ನೆಟ್‌, ಸ್ಲೆಟ್‌ ಅರ್ಹತೆ ಪಡೆದಿರುವ ಪಿ ಯು ಉಪನ್ಯಾಸಕರ ಬಡ್ತಿ ಕನಸು ನುಚ್ಚು ನೂರು ಮಾಡಿದ ಸರ್ಕಾರ

ಬೆಂಗಳೂರು; ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಮತ್ತು ರಾಜ್ಯ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ)ಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಗಳಿಸಿದ್ದ ಪಿ ಯು ಉಪನ್ಯಾಸಕರು ಪದವಿ ಕಾಲೇಜುಗಳಿಗೆ ಬಡ್ತಿ ಹೊಂದುವ ಕನಸನ್ನು ಬಿಜೆಪಿ ಸರ್ಕಾರ ನುಚ್ಚು ನೂರು ಮಾಡಿದೆ. ನೆಟ್‌ ಮತ್ತು ಸ್ಲೆಟ್‌ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿ ಪದವಿ ಕಾಲೇಜುಗಳಿಗೆ ಬಡ್ತಿ ಹೊಂದುವ ನಿರೀಕ್ಷೆಯಲ್ಲಿದ್ದ ಪಿ ಯು ಉಪನ್ಯಾಸಕರ ಆಸೆಗೆ ಉನ್ನತ ಶಿಕ್ಷಣ ಇಲಾಖೆ ತಣ್ಣೀರೆರಚಿದೆ.

ಪದವಿ ಪೂರ್ವ ಉಪನ್ಯಾಸಕರನ್ನು ಪದವಿ ಕಾಲೇಜಿಗೆ ಬಡ್ತಿ ನೀಡಬೇಕು ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಹಿಂದಿನ ಕಾರ್ಯದರ್ಶಿಯಾಗಿದ್ದ ಕುಮಾರ್‌ ನಾಯಕ್‌ ಅವರು ಮಾಡಿದ್ದ ಶಿಫಾರಸ್ಸನ್ನು ಉನ್ನತ ಶಿಕ್ಷಣ ಇಲಾಖೆ ಒಪ್ಪಿಕೊಂಡಿಲ್ಲ. ಅಲ್ಲದೆ ಈ ಶಿಫಾರಸ್ಸನ್ನು ಜಾರಿಗೆ ತರದಿರಲು ನಿರ್ಧರಿಸಿರುವ ಬಿಜೆಪಿ ಸರ್ಕಾರ, ಪಿಯು ಕಾಲೇಜು ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಕುಮಾರ್‌ ನಾಯಕ್‌ ಅವರು ಕಳೆದ 9 ವರ್ಷಗಳ ಹಿಂದೆ ಸರ್ಕಾರಕ್ಕೆ ಮಾಡಿದ್ದ ಒಟ್ಟು 6 ಶಿಫಾರಸ್ಸುಗಳ ಪೈಕಿ ಈಗಿನ ಸರ್ಕಾರ 2ನ್ನು ಮಾತ್ರ ಜಾರಿಗೊಳಿಸಿ ಇನ್ನೂ 4 ಶಿಫಾರಸ್ಸುಗಳನ್ನು ಪರಿಶೀಲನೆಯಲ್ಲಿಟ್ಟಿದೆ. ಈ ಪೈಕಿ 3 ಶಿಫಾರಸ್ಸುಗಳನ್ನು ಜಾರಿಗೆ ಸಂಬಂಧಿಸಿದಂತೆ ಇಲಾಖೆಗಳ ಸಹಮತಿ ಇನ್ನೂ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು 15 ವರ್ಷಗಳ ಸೇವೆ ಪೂರೈಸಿರುವ ಹಾಗೂ ಬೋಧನಾ ವಿಷಯದಲ್ಲಿ ಶೇ.55ರಷ್ಟು ಅಂಕ ಗಳಿಸಿ ಎನ್‌ಇಟಿ/ಎಸ್‌ಎಲ್‌ಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಉಪನ್ಯಾಸಕರಿಗೆ ಪದವಿ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದು ಕುಮಾರ್‌ ನಾಯಕ್‌ ಅವರು ಶಿಫಾರಸ್ಸು ಮಾಡಿದ್ದರು.

ಆದರೀಗ ‘ನೆಟ್‌, ಸ್ಲೆಟ್‌ ಪರೀಕ್ಷೆ ತೇರ್ಗಡೆ ಹೊಂದಿದ ಪದವಿ ಪೂರ್ವ ಉಪನ್ಯಾಸಕರುಗಳನ್ನು ಪದವಿ ಕಾಲೇಜಿಗೆ ಬಡ್ತಿ ನೀಡುವ ಶಿಫಾರಸ್ಸನ್ನು ಉನ್ನತ ಶಿಕ್ಷಣ ಇಲಾಖೆಯು ಒಪ್ಪದಿರುವುದರಿಂದ ಜಾರಿಗೆ ತರಲು ಸಾಧ್ಯವಿಲ್ಲ,’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಿರುವುದು ಗೊತ್ತಾಗಿದೆ.

ಎಂ ಫಿಲ್‌ ಪಡೆದ ಉಪನ್ಯಾಸಕರಿಗೆ ಒಂದು ಹೆಚ್ಚುವರಿ ವಾರ್ಷಿಕ ವೇತನ ಬಡ್ತಿ ಹಾಗೂ ಪಿಎಚ್‌ಡಿ ಪಡೆದ ಉಪನ್ಯಾಸಕರಿಗೆ ಎರಡು ಹೆಚ್ಚುವರಿ ವಾರ್ಷಿಕ ವೇತಗನ ಬಡ್ತಿ ಮಂಜೂರು ಮಾಡುವ ಸಂಬಂಧ ಕುಮಾರ್‌ ನಾಯಕ್‌ ಅವರು ಮಾಡಿದ್ದ ಶಿಫಾರಸ್ಸು ಇನ್ನೂ ಸರ್ಕಾರದ ಹಂತದಲ್ಲೇ ಪರಿಶೀಲನೆಯಲ್ಲಿದೆ ಎಂದು ತಿಳಿದು ಬಂದಿದೆ.

ಅದೇ ರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆಯನ್ನು ಸಕ್ರಮಗೊಳಿಸುವ ಕುರಿತು ಸಂಬಂಧಿಸಿದ ಇಲಾಖೆ ಜತೆಗೆ ಪತ್ರ ವ್ಯವಹಾರವನ್ನು ಮುಂದುವರೆಸಿರುವ ಸರ್ಕಾರ, ಗುತ್ತಿಗೆ ಆಧಾರದಲ್ಲಿ ನೇಮಕವಾಗಿ ಸೇವಾ ಸಕ್ರಮಗೊಂಡ ಉಪನ್ಯಾಸಕರ ಕುರಿತಂಎ ವಿಧಾನಪರಿಷತ್ತಿನ ಸದಸ್ಯ ಕೆ ಟಿ ಶ್ರೀಕಂಠೇಗೌಡ ಅವರ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಆ ಪ್ರಸ್ತಾವನೆಯನ್ನು ಪರಿಶೀಲಿಸಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.

ಕುಮಾರ್‌ನಾಯಕ್‌ ಅವರು ಮಾಡಿದ್ದ ಶಿಫಾರಸ್ಸುಗಳ ಪೈಕಿ ಜೂನ್‌ 2016ರಂದು ಕಾರ್ಯನಿರ್ವಹಿಸುತ್ತಿರುವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರುಗಳಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಮಂಜೂರಾಗಿದೆ. ನಿಯೋಜನೆ ಭತ್ಯೆಯನ್ನು 300 ರು.ಗಳಿಂದ 750 ಕ್ಕೆ ಹೆಚ್ಚಿಸಿ ಆದೇಶಿಸಿದೆ. ಪ್ರಸ್ತುತ 500 ರು. ಗಳ ವಿಶೇಷ ಭತ್ಯೆಯನ್ನು ಪಡೆಯುತ್ತಿರುವ ಉಪನ್ಯಾಸಕರುಗಳಿಗೂ ಇದನ್ನು ಮುಂದುವರೆಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರಿಗೆ ಮಾಸಿಕ 1,000 ರು.ಗಳ ವಿಶೇಷ ಭತ್ಯೆಯನ್ನೂ ಮಂಜೂರು ಮಾಡಿದೆ.

ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಪ್ರೌಢಶಾಲೆ ಸಹ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸಲು ಕುಮಾರ್ ನಾಯಕ್ ವರದಿ ಅನುಷ್ಠಾನವಾಗಬೇಕಿದೆ. ಇದಕ್ಕಾಗಿ 190 ಕೋಟಿ ರೂ. ಅನುದಾನ ನೀಡಬೇಕು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರು ಒತ್ತಾಯಿಸಿದ್ದರು.

ಅಲ್ಲದೆ ಪ್ರೌಢಶಿಕ್ಷಣ ಮತ್ತು ಪಿಯು ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಯಕ್ಕೆ ಸಂಬಂಧಿಸಿ ಜಿ.ಕುಮಾರ್‌ನಾಯಕ್ ವರದಿ ಅನುಷ್ಠಾನಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts