ನಿರ್ಬಂಧದಲ್ಲೂ ಗಡಿ ಮೀರಿದ ಪ್ರಕರಣ; ಮುಂಬೈನಿಂದ ರಾಜ್ಯಕ್ಕೆ ಬಂದವರೆಷ್ಟು?

ಬೆಂಗಳೂರು; ಲಾಕ್‌ಡೌನ್‌ ಘೋಷಣೆಯಾದ ದಿನದಂದೇ ನೆರೆಹೊರೆಯ ರಾಜ್ಯಗಳ ಗಡಿ ದಾಟಿ ಬರಲು ಯಾವ ಅವಕಾಶಗಳು ಇರದಿದ್ದರೂ ಕ್ಯಾಂಟರ್‌ ಮೂಲಕ ಮುಂಬೈ ಗಡಿ ದಾಟಿ ಮಂಡ್ಯದ ನಾಗಮಂಗಲಕ್ಕೆ ಪ್ರವೇಶಿಸಿದ್ದ ವ್ಯಕ್ತಿಯೊಬ್ಬನಿಗೆ ಕೋವಿಡ್‌ 19 ದೃಢಪಟ್ಟಿದೆ.
ಲಾಕ್‌ಡೌನ್‌ ಜಾರಿಯಾದ ದಿನದಿಂದಲೇ ಅಂತರರಾಜ್ಯ ಗಡಿಗಳನ್ನು ತೆರೆಯಬಾರದು ಎಂದು ಕೇಂದ್ರ ಸರ್ಕಾರ ಕಟ್ಟಪ್ಪಣೆ ವಿಧಿಸಿತ್ತು. ಹೀಗಾಗಿ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಆದರೂ ಅಂತರರಾಜ್ಯ ಗಡಿಯನ್ನು ದಾಟಿ ಈ ವ್ಯಕ್ತಿ ನಾಗಮಂಗಲ ಪ್ರವೇಶಿಸಿರುವುದು ಸೋಜಿಗಕ್ಕೆ ಕಾರಣವಾಗಿದೆ. ನಾಗಮಂಗಲಕ್ಕೆ ಕರೆತಂದ ಕ್ಯಾಂಟರ್‌ ವಾಹನ ಉಡುಪಿಗೂ ತಲುಪಿರುವುದು ಅಲ್ಲಿಯೂ ಆತಂಕ ಮೂಡಿಸಿದೆ.
ನೆರೆಯ ರಾಜ್ಯಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿರುವುದು ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಅಂತರರಾಜ್ಯ ಗಡಿಗಳು ತೆರೆಯದೇ ರಾಜ್ಯಗಳ ಗಡಿ ಪ್ರದೇಶಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರೂ ಸೋಂಕಿತ (ಪಿ-505) ಮುಂಬೈನಿಂದ ಮಂಡಕ್ಕೆ ಪ್ರವೇಶಿಸಿರುವುದು ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸೇರಿದಂತೆ ನೆರೆಹೊರೆ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ನಿಯೋಜಿಸಿದ್ದ ಬಿಗಿ ಬಂದೋಬಸ್ತ್‌ ಬಗ್ಗೆಯೇ ಈಗ ಅನುಮಾನಗಳಿಗೆ ಕಾರಣವಾಗಿದೆ.
ಲಾಕ್‌ಡೌನ್‌ ಮತ್ತು ಸೀಲ್‌ಡೌನ್‌ ಅವಧಿಯಲ್ಲಿಆಯಾ ರಾಜ್ಯಗಳ ಗಡಿ ಪ್ರದೇಶ ದಾಟದಂತೆ ಬಿಗಿಗಸ್ತು ನಿಯೋಜಿಸಲಾಗಿತ್ತು. ಮುಂಬೈ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿ ಗಡಿಪಹರೆ ನಡೆಸುತ್ತಿದ್ದ ಅಧಿಕಾರಿಗಳ ಕಣ್ಣು ತಪ್ಪಿಸಿ ಹಲವರು ರಾಜ್ಯದ ಗಡಿಯೊಳಗೆ ಪ್ರವೇಶಿಸಿರುವ ಸಾಧ್ಯತೆಗಳಿವೆ ಎಂಬ ಅನುಮಾನಗಳಿಗೆ, ನಾಗಮಂಗಲದ ಪ್ರಕರಣ ಇನ್ನಷ್ಟು ಪುಷ್ಠಿ ನೀಡಿದೆ.

ಅಲ್ಲದೆ ಮಹಾರಾಷ್ಟ್ರದ ಮುಂಬೈನ ಪ್ರಯಾಣ ಹಿನ್ನೆಲೆ ಹೊಂದಿರುವ ಈ ವ್ಯಕ್ತಿ, ಮೊದಲು ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದ. ಆ ನಂತರ ಮಂಡ್ಯದ ನಾಗಮಂಗಲದಲ್ಲಿರುವ ತನ್ನ ಮನೆಗೆ ತೆರಳಿದ್ದ. ಹೀಗಾಗಿ ಈ ಎರಡೂ ಪಟ್ಟಣಗಳಲ್ಲಿ ಆತ ಎಲ್ಲೆಲ್ಲಿ ಓಡಾಡಿದ್ದ ಎಂಬುದನ್ನು ಪತ್ತೆ ಹಚ್ಚುತ್ತಿರುವ ಅಧಿಕಾರಿಗಳು, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹುಡುಕಾಟ ನಡೆಸಿದ್ದಾರೆ.
ಲಾಕ್‌ಡೌನ್‌ ಮಾತ್ರವಲ್ಲ, ಸೀಲ್‌ಡೌನ್‌ ಮಾಡಲಾಗಿದ್ದರೂ ಈ ವ್ಯಕ್ತಿ ಹೇಗೆ ಚನ್ನರಾಯಪಟ್ಟಣಕ್ಕೆ ಬಂದಿಳಿದ ಎಂಬುದು ಸೋಜಿಗಕ್ಕೆ ಕಾರಣವಾಗಿದೆ. ಸದ್ಯಕ್ಕೆ ಈ ವ್ಯಕ್ತಿಯನ್ನು ಮಂಡ್ಯದ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ನಾಗಮಂಗಲದ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿ, ಮುಂಬೈನಲ್ಲಿ ಸ್ವಂತ ಹೋಟೆಲ್‌ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಈತ ಖರ್ಜೂರ ಸಾಗಣೆ ಕ್ಯಾಂಟರ್‌ನಲ್ಲಿ ಬಂದಿದ್ದ. ಏಪ್ರಿಲ್‌ 20ರಂದು ಮುಂಬೈನ ವಾಸಿ ಮಾರುಕಟ್ಟೆಯಿಂದ ಹಾಸನ ಜಿಲ್ಲೆ ಚನ್ನರಾಯಪಟ್ಟಣಕ್ಕೆ ಹೊರಟಿದ್ದ ಕ್ಯಾಂಟರ್‌ ಹತ್ತಿದ್ದ. ಅಲ್ಲದೇ ಇದೇ ಕ್ಯಾಂಟರ್‌ ಉಡುಪಿಗೂ ತಲುಪಿತ್ತು ಎಂದು ಗೊತ್ತಾಗಿದೆ.
ಅದೇ ರೀತಿ ಚಿಕ್ಕಬಳ್ಳಾಪುರದ 18 ವರ್ಷದ ಯುವಕ (ಪಿ-488) ಹಿಂದೂಪುರ(ಅನಂತಪುರ) ಆಂಧ್ರಪ್ರದೇಶದ ಪ್ರಯಾಣದ ಹಿನ್ನೆಲೆ ಇದೆ. ತುಮಕೂರಿನ 32 ವರ್ಷದ ವ್ಯಕ್ತಿ (ಪಿ – 447) ಗುಜರಾತ್‌ನ ಸೂರತ್‌ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಇದೆ.
ಇನ್ನು, ವಿಜಯಪುರದ ಮಹಿಳೆ (ಪಿ-429) ಮತ್ತು (ಪಿ-511) 27 ವರ್ಷದ ಯುವಕನ ಪ್ರಯಾಣ ಮತ್ತು ಸಂಪರ್ಕ ಇನ್ನೂ ಪತ್ತೆಯಾಗಿಲ್ಲ.
ಮಹಾರಾಷ್ಟ್ರದ ವಿವಿಧೆಡೆಯಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ, ಉಳಿದ ರಾಜ್ಯಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ, ಮಹಾರಾ‍ಷ್ಟ್ರದ ಬಹುತೇಕ ಪ್ರದೇಶಗಳನ್ನು ಲಾಕ್‌ಡೌನ್‌ ಮತ್ತು ಸೀಲ್‌ಡೌನ್‌ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆಯಾದರೂ ಮುಂಬೈ ಸೇರಿದಂತೆ ಇನ್ನಿತರೆ ಪ್ರದೇಶಗಳ ಗಡಿ ದಾಟಿ ಕರ್ನಾಟಕದ ಗಡಿಯನ್ನು ಹೇಗೆ ಪ್ರವೇಶಿಸಲಾಗಿತ್ತು?
ನೆರೆಯ ರಾಜ್ಯಗಳಲ್ಲಿ ಸಿಲುಕಿರುವವರನ್ನು ಮತ್ತು ರಾಜ್ಯದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಿಲುಕಿರುವವರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸಲು ಕಳೆದ ಎರಡು ದಿನಗಳ ಹಿಂದೆಯಷ್ಟೇ ವಾಹನ ಸೌಕರ್ಯ ಕಲ್ಪಿಸಲಾಗಿದೆ. ಆದರೆ ಈ ಸೌಲಭ್ಯ ಅನುಷ್ಠಾನಗೊಳ್ಳುವ ಮುನ್ನವೇ ಹಲವರು ಜಿಲ್ಲೆಗಳ ಗಡಿ ದಾಟಿದ್ದಾರೆ ಎಂದು ಹೇಳಲಾಗಿದೆ. ವಿವಿಧ ಜಿಲ್ಲೆಗಳಿಗೂ ಹಲವರು ಬಂದಿರುವುದು ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಅಚ್ಚರಿ ಪಡಬೇಕಿಲ್ಲ.

SUPPORT THE FILE

Latest News

Related Posts