ಬೆಂಗಳೂರು; ಮುಖ್ಯಮಂತ್ರಿಗಳ ಸಿ. ಡಿ. ಕುರಿತಂತೆ ಶಾಸಕರನ್ನೊಳಗೊಂಡಂತೆ ಕೇಳಿ ಬಂದಿದ್ದ ಆರೋಪ, ಪ್ರತ್ಯಾರೋಪ ಹೇಳಿಕೆಗಳು ಮತ್ತು ಸಿ.ಡಿ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ನೀಡಿದ್ದ ಸಾರ್ವಜನಿಕ ಹೇಳಿಕೆಯೂ ಸರ್ಕಾರದ ಗಮನಕ್ಕೇ ಬಂದಿಲ್ಲ!
ಹೀಗೆಂದು ಖುದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಧಾನಪರಿಷತ್‌ಗೆ ಲಿಖಿತ ಉತ್ತರ ಒದಗಿಸಿದ್ದಾರೆ. ಸಿ ಡಿ ಕುರಿತಾದ ಆರೋಪ-ಪ್ರತ್ಯಾರೋಪ ಹೇಳಿಕೆಗಳು ಸರ್ಕಾರದ ಗಮನಕ್ಕೆ ಬರದ ಕಾರಣ ತನಿಖೆ ಮಾಡುವ ಅಥವಾ ಆರೋಪಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೂ ಇಲ್ಲಿ ಉದ್ಭವಿಸುವುದಿಲ್ಲ ಎಂದೂ ಉತ್ತರ ನೀಡಿದ್ದಾರೆ.
ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿ ಡಿ ಬಹಿರಂಗವಾಗಿತ್ತು. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರು ದೂರು ದಾಖಲಿಸಿದ್ದರು. ಒಂದೇ ದಿನದ ಅಂತರದಲ್ಲಿ ದೂರನ್ನು ಹಿಂಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಡಾ ಕೆ ಸುಧಾಕರ್ ಸೇರಿದಂತೆ ಇನ್ನುಳಿದ 6 ಮಂದಿ ಸಚಿವರು ತಮ್ಮ ವಿರುದ್ಧ ಸುಳ್ಳು ಹಾಗೂ ಆಧಾರರಹಿತವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನೂ ತಂದಿದ್ದರು. ಸಿ ಡಿ ವಿಚಾರವಾಗಿ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೊಳಗಾಗುತ್ತಿದ್ದರೂ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಯಡಿಯೂರಪ್ಪ ಅವರು ನೀಡಿರುವ ಉತ್ತರವು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ವಿಧಾನಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಯಡಿಯೂರಪ್ಪ ಅವರು ರಾಜ್ಯದ ಜನರ ಪ್ರತಿನಿಧಿಯಾಗಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳನ್ನು ಸಿ.ಡಿ ವಿಚಾರವಾಗಿ ಬ್ಲಾಕ್‌ಮೇಲ್ ಮಾಡುವ ನಿಟ್ಟಿನಲ್ಲಿ ಅಥವಾ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡುವ ಹುನ್ನಾರವಿದ್ದರೆ ಸತ್ಯಾಸತ್ಯತೆಯನ್ನು ಹೊರಗೆ ತರಲು ಸರ್ಕಾರವು ತನಿಖೆಗೆ ಆದೇಶಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದರು.
ಅಲ್ಲದೆ ಆರೋಪ ಮಾಡಿದವರು ಸಾಕ್ಷಿ ನೀಡಿದ್ದಾರೆಯೇ ಇಲ್ಲದಿದ್ದರೆ ಅವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗವುದೇ ಎಂದು ಕೇಳಿದ್ದ ಪ್ರಶ್ನೆಗೂ ‘ಉದ್ಭವಿಸುವುದಿಲ್ಲ’ ಎಂದು ಯಡಿಯೂರಪ್ಪ ಅವರು ಉತ್ತರಿಸಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಿಡಿ ಬಾಂಬ್ ಸಿಡಿಸಿದ್ದ ಬಿಜೆಪಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ನೋಡಲು ಆಗದಂತಹ ಯಡಿಯೂರಪ್ಪ ಸಿಡಿಗಳೂ ಇವೆ ಎನ್ನುವ ಮೂಲಕ ಮತ್ತೊಂದು ಬಾಂಬ್ ಸಿಡಿಸಿದ್ದರು.
‘ನಾನು ನೇರವಾಗಿ ಮುಖ್ಯಮಂತ್ರಿಗಳ ಬಗ್ಗೆಯೇ ಮಾತನಾಡಿದ್ದೇನೆ. ಯಡಿಯೂರಪ್ಪನವರ ಸಿಡಿಗಳಲ್ಲೇ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ. ಕಾಲ ಕ್ರಮೇಣದಲ್ಲಿ ಈ ಸಿಡಿಗಳು ಬಹಿರಂಗ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಕ್ತ ತನಿಖೆಯಾಗಬೇಕಾದರೆ ಸಿಬಿಐ ತನಿಖೆಗೆ ಕೊಡಬೇಕು,’ ಎಂದು ಯತ್ನಾಳ್ ಹೇಳಿದ್ದರು.
‘ಸಿ ಡಿ ತೋರಿಸಿ ಹೆದರಿಸಿ ಮಂತ್ರಿಯಾದವರ ಬಗ್ಗೆ ನಾನು ಮಾತನಾಡಿದ್ದು ನಿಜ. ಸಿಡಿಗಳಲ್ಲಿ ಭ್ರಷ್ಟಾಚಾರ ಆರೋಪದ ಸಿಡಿಗಳು ಮಾತ್ರವಲ್ಲ, ನೋಡಲು ಆಗದಂತಹ ಸಿಡಿಗಳೂ ಇವೆ. ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಯತ್ನಾಳ್ ಅವರು ಆಗ್ರಹಿಸಿದ್ದರು. ಕೆಲ ತಿಂಗಳ ಹಿಂದೆ 3 ಜನ ನನ್ನ ಹತ್ತಿರ ಬಂದು ಕೆಲ ಸಿಡಿಗಳನ್ನು ತೋರಿಸಿದರು. ನಾನು ಸಿಡಿಗಳನ್ನು ಇಟ್ಟುಕೊಂಡು ಆಟವಾಡುವ ವ್ಯಕ್ತಿ ನಾನಲ್ಲ. ಅಂತಹ ಆಟ ಆಡಿದ್ದರೆ ಎಂದೋ ಡಿಸಿಎಂ ಆಗುತ್ತಿದ್ದೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದನ್ನು ಸ್ಮರಿಸಬಹುದು.
ಇದೊಂದು ಲಂಪಟ ಸಂಪುಟ. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಎನ್ನುವುದೇ ಇಲ್ಲ. ಹಾದಿಬೀದಿಯಲ್ಲಿ ಜಗಜ್ಜಾಹೀರಾಗಿರುವ ಸಾರ್ವಜನಿಕವಾಗಿ ಬಹಿರಂಗವಾಗಿರುವ ಪತ್ರಿಕೆಗಳಲ್ಲಿ ಪುಟಗಟ್ಟಲೇ ಬರೆಯಲ್ಪಟ್ಟಿರುವ, ನ್ಯೂಸ್ ಚಾನಲ್‌ಗಳಲ್ಲಿ ದಿನಗಟ್ಟಲೇ ಚರ್ಚಿಸಲ್ಪಟ್ಟಿರುವ, ಆಡಳಿತ ಪಕ್ಷದ ಶಾಸಕರೇ ಸಾರ್ವಜನಿಕವಾಗಿ ಹೇಳಿರುವ ವಿಷಯ ಸರ್ಕಾರದ ಗಮನಕ್ಕೇ ಬಂದಿಲ್ಲ ಎನ್ನುವುದು ನಾಚಿಕೆಗೇಡಿತನ ಪರಮಾವಧಿ. ಇಷ್ಟೊಂದು ಲಜ್ಜೆಗೆಟ್ಟ ಸರ್ಕಾರವನ್ನು ಕರ್ನಾಟಕ ಹಿಂದೆಂದೂ ಕಂಡಿರಲಿಲ್ಲ. ಪ್ರಶ್ನೆ ಕೇಳಿದ ಶಾಸಕರು ನಿಜಕ್ಕೂ ಗಂಭೀರವಾಗಿದ್ದರೆ ತಮಗೆ ಸುಳ್ಳು ಮಾಹಿತಿ ನೀಡಿರುವ ತಮ್ಮ ಹಕ್ಕಿಗೆ ಚ್ಯುತಿ ತಂದಿರುವ ಮುಖ್ಯಮಂತ್ರಿ ವಿರುದ್ಧವೇ ಹಕ್ಕು ಚ್ಯುತಿ ಮಂಡಿಸಬೇಕು.
ರವಿ ಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ
ಡಿ ಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್ ಬಳಿಯೂ ಹಲವು ಮಹತ್ವದ ಸಿಡಿಗಳಿವೆ. ಯಡಿಯೂರಪ್ಪ-ವಿಜಯೇಂದ್ರ ಜತೆ ಕಾಂಗ್ರೆಸ್ ನಾಯಕರು ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಇಲ್ಲ ಎನ್ನುವುದಾದರೆ ಸಿಡಿ ರಿಲೀಸ್ ಮಾಡಿ ನಿಜವಾದ ಪ್ರತಿಪಕ್ಷ ಎಂಬುದನ್ನು ಸಾಬೀತು ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಯತ್ನಾಳ್ ಅವರು ಸವಾಲು ಹಾಕಿದ್ದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ನನ್ನ ಬೆಂಬಲ ಕೋರಿದ್ದ ಮೂವರು ಇದೀಗ ಯಡಿಯೂರಪ್ಪ ಅವರನ್ನು ಹೆದರಿಸಿ ಸಿ. ಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ, ಹಣ ನೀಡಿ ಸಚಿವ ಸ್ಥಾನ ಪಡೆದುಕೊಂಡು ಸಂಪುಟ ಸೇರಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು.
ಆದರೆ ಆ ಸಿ.ಡಿ ಯಾರದ್ದು..? ಅದರಲ್ಲಿ ಏನಿದೆ..? ಯಾರ ಬಳಿ ಇದೆ..? ಎನ್ನುವುದು ಮಾತ್ರ ಸ್ಪಷ್ಟವಾಗಿ ಹೇಳಿರಲಿಲ್ಲ. ಇದರಿಂದ ಈ ಸಿಡಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.