ಆಡಳಿತ ಅವ್ಯವಸ್ಥೆ ಪ್ರಶ್ನಿಸುವುದು ಅಪರಾಧವೇ?; ಅಭಿಯಾನಕ್ಕೆ ಬೆದರಿದ ಅಧಿಕಾರಿಶಾಹಿ

ಬೆಂಗಳೂರು: ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರ, ತಹಶೀಲ್ದಾರ್‌ಗಳ ಕರ್ತವ್ಯಲೋಪ, ದುರುಪಯೋಗ, ಕಚೇರಿ ಆವರಣದಲ್ಲಿ ಹೆಚ್ಚಿರುವ ಮಧ್ಯವರ್ತಿಗಳ ಹಾವಳಿ ಸೇರಿದಂತೆ ಇನ್ನಿತರೆ ಲೋಪಗಳ ವಿರುದ್ಧ ಪ್ರತಿಭಟಿಸುತ್ತಲೇ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಅವರ ತಂಡ ರಾಜ್ಯಾದ್ಯಂತ ಅರಿವು ಮೂಡಿಸುವ ಅಭಿಯಾನವನ್ನು ನಿರಂತರವಾಗಿ ಚಾಲನೆಯಲ್ಲಿಟ್ಟಿದೆ.

ಈ ಅಭಿಯಾನಕ್ಕೆ ವ್ಯಕ್ತವಾಗಿದ್ದ ಸಾರ್ವಜನಿಕರ ವ್ಯಾಪಕ ಬೆಂಬಲ ಕಂಡ ಅಧಿಕಾರಶಾಹಿ ಸಹವಾಗಿಯೇ ಬೆದರಿದೆ. ಇದರ ಭಾಗವಾಗಿಯೇ ರವಿಕೃಷ್ಣಾರೆಡ್ಡಿ, ಲಿಂಗೇಗೌಡ ಸೇರಿದಂತೆ ಮತ್ತಿತರರ ವಿರುದ್ಧ ನಾಗಮಂಗಲ ತಹಶೀಲ್ದಾರ್‌ ಮತ್ತು ಸ್ಥಳೀಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದರು. ಬಂಧನವಾದ ಕೆಲವೇ ಗಂಟೆಗಳಲ್ಲಿ ನ್ಯಾಯಾಧೀಶರು ಮಧ್ಯಂತರ ಜಾಮೀನು ನೀಡಿದ್ದಾರೆ.

ಕಳೆದ 10 ದಿನದ ಹಿಂದೆ ತಿಪಟೂರಿನಿಂದ ಆರಂಭವಾಗಿದ್ದ ಈ ಅಭಿಯಾನವು ನಾಗಮಂಗಲದ ತಹಶೀಲ್ದಾರ್‌ ಕಚೇರಿ ಆವರಣಕ್ಕೂ ತಲುಪಿತ್ತು. ರವಿಕೃಷ್ಣಾರೆಡ್ಡಿ ಮತ್ತು ಅವರ ತಂಡ ಹೋದಲೆಲ್ಲಾ ಸಾರ್ವಜನಿಕರು ಸುತ್ತುವರೆಯುತ್ತಿದ್ದರು. ಸಕಾಲದಲ್ಲಿ ದೊರೆಯಬೇಕಿದ್ದ ಸರ್ಕಾರದ ಸೇವೆ, ಸೌಲಭ್ಯಗಳು ಹೇಗೆಲ್ಲಾ ವಿಳಂಬವಾಗಿದೆ ಎಂದು ಕಚೇರಿ ಆವರಣದಲ್ಲಿದ್ದ ನಾಗರಿಕರು ವಿವರಿಸುತ್ತಿದ್ದರು.

ಡಿ ಗ್ರೂಪ್‌ನಿಂದ ಕೆಎಎಸ್‌ ಅಧಿಕಾರಿವರೆಗೂ ಹಬ್ಬಿರುವ ಭ್ರಷ್ಟಾಚಾರದ ಜಾಲವನ್ನು ಬೆನ್ನೆತ್ತಿ ನೇರವಾಗಿ ತಹಶೀಲ್ದಾರ್‌ ಅವರ ಗಮನಕ್ಕೆ ತರುವ ಮೂಲಕ ಸಕಾಲದಲ್ಲಿ ಸೇವೆ ಒದಗಿಸಲು ರವಿಕೃಷ್ಣಾರೆಡ್ಡಿ ಮತ್ತು ಅಭಿಯಾನದ ಸದಸ್ಯರು ಮನವಿ ಮಾಡುತ್ತಿದ್ದ ರೀತಿಯೂ ಅಧಿಕಾರಿಗಳ ಕರ್ತವ್ಯಕ್ಕೆ ಎಲ್ಲಿಯೂ ಅಡ್ಡಿಯುಂಟು ಮಾಡಿಲ್ಲ. ಪ್ರತಿ ಕಚೇರಿಗೂ ತೆರಳುವ ಅಭಿಯಾನದ ತಂಡವು ವಿಡಿಯೋ ಕೂಡ ಮಾಡುತ್ತಿದೆ. ಅಧಿಕಾರಿಗಳನ್ನು ಎಲ್ಲಿಯೂ ಬೆದರಿಸದೇ ಅವರಿಗೆ ತಿಳಿವಳಿಕೆ ಮೂಡಿಸುತ್ತಿದ್ದ ತಂಡವು ಲಂಚದ ಹಣವನ್ನು ಕಕ್ಕಿಸುತ್ತಿರುವ ದೃಶ್ಯವೂ ಸಾರ್ವಜನಿಕ ವಲಯದಲ್ಲಿದೆ. ಒಂದು ವೇಳೆ ಅಭಿಯಾನದ ತಂಡವು ಸಿಟ್ಟಿಗೆದ್ದಿತ್ತು ಎಂದರೆ ಅದು ಜನಾಕ್ರೋಶದ ಪ್ರತೀಕವಲ್ಲದೇ ಮತ್ತೇನಿಲ್ಲ.

ಆದರೆ ನಾಗಮಂಗಲದ ತಹಶೀಲ್ದಾರ್‌ ಮತ್ತು ಸ್ಥಳೀಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರಿಗೆ ಮಾತ್ರ ಈ ಅಭಿಯಾನವು ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಯಂತೆ ಕಂಡಿತ್ತು. ಎಲ್ಲಾ ತಹಶೀಲ್ದಾರ್‌ ಕಚೇರಿಗಳಲ್ಲಿ ಇರುವಂತೆಯೇ ನಾಗಮಂಗಲದ ಕಚೇರಿಯಲ್ಲಿಯೂ ವಿಪರೀತವಾಗಿದ್ದ ಭ್ರಷ್ಟಾಚಾರ, ಕರ್ತವ್ಯಲೋಪ, ಮಧ್ಯವರ್ತಿಗಳ ಹಾವಳಿಯು ಅಲ್ಲಿನ ಆಡಳಿತ ವ್ಯವಸ್ಥೆಯನ್ನೂ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿತ್ತು. ಇದನ್ನು ಪ್ರಶ್ನಿಸಿದ್ದೇ ತಡ ತಹಶೀಲ್ದಾರ್‌ ಸೇರಿದಂತೆ ಇಡೀ ಅಧಿಕಾರಿಶಾಹಿ ಅಭಿಯಾನದ ವಿರುದ್ಧವೇ ತಿರುಗಿಬಿದ್ದಿತು. ಅಭಿಯಾನವು ಸರಿಯಾದ ದಾರಿಯಲ್ಲಿ ಸಾಗುತ್ತಿದೇ ಎಂಬುದೇ ಇದರ ಅರ್ಥ.

ಕಂದಾಯ ಇಲಾಖೆಯನ್ನು ಭೂಮಾಫಿಯಾ ನಿಯಂತ್ರಿಸುತ್ತಿದೆ, ಇದನ್ನು ತಹಬದಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಮೊನ್ನೆಯಷ್ಟೇ ಸಚಿವ ಆರ್‌ ಅಶೋಕ್‌ ಅವರು ವಿಧಾನಸಭೆ ಅಧಿವೇಶನದಲ್ಲಿ ಅಸಹಾಯಕರಾಗಿ ಕೈಚೆಲ್ಲಿದ್ದರು. ಒಬ್ಬ ಸಚಿವ ಮಾಫಿಯಾ ಎನ್ನುವ ಪದವನ್ನೂ ಬಳಸಿದ್ದಾರೆಂದರೆ ತಳಮಟ್ಟದ ತಹಶೀಲ್ದಾರ್‌ ಕಚೇರಿಯೂ ಮೊದಲ್ಗೊಂಡು ಕಂದಾಯ ಇಲಾಖೆಯ ಸ್ಥಿತಿ ಹೇಗಿರಬೇಡ ಎಂಬುದು ಊಹೆಗೂ ನಿಲುಕಲಾರದ ಸಂಗತಿ.
ಸಚಿವಾಲಯದ ಮಟ್ಟದಲ್ಲಿ ಮಾಫಿಯಾ, ಸ್ಥಳೀಯ ತಹಶೀಲ್ದಾರ್‌ ಕಚೇರಿಗಳ ವ್ಯಾಪ್ತಿಯಲ್ಲಿ ಮಧ್ಯವರ್ತಿಗಳ ಹಾವಳಿ ಎರಡೂ ಒಂದೇ ತರಹದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಪಿಂಚಣಿ, ಮಾಸಾಶನ ಸೇರಿದಂತೆ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳ ಅನುದಾನವನ್ನೂ ಕಬಳಿಸುತ್ತಿರುವ ಅಧಿಕಾರಿಶಾಹಿ ಮತ್ತು ಮಧ್ಯವರ್ತಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಅರ್ಹ ಫಲಾನುಭವಿಗಳನ್ನು ಕತ್ತಲಲ್ಲಿ ನೂಕುತ್ತಿದೆ. ಇದನ್ನೆಲ್ಲ ಪ್ರಶ್ನಿಸಿದರೆ ಸುಳ್ಳು ಆರೋಪ ಹೊರಿಸಿ ಜೈಲಿಗಟ್ಟುವ ಪರಿಪಾಠಕ್ಕೆ ನಾಗಮಂಗಲ ತಹಶೀಲ್ದಾರ್‌ ಚಾಲನೆ ನೀಡಿದ್ದಾರೆ.

ಸರ್ಕಾರಿ ಕಚೇರಿಯಲ್ಲಿನ ಅವ್ಯವಸ್ಥೆ, ದುರಾಡಳಿತ, ಅಕ್ರಮ, ಕರ್ತವ್ಯಲೋಪಗಳನ್ನು ಹಾಗೂ ಭ್ರಷ್ಟಾಚಾರವನ್ನು ಪ್ರಶ್ನಿಸುವುದು ಅಪರಾಧವೆಂದು ಪರಿಗಣಿಸುವುದಾದರೇ ನಾವೆಲ್ಲರೂ ಅಪರಾಧಿಗಳು ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ.

ಸರ್ಕಾರಿ ಸಿಬ್ಬಂದಿ ಮಾಡುತ್ತಿರುವ ಕರ್ತವ್ಯಕ್ಕೆ ಅಡ್ಡಿ ಎಂದರೆ ಸಿಬ್ಬಂದಿಯನ್ನು ಕೆಲಸ ಮಾಡಲು ಬಿಡದೇ ಇರುವುದು. ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ನಾವು ಹೇಳಿದ ಕೆಲಸವನ್ನು ಮಾಡಿ ಎಂದರೆ ಅದು ಕೂಡ ಕರ್ತವ್ಯಕ್ಕೆ ಅಡ್ಡಿ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಮತ್ತು ಪಾಲಿಸದರಿವುದನ್ನು ಪ್ರಶ್ನಿಸುವುದು ಪ್ರತಿಯೊಬ್ಬರ ಕರ್ತವ್ಯ. ಗುರುತಿನ ಚೀಟಿ ಧರಿಸುವುದು ಮತ್ತು ನಾಮಫಲಕ ಪ್ರದರ್ಶಿಸುವುದು ಸರ್ಕಾರದ ಮಾರ್ಗಸೂಚಿಯಲ್ಲಿದ್ದರೆ ಅದನ್ನು ಪಾಲಿಸುವುದು ಸರ್ಕಾರಿ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯ ಕರ್ತವ್ಯ. ಹಾಗೆಯೇ ಅದನ್ನು ಪ್ರಶ್ನಿಸುವುದು ಸಹ ನಾಗರಿಕರನ ಹಕ್ಕು ಎನ್ನುತ್ತಾರೆ ನಿವೃತ್ತ ಕೆಎಎಸ್‌ ಅಧಿಕಾರಿ ಮಥಾಯ್‌.

ನಾಗಮಂಗಲದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಇದ್ದ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿಯವರ ಮೇಲೆ ದೂರು ದಾಖಲಿಸಿ ಬಂಧಿಸಿರುವುದು ಹೇಯ ಘಟನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರ ಬಾಯಿ ಮುಚ್ಚಿಸುವ ಷಡ್ಯಂತ್ರ ಎಂಬ ಅಭಿಪ್ರಾಯಗಳೂ ಕೇಳಿ ಬಂದಿವೆ.

ರವಿಕೃಷ್ಣಾರೆಡ್ಡಿಯವರು ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತ ಬಂದಿದ್ದಾರೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ರಾಜ್ಯಾದ್ಯಂತ ಓಡಾಡಿ ಜನಜಾಗೃತಿ ಮೂಡಿಸುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆ ಶಕ್ತಿ ಕಳೆದುಕೊಂಡು ನಿಷ್ಕ್ರಿಯವಾಗಿರುವ ಸಂದರ್ಭದಲ್ಲಿ ಜನರ ಪರವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ. ಇಂಥವರ ಮೇಲೆ ಪೊಲೀಸರನ್ನು ಛೂ ಬಿಟ್ಟು ಕೇಸು ದಾಖಲಿಸುವುದು ಅಕ್ಷಮ್ಯ.

 

ದಿನೇಶ್‌ ಕುಮಾರ್‌ ಎಸ್‌.ಸಿ.,

ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ

‘ಸರ್ಕಾರಿ ನೌಕರರು ಪ್ರಶ್ನಾತೀತರೇನಲ್ಲ. ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾದಾಗ, ಜನರಿಂದ ಲಂಚಕ್ಕೆ ಪೀಡಿಸಲಾದಾಗ, ಸಕಾಲದಲ್ಲಿ ಕೆಲಸಗಳು ಆಗದೇ ಹೋದಾಗ ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಹೀಗೆ ಪ್ರಶ್ನಿಸಿದ್ದನ್ನೇ ಇಟ್ಟುಕೊಂಡು ಕರ್ತವ್ಯ ನಿರ್ವಹಣೆಗೆ ಅಡ್ಡಿ ಎಂಬ ಕೇಸು ಹೂಡುವುದು ಹೇಡಿತನ. ರವಿಕೃಷ್ಣಾರೆಡ್ಡಿಯವರ ಮೇಲೆ ದೂರು ದಾಖಲಿಸಿರುವ ತಹಸೀಲ್ದಾರ್ ಕೂಡಲೇ ದೂರು ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು,’ಎಂದೂ ದಿನೇಶ್‌ಕುಮಾರ್‌ ಒತ್ತಾಯಿಸಿದ್ದಾರೆ.

the fil favicon

SUPPORT THE FILE

Latest News

Related Posts