ಎಸಿಬಿ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ; ಕಾರಂತ ಬಡಾವಣೆ ವಿಚಾರಣೆ ಕೈಗೆತ್ತಿಕೊಳ್ಳಲು ಮಧ್ಯಂತರ ಅರ್ಜಿ

ಬೆಂಗಳೂರು; ಶಿವರಾಮ ಕಾರಂತ ಬಡಾವಣೆಯ ಡಿ ನೋಟಿಫಿಕೇಷನ್‌ ಪ್ರಕರಣದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ವಿರುದ್ಧ ಎಫ್‌ಐಆರ್‌ಗಳಿಗೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧದ ವಿಚಾರಣೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಇದೆಯಾದರೂ 2018ರ ನಂತರ ವಿಚಾರಣೆ ನಡೆಯದ ಕಾರಣ ಈ ಪ್ರಕರಣದಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಮಧ್ಯಂತರ ಅರ್ಜಿ ಸಲ್ಲಿಸಿದೆ.

ತುರ್ತಾಗಿ ಅರ್ಜಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಕೋರಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ನಿಗಾದಲ್ಲಿರಬೇಕಲ್ಲದೆ ಇದು ಕರ್ನಾಟಕ ನ್ಯಾಯಾಲಯ ವ್ಯಾಪ್ತಿಯಿಂದ ಹೊರಗಿಟ್ಟು ಹೊರ ರಾಜ್ಯದ ನ್ಯಾಯಾಲಯಕ್ಕೆ ವರ್ಗಾಯಿಸಬೇಕು. ಹಾಗೆಯೇ ಪ್ರಕರಣದ ತನಿಖೆಯನ್ನು ಎಸಿಬಿ ಬದಲಿಗೆ ವಿಶೇಷ ತನಿಖಾ ತಂಡದ ಮೂಲಕ ನಡೆಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ.

ಭ್ರಷ್ಟಾಚಾರ ನಿಗ್ರಹ ದಳವು(ಎಸಿಬಿ) ನೇರವಾಗಿ ಮುಖ್ಯಮಂತ್ರಿ ವ್ಯಾಪ್ತಿಗೆ ಬರುವ ಕಾರಣ, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಜೆಎಸ್‌ಪಿ ತನ್ನ ಕೋರಿಕೆಯನ್ನು ಸಮರ್ಥಿಸಿಕೊಂಡಿದೆ.

ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡ ಜಮೀನು ಪೈಕಿ 257 ಎಕರೆ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ)ಗೆ ಕಾನೂನು ಬಾಹಿರವಾಗಿ ಆದೇಶಿಸಿದ್ದರು ಎಂಬ ದೂರಿನ ಹಿನ್ನೆಲೆಯಲ್ಲಿ ಭ್ರಷ್ಠಾಚಾರ ನಿಗ್ರಹ ದಳವು ಅವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಪ್ರತ್ಯೇಕ ಎರಡು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಗಳ ಸಂಬಂಧ ಸುಧೀರ್ಘವಾದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ ಆದೇಶಿಸಿದ್ದ ಪ್ರಕರಣವನ್ನು ಎಸಿಬಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಎಸಿಬಿಯು ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಪಟ್ಟಿ ಮಾಡಿತ್ತಾದರೂ 2018ರ ನಂತರ ಯಾವುದೇ ವಿಚಾರಣೆ ನಡೆಸಿರಲಿಲ್ಲ. 2017ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಈ ಪ್ರಕರಣವು 2018ರ ನವೆಂಬರ್‌ 14ರಂದು ನ್ಯಾಯಮೂರ್ತಿ ಆರ್‌ ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಆ ನಂತರ ವಿಚಾರಣೆ ದಿನಾಂಕ ಹಲವು ಬಾರಿ ಮುಂದೂಡಿಕೆಯಾಗಿತ್ತು.
2021ರ ಜನವರಿ 21ರಂದೂ ವಿಚಾರಣೆಗೆ ಪಟ್ಟಿ ಮಾಡಿತ್ತು. ಆದರೆ ವಿಚಾರಣೆ ನಡೆದಿರಲಿಲ್ಲ. ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್‌ ಮಧ್ಯಂತರ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದೆ.

ಪ್ರಕರಣದ ಹಿನ್ನೆಲೆ

ಯಡಿಯೂರಪ್ಪ ವಿರುದ್ಧ ದೂರುದಾರ ಡಿ.ಅಯ್ಯಪ್ಪ 2017ರ ಜೂನ್‌ 7ರಂದು ದೂರು ದಾಖಲಿಸಿದ್ದರು. ಯಡಿಯೂರಪ್ಪ ವಿರುದ್ಧ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಸಗಿದ ಆರೋಪವು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಹಾಗೆಯೇ, ಆರೋಪವನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವ ಪೂರಕ ದಾಖಲೆಗಳನ್ನೂ ದೂರುದಾರರು ತಮ್ಮ ದೂರಿನ ಜೊತೆಗೆ ಸಲ್ಲಿಸಿದ್ದರು.

ಇಂತಹ ಸಂದರ್ಭದಲ್ಲಿ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿರುವುದಿಲ್ಲ ಹಾಗೂ ದೂರು ದಾಖಲಿಸಿದ ಕೂಡಲೇ ಎಫ್‌ಐಆರ್ ದಾಖಲಿಸುವುದು ತನಿಖಾಧಿಕಾರಿಯ ಕರ್ತವ್ಯ. ಆದರೆ, ಎಫ್‌ಐಆರ್ ದಾಖಲಿಸುವಲ್ಲಿ ಎಸಿಬಿ ತನಿಖಾಧಿಕಾರಿಗಳು ಒಂಬತ್ತು ವಾರಗಳ ಕಾಲ (ಆ.10ರಂದು ಮೊದಲ ಹಾಗೂ ಆ.17ರಂದು ಎರಡನೇ ಎಫ್‌ಐಆರ್ ದಾಖಲು) ತಡ ಮಾಡಿದ್ದಾರೆ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದರು.

ಸುಪ್ರೀಂ ಕೋರ್ಟ್ ಆದೇಶದಂತೆ ದೂರು ದಾಖಲಾದ ದಿನದಿಂದ ಏಳು ದಿನದಲ್ಲಿ ಎಫ್‌ಐಆರ್ ದಾಖಲಿಸಬೇಕು. ಪೂರಕ ದಾಖಲೆಗಳ ಸಂಗ್ರಹಕ್ಕಾಗಿ ಪ್ರಾಥಮಿಕ ತನಿಖೆ ನಡೆಸಿದ ಪಕ್ಷದಲ್ಲಿ ಆರು ವಾರಗಳ ಕಾಲ ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಬಹುದು. ಆದರೆ, ವಿಳಂಬಕ್ಕೆ ಸಕಾರಣ ನಮೂದಿಸಬೇಕು. ನಗರಾಭಿವೃದ್ಧಿ ಇಲಾಖೆ ಮತ್ತು ವಸತಿ ಇಲಾಖೆಯಿಂದ ಅಗತ್ಯ ದಾಖಲೆಗಳನ್ನು ದೂರುದಾರ ಸಲ್ಲಿಸಿದ್ದರೂ ಪೂರಕ ದಾಖಲೆ ಸಂಗ್ರಹಕ್ಕಾಗಿ ಪ್ರಾಥಮಿಕ ತನಿಖೆ ನಡೆಸಿದ್ದರಿಂದ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಎಸಿಬಿ ಹೇಳಿದ್ದು, ಅದನ್ನು ಒಪ್ಪಲಾಗದು ಎಂದು ಪೀಠ ಹೇಳಿತ್ತು.

ಅಲ್ಲದೆ, ದೂರುದಾರ ಸಲ್ಲಿಸಿದ ದಾಖಲೆಗಳನ್ನು ಹೊರತುಪಡಿಸಿ ಬೇರೆಗೆ ದಾಖಲೆಗಳನ್ನು ಪ್ರಾಥಮಿಕ ತನಿಖೆ ವೇಳೆ ಸಂಗ್ರಹಿಸಿಲ್ಲ. ಇನ್ನು ಎಫ್‌ಐಆರ್ ವಿಳಂಬವಾಗಿ ದಾಖಲಿಸಲು ಸೂಕ್ತ ಕಾರಣವನ್ನೂ ಪ್ರಾಥಮಿಕ ತನಿಖಾ ವರದಿ, ಕೇಸ್ ಡೈರಿಯಲ್ಲಿ ಅಥವಾ ಎಫ್‌ಐಆರ್‌ನಲ್ಲೂ ತಿಳಿಸಿಲ್ಲ. ಹೀಗಾಗಿ ವಿಳಂಬವಾಗಿ ಎಫ್‌ಐಆರ್ ದಾಖಲಿಸಿವುದರಲ್ಲಿ ಸಾಕಷ್ಟು ಅನುಮಾನಗಳಿವೆ. ಇಂತಹ ಅನುಮಾನಗಳಿದ್ದಲ್ಲಿ ಎಫ್‌ಐಆರ್ ದಾಖಲಿಸಿದ್ದ ವಿಳಂಬವನ್ನು ಪ್ರತಿರೋಧಿಸುವ ಹಕ್ಕು ಅರ್ಜಿದಾರರಿರಿಗಿರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಈ ಪರಿಸ್ಥಿತಿಯಲ್ಲಿ ಪ್ರಕರಣದ ತನಿಖೆ ಮುಂದುವರಿಸಲು ಎಸಿಬಿಗೆ ಅನುಮತಿ ನೀಡಿದರೆ ಯಡಿಯೂರಪ್ಪ ಅವರಿಗೆ ಪಕ್ಷಪಾತ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಪೀಠ, ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ಗೆ ತಡೆ ನೀಡಿ ತನಿಖೆ ಮುಂದುವರಿಸದಂತೆ ಎಸಿಬಿಗೆ ನಿರ್ದೇಶಿಸಿತ್ತು. ಮಧ್ಯಂತರ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಮಧ್ಯಂತರ ಮನವಿಗೆ ಮಾತ್ರ ಅನ್ವಯಿಸುತ್ತದೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು.

ತಡೆ ನೀಡಿದ್ದಕ್ಕೆ ಹೈಕೋರ್ಟ್ ನೀಡಿದ್ದ ಇತರೆ ಕಾರಣಗಳಿವು

1. ಎಸಿಬಿಯ ಪ್ರಾಥಮಿಕ ತನಿಖೆಯಲ್ಲಿ ಯಡಿಯೂರಪ್ಪ ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಜ್ಞಾಪೂರ್ವಕ ಅಪರಾಧ ಕೃತ್ಯ ಎಸಗಿರುವುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವಂತಹ ಸೂಕ್ತ ಸಾಕ್ಷ್ಯಾಧಾರಗಳು ಕಂಡುಬರುವುದಿಲ್ಲ.
2. ಯಡಿಯೂರಪ್ಪ, ಭೂಮಾಲೀಕರಿಂದ ಹಣಕ್ಕೆ ಬೇಡಿಕೆಯಿಟ್ಟು ಜಮೀನು ಡಿನೋಟಿಫಿಕೇಷನ್‌ಗೆ ಆದೇಶಿಸಿರುವುದ ಬಗ್ಗೆ ದಾಖಲೆಗಳು ಕಂಡುಬಂದಿಲ್ಲ.
3. ಯಡಿಯೂರಪ್ಪ ಲಂಚ ಪಡೆದು ಡಿನೋಟಿಫಿಕೇಷನ್ ಮಾಡಿ ಲಾಭ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಮಾಡಿರುವ ಆರೋಪಕ್ಕೆ ನ್ಯಾಯಪೀಠ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ.
4. ಅಧೀನ ನ್ಯಾಯಾಲಯಗಳು ಭ್ರಷ್ಟಾಚಾರ ಪ್ರಕರಣಗಳನ್ನು ವಿಚಾರಣೆಗೆ ಅಂಗೀಕರಿಸುವ ಮುನ್ನ (ಪ್ರೀ ಕಾಗ್ನಿಜೆನ್ಸ್ ಸ್ಟೇಜ್) ಪ್ರಕರಣದ ವಿಚಾರಣೆಗೆ ಹಾಗೂ ಎಫ್‌ಐಆರ್ ತಡೆಯಾಜ್ಞೆ ಹೈಕೋರ್ಟ್ ತಡೆಯಾಜ್ಞೆ ನೀಡಬಹುದು.
5. ಒಂದೇ ದೂರಿನ ಆಧರಿಸಿ ಪ್ರಕರಣದಲ್ಲಿ ಎರಡನೇ ದೂರು ದಾಖಲಿಸಿರುವುದು ಸರಿಯಲ್ಲ.
ತನಿಖೆ ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿರಬೇಕು. ಕಳಂಕಿತ ತನಿಖೆಯು ಕ್ರಿಮಿನಲ್ ನ್ಯಾಯದ ಪೂರ್ವಗಾಮಿಯಾಗಲಿದೆ.
6. ತನಿಖಾಧಿಕಾರಿ ಅಮಾಯಕ ಪ್ರಜೆಗಳು ರಕ್ಷಕರಾಗಿರುತ್ತಾರೆ. ಹೀಗಾಗಿ ಅವರು ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಸಾಕ್ಷ್ಯಾಧಾರಗಳು ತೃಪ್ತಿಕರವಾಗಿರದಲ್ಲಿ ತನಿಖೆ ಹಾಗೂ ಪ್ರಾಸಿಕ್ಯೂಷನ್ ಹೆಸರಿನಲ್ಲಿ ಯಾರಿಗೂ ಕಿರುಕುಳ ನೀಡಬಾರದು.
7. ಸಾಕ್ಷ್ಯಾಧಾರಗಳ ಕೊರತೆಯ ನಡುವೆ ತನಿಖೆ ಮುಂದುವರಿಸುವುದು ಅರ್ಜಿದಾರರಿಗೆ ತೊಂದರೆ ನೀಡಲಿದೆ. ಹಾಗೆಯೇ, ನ್ಯಾಯದ ವಿಫಲತೆ ಸಾಧಿಸುತ್ತದೆ ಮತ್ತು ಅರ್ಜಿದಾರರಿಗೆ ಪಕ್ಷಪಾತ ಬಗೆದಂತಾಗುತ್ತದೆ. ನ್ಯಾಯಸಮ್ಮತ ತನಿಖೆಯು ಅರ್ಜಿದಾರರಿಗೆ ಸಂವಿಧಾನದಡಿ ನೀಡಿರುವ ಹಕ್ಕು.
8. ದೂರಿನಲ್ಲಿ 21 ಡಿನೋಟಿಫಿಕೆಷನ್ ಪ್ರಕರಣಗಳನ್ನು ತಿಳಿಸಿದ್ದರೂ 1ರಿಂದ 10ನೇ ಪ್ರಕರಣಗಳ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಎಸಿಬಿ, ಪ್ರಕರಣಗಳನ್ನು ಆಯ್ಕೆ ಮಾಡಿ ಎಫ್‌ಐಆರ್ ದಾಖಲಿಸಿದೆ. ಈ ರೀತಿ ಮಾಡುವುದು ಸಲ್ಲ. ಪ್ರಕರಣವನ್ನು ಆಯ್ಕೆ ಮಾಡಿ ಎಫ್‌ಐಆರ್ ದಾಖಲಿಸಿರುವುದಕ್ಕೂ ಸಕಾರಣ ನೀಡಿಲ್ಲ.
9. ಯಡಿಯೂರಪ್ಪ 200 ಕೋಟಿ ರೂ. ಮೌಲ್ಯದ (ಈಗ ನಾಲ್ಕು ಪಟ್ಟು ಹೆಚ್ಚಿನ ಮೌಲ್ಯದ) ಜಮೀನು ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಕುರಿತು ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿದರೆ, ಅರ್ಜಿದಾರ ಹಕ್ಕಿನ ಕುರಿತು ನ್ಯಾಯಾಲಯವು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಬಿಂಬಿತವಾಗುತ್ತದೆ.
10. ಆಶಾ ಪರದೇಶಿ ಎಂಬುವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆದೇಶ ಮಾಡಲಾಗಿದೆ. ಅವರು ಭೂ ಮಾಲೀಕರಲ್ಲ ಎಂದು ದೂರಲಾಗಿದೆ. ಆದರೆ, ಮಾರಾಟ ಕ್ರಯಪತ್ರಗಳನ್ನುಪರಿಶೀಲಿಸಿದರೆ ಆಶಾ ಪರದೇಶಿ ಭೂಮಿಯ ಮಾಲೀಕರಾಗಿದ್ದರು ಎಂದು ತಿಳಿಯುತ್ತದೆ.

ಡಿ ನೋಟಿಫಿಕೇಷನ್‌ ಆರೋಪ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ದಾಖಲಿಸಿದ್ದ ಎಫ್‌ಐಆರ್‌ಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದರಿಂದ ಪ್ರಕರಣ ಸಂಬಂಧ ಎಸಿಬಿಯ ತನಿಖೆಯ ಭೀತಿ ಎದುರಿಸುತ್ತಿದ್ದ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ನಿರಾಳ ಸಿಕ್ಕಿದಂತಾಗಿತ್ತು.

the fil favicon

SUPPORT THE FILE

Latest News

Related Posts