ದಿ ಫೈಲ್’ ಅಂತೊಂದು ತನಿಖಾ ವರದಿಗಳ ಅಂರ್ತಜಾಲ ಪತ್ರಿಕೆಯನ್ನವರು ಮಾಡಲು ಹೊರಟಾಗ ನನ್ನ ಪ್ರಕಾರ ಅವರ ಜೊತೆ ಇದ್ದಿದ್ದು ಅವರ ಧೈರ್ಯ ಮಾತ್ರ! ಧೈರ್ಯ, ತನಿಖೆ ಮಾಡುವ ಬಗೆಗಿನದಲ್ಲ; ಅದನ್ನವರು ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ನಿಷ್ಠೂರವಾಗಿ ದಿಟ್ಟವಾಗಿ ಪ್ರಾಮಾಣಿಕವಾಗಿ ಮಾಡುತ್ತಲೇ ಬಂದಿದ್ದಾರೆ.
ಆದರೆ ಅಷ್ಟೂ ವರ್ಷದ ಅವರ ಪ್ರಯಾಣದಲ್ಲಿ ಅವರಿಗೆ ಒಂದಲ್ಲಾ ಒಂದು ಸುದ್ದಿಸಂಸ್ಥೆಯ ಆಸರೆಯಿತ್ತು, ತಿಂಗಳು ಮುಗಿದರೆ ಸಂಬಳ ಬರುವ ನೆಚ್ಚಿಕೆಯಿತ್ತು, ಯಾರಾದರೂ ಘಾತುಕರು ಬೆನ್ನುಬಿದ್ದರೆ ಕಾಯುವುದಕ್ಕೆ ಒಂದು ವ್ಯವಸ್ಥೆಯಿತ್ತು, ಕಾನೂನು ಹೋರಾಟದ ಅಗತ್ಯಬಿದ್ದರೆ ವಕಾಲತ್ತು ಹಾಕಲು ಆಯಾ ಕಂಪನಿಯ ಲೀಗಲ್ ಟೀಮುಗಳೇ ಇದ್ದವು, ವೃತ್ತಿಪರ ಹಾಗೂ ನೈತಿಕ ಬೆಂಬಲಕ್ಕೆ ಸಂಪಾದಕರುಗಳಿದ್ದರು; ಯಾವುದೇ ಅಡೆತಡೆ ಅಡ್ಡಿ ಆತಂಕಗಳಿಲ್ಲದೆ ಅವರ ತನಿಖಾ ಸರಣಿ ನಡೆದಿತ್ತು. ಎಂತೆಂಥಾ ಘಟಾನುಗಟಿಗಳನ್ನೆಲ್ಲಾ ಅವರು ಅಲ್ಲಾಡಿಸಿಬಿಟ್ಟಿದ್ದರು ಆಗ!
ಅಂಥದ್ದೊಂದು ವಲಯದಿಂದ ಹೊರಬಿದ್ದು ಸ್ವಂತವಾಗಿ ಡಿಜಿಟಲ್ ತನಿಖಾ ಪತ್ರಿಕೆ ಶುರುಮಾಡುವುದಿದೆಯಲ್ಲಾ, ಅದು ಹುಚ್ಚುತನದ ಇನ್ನೊಂದು ಮಜಲು; ಅದೂ ಕೈಯಲ್ಲಿ ಕನಿಷ್ಠ ಒಂದು ತಿಂಗಳ ದಿನಸಿಗಾಗುವಷ್ಟೂ ದುಡ್ಡಿಲ್ಲದಾಗ! ಆದರೆ ಮಹಾಂತೇಶ್ ಅವರಿಗೆ ತಮ್ಮ ಕೆಲಸದ ಮೇಲೆ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿತ್ತು, ತಾವು ಈ ಹತ್ತು ವರ್ಷಗಳಲ್ಲಿ ತಮ್ಮ ನೇರವಂತಿಕೆ ಹಾಗೂ ವೃತ್ತಿಪರತೆಯ ಮೂಲಕವೇ ಗಳಿಸಿಕೊಂಡಿದ್ದ ತಮ್ಮ ಹಿತೈಷಿಗಳ ಬಳಗದ ಬೆಂಬಲದ ಬಗ್ಗೆ ಧೈರ್ಯವಿತ್ತು; ಮುನ್ನುಗ್ಗಿಯೇಬಿಟ್ಟರು.
ಈಗ ನೋಡಿದರೆ ಅವರ ಸಾಹಸಕ್ಕೆ ಆಗಲೇ ಒಂದು ವರ್ಷವಾಗಿದೆ! ಈ ಒಂದು ವರ್ಷದಲ್ಲಿ ಹಲವಾರು ಭ್ರಷ್ಟ ಅಧಿಕಾರಿಗಳನ್ನವರು ವಿಚಾರಣೆಯ ಒರೆಗಲ್ಲಿನ ಮೇಲೆ ನೂಕಿದ್ದಾರೆ, ಮಂತ್ರಿಯೊಬ್ಬರ ರಾಜೀನಾಮೆಗೆ ಕಾರಣರಾಗಿದ್ದಾರೆ, ಕೋವಿಡ್ ಹೆಸರಿನಲ್ಲಿ ನಡೆದ ಹಗಲು ಲೂಟಿಯ ಬಗ್ಗೆ ಸಾಲುಸಾಲು ವರದಿಗಳನ್ನು ಮಾಡಿ ಜಡ್ಡುಗಟ್ಟಿ ಕೂತಿದ್ದ ವಿರೋಧಪಕ್ಷದವರೂ ಮೈಕೊಡವಿಕೊಂಡೆದ್ದು ಬೀದಿ ಹೋರಾಟಕ್ಕೆ ಧುಮುಕುವ ಹಾಗೆ ಮಾಡಿದ್ದಾರೆ! ಕೊನೆಗೆ, ಇತ್ತೀಚೆಗೆ, ಮಠಾಧೀಶರೊಬ್ಬರ ಸಂಬಂಧಿಯ ಬಗ್ಗೆ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿ ಮೈಮೇಲೆ ಪೊಲೀಸ್ ಕೇಸೆಳೆದುಕೊಂಡಿದ್ದಾರೆ — ಅದೂ, ಆತನ ಬಗ್ಗೆ ಮುಖ್ಯವಾಹಿನಿಯ ಪತ್ರಿಕೆಗಳು ನಾಕು ಸಾಲು ನೇರವಾದ ಸುದ್ದಿ ಹಾಕಲೂ ಹಿಂಜರಿಯುತ್ತಿರುವ ಈ ದಿನಗಳಲ್ಲಿ!
ಬಹುಶಃ ಚಿತ್ರದುರ್ಗದ ಪೊಲೀಸರು ಈ ಕೇಸು ಹಾಕಿದ ಸಂದರ್ಭದಲ್ಲೇ ಮಹಾಂತೇಶ್ ಅವರ ಸಾತ್ವಿಕ ಬಳಗದ ವಿಸ್ತಾರ ಮತ್ತು ಶಕ್ತಿ ಜಗತ್ತಿಗೆ ತಿಳಿದಿದ್ದು! ಆದರೆ ಅಂತರಂಗದಲ್ಲಿ ಅವರನ್ನು ಬಲ್ಲ ಪತ್ರಕರ್ತ ಮಿತ್ರರಿಗದು ಮುಂಚಿನಿಂದಲೇ ಗೊತ್ತಿದ್ದ ಸತ್ಯ. ಆ ಸತ್ಯ ಅವರನ್ನು ಗೆಲ್ಲಿಸಿದೆ.
ಒಂದು ವರ್ಷವೆನ್ನುವುದು, ಇಂಥದ್ದೊಂದು ವಿಶಿಷ್ಟ ಪತ್ರಿಕೋದ್ಯಮದಲ್ಲಿ ತುಂಬಾ ದೊಡ್ಡದು. ಇದು ಇನ್ನೂ ಬೆಳೆಯುವುದಕ್ಕೆ, ಜನಪರವಾದ ಒಂದು ಧ್ವನಿಯಾಗಿ ಇನ್ನಷ್ಟು ಗಟ್ಟಿಗೊಳ್ಳುವುದಕ್ಕೆ, ಖಂಡಿತವಾಗಿಯೂ ಮಹಾಂತೇಶ್ ಅವರ ಪ್ರಯತ್ನಕ್ಕೆ ಒಂದಿಷ್ಟು ನಿರಂತರ ಹರಿವಿನ ಆರ್ಥಿಕ ಬಲದ ಅಗತ್ಯವಿದೆ.
ಕೇವಲ ಇಚ್ಛಾಶಕ್ತಿಯಿಂದಲೇ ನಡೆಯುತ್ತಿರುವ ಅವರ ವಸ್ತುನಿಷ್ಠ ತನಿಖಾ ವರದಿಗಾರಿಕೆ ನಿರಂತರವಾಗಿ ನಡೆಯಬೇಕು, ಅವರಿಗೆ ಸಹೃದಯಿ ಹಾಗೂ ಸಮಾಜಮುಖಿ ಪೋಷಕರು ಜೊತೆಯಾಗಬೇಕು. ಒಳ್ಳೆಯ ಉದ್ದೇಶದ ಒಳ್ಳೆಯ ಕೆಲಸಕ್ಕೆ ಅಂಥ ಬೆಂಬಲ ಸಿಕ್ಕೇ ಸಿಗುತ್ತದೆ.