Sunday | May 10, 2026 |

ಬಲ್ದೋಟಾ ಕಂಪನಿಯಿಂದ ಕಾಯ್ದೆ ಉಲ್ಲಂಘನೆ; 109 ಎಕರೆ ಜಮೀನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಭಂಡ ನಿರ್ಲಕ್ಷ್ಯ

ಬೆಂಗಳೂರು; ಕೈಗಾರಿಕೆ ಉದ್ದೇಶದ ಹೆಸರಿನಲ್ಲಿ ವಿನಾಯಿತಿ ಪರವಾನಿಗೆ ಪಡೆದು ರಾಜ್ಯದ ಕೊಪ್ಪಳ ಜಿಲ್ಲೆಯ ವಿವಿಧ ಸರ್ವೇ ನಂಬರ್‌ಗಳಲ್ಲಿ 109 ಎಕರೆಗೂ ಹೆಚ್ಚು ಜಮೀನು ಖರೀದಿಸಿರುವ ಪ್ರತಿಷ್ಠಿತ ಬಲ್ದೋಟಾ (ಎಂಎಸ್‌ಪಿಎಲ್‌) ಗಣಿ ಕಂಪನಿ ನಿಗದಿತ ಉದ್ದೇಶಕ್ಕಾಗಿ ಬಳಕೆ ಮಾಡದ ಆರೋಪಕ್ಕೆ ಗುರಿಯಾಗಿದೆ.
ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧಿನಿಯಮ 1961ರ ಕಲಂ 109ಕ್ಕೆ ರಾಜ್ಯ ಬಿಜೆಪಿ ಸರ್ಕಾರ ತಿದ್ದುಪಡಿ ತರುವ ಸಂಬಂಧ ವಿಧಾನಮಂಡಲದಲ್ಲಿ ವಿಧೇಯಕ ಮಂಡಿಸಿರುವ ಬೆನ್ನಲ್ಲೇ ಬಲ್ದೋಟಾ ಕಂಪನಿ ಕಲಂ 109ನ್ನು ಉಲ್ಲಂಘಿಸಿರುವ ಪ್ರಕರಣವೂ ಮುನ್ನಲೆಗೆ ಬಂದಿದೆ. ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ‘ದಿ ಫೈಲ್‌’ ಗೆ ಸಮಗ್ರ ದಾಖಲೆಗಳು ಲಭ್ಯವಾಗಿವೆ.
ಅಂದಾಜು 32.72 ಕೋಟಿ ರು. ಮಾರುಕಟ್ಟೆ ಬೆಲೆ ಇದೆ ಎಂದು ಹೇಳಲಾಗಿರುವ 109 ಎಕರೆಯನ್ನು ಎಂಎಸ್‌ಪಿಎಲ್‌ ಪಾಳುಬಿಟ್ಟಿದ್ದರೂ ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕೊಪ್ಪಳ ಜಿಲ್ಲಾಧಿಕಾರಿಗೆ ನೋಟೀಸ್‌ ನೀಡಿ ಕೈ ತೊಳೆದುಕೊಂಡಿರುವ ಈಗಿನ ಬಿಜೆಪಿ ಸರ್ಕಾರ, ನಿಗದಿತ ಉದ್ದೇಶಕ್ಕೆ ಬಳಕೆಯಾಗದ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ಧೈರ್ಯ ಪ್ರದರ್ಶಿಸದೇ ಭಂಡ ನಿರ್ಲಕ್ಷ್ಯ ವಹಿಸಿದೆ.

ಪ್ರತಿಷ್ಠಿತ ಗಣಿ ಕಂಪನಿಗಳ ಪಟ್ಟಿಯಲ್ಲಿರುವ  ಬಲ್ದೋಟಾ ಕಂಪನಿ (ಎಂಎಸ್‌ಪಿಎಲ್‌) ಕೂಡ ಕೊಪ್ಪಳ ಜಿಲ್ಲೆಯ ಹಾಲವರ್ತಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದು 109 ಎಕರೆ  64 ಗುಂಟೆ ವಿಸ್ತೀರ್ಣದ ಜಮೀನನ್ನು ಖರೀದಿಸಿತ್ತು. ಆದರೆ ನಿಗದಿತ ಉದ್ದೇಶಕ್ಕಾಗಿ ಬಳಕೆ ಮಾಡದೇ 9 ವರ್ಷಗಳಿಂದಲೂ ಪಡಾ ಬಿಟ್ಟಿರುವುದು ದಾಖಲೆಯಿಂದ ತಿಳಿದು ಬಂದಿದೆ. ಅದೇ ರೀತಿ ಇನ್ನಿತರೆ ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದಿರುವ  110 ಎಕರೆ 24  ಗುಂಟೆ ವಿಸ್ತೀರ್ಣದ ಜಮೀನುಗಳಿಗೆ ಭೂ ಉಪಯೋಗ ಬದಲಾವಣೆ ಮಾಡಿಕೊಂಡಿರುವ ಬಲ್ದೋಟಾ ಕಂಪನಿ, ಆ ನಂತರ ಭೂ ಪರಿವರ್ತನೆ  ಮಾಡಿಸಿಕೊಳ್ಳದಿರುವುದು ದಾಖಲೆಯಿಂದ ಗೊತ್ತಾಗಿದೆ. ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದ ಜಮೀನುಗಳನ್ನು ಆದೇಶ ಹೊರಡಿಸಿದ  ದಿನಾಂಕದಿಂದ  7 ವರ್ಷದೊಳಗಾಗಿ ನಿಗದಿತ  ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು  ಕರ್ನಾಟಕ ಭೂ ಸುಧಾರಣೆ ನಿಯಮಾವಳಿಗಳು 1974ರ  ನಿಯಮ  38-ಡಿ(4) ಅನ್ವಯ 2001ರ ಮೇ 29 ರಂದು ಆದೇಶ ಹೊರಡಿಸಿದೆ. 

ಹಾಗೆಯೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ  1961ರ ಕಲಂ 109(2) (1-ಬಿ)  ಅನ್ವಯ ವಿನಾಯಿತಿ ಪರವಾನಿಗೆ ಆದೇಶವನ್ನು ರದ್ದುಪಡಿಸಿ ಯಾವುದೇ ಪರಿಹಾರ ಧನ ಪಾವತಿಸದೇ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಕಳೆದ 20 ವರ್ಷಗಳ ಹಿಂದೆಯೇ ಇಂತಹ ಆದೇಶ ಹೊರಡಿಸಿರುವ  ಸರ್ಕಾರ ಆದೇಶ ಪಾಲಿಸುವ  ನಿಟ್ಟಿನಲ್ಲಿ ಈವರೆವಿಗೂ ಮುಂದಡಿಯಿಟ್ಟಿಲ್ಲ. 

109 ಎಕರೆ ಪೈಕಿ ಕೊಪ್ಪಳದ ಹಾಲವರ್ತಿ  ವಿವಿಧ ಸರ್ವೆ ನಂಬರ್‌ಗಳಲ್ಲಿ ಎಂಎಸ್‌ಪಿಎಲ್‌ ಹೆಸರಿನಲ್ಲಿ  36 ಎಕರೆ  20 ಗುಂಟೆ, ಕೊಪ್ಪಳ, ಬಸಾಪುರದಲ್ಲಿ 20 ಎಕರೆ  21 ಗುಂಟೆ ಆರ್‌  ಎಸ್‌  ಎಂಟರ್‌ಪ್ರೈಸೆಸ್‌  ಹೆಸರಿನಲ್ಲಿದ್ದರೆ ಆರೀಸ್‌ ಐರನ್‌  ಅಂಡ್‌  ಸ್ಟೀಲ್‌  ಹೆಸರಿನಲ್ಲಿ  ಒಟ್ಟು 53 ಎಕರೆ 23 ಗುಂಟೆ ಜಮೀನಿದೆ. ಈ ಎಲ್ಲಾ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ ವಿನಾಯಿತಿ ಪರವಾನಿಗೆ ಪಡೆದು ಖರೀದಿಸಿದೆ. ಈ ಪ್ರಕರಣ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಅಂಗಳದಲ್ಲಿದೆ. ಹೀಗಾಗಿಯೇ ಕೊಪ್ಪಳ ಜಿಲ್ಲಾಧಿಕಾರಿ 2020ರ ಜನವರಿ 20ರಂದು ಎಂಎಸ್‌ಪಿಎಲ್‌ಗೆ ನೋಟೀಸ್‌ ನೀಡಿ  ಕೈತೊಳೆದುಕೊಂಡಿದ್ದಾರೆ. 

‘ನಿಮ್ಮ ಕಂಪನಿಗೆ ಹಾಗೂ ನಿಮ್ಮ ಒಡೆತನದ ಇತರೆ ಕಂಪನಿಗಳಿಗೆ ವಿನಾಯಿತಿ ಪರವಾನಿಗೆ ನೀಡಿ ಸುಮಾರು 9 ವರ್ಷ ಗತಿಸಿದರೂ ನೀವು  ವಿನಾಯಿತಿ ಪಡೆದ ಜಮೀನುಗಳನ್ನು ಕೈಗಾರಿಕೆ ಉದ್ದೇಶಕ್ಕಾಗಿ ಬಳಕೆ ಮಾಡದೇ  ಪಡಾ ಬಿಟ್ಟಿರುತ್ತೀರಿ. ಆದ್ದರಿಂದ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(2)  (1-ಬಿ)  ಅನ್ವಯ ವಿನಾಯಿತಿ ಆದೇಶ ರದ್ದುಗೊಳಿಸಿ ಯಾವುದೇ ಪರಿಹಾರ ಧನ ಪಾವತಿಸದೇ ಸರ್ಕಾರಕ್ಕೆ ಏಕೆ  ಮುಟ್ಟುಗೋಲು  ಹಾಕಿಕೊಳ್ಳಬಾರದು,’ ಎಂದು ನೋಟೀಸ್‌ನಲ್ಲಿ ತಿಳಿಸಿದೆ. 

ಬಲ್ದೋಟಾ ಏರ್‌ಪೋರ್ಟ್‌ಗೆ ಬಸಾಪುರ ಗ್ರಾಮದ  ಸರ್ವೆ ನಂಬರ್‌ 28 ಸೇರಿದಂತೆ ಒಟ್ಟು 11 ಸರ್ವೆ ನಂಬರ್‌ಗಳಲ್ಲಿ 31 ಎಕರೆ 14 ಗುಂಟೆ ವಿಸ್ತೀರ್ಣ  ಜಮೀನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109(ಐ) ಅಡಿ ಏರ್‌ಸ್ಟ್ರಿಪ್‌ ಹಾಗೂ ಇನ್ನಿತರ ಸೌಕರ್ಯಗಳಿಗೆ 2006ರ ಏಪ್ರಿಲ್‌ 26ರಂದೇ ವಿನಾಯಿತಿ ಪರವಾನಿಗೆ ನೀಡಿ  ಸರ್ಕಾರ ಆದೇಶಿಸಿದೆ. ಇದಾದ 3 ವರ್ಷಗಳ ನಂತರ 2009ರ ಫೆ.5ರನ್ವಯ ಕೃಷಿ ವಲಯದಿಂದ  ಸಾರಿಗೆ ಸಂಪರ್ಕದ  ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆಗೆ ಆದೇಶ ಹೊರಡಿಸಿದೆ. 

ಆದರೆ ಈ ಜಮೀನುಗಳ ವಿನ್ಯಾಸ ನಕ್ಷೆಗೆ ಬಲ್ದೋಟಾ ಕಂಪನಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆಯನ್ನು ಪಡೆದುಕೊಂಡಿಲ್ಲ. ಹಾಗೆಯೇ 11 ಎಕರೆ  24  ಗುಂಟೆ ವಿಸ್ತೀರ್ಣದ ಜಮೀನಿಗೆ  ಸಂಬಂಧಿಸಿದಂತೆ ಭೂ ಮಾಲೀಕರಿಗೆ ಪರಿಹಾರ  ಧನ ಪಾವತಿಸಿಲ್ಲ ಎಂಬುದು  ದಾಖಲೆಯಿಂದ ಗೊತ್ತಾಗಿದೆ.  ಬಹುತೇಕ ಉದ್ದಿಮೆದಾರರು, ಪ್ರತಿಷ್ಠಿತ  ಕಂಪನಿಗಳು ನಿಗದಿತ ಉದ್ದೇಶಕ್ಕಾಗಿ ಜಮೀನು ಬಳಕೆ  ಮಾಡದೇ ಭೂ ಸುಧಾರಣೆ ಕಾಯ್ದೆಯನ್ನು 10  ವರ್ಷಗಳಿಂದಲೂ ಉಲ್ಲಂಘಿಸುತ್ತಿವೆ. ಇಂತಹ ಕಂಪನಿಗಳಿಗೆ ಯಾವುದೇ ಪರಿಹಾರ ಧನ ನೀಡದೆಯೇ ಭೂ ಸ್ವಾಧೀನಪಡಿಸಿಕೊಳ್ಳಲು ಹಲವು ವರ್ಷಗಳ ಹಿಂದೆಯೇ ಕಾಯ್ದೆ ರೂಪಿಸಲಾಗಿದೆ. ಆದರೆ ಜಿಲ್ಲಾಡಳಿತಗಳು ಕೇವಲ ನೋಟೀಸ್‌ ಕೊಟ್ಟು ಕೈತೊಳೆದುಕೊಳ್ಳುತ್ತಿವೆ.

109ನೇ ಪ್ರಕರಣದ ಅಡಿಯಲ್ಲಿ ವಿನಾಯಿತಿಯನ್ನು ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕಾಗಿ ಅಂಥ ಭೂಮಿಯನ್ನು ಬಳಸಬಹುದು ಎಂದು ಅನುಮತಿಸಲಾಗಿದೆಯೋ ಆ ಉದ್ದೇಶಕ್ಕಾಗಿ 7 ವರ್ಷಗಳ ಅವಧಿಗಾಗಿ ಬಳಸಿದ ತರುವಾಯ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವುದಕ್ಕಾಗಿ ಹಿಂದೆ ಅನುಮತಿಸಲಾದ ಅದೇ ಉದ್ದೇಶಕ್ಕಾಗಿ ಇತರ ಕಂಪನಿ ಅಥವಾ ಸಂಸ್ಥೆಗೆ ಮಾರಾಟ ಮಾಡಲು ಅನುಮತಿ ನೀಡಲು ವಿಧೇಯಕದಲ್ಲಿ  ಪ್ರಸ್ತಾಪಿಸಲಾಗಿದೆ. 

ಒಂದು ವೇಳೆ ಈ  ವಿಧೇಯಕಕ್ಕೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದಲ್ಲಿ ಹಲವು ಕಂಪನಿಗಳು ಈಗಾಗಲೇ ಕೈಗಾರಿಕೆ ಉದ್ದೇಶಕ್ಕಾಗಿ ಖರೀದಿಸಿ ಪಡಾ ಬಿಟ್ಟಿರುವ ಜಮೀನನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ರಹದಾರಿ ನಿರ್ಮಿಸಿದಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.  

Hot this week

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ...

30 ವರ್ಷಗಳ ನಂತರ ಎಲ್‌ಎಸಿ ಪ್ರಕರಣ ದಾಖಲು; ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ಆರ್ಥಿಕ ಹೊರೆ

ಬೆಂಗಳೂರು; ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ...
Please Scan to make Your Contribution

Topics

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ...

30 ವರ್ಷಗಳ ನಂತರ ಎಲ್‌ಎಸಿ ಪ್ರಕರಣ ದಾಖಲು; ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ಆರ್ಥಿಕ ಹೊರೆ

ಬೆಂಗಳೂರು; ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ...

ಶೌಚಾಲಯ, ಸ್ನಾನದ ಗೃಹ, ಮೂತ್ರಾಲಯ ಶುಲ್ಕ ವಸೂಲಿ; ಸುಲಭ್‌ ಇಂಟರ್ ನ್ಯಾಷನಲ್‌, ಬಿಬಿಎಂಪಿ ಖಾತೆಗೆ ಹಣ ಜಮೆ ಮಾಡಿದೆಯೇ, ನುಂಗಿದೆಯೇ?

ಬೆಂಗಳೂರು;  ಸುಲಭ್ ಶೌಚಾಲಯ ಮತ್ತು ಸಾರ್ವಜನಿಕ ಮೂತ್ರಾಲಯ  ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು...

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ...

Related Articles

Popular Categories

error: Content is protected !!