‘ದಿ ಫೈಲ್‌’ ವರದಿ; ಉತ್ಪಾದಕರಲ್ಲದವರಿಗೆ ನೀಡಿರುವ ಆದೇಶ ವಜಾಕ್ಕೆ ಸಿಎಂಗೆ ಪತ್ರ

ಬೆಂಗಳೂರು; ಕೋವಿಡ್‌-19 ನಿಯಂತ್ರಿಸಲು ಕಳೆದ 1 ತಿಂಗಳಲ್ಲಿ ಪಿಪಿಇ ಕಿಟ್‌ ಸೇರಿದಂತೆ ಇನ್ನಿತರೆ ಉಪಕರಣಗಳ ಖರೀದಿ ಸಂಬಂಧ ಮಧ್ಯವರ್ತಿಗಳಿಗೆ ನೀಡಿರುವ ಖರೀದಿ ಆದೇಶಗಳನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ರಾಷ್ಟ್ರಸಮಿತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.
ಉತ್ಪಾದಕರಲ್ಲದವರಿಂದ ಪಿಪಿಇ ಕಿಟ್‌ ಖರೀದಿಸಲು ಹೊರಡಿಸಿದ್ದ ಆದೇಶ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿ ಕುರಿತು ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು 2020ರ ಏಪ್ರಿಲ್‌ 28ರಂದು ಬರೆದಿರುವ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಕೋವಿಡ್‌-19ರ ಬಿಕ್ಕಟ್ಟಿನ ಸಂದರ್ಭದಲ್ಲೂ ಲಾಭ ಮಾಡಿಕೊಳ್ಳುವ ಯತ್ನಗಳ ಬಗ್ಗೆ ಅಖಿಲ ಭಾರತ ಕಾಂಗ್ರೆಸ್‌ ದನಿ ಎತ್ತಿದ್ದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಈವರೆವಿಗೂ ಈ ಬಗ್ಗೆ ತುಟಿ ಬಿಚ್ಚದಿರುವುದು ಅನುಮಾನಗಳಿಗೆ ಕಾರಣವಾಗಿದೆ.
‘ಮಧ್ಯವರ್ತಿಗಳಿಗೆ ನೀಡಿರುವ ಖರೀದಿ ಆದೇಶಗಳನ್ನು ವಜಾಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಖರೀದಿ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಬೇಕಲ್ಲದೆ, ಉತ್ಪಾದಕರಿಂದಲೇ ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಂದ ಖರೀದಿಸಬಾರದು ಮತ್ತು ಕಮಿಷನ್‌ ದಂಧೆಗೆ ಅವಕಾಶ ಮಾಡಿಕೊಡಬಾರದು,’ ಎಂದು ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಪರೀಕ್ಷಾ ಕಿಟ್‌ಗಳನ್ನು ಬೇರೆ ಬೇರೆ ದರಗಳಿಗೆ ಮಾರಾಟ ಮಾಡಲಾಗಿದೆಯಲ್ಲದೆ ಉತ್ಪಾದಕ ಕಂಪನಿಗಳನ್ನು ಹೊರತುಪಡಿಸಿ ಮಧ್ಯವರ್ತಿಗಳ ಮೂಲಕ ಕಿಟ್‌ಗಳನ್ನು ಖರೀದಿಸಿರುವ ಬಗ್ಗೆ ‘ದಿ ಫೈಲ್‌’ 2020ರ ಏಪ್ರಿಲ್‌ 27ರಂದು ವರದಿ ಪ್ರಕಟಿಸಿತ್ತು.
ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಮಾಸ್ಕ್‌, ಮುಖಗವಸು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಉತ್ಪಾದಿಸದ ಕಂಪನಿಗಳಿಗೆ 3 ಕೋಟಿ ಮೌಲ್ಯದ ಖರೀದಿ ಆದೇಶ ನೀಡಿರುವುದನ್ನು ದಾಖಲೆ ಸಮೇತ ಬಹಿರಂಗಗೊಳಿಸಿತ್ತು.
ಸ್ಪಷ್ಟೀಕರಣದಲ್ಲಿ ಉಲ್ಲೇಖಿಸಿರುವ ಕಂಪನಿಗಳ ಪೈಕಿ 2 ಕಂಪನಿಗಳಿಗೆ ಸರ್ಜಿಕಲ್ ಉತ್ಪನ್ನಗಳ ಉತ್ಪಾದನೆಗೂ ಸಂಬಂಧವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಖರೀದಿ ಆದೇಶ ಪಡೆದಿರುವ ಈ 2 ಕಂಪನಿಗಳು ಇದುವರೆಗೂ ಉಪಕರಣಗಳನ್ನು ಸರಬರಾಜು ಮಾಡಿದೆಯೇ ಇಲ್ಲವೇ ಎಂಬ ಬಗ್ಗೆ ಇಲಾಖೆ ಆಯುಕ್ತರಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ತಿಳಿಸಿಲ್ಲ.
ರುದ್ರಾಂಶ್ ವಿಗ್‌ ಆಗ್ರೋ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ಗೆ 800 ರು. ದರದಲ್ಲಿ ಒಟ್ಟು 2 ಕೋಟಿ ರು.ಮೊತ್ತದಲ್ಲಿ 25,000 ಸಂಖ್ಯೆಯ ಕಿಟ್‌ಗಳ ಸರಬರಾಜಿಗೆ 2020ರ ಮಾರ್ಚ್‌ 20ರಂದು ಖರೀದಿ ಆದೇಶ ನೀಡಿದೆ. ಈ ಕಂಪನಿ ಮೇಲ್ನೋಟಕ್ಕೆ ಕೃಷಿ ಮತ್ತು ಇದಕ್ಕೆ ಪೂರಕವಾದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ 9 ವರ್ಷಗಳಿಂದಲೂ ಕೃಷಿ ಮತ್ತು ಇದಕ್ಕೆ ಪೂರಕವಾದ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಅಲ್ಲದೆ ಈ ಕಂಪನಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಎಂಬ ಮಾಹಿತಿಯನ್ನು ಹೊರಗೆಡವಿತ್ತು.
ಅದೇ ರೀತಿ ಬೆಂಗಳೂರು ನಗರದ ಎ ಟೆಕ್‌ ಟ್ರೋನ್‌ ಎಂಬ ಕಂಪೆನಿಯೂ ಮಾಸ್ಕ್‌ ಸೇರಿದಂತೆ ಕಿಟ್‌ಗಳನ್ನು ಸರಬರಾಜು ಮಾಡಿದೆ. ಯೂನಿಟ್‌ವೊಂದಕ್ಕೆ 725 ರು. ನಂತೆ ಒಟ್ಟು 1,81,25,000 ರು. ದರದಲ್ಲಿ 25,000 ಕಿಟ್‌ಗಳ ಸರಬರಾಜಿಗೆ 2020ರ ಮಾರ್ಚ್ 20ರಂದು ಖರೀದಿ ಆದೇಶ ನೀಡಿರುವುದು ಬಹಿರಂಗಗೊಂಡಿತ್ತು.
‘ಪಿ.ಪಿ.ಇ. ಕೀಟ್ ಗಳ ತಯಾರಿಕೆಯಲ್ಲಿ, ಖರೀದಿಯಲ್ಲಿ ಮತ್ತು ಸರಬರಾಜಿನಲ್ಲಿ ಪರಿಣತಿಯನ್ನು ಹೊಂದಿರದ ಹಲವಾರು ಸಂಸ್ಥೆಗಳ ಮತ್ತು ದಲ್ಲಾಳಿಗಳ ಮೂಲಕ ಖರೀದಿಸುತ್ತಿರುವ ಮಾಹಿತಿ ನಮಗೂ ಬಂದಿದೆ. ಕಿಟ್ ಗಳ ಉತ್ಪಾದನೆಯಲ್ಲಿ ಪರಿಣತಿಯನ್ನೂ ಹೊಂದಿಲ್ಲ. ಇಂತಹ ಅವ್ಯವಹಾರ ಮತ್ತು ಅಕ್ರಮಗಳಲ್ಲಿ ಭಾಗಿ ಆಗಿರುವವರ ವಿರುದ್ಧ ತನಿಖೆ ನಡೆಸಬೇಕು,’ ಲಂಚಮುಕ್ತ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ವಿ ಆರ್‌ ಮರಾಠೆ ಅವರು ಆಗ್ರಹಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts