ಬೆಂಗಳೂರು; ‘ಮಾನ್ಯ ಶಿವಕುಮಾರರೇ ಹೆಗ್ಗೋಡಿಗೆ ಬನ್ನಿ. ಚರಕ ಸಂಸ್ಥೆ ಹಾಗೂ ವಿರೂಪಾಕ್ಷನ ಜಡ್ಡು ಕೆರೆಯನ್ನು ಖುದ್ದು ವೀಕ್ಷಿಸಿರಿ, ಭಗ್ನಗೊಂಡಿರುವ ಹಾಗೂ ಅಪಾಯದಲ್ಲಿರುವ ಕೆರೆಯ ಮೇಲ್ದಂಡೆಯನ್ನು ವೀಕ್ಷಿಸಿರಿ,’ ಹೀಗೆಂದು ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಗ್ರಾಮ ಪಂಚಾಯ್ತಿಗಳ ನಿರ್ವಹಣೆ, ಕೈಮಗ್ಗ ಹಾಗೂ ಖಾದಿ ಉದ್ದಿಮೆಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆ ಖಂಡಿಸಿದ್ದ ಪ್ರಸನ್ನ ಅವರು ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಈ ರಾಜೀನಾಮೆ ಪತ್ರಕ್ಕೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ 2026ರ ನವೆಂಬರ್ 27ರಂದು ಪತ್ರ ಬರೆಯುವ ಮೂಲಕ ಗಮನಸೆಳೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಸನ್ನ ಅವರು ಬರೆದಿರುವ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
‘ಗಾಂಧಿವಾದಿಯಾದ ನಾನು ಸಾವರ್ಕರ್ ವಾದವನ್ನು ತಿರಸ್ಕರಿಸುತ್ತೇನೆ ಎಂದು ಬೇರೆ ಹೇಳಬೇಕಿದೆಯೇ ಎಂದು ಪತ್ರದಲ್ಲಿ ಪ್ರಶ್ನಿಸಿರುವ ಪ್ರಸನ್ನ ಅವರು ಗಾಂಧೀಜಿಯವರು ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಗ್ರಾಮ ಪಂಚಾಯ್ತಿ ವ್ಯವಸ್ಥೆ, ಕೆರೆಗಳು, ಕೈಮಗ್ಗಗಳು, ಖಾದಿವಸ್ತ್ರ ಮತ್ತೆ ಮೇಲೆದ್ದು ಬರುವಂತೆ ಮಾಡ ತಮ್ಮ ಸರ್ಕಾರವೇ ಕೇಳಿ ನಮ್ಮಿಂದ (ನಾನು, ಜಯದೇವ್, ಶಿವರಾಜ್) ಬರೆಸಿಕೊಂಡ ವರದಿಯೂ ತಮ್ಮ ಮುಂದಿದೆ, ‘ ಎಂದು ನೆನಪಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಪ್ರಸನ್ನ ಅವರ ಪತ್ರದಲ್ಲೇನಿದೆ?
ಗ್ರಾಮ ಪಂಚಾಯ್ತಿಗಳ ನಿರ್ವಹಣೆ, ಕೈಮಗ್ಗ ಹಾಗೂ ಖಾದಿ ಉದ್ದಿಮೆಗಳ ನಿರ್ವಹಣೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಕುರಿತಂತೆ ತಮ್ಮ ಹಾಗೂ ರಾಜ್ಯದ ಜನರ ಗಮನಸೆಳೆಯುವ ಸಲುವಾಗಿ ಮಹಾತ್ಮಗಾಂಧಿ ವಸ್ತ್ರೋದ್ಯೋಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ. ದುರಂತವೆಂದರೇ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಬಡಿದಿರುವ ನಿರ್ಲಕ್ಷ್ಯವೇ ನನ್ನ ಪ್ರತಿಭಟನೆಗೂ ಬಡಿದಿರುವಂತಿದೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ರಾಜೀನಾಮೆಗೆ ಕಾರಣವಾದ ಯಾವ ಸಮಸ್ಯೆಯನ್ನೇ ಆಗಲಿ ಪರಿಹರಿಸುವ ಯಾವ ಸೂಚನೆಯೂ ಸರಕಾರಿ ಅಧಿಕಾರಿಗಳಿಂದ ಬಂದಿರುವುದಿಲ್ಲ. ಹಾಗಾಗಿ ಮತ್ತೆ ಪತ್ರ ಬರೆಯುವುದು ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.
ಗ್ರಾಮ ಪಂಚಾಯ್ತಿ ವ್ಯವಸ್ಥೆಗೆ ಬಡಿದಿರುವ ದಾರುಣ ಸ್ಥಿತಿಯ ಬಗ್ಗೆ ಮಾತ್ರ ಒತ್ತು ನೀಡಲು ಬಯಸುತ್ತೇನೆ. ನಾನು ಬದುಕಿರು ಗ್ರಾಮದ ಹೆಸರಾಂತ ಕೆರೆಯಾದ ವಿರೂಪಾಕ್ಷನ ಜಡ್ಡು ಕೆರೆಯನ್ನು ಪಂಚಾಯತ್‌ರಾಜ್ ಸಚಿವರು ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ಭಗ್ನಗೊಳಿಸಿದ್ದಾರೆ. ಹಾಗವು ಭಗ್ನಗೊಳಿಸಿರುವ ಭೂಭಾಗವು ಕೆರೆಗಿಂತಲೂ ಇಪ್ಪತ್ತು ಅಡಿಗಳಷ್ಟು ಎತ್ತರದಲ್ಲಿರುವ ಗುಡ್ಡ ಪ್ರದೇಶವಾಗಿದೆ. ಮಂತ್ರಿವರ್ಯರ ಅವಸರದ ಕಾರ್ಯಾಚರಣೆಯಿಂದಾಗಿ ಇಡೀ ಗುಡ್ಡವೇ ಕುಸಿದು ಕೆರೆಯೊಳಗೆ ಮಗುಚಿಕೊಳ್ಳುವ ಹಾಗೂ ಮೇಲ್ದಂಡೆಯಲ್ಲಿರುವ ಅಡಕೆ ತೋಟಗಳು ನಿರ್ನಾಮವಾಗುವ ಭಯಾನಕ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಆತಂಕವನ್ನು ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಯಾವುದೇ ಖಾಸಗಿ ಕಟ್ಟಡವು ಇರದಿದ್ದ ಆ ಮೇಲ್ದಂಡೆಯನ್ನು ಒಡೆದಿರುವ ಸಚಿವರಿಗೆ ಅಲ್ಲಿ ಕಟ್ಟಡವಾಗಿ ಕಂಡದ್ದು (ಮಬ್ಬು ಮಬ್ಬು ಸ್ಯಾಟಲೈಟ್ ಚಿತ್ರದ ಮೂಲಕ ) ಕೆರೆಯನ್ನು ಲೋಕಾರ್ಪಣೆ ಮಾಡುವ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಂಗೆಯನ್ನು ಪೂಜಿಸಿದ್ದ ಪವಿತ್ರ ಮಣ್ಣಿನ ಕಟ್ಟೆ ಮಾತ್ರ. ಗಂಗಮ್ಮನ ಕಟ್ಟೆಯನ್ನು ಒಡೆದು ಹಾಕಿ ಸಚಿವರು, ಗ್ರಾಮಸ್ಥರ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಸೆಳೆದಿರುವುದು ಗೊತ್ತಾಗಿದೆ.
‘ಸಚಿವರ ಕಿವಿಯೂದಿ ಸುಳ್ಳು ದೂರು ನೀಡಿ ಸಚಿವರಿಂದ ಈ ಕು ಕೃತ್ಯ ಮಾಡಿಸಿರುವವರು ನಿಜವಾದ ಒತ್ತುವರಿದಾರರು. ಹಾಗೂ ಹಾಲಿ ಸಾವರ್ಕರ್‍ವಾದಿಗಳು ಮತ್ತು ಜಮೀನದಾರರು, ವಿರೂಪಾಕ್ಷನ ಜಡ್ಡು ಕೆರೆಯ ಒತ್ತುವರಿ ತೆರೆಸಿದವರು., ಈಶ್ವರ ಖಂಡ್ರೆಯವರಲ್ಲ. ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪನವರು. ಈ ಕೆಲಸವನ್ನವರು ಎರಡು ದಶಕಗಳ ಹಿಂದೆಯೇ ಸಾಧಿಸಿದ್ದರು. ಕೆರೆಯ ಪುನಶ್ಚೇತನ ಕಾಯಕ ಕೈಗೊಂಡು ಶ್ರಮದಾನಮೂಲಕ ಕಾರ್ಯಸಾಧಿಸಿದ್ದು ಹೆಸರಾಂತ ಗಾಂಧಿ ಸಂಸ್ಥೆ ಚರಕ,’ ಎಂದು ಹಳೆಯ ವಿದ್ಯಮಾನವನ್ನು ನೆನಪಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಹೀಗೆ, ಚರಕ ಸಂಸ್ಥೆಯೂ ಪುನಶ್ಚೇತನ ಕಾರ್ಯಕೈಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದೂ ಸಹ ಕಾಗೋಡರೇ ಸರಿ ಮಂತ್ರಿಗಳಲ್ಲ ಎಂದಿರುವ ಪ್ರಸನ್ನ ಅವರು ಮಂತ್ರಿಗಳು ಪುನಶ್ಚೇತನಗೊಳಿಸಿದ ಕೆರೆ ಸಮಿತಿಯನ್ನು ಅನಧಿಕೃತವೆಂದು ಘೋಷಿಸಿ ಹೊಸ ಕೆರೆ ಸಮಿತಿಯನ್ನು ರೂಪಿಸುವವರಿದ್ದಾರೆ. ಹಾಗೂ ಹಳೆಯ ಒತ್ತುವರಿದಾರರಿಗೆ ಒಪ್ಪಿಸುವವರಿದ್ದಾರೆ. ಆ ಬಗ್ಗೆ ಮತ್ತೊಂದು ಗ್ರಾಮ ಸಭೆ ಸೇರಿಸುವ ಹುನ್ನಾರ ನಡೆದಿದೆ. ಗ್ರಾಮಸ್ಥರು ಗ್ರಾಮಸಭೆಯನ್ನು ಬಹಿಷ್ಕರಿಸಿರುತ್ತಾರೆ ಎಂದು ಗಮನಸೆಳೆದಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ನೀಡಿದ್ದ ನೀಲನಕ್ಷೆ ಆಧಾರದದಲ್ಲಿ ಆಗಿನ ಜಿಲ್ಲಾಧಿಕಾರಿಗಳಾಗಿದ್ದ ದಯಾನಂದ ಅವರ ಮಾರ್ಗದರ್ಶನದಲ್ಲಿ ಕೆರೆಯ ಪುನಶ್ಚೇತನವಾಗಿದೆ. ಪಂಚಾಯತ್‌ರಾಜ್ ಕಾರ್ಯದರ್ಶಿಯಾಗಿದ್ದ ರಘುನಂದನ್ ಅವರು ಸ್ಥಳಕ್ಕೆ ಭೇಟಿ ನಿಡಿ ಕೆರೆಯನ್ನು ಜೀವವೈವಿಧ್ಯ ತಾಣವಾಗಿಸುವ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಮತ್ತೊಬ್ಬ ಕಾರ್ಯದರ್ಶಿ ಅತೀಕ್ ಅವರು ನರೇಗಾ ಯೋಜನೆ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಕೆರೆಯ ಸಮಿತಿಯ ನೇತೃತ್ವ ವಹಿಸಿರುವ ಚರಕ ಸಂಸ್ಥೆಯು ಅಧಿಕಾರ ರಾಜಕಾರಣದಿಂದ ದೂರ ಉಳಿದಿದೆ. ಹೀಗಾಗಿ ಎಲ್ಲ ಪಕ್ಷಗಳೂ ಈ ಕೆಲಸದಲ್ಲಿ ಸಹಕಾರ ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರದಿಂದ ಹಿಡಿದು ಯಡಿಯೂರಪ್ಪನವರ ಸರಕಾರದವರೆಗೆ ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ಹಿಡಿದು ಹಾಲಿ ಶಾಸಕ ಗೋಪಾಲಕೃಷ್ಣ ಬೇಳೂರುವರೆಗೆ ಎಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪ್ರಸನ್ನ ಅವರು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಮಾನ್ಯ ಶಿವಕುಮಾರರೇ ಒಮ್ಮೆ ಹೆಗ್ಗೋಡಿಗೆ ಬನ್ನಿ! ಚರಕ ಸಂಸ್ಥೆ ಹಾಗೂ ವಿರೂಪಾಕ್ಷನ ಜಡ್ಡು ಕೆರೆಯನ್ನು ಖುದ್ದು ವೀಕ್ಷಿಸಿರಿ, ಭಗ್ನಗೊಂಡಿರುವ ಹಾಗೂ ಅಪಾಯದಲ್ಲಿರುವ ಕೆರೆಯ ಮೇಲ್ದಂಡೆಯನ್ನು ವೀಕ್ಷಿಸಿರಿ. ಈಶ್ವರ ಖಂಡ್ರೆಯವರು ಯುವಕರು, ಹುಮ್ಮಸ್ಸಿನ ರಾಜಕಾರಣಿ. ನಿಯಮವರಿತು ಕೆಲಸ ಮಾಡುವುದಾದರೇ ಗ್ರಾಮ ಪಂಚಾಯ್ತಿಗಳ ಸ್ವಾಯತ್ತೆಗೆ ಧಕ್ಕೆ ಬಾರದಂತೆ ವರ್ತಿಸಬಲ್ಲರಾದರೇ ಅವರಿಗೆ ನಮ್ಮೆಲ್ಲರ ಸಂಪೂರ್ಣ ಸಹಕಾರವಿದೆ,’ ಎಂದು ಪತ್ರದಲ್ಲಿ ಹೇಳಿರುವುದು ಗೊತ್ತಾಗಿದೆ.
ಅದೇ ರೀತಿ ‘ಗಾಂಧಿವಾದಿಯಾದ ನಾನು ಸಾವರ್ಕರ್‍ವಾದವನ್ನು ತಿರಸ್ಕರಿಸುತ್ತೇನೆ ಎಂದು ಬೇರೆ ಹೇಳಬೇಕಿದೆಯೇ? ತಾವು ಗಾಂಧೀಜಿಯವರು ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷದ ನಾಯಕರು. ಗಾಂಧೀಜಿಯವರಿಗೆ ಪ್ರಿಯವಾಗಿದ್ದ ಗ್ರಾಮ ಪಂಚಾಯ್ತಿ ವ್ಯವಸ್ಥೆ, ಕೆರೆಗಳು, ಕೈಮಗ್ಗಗಳು, ಖಾದಿ ವಸ್ತ್ರ ಮತ್ತೆ ಮೇಲೆದ್ದು ಬರುವಂತೆ ಮಾಡಿ. ತಮ್ಮ ಸರಕಾರವೇ ಕೇಳಿ ನಮ್ಮಿಂದ ಬರೆಸಿಕೊಂಡ ವರದಿಯೂ ತಮ್ಮ ಮುಂದಿದೆ. ವರದಿ ಸೂಚಿಸಿರುವಂತೆ ಗಾಂಧಿ ಮಿಷನ್ ಸ್ಥಾಪಿಸಿರಿ. ಭರದಿಂದ ಗ್ರಾಮಗಳ ಪುನಶ್ಚೇತನ ಕಾರ್ಯ ಕೈಗೊಳ್ಳಿರಿ. ಆಗ ನಿಮಗೆ ನಮ್ಮ ಹಾಗೂ ಗ್ರಾಮೀಣ ಬಡವರ ಬೆಂಬಲವು ಖಂಡಿತವಾಗಿ ಸಿಗುತ್ತದೆ,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮೂರು ತಿಂಗಳಲ್ಲಿ ಹನ್ನೊಂದು ಸಾವಿರ ಕೆರೆಗಳ ಒತ್ತುವರಿ ತೆರವುಗೊಳಿಸಿದೆನೆಂದು ಪತ್ರಿಕಾ ಹೇಳಿಕೆ ಕೊಡುವ ಅವಸರವು ಗಾಂಧಿ ಕನಸನ್ನು ಭಗ್ನಗೊಳಿಸಿತೇ ಹೊರತು, ಕರ್ನಾಟಕವನ್ನು ಸಮೃದ್ಧಗೊಳಿಸಲಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕಿವಿ ಮಾತು ಹೇಳಿರುವುದು ಪತ್ರದಿಂದ ತಿಳಿದು ಬಂದಿದೆ.




