ಸರ್ಕಾರಿ ಶಾಲೆ ಕೊಠಡಿಗಳಿಗಿಲ್ಲ ದುರಸ್ತಿ ಭಾಗ್ಯ; ಜಿಪಂ, ತಾಪಂಗಳಿಗೆ ಅನುದಾನ ಸ್ಥಗಿತ

ಬೆಂಗಳೂರು; ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿ ದುರಸ್ತಿಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ 2019-20ನೇ ಸಾಲಿನಿಂದಲೇ ಅನುದಾನ ನಿಲ್ಲಿಸಲಾಗಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳಿಗೆ ದುರಸ್ತಿ ಭಾಗ್ಯವೇ ಇಲ್ಲದಂತಾಗಿದೆ.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡ ಅಥವಾ ಕೊಠಡಿಗಳ ದುರಸ್ತಿಗೆ ಸಂಪನ್ಮೂಲ ಕ್ರೋಡೀಕರಿಸಲು ದಾನಿಗಳಿಗೆ ಬಿಜೆಪಿ ಸರ್ಕಾರ ಮೊರೆ ಹೋಗಿರುವ ಬೆನ್ನಲ್ಲೇ ಶಾಲೆಗಳ ಕೊಠಡಿ ದುರಸ್ತಿಗೊಳಿಸಲು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಅನುದಾನ ಸ್ಥಗಿತಗೊಳಿಸಿರುವ ವಿಚಾರ ಮುನ್ನೆಲೆಗೆ ಬಂದಿದೆ. ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಕೊಠಡಿಗಳ ದುರಸ್ತಿಗೆ ಅನುದಾನ ಸ್ಥಗಿತಗೊಳಿಸಿ ವರ್ಷ ಕಳೆದರೂ ಸಚಿವ ಈಶ್ವರಪ್ಪ ಅವರು ಈ ಕುರಿತು ಗಮನಹರಿಸಿಲ್ಲ. ಇದು ಸರ್ಕಾರಿ ಶಾಲೆಗಳ ಮೇಲಿನ ಕಾಳಜಿ ಇಲ್ಲದಿರುವುದಕ್ಕೆ ಕೈಗನ್ನಡಿಯಾಗಿದೆ.

ವಾರ್ಷಿಕ ಆಯವ್ಯಯದಲ್ಲಿ ಪ್ರತಿ ವರ್ಷ ಎಲ್ಲಾ ಜಿಲ್ಲಾ ಪಂಚಾಯ್ತಿಗಳಿಗೆ ಲೆಕ್ಕ ಶೀರ್ಷಿಕೆ (2202-00-102-0-34)ರಲ್ಲಿ ಪ್ರೌಢಶಾಲೆಗಳ ಕೊಠಡಿಗಳ ದುರಸ್ತಿಗೆ ಪ್ರತಿ ಜಿಲ್ಲೆಗೆ 1 ಕೋಟಿ ಮತ್ತು ತಾಲೂಕು ಪಂಚಾಯ್ತಿಗಳಿಗೆ (ಲೆಕ್ಕ ಶೀರ್ಷಿಕೆ- 2202-00-01-101-0-66) ತಲಾ 50 ಲಕ್ಷ ರು.ನಂತೆ ಅನುದಾನ ಬಿಡುಗಡೆಯಾಗುತ್ತಿತ್ತು. ಅದರಲ್ಲಿ ತುರ್ತು ದುರಸ್ತಿಗೆ ಕ್ರಿಯಾ ಯೋಜನೆ ತಯಾರಿಸಿ ಕೊಠಡಿಗಳನ್ನು ದುರಸ್ತಿಪಡಿಸಲಾಗುತ್ತಿತ್ತು.

ಆದರೆ 2019-20ನೇ ಸಾಲಿನಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಅನುದಾನ ನಿಲ್ಲಿಸಿದೆ. 30 ಜಿಲ್ಲಾ ಪಂಚಾಯತ್‌ಗಳಿಗೆ ಪ್ರತಿ ವರ್ಷ ತಲಾ 1 ಕೋಟಿಯಂತೆ 30 ಕೋಟಿ ಹಾಗೂ ಪ್ರತಿ ತಾಲೂಕು ಪಂಚಾಯತ್‌ಗೆ ತಲಾ 50 ಲಕ್ಷ ರು.ನಂತೆ 254 ತಾಲೂಕು ಪಂಚಾಯತ್‌ಗಳಿಗೆ ಒಟ್ಟು 127 ಕೋಟಿ ಹಣದ ಕೊರತೆಯಾಗಿದೆ. ಅನುದಾನ ಸ್ಥಗಿತಗೊಂಡಿರುವ ಕಾರಣ ಈವರೆವಿಗೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ನಡೆದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಟಿಪ್ಪಣಿ ಹಾಳೆ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸರ್ಕಾರಿ ಪ್ರೌಢಶಾಲೆಗಳ ದುರಸ್ತಿಗೆ 2021-21ನೇ ಸಾಲಿನ ಆಯವ್ಯಯದಲ್ಲಿ ಅನುದಾನ ನಿಗದಿಪಡಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಲವತ್ತುಕೊಂಡಿದೆ. 2021-22ನೇ ಸಾಲಿನ ಆಯವ್ಯಯದಲ್ಲಿ ಪ್ರತಿ ಜಿಲ್ಲಾ ಪಂಚಾಯತ್‌ಗೆ 3.00 ಕೋಟಿಯಂತೆ ಎಲ್ಲಾ ಜಿಲ್ಲಾ ಪಂಚಾಯತ್‌ಗಳಿಗೆ 100 ಕೋಟಿ ಹಾಗೂ ಪ್ರತಿ ತಾಲೂಕು ಪಂಚಾಯತ್‌ಗೆ 1 ಕೋಟಿಯಂತೆ ಒಟ್ಟು 254 ಕೋಟಿ ಅನುದಾನ ನಿಗದಿಪಡಿಸಬೇಕು ಎಂದು ಬೇಡಿಕೆ ಪಟ್ಟಿ ಸಲ್ಲಿಸಿದೆ ಎಂದು ಗೊತ್ತಾಗಿದೆ.

ಕೊಠಡಿಗಳ ದುರಸ್ತಿಗಾಗಿ 2018-19ರಲ್ಲಿ 4603.00 ಲಕ್ಷ, 2019-20ರಲ್ಲಿ 5103.00 ಲಕ್ಷ ರು.ಗಳನ್ನು ಹಿಂದಿನ ಸರ್ಕಾರ ಅನುದಾನ ಒದಗಿಸಿತ್ತು. 2020-21ರಲ್ಲಿ ಬಿಡಿಗಾಸನ್ನೂ ನೀಡಿಲ್ಲ. ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 2018-19ರಲ್ಲಿ 29480.45 ಲಕ್ಷ ರು., 2019-20ರಲ್ಲಿ 39409.50 ಲಕ್ಷ ರು., 2020-21ರಲ್ಲಿ 19210.00 ಲಕ್ಷ ರು., ಶಾಲೆಗಳ ಕೊಠಡಿಗಳ ಮರು ನಿರ್ಮಾಣಕ್ಕೆ ಆರ್‌ಐಡಿಎಫ್‌ ಯೋಜನೆಯಡಿ 2018-19 ಮತ್ತು 2019-20ರಲ್ಲಿ ಬಿಡಿಗಾಸಿನ ಅನುದಾನವನ್ನೂ ಒದಗಿಸಿರಲಿಲ್ಲ. 2020-21ರಲ್ಲಿ 25000.00 ಲಕ್ಷ ರು. ಅನುದಾನ ಒದಗಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಕಳೆದ 3 ವರ್ಷಗಳಲ್ಲಿ ಮುಂದುವರೆದ ಯೋಜನೆಗಳ ಅಡಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ 2017-18ರಲ್ಲಿ 13038.72 ಲಕ್ಷ ರು., 2018-19ರಲ್ಲಿ 17445.68 ಲಕ್ಷ ರು. ಅನುದಾನ ಬಿಡುಗಡೆಯಾಗಿತ್ತು.
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡ ಅಥವಾ ಕೊಠಡಿಗಳ ದುರಸ್ತಿಗೆ ಅಗಾಧ ಸಂಪನ್ಮೂಲ ಅಗತ್ಯವಿದೆ. ದಾನಿಗಳಿಂದ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಕರೆದ ಸಭೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ನೆರೆ ಹಾವಳಿಗೆ 6,196 ಶಾಲೆಗಳ 13,260 ಕೊಠಡಿಗಳು ಹಾನಿಗೀಡಾಗಿವೆ. ಈ ಪೈಕಿ ಅಲ್ಪ ದುರಸ್ತಿಗೆ 200 ಕೋಟಿ ರೂ. ಬಿಡುಗಡೆ ಮಾಡಿದೆ. 713 ಕೋಟಿ ರೂ. ಪ್ರಾಥಮಿಕ ಹಾಗೂ 69 ಕೋಟಿ ರೂ. ಪ್ರೌಢಶಾಲೆ ಕಟ್ಟಡಗಳ ಮರು ನಿರ್ಮಾಣಕ್ಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಒಟ್ಟು 43,282 ಪ್ರಾಥಮಿಕ ಹಾಗೂ 4,724 ಪ್ರೌಢಶಾಲಾ ಕಟ್ಟಡಗಳಿವೆ.

the fil favicon

SUPPORT THE FILE

Latest News

Related Posts