲ್ಲದೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ 1,600 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

ಹೀಗಿರುವಾಗ ಕ್ರಿಯಾ ಯೋಜನೆಯನ್ನೇ ತಯಾರಿಸದ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿಗೆ 65 ಕೋಟಿ ರು. ಬಿಡುಗಡೆ ಮಾಡಿಸಲು ಮುಖ್ಯಮಂತ್ರಿಗಳ ಸಚಿವಾಲಯವು ತರಾತುರಿಯಿಂದ ಓಡಾಡುತ್ತಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

SUPPORT THE FILE

Latest News

Related Posts