ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯದರ್ಶಿ ಹಿರಿಯ ಐಎಫ್‌ಎಸ್ ಅಧಿಕಾರಿ ಗಿರೀಶ್ ಸಿ ಹೊಸೂರ್ ಅವರ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಅನಧಿಕೃತವಾಗಿ ಕಾರ್ಯನಿರ್ವಹಿಸಿದ್ದ ಗಂಭೀರ ಪ್ರಕರಣ ಸಂಬಂಧ ದೂರು ಸಲ್ಲಿಕೆಯಾಗಿ ಹಲವು ದಿನಗಳು ಕಳೆದರೂ ವಿಧಾನಸಭೆ ಸಭಾಧ್ಯಕ್ಷರು, ಸಚಿವಾಲಯದ ಕಾರ್ಯದರ್ಶಿ ಅವರು ಇದುವರೆಗೂ ಕ್ರಮಕೈಗೊಂಡಿಲ್ಲ.
ಸಿಎಂ ಕಾರ್ಯದರ್ಶಿ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸಿರುವ ಬಗ್ಗೆ ದಾಖಲೆಗಳು ಮತ್ತು ಈ ಸಂಬಂಧ ಲಿಖಿತ ದೂರು ಸಲ್ಲಿಕೆಯಾಗಿದ್ದರೂ ಸ್ಪೀಕರ್ ಮತ್ತು ಸಚಿವಾಲಯದ ಕಾರ್ಯದರ್ಶಿ ಅವರು ಅಧೀನ ಕಾರ್ಯದರ್ಶಿ ಪ್ರಶಾಂತ್‌ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಭೀಮನಗೌಡ ಪರಗೊಂಡ ಅವರು ಸಮೇತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನೋಂದಾಯಿತ ಅಂಚೆ ಮೂಲಕ ದೂರು ಸಲ್ಲಿಸಿದ್ದರು. ಭೀಮನಗೌಡ ಪರಗೊಂಡ ಅವರು ಖುದ್ದು ನೀಡಿದ್ದ ದೂರನ್ನು ಸಭಾಧ್ಯಕ್ಷರ ಕಚೇರಿ ಮತ್ತು ಕಾರ್ಯದರ್ಶಿ ಕಚೇರಿ ಸಿಬ್ಬಂದಿ ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ದೂರುದಾರ ಪರಗೊಂಡ ಅವರು ನೋಂದಾಯಿತ ಅಂಚೆ ಮೂಲಕ ದೂರು ದಾಖಲಿಸಿದ್ದರು.
ದೂರಿನ ಮೇಲೆ ಕೈಗೊಂಡ ಕ್ರಮದ ಕುರಿತು ‘ದಿ ಫೈಲ್’ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಲಾಯಿತಾದರೂ ‘ದೂರು ಬಂದಿದೆ,’ ಎಂದಷ್ಟೇ ಪ್ರತಿಕ್ರಿಯಿಸಿ ಕೈಗೊಂಡ ಕ್ರಮದ ಕುರಿತು ಯಾವುದೇ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು.
ದೂರಿನಲ್ಲೇನಿದೆ?
ಕರ್ನಾಟಕ ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಪಿ ಪ್ರಶಾಂತಕುಮಾರ್ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುವ ಮೂಲಕ ಐಪಿಸಿ 120(ಬಿ), 166, 170,177, 182, 199, 202, 203, 406, 408, 409, 468, 477 ಸಹ ಕಲಂ 34 ಅಡಿಯಲ್ಲಿ ಗಂಭೀರವಾದ ಅಪರಾಧ ಎಸಗಿದ್ದಾರೆ. ಆರೋಪಿತರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು. ಕರ್ನಾಟಕ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಬೇಕಾಯ್ದೆ ಶೀರ ರೀತಿಯಿಂದ ಅಧಿಕಾರ ಚಲಾಯಿಸಿ ಕಾರ್ಯಾಲಯ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಿಕ್ಷೆಗೆ ಒಳಪಡಿಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಕರ್ನಾಟಕ ವಿಧಾನಸಭೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ ಪಿ ಪ್ರಶಾಂತ್‌ಕುಮಾರ್ ಅವರಿಗೆ 2020ರ ಮೇ 29ರಂದು ಅಧೀನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ದೊರೆತಿತ್ತು. ಇದಾದ ನಂತರ ಎಂ ಪಿ ಪ್ರಶಾಂತ್‌ಕುಮಾರ್ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಪ್ರಶಾಂತ್‌ಕುಮಾರ್ ಅವರು ಅನ್ಯ ಕರ್ತವ್ಯ ಮತ್ತು ನಿಯೋಜನೆ ಮೇಲೆ ತೆರಳಿರುವುದಿಲ್ಲಎಂದು ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಬಿ ಎಂ ಶಂಭು ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದರು.
ಅಂಚೆ ಮೂಲಕ ದೂರು ಸಲ್ಲಿಸಿದ್ದೇನೆ.ಅಧಿಕಾರಿ ವಿರುದ್ಧ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೂ ಕ್ರಮ ಕೈಗೊಳ್ಳದ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಮತ್ತು ಸಭಾಧ್ಯಕ್ಷರ ನಡೆ ನೋಡಿದರೆ ಕಾನೂನು ಮುರಿಯುವವರನ್ನು ರಕ್ಷಿಸುವ ಉದ್ದೇಶ ಇದ್ದಂತೆ ಕಾಣುತ್ತಿದೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿಯೂ ದೂರು ದಾಖಲಿಸುತ್ತೇನೆ.
ಭೀಮನಗೌಡ ಪರಗೊಂಡ, ದೂರುದಾರ ವಕೀಲ
ಪ್ರಶಾಂತ್‌ಕುಮಾರ್ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಎಸ್ ಹೊಸೂರ್ ಅವರ ಕಚೇರಿಗೆ ಅನ್ಯ ಕರ್ತವ್ಯ/ ನಿಯೋಜನೆ ಮೇಲೆ ತೆರಳದಿದ್ದರೂ ಅದೇ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವುದು ಮತ್ತು ಅವರ ಆಪ್ತ ಕಾರ್ಯದರ್ಶಿ ಎಂದು ಸಹಿ ಮಾಡಿ ಟಿಪ್ಪಣಿಗಳನ್ನು ಹೊರಡಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.
ಮುಖ್ಯಮಂತ್ರಿ ಕಾರ್ಯದರ್ಶಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಾಜರಾತಿ ದೃಢೀಕರಣ, ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಸರ್ಕಾರಿ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವುದು ಮತ್ತು ಅನ್ಯ ಕರ್ತವ್ಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಇತರೆ ನೌಕರರಿಗೆ ಹಾಜರಾತಿ ಪ್ರಮಾಣ ಪತ್ರಕ್ಕೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿಯೇ ಸಹಿ ಮಾಡಿ ದೃಢೀಕರಿಸಿದ್ದಾರೆ. ಅಲ್ಲದೆ ಪ್ರಶಾಂತ್‌ಕುಮಾರ್ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಕಚೇರಿಯ ರವಾನೆ ಪುಸ್ತಕದಲ್ಲಿ ಒಎಸ್‌ಡಿ ಎಂದೇ ಸಹಿ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿತ್ತು.