ಮೈತ್ರಿ ಸರ್ಕಾರದ ಕಾಮಗಾರಿಗಳಿಗೆ ತಡೆ; ಸದನದಲ್ಲಿ ಒಪ್ಪಿಕೊಂಡ ಬಿಜೆಪಿ ಸರ್ಕಾರ

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಂಜೂರಾಗಿದ್ದ ಒಟ್ಟು ಮೊತ್ತದ ಪೈಕಿ 943.48 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ತಡೆಯೊಡ್ಡಿತ್ತು ಎಂದು ಕೆ ಎಸ್‌ ಈಶ್ವರಪ್ಪ ಅವರು ಸದನದಲ್ಲಿ ಲಿಖಿತ ಉತ್ತರ ನೀಡುವ ಮೂಲಕ ಒಪ್ಪಿಕೊಂಡಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಜುಲೈ 2019ರ ನಂತರ ಮಂಜೂರಾಗಿದ್ದ ಕಾಮಗಾರಿಗಳಿಗೆ ತಡೆಯೊಡ್ಡಿದ್ದ ಬಿಜೆಪಿ ಸರ್ಕಾರದ ಧೋರಣೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ರಾಜಕೀಯ ದ್ವೇಷ ಸಾಧಿಸುವ ಭಾಗವಾಗಿಯೇ ಮೈತ್ರಿ ಸರ್ಕಾರ ಅನುಮೋದಿಸಿದ್ದ ಕಾಮಗಾರಿಗಳಿಗೆ ತಡೆಯೊಡ್ಡಿತ್ತು ಎಂಬ ಆರೋಪಕ್ಕೂ ಯಡಿಯೂರಪ್ಪ ಅವರು ಗುರಿಯಾಗಿದ್ದರು.
ಹಾಸನ ಜಿಲ್ಲೆಗೆ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ ನೀಡಿದ ಒಂದು ತಿಂಗಳ ಬೆನ್ನಲ್ಲೇ ತಡೆಯೊಡ್ಡಿದ್ದ ಕಾಮಗಾರಿಗಳ ಮೊತ್ತದ ವಿವರ ಬಹಿರಂಗಗೊಂಡಿದೆ.

ತಡೆಹಿಡಿಯಲಾದ ಕಾಮಗಾರಿಗಳ ಪೈಕಿ 517.87 ಕೋಟಿ ರು.ಮೊತ್ತದ ಕಾಮಗಾರಿಗಳನ್ನು ಮುಂದುವರೆಸಿದೆ. ಮುಂದುವರೆಸಿರುವ ಕಾಮಗಾರಿಗಳ ಪೈಕಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ಬಾದಾಮಿ ಮತ್ತು ಎಚ್‌ ಡಿ ಕುಮಾರಸ್ವಾಮಿ ಪ್ರತಿನಿಧಿಸಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರ ಉಳಿದ ಎಲ್ಲ  ಕ್ಷೇತ್ರಗಳ ಪೈಕಿ ಸಿಂಹಪಾಲು ಪಡೆದಿರುವುದು ವಿಶೇಷ.  

ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಹಿಂದಿನ ಸಮ್ಮಿಶ್ರ  ಸರ್ಕಾರದ ಅವಧಿಯಲ್ಲಿ ಒಟ್ಟು 20 ಕೋಟಿ ರು.ಮೊತ್ತದ ಕಾಮಗಾರಿಗೆ  ಮಂಜೂರಾತಿ ದೊರೆತ್ತಿತ್ತಾದರೂ ಬಿಡಿಗಾಸು ಬಿಡುಗಡೆಯಾಗಿರಲಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಮಗಾರಿಗೆ ತಡೆಯೊಡ್ಡಿತ್ತಾದರೂ ಪ್ರಥಮ ಹಂತದಲ್ಲೇ ಒಂದೇ ಬಾರಿಗೆ 20 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದು ಲಿಖಿತ ಉತ್ತರದಿಂದ  ತಿಳಿದು ಬಂದಿದೆ. 

ಅದೇ ರೀತಿ ಸಚಿವ ಎಸ್‌ ಟಿ ಸೋಮಶೇಖರ್‌, ಎಂಟಿಬಿ ನಾಗರಾಜ್‌, ಆನಂದ್‌ಸಿಂಗ್‌, ಎನ್‌ ಮಹೇಶ್‌, ಕೆ ಸುಧಾಕರ್‌, ಬಿ ಸಿ ಪಾಟೀಲ್‌, ಎಚ್‌ ನಾಗೇಶ್‌, ನಾರಾಯಣಗೌಡ, ಎಚ್‌ ವಿಶ್ವನಾಥ್‌, ಅರಬೈಲು ಶಿವರಾಮ ಹೆಬ್ಬಾರ್‌ ಪ್ರತಿನಿಧಿಸಿರುವ ಕ್ಷೇತ್ರಗಳಿಗೆ ಅನುಮೋದಿಸಿದ್ದ ಪೂರ್ಣ ಮೊತ್ತವನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರುವುದು ವಿಶೇಷ. 

ಇನ್ನು, ಕಾಂಗ್ರೆಸ್‌ನ ಪ್ರಭಾವಿ ಶಾಸಕರು ಪ್ರತಿನಿಧಿಸಿರುವ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರ ಅನುಮೋದಿಸಿದ್ದ ಮೊತ್ತವನ್ನು ತಡೆಹಿಡಿದಿತ್ತಾದರೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಅತ್ಯಲ್ಪ ದಿನಗಳಲ್ಲೇ ಪೂರ್ಣ ಮೊತ್ತ ಬಿಡುಗಡೆಯಾಗಿದೆ. 

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ದಾಸರಹಳ್ಳಿ ಶಾಸಕ ಆರ್‌  ಮಂಜುನಾಥ್‌, ಚಿಕ್ಕೋಡಿ ಶಾಸಕ ಗಣೇಶ್‌ಪ್ರಕಾಶ್‌ ಹುಕ್ಕೇರಿ, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌, ಅಥಣಿಯ ಮಹಾಂತೇಶ ಕವಟಗಿಮಠ, ಕಂಪ್ಲಿಯ ಜೆ ಎನ್‌ ಗಣೇಶ್‌, ಭಾಲ್ಕಿಯ ಈಶ್ವರ ಖಂಡ್ರೆ, ಹುಮನಾಬಾದ್‌ನ ರಾಜಶೇಖರ್‌ ಪಾಟೀಲ್‌, ಬಸವನ ಬಾಗೇವಾಡಿಯ ಶಿವಾನಂದ ಎಸ್‌ ಪಾಟೀಲ್‌, ಆರ್‌ ಚೌಡರೆಡ್ಡಿ, ಬಾಗೆಪಲ್ಲಿಯ ಎಸ್‌ ಎನ್ ಸುಬ್ಬಾರೆಡ್ಡಿ, ದಾವಣಗೆರೆ ಉತ್ತರ ಕ್ಷೇತ್ರದ  ಎಸ್‌ ಎ ರವೀಂದ್ರನಾಥ್‌, ಶಾಮನೂರು ಶಿವಶಂಕರಪ್ಪ, ಎನ್‌ ಎಚ್‌ ಕೋನರೆಡ್ಡಿ, ಬೇಲೂರಿನ ಕೆ ಎಸ್‌ ಲಿಂಗೇಶ್‌, ಅರಸಿಕೆರೆಯ ಕೆ ಎಂ ಶಿವಲಿಂಗೇಗೌಡ, ಶ್ರವಣಬೆಳಗೊಳದ  ಸಿ  ಎನ್‌  ಬಾಲಕೃಷ್ಣ, ಶ್ರೀನಿವಾಸಪುರ ಕ್ಷೇತ್ರದ ಕೆ ಆರ್‌ ರಮೇಶ್‌ಕುಮಾರ್‌, ಪಾಂಡವಪುರ ಕ್ಷೇತ್ರದ  ಸಿ ಎಸ್‌ ಪುಟ್ಟರಾಜು, ಪಿರಿಯಾಪಟ್ಟಣದ ಕೆ ಮಹಾದೇವ್‌, ಭದ್ರಾವತಿ ಕ್ಷೇತ್ರದ ಬಿ ಕೆ ಸಂಗಮೇಶ್ವರ್‌, ತುಮಕೂರು ಗ್ರಾಮಾಂತರದ ಡಿ ಸಿ ಗೌರಿಶಂಕರ್‌, ಗುಬ್ಬಿ ಕ್ಷೇತ್ರದ  ಎಸ್‌ ಆರ್‌ ಶ್ರೀನಿವಾಸ್‌, ಎಸ್‌ ಎಲ್ ಬೋಜೇಗೌಡ, ಹಾಲಾಡಿ ಶ್ರೀನಿವಾಸಶೆಟ್ಟಿ ಪ್ರತಿನಿಧಿಸುವ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರ ಅನುಮೋದಿಸಿದ್ದ  ಮೊತ್ತದ ಪೈಕಿ ನಯಾಪೈಸೆಯನ್ನೂ  ಬಿಡುಗಡೆ ಮಾಡದಿರುವುದು ದಾಖಲೆಯಿಂದ  ತಿಳಿದು ಬಂದಿದೆ.

ಅನುದಾನ ಬಿಡುಗಡೆ ಮಾಡುವ ಸಂಬಂಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಅನುದಾನ ಬಿಡುಗಡೆ ಮಾಡಿರಲಿಲ್ಲ. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಮಧ್ಯ ಪ್ರವೇಶ ಮಾಡಿದ್ದರೂ ಸಹ ಅನುದಾನ ಬಿಡುಗಡೆ ಮಾಡಿರಲಿಲ್ಲ.   

ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ, ಆಡಳಿತಾತ್ಮಕ ಮಂಜೂರಾತಿ ನೀಡಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳಿಗೂ ತಡೆ ನೀಡಿ ರಾಜಕೀಯ ದ್ವೇಷ ಸಾಧನೆ ಮಾಡಲಾಗುತ್ತಿದೆ. ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿವೃದ್ಧಿ ವಿಷಯದಲ್ಲಿ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಲೇ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ತಡೆ ನೀಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ,’ ಎಂದು ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.  

the fil favicon

SUPPORT THE FILE

Latest News

Related Posts