Thursday | November 26, 2026 |

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ ವ್ಯಕ್ತಿಯೊಬ್ಬರನ್ನು ಮುಂದಿರಿಸಿ ಬಹುಕೋಟಿ ವೆಚ್ಚದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗಿದ್ದರು. ಅಲ್ಲದೇ ಈ ಹಣ ಮತ್ತು ಕೆಲವು ಆಸ್ತಿಗಳನ್ನು ಕಾನೂನುಬದ್ಧವಾಗಿ ಸಂಪಾದಿಸಿದ ಆಸ್ತಿ ಎಂದು ಬಿಂಬಿಸಲು ಯೋಜಿಸಿದ್ದರು ಎಂಬ ಸಂಗತಿಯನ್ನು ಜಾರಿ ನಿರ್ದೇಶನಾಲಯವು ಪತ್ತೆ ಹಚ್ಚಿದೆ.

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಮತ್ತು ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಲ್ಲಿ ಬಹುವಿಧದ ಅಕ್ರಮಗಳನ್ನು ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯವು ಶಿವಶಂಕರಪ್ಪ ಸಾಹುಕಾರ್ ಸಹ ಬಹು ವಿಧದಲ್ಲಿ ಗಳಿಸಿದ್ದಾರೆ ಎನ್ನಲಾದ ಅಕ್ರಮ ಆಸ್ತಿ, ಹಣವನ್ನು ಸಕ್ರಮಗೊಳಿಸಲು ಹೊರಟಿದ್ದರು ಎಂಬುದನ್ನೂ ಸಹ ಹೊರಗೆಡವಿದೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯು ಶಿವಶಂಕರಪ್ಪ ಸಾಹುಕಾರ್ ಅವರ ಆಸ್ತಿಗಳ ಪಟ್ಟಿಯನ್ನು ಒದಗಿಸಿದೆ. ಈ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

‘ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ ವ್ಯಕ್ತಿಯೊಬ್ಬರನ್ನು ಮುಂಚೂಣಿಯಲ್ಲಿ ಇರಿಸಿಕೊಂಡು, ಅಪರಾಧದಿಂದ ಗಳಿಸಿದ ಹಣವನ್ನು ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ, ಆ ಆಸ್ತಿಗಳನ್ನು ಕಾನೂನುಬದ್ಧವಾಗಿ ಸಂಪಾದಿಸಿದ ಆಸ್ತಿಗಳೆಂದು ಬಿಂಬಿಸಲು ಯೋಜಿಸಿದ್ದರು. ಅಲ್ಲದೇ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಹೂಡಿಕೆಗಳನ್ಹು ಮಾಡಿದ್ದರು. ಆದರೆ ಆ ಯಾವ ಹೂಡಿಕೆಗಳಿಗೂ ಜಾರಿ ನಿರ್ದೇಶನಾಲಯದ ತನಿಖೆ ಸಂದರ್ಭದಲ್ಲಿ  ವಿವರಣೆಗಳನ್ನೇ ನೀಡಿರಲಿಲ್ಲ,’ ಎಂದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

 

 

ಶಹಾಪುರದ ಮದ್ರಕಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಮತ್ತು ರೆಸ್ಟೋರೆಂಟ್ ನಿರ್ಮಿಸಲು ಮುಂದಾಗಿದ್ದರು.  ಅಪರಾಧದಿಂದ ಗಳಿಸಿದ್ದ ಹಣವನ್ನು ಬಳಸುವ ಉದ್ದೇಶದಿಂದ, ಬೇರೊಬ್ಬ ವ್ಯಕ್ತಿಯನ್ನು ಮುಂಚೂಣಿಯಲ್ಲಿಟ್ಟು ಈ  ಯೋಜನೆ ರೂಪಿಸಿದ್ದರು. ಈ ಯೋಜನೆಯಲ್ಲಿ ತಮಗೆ ಯಾವುದೇ ಆಸಕ್ತಿ ಇಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಇದರ ಜೊತೆಗೆ, ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಇತರೆ ವಿವರಣೆಯಿಲ್ಲದ ಹೂಡಿಕೆಗಳನ್ನೂ ಮಾಡಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಮದ್ರಕಿಯಲ್ಲಿ 7 ಎಕರೆ ಜಮೀನು

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮದ್ರಕಿ ಗ್ರಾಮದ ಸರ್ವೆ ನಂಬರ್ 270//6, 270//9 ಮತ್ತು 270/*/11ರಲ್ಲಿರುವ ಸುಮಾರು 7 ಎಕರೆ ಜಮೀನಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.

 

 

 

 

ಶಿವಶಂಕರಪ್ಪ ಸಾಹುಕಾರ್ ಅವರ ವಸತಿ ಗೃಹದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು  ಶೋಧ ನಡೆಸಿದ್ದ  ಸಂದರ್ಭದಲ್ಲಿ, ಕೆಲವು ಕಟ್ಟಡಗಳ ರೇಖಾಚಿತ್ರಗಳು (Drawings), ಕಟ್ಟಡ ನಿರ್ಮಾಣದ ಯೋಜನೆಗಳು (Building Plans) ಹಾಗೂ ಯೋಜನೆಯ ವಿನ್ಯಾಸಗಳನ್ನು (Project Layouts) ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.

ಈ ದಾಖಲೆಗಳ ಕುರಿತು ಸಾಹುಕಾರ್‍‌ರನ್ನು ತನಿಖಾಧಿಕಾರಿಗಳು  ವಿಚಾರಿಸಿದ್ದರು.  ಶಿವಶಂಕರಪ್ಪ ಸಾಹುಕಾರ್ ಅವರು ತಮ್ಮ ಸ್ನೇಹಿತರಲ್ಲೊಬ್ಬರಾದ  ಶಿವು ಸಾಹುಕಾರ್ ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದಾಖಲೆಗಳನ್ನು ಬಿಟ್ಟು ಹೋಗಿದ್ದರು ಎಂದು ತಿಳಿಸಿದ್ದರು. ಆದರೆ 2026ರ  ಅಕ್ಟೋಬರ್‍‌ 17ರಂದ ಶಿವಪುತ್ರಪ್ಪ ಅಲಿಯಾಸ್ ಶಿವು ಸಾಹುಕಾರ್, ವಿನಾಯಕ ಸೋಮನಕಟ್ಟಿ  ಅವರು ನೀಡಿದ್ದ ಹೇಳಿಕೆ ಪ್ರಕಾರ  ಸುಮಾರು 30 ಕೊಠಡಿಗಳನ್ನು ಹೊಂದಿರುವ ಶಾಲೆ, ಕನ್ವೆನ್ಷನ್/ಮದುವೆ ಮಂಟಪ ಹಾಗೂ ಅಂಗಡಿಗಳನ್ನು ಒಳಗೊಂಡ ರೆಸ್ಟೋರೆಂಟ್‌ನ ವಾಸ್ತುಶಿಲ್ಪದ ಯೋಜನೆಗಳನ್ನು  ಶಿವಶಂಕರಪ್ಪ ಸಾಹುಕಾರ್ ಅವರ ಸೂಚನೆಯ ಮೇರೆಗೆ ಸಿದ್ಧಪಡಿಸಲಾಗಿತ್ತು.

 

 

ಈ ಯೋಜನೆಯ ನಕ್ಷೆಗಳನ್ನು ಫೆಬ್ರವರಿ 2026 ಮತ್ತು ಏಪ್ರಿಲ್ 2026ರಲ್ಲಿ  ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಅವರಿಗೆ ತೋರಿಸಲಾಗಿತ್ತು. ಅವರ ಸಲಹೆ-ಸೂಚನೆಗಳ ಮೇರೆಗೆ ನಕ್ಷೆಗಳಲ್ಲಿ ತಿದ್ದುಪಡಿಗಳನ್ನೂ ಮಾಡಲಾಗಿತ್ತು. ಅಲ್ಲದೆ 2026ರ ಜನವರಿ 21ರಂದು ವಾಟ್ಸಾಪ್ ಮೂಲಕವೂ ಈ ನಕ್ಷೆಗಳನ್ನು ಅವರಿಗೆ ಹಂಚಿಕೊಳ್ಳಲಾಗಿತ್ತು.

ಶಾಲೆ, ಕನ್ವೆನ್ಷನ್ ಹಾಲ್ ಮತ್ತು ರೆಸ್ಟೋರೆಂಟ್‌ನ ಸಂಪೂರ್ಣ ಮಾಲೀಕತ್ವವನ್ನು  ಶಿವಶಂಕರಪ್ಪ ಸಾಹುಕಾರ್ ಅವರೇ ಹೊಂದಿದ್ದರು.  ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಅವರೇ ಭರಿಸುತ್ತಾರೆ; ಆಸ್ತಿಗಳ ಮೇಲಿನ ನಿಯಂತ್ರಣವನ್ನು ಅವರೇ ಹೊಂದಿರುತ್ತಾರೆ.  ಹಾಗೂ ಈ ಯೋಜನೆಯಿಂದ ಬರುವ ಆದಾಯವನ್ನೂ ಅವರೇ ಸ್ವೀಕರಿಸುತ್ತಾರೆ ಎಂದು  ಶಿವು ಸಾಹುಕಾರ್ ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದರು.

35 ಕೋಟಿ ವೆಚ್ಚದ ಯೋಜನೆ

ಆದರೆ  ಶಿವು ಸಾಹುಕಾರ್ ಅವರು ಈ ಶಾಲೆಯನ್ನು ಗುತ್ತಿಗೆ ಆಧಾರದ ಮೇಲೆ ಅಥವಾ ಆಡಳಿತಾಧಿಕಾರಿಯಾಗಿ ಮಾತ್ರ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚವು 10 ಕೋಟಿ ರೂ.ಗಳಿಂದ 12 ಕೋಟಿ ರೂ.ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಶಿವಶಂಕರಪ್ಪ ಸಾಹುಕಾರ್ ಅವರ ಪ್ರಕಾರ, ಯೋಜನೆಯ ಒಟ್ಟು ವೆಚ್ಚವು ಇದಕ್ಕಿಂತ ಗಣನೀಯವಾಗಿ ಹೆಚ್ಚಾಗಿದ್ದು, ಸುಮಾರು 30 ಕೋಟಿ ರೂ.ಗಳಿಂದ 35 ಕೋಟಿ ರೂ.ಗಳವರೆಗೆ ತಲುಪಲಿದೆ ಎಂದು ಹೇಳಲಾಗಿತ್ತು.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಈ ಯೋಜನೆಗೆ ಸಂಬಂಧಿಸಿದ ನಕ್ಷೆಗಳು ‘ಮಿಸ್ಟರ್ ಶಿವು ಸಾಹುಕಾರ್’ ಅವರ ಹೆಸರಿನಲ್ಲಿ ಸಿದ್ಧಪಡಿಸಿರುವುದು  ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ಪತ್ತೆಯಾಗಿದ್ದವು.  ಆದರೆ ಈ  ಯೋಜನೆಯಲ್ಲಿ ತನಗೆ ಯಾವುದೇ ಆಸಕ್ತಿ ಅಥವಾ ಹೂಡಿಕೆ ಇಲ್ಲ ಎಂದು ಶಿವಶಂಕರಪ್ಪ ಸಾಹುಕಾರ್ ಅವರು ಸುಳ್ಳು ಹೇಳಿಕೆ ನೀಡಿದ್ದರು.

‘ಈ ಮೇಲಿನ ಸಂಗತಿಗಳು ಸ್ಪಷ್ಟವಾಗಿ ಸೂಚಿಸುವುದೇನೆಂದರೆ  ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ ವ್ಯಕ್ತಿಯೊಬ್ಬರನ್ನು ಮುಂಚೂಣಿಯಲ್ಲಿ ಇರಿಸಿಕೊಂಡು, ಅಪರಾಧದಿಂದ ಗಳಿಸಿದ ಹಣವನ್ನು ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ, ಆ ಆಸ್ತಿಗಳನ್ನು ಕಾನೂನುಬದ್ಧವಾಗಿ ಸಂಪಾದಿಸಿದ ಆಸ್ತಿಗಳೆಂದು ಬಿಂಬಿಸಲು ಯೋಜಿಸಿದ್ದರು,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

2026ರ ಆಗಸ್ಟ್‌ 18ರಂದು  ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಕೆಳಕಂಡ ಅಂಶಗಳೂ ಪತ್ತೆಯಾಗಿದ್ದವು.

ಕ್ರ.ಸಂ. ವಿವರಗಳು ಮೊತ್ತ (ರೂ.) ನೀಡಲಾದ ವಿವರಣೆ
1 ದೇವರಗುಂಡಗುರ್ತಿ ಗ್ರಾಮದ SMG CBSE ಶಾಲೆಗೆ ನೀಡಿದ ಕೊಡುಗೆ (28/02/2026ರ ರಸೀದಿ ಮತ್ತು ಪಾವತಿ ಖಾತೆಯಲ್ಲಿ ಇವರ ಪಾಲನ್ನು ‘2’ ಎಂದು ಗುರುತಿಸಲಾಗಿದೆ). 39,00,000/- ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡದಲ್ಲಿ ಇದು ತಮ್ಮ ಪಾಲಿನ ಮೊತ್ತ / ಕೊಡುಗೆ ಎಂದು ತಿಳಿಸಿದ್ದಾರೆ.
2 ಇವರ ಪುತ್ರ ಶ್ರೀ. ಸುದರ್ಶನ್ ಎಸ್. ಸಾಹುಕಾರ್ ಅವರ SBI ಖಾತೆ ಸಂಖ್ಯೆ 42679412319ಕ್ಕೆ 29/01/2025ರಂದು ನಗದು ಜಮೆ. 17,93,000/- ಯಾವುದೇ ನೈಜ ನಗದು ಜಮೆ ಮಾಡದಿದ್ದರೂ ಬ್ಯಾಂಕ್ ಸಿಬ್ಬಂದಿ ದಾಖಲಿಸಿದ ಎಂಟ್ರಿ ಇದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
3 ಇವರ ಪುತ್ರನ SBI ಖಾತೆ ಸಂಖ್ಯೆ 41671853631ಕ್ಕೆ 27/03/2025ರಂದು ಜಮೆಯಾದ ಹಣ. 7,50,000/- ಇದು ಕೃಷಿ ಆದಾಯ ಎಂದು ಹೇಳಿಕೊಂಡಿದ್ದಾರೆ; ಆದರೆ ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ.
4 2025ರಲ್ಲಿ ಇವರ ಪುತ್ರಿ ಶ್ರೀಮತಿ ಅನುರಾಧ ಅವರ ಹೆಸರಿನಲ್ಲಿ ಖರೀದಿಸಲಾದ ಶಹಾಪುರದ ಲಕ್ಷ್ಮೀ ನಗರದಲ್ಲಿರುವ ವಸತಿ ಆಸ್ತಿ. ಅಂದಾಜು 10,00,000/- —
5 ಶ್ರೀ. ನಾಗಣ್ಣ ಕಂಠಿ ಅವರಿಂದ ಕೃಷಿ ಭೂಮಿ ಖರೀದಿಸಲು ನೀಡಿದ ಮುಂಗಡ ಹಣ. 35,00,000/- ಈ ವಿಷಯವು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ.
6 2025ರಲ್ಲಿ ಇವರ ಸೋದರಳಿಯ ಶ್ರೀ. ಮಲ್ಲಿನಾಥ ಸಾಹುಕಾರ್ ಅವರು ಶಹಾಪುರದಲ್ಲಿ ಖರೀದಿಸಿದ 3 ಎಕರೆ ಕೃಷಿ ಭೂಮಿ. 10,00,000/- —

ಮೂಲ: ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು ಹಾಗೂ 18/08/2026 ಮತ್ತು 19/08/2026ರಂದು ದಾಖಲಿಸಲಾದ ಶಿವಶಂಕರಪ್ಪ ಸಾಹುಕಾರ್ ಮತ್ತು  ಮಲ್ಲಿನಾಥ ಸಾಹುಕಾರ್ ಅವರ ಹೇಳಿಕೆಗಳು (RUD-06).

ಹಣ ಅಕ್ರಮ ವರ್ಗಾವಣೆಯಲ್ಲಿ ಸಾಹುಕಾರ್ ಪಾತ್ರವೇನು?

ಶಿವಶಂಕರಪ್ಪ ಸಾಹುಕಾರ್ ಅವರು ಸೆಪ್ಟೆಂಬರ್ 2019ರಿಂದ ಕೆಪಿಎಸ್‌ಸಿ ಸದಸ್ಯರಾಗಿದ್ದರು. ಏಪ್ರಿಲ್ 2021ರಿಂದ ಅಮಾನತುಗೊಳ್ಳುವವರೆಗೆ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಹಲವು  ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಕೆಲವು ನಿರ್ದಿಷ್ಟ ಅಭ್ಯರ್ಥಿಗಳಿಗೆ ಸರಿಯಾದ ಉತ್ತರಗಳ ಕೀ (Answer Keys) ಒದಗಿಸುವಂತೆ, ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ  ಗಜೇಂದ್ರ ಕುಮಾರ್ ಗಂಗ್ವಾರ್ ಅವರ ಮೇಲೆ ಉದ್ದೇಶಪೂರ್ವಕವಾಗಿ ಪ್ರಭಾವ ಬೀರಿದ್ದರು. ಇದಕ್ಕೆ ಪ್ರತಿಯಾಗಿ ಕೆಎಎಸ್ (KAS) ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವ ಭರವಸೆ ನೀಡಲಾಗಿತ್ತು. ಈ ಹಣವನ್ನು  ಬಿ.ವಿ. ಗೀತಾ ಅವರ ಮೂಲಕ ಸಂಗ್ರಹಿಸುವಂತೆ ಮಾಡಿದ್ದರು.

 

 

ತಮ್ಮ ಪ್ರತಿನಿಧಿಯ ಮೂಲಕ ಡಾ. ವಿನುತಾ ಮಲ್ಲಪ್ಪ ಹಿತ್ತಲಮನಿ ಅವರಿಗೆ ಸರಿಯಾದ ಉತ್ತರಗಳ ಆಯ್ಕೆಗಳನ್ನು ಒದಗಿಸುವ ಸಲುವಾಗಿ ಮಲ್ಲಪ್ಪ ಹಿತ್ತಲಮನಿ ಅವರಿಂದ ಉದ್ದೇಶಪೂರ್ವಕವಾಗಿ 20 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 10 ಲಕ್ಷ ರೂ.ಗಳನ್ನು ಮುಂಗಡವಾಗಿ ನಗದು ರೂಪದಲ್ಲಿ ಪಡೆದುಕೊಂಡಿದ್ದರು.

ಅಪರಾಧದ ಮೂಲಕ  ಆದಾಯವನ್ನು ಗಳಿಸುವ ಉದ್ದೇಶದಿಂದ, ಪ್ರಶ್ನೆಪತ್ರಿಕೆಯ ಸರಣಿಯನ್ನು (Question Paper Series) ಗುರುತಿಸಲು ಅನುಕೂಲವಾಗುವಂತೆ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪರೀಕ್ಷಾ ಕೇಂದ್ರವಾರು ದಾಖಲಿಸಿಕೊಂಡಿದ್ದರು.  ತಮ್ಮ ಆದಾಯದ ತಿಳಿದಿರುವ ಕಾನೂನುಬದ್ಧ ಮೂಲಗಳಿಗೆ ಸಂಪೂರ್ಣವಾಗಿ ಅಸಮಂಜಸವಾಗಿದ್ದ 3,99,64,500 ರೂ. ನಗದು ಹಣವನ್ನು ಆಗಸ್ಟ್ 2025ರಿಂದ ಡಿಸೆಂಬರ್ 2025ರವರೆಗೆ ಉದ್ದೇಶಪೂರ್ವಕವಾಗಿ ತಮ್ಮ ವಶದಲ್ಲಿಟ್ಟುಕೊಂಡು ಮರೆಮಾಚಿದ್ದರು. (ಇದಕ್ಕೂ ಮೊದಲು 8 ಕೋಟಿಯಿಂದ 10 ಕೋಟಿ ರೂ.ಗಳವರೆಗೆ ಹಣವನ್ನು ಹೊಂದಿದ್ದರು.) ಈ ಹಣವನ್ನು ಲೆಕ್ಕಪತ್ರಗಳ ಹೊರತಾಗಿ  ಎಸ್.ಪಿ. ದಯಾನಂದ್ ಅವರ ಬಳಿ ಇರಿಸಿದ್ದರು.

ಅಪರಾಧದಿಂದ ಗಳಿಸಿದ ಹಣವನ್ನು ಉದ್ದೇಶಪೂರ್ವಕವಾಗಿ ಬಿ.ವಿ. ಗೀತಾ ಮತ್ತು ಅವರ ಪುತ್ರಿಗೆ ವರ್ಗಾಯಿಸಿದ್ದರು (ಕ್ರಮವಾಗಿ 6.75 ಲಕ್ಷ ರೂ. ಮತ್ತು 10.83 ಲಕ್ಷ ರೂ.). ಅವರ ಬ್ಯಾಂಕ್ ಖಾತೆಗಳಲ್ಲಿ ನಗದು ಹಣವನ್ನು ಜಮೆ ಮಾಡಿದ್ದರು. ಅಲ್ಲದೆ, ತಮ್ಮ ಹಾಗೂ ಬಿ.ವಿ. ಗೀತಾ ಅವರ ವಿಮಾನ ಪ್ರಯಾಣದ ವೆಚ್ಚವನ್ನೂ ತಮ್ಮ ಸಿಬ್ಬಂದಿಯ ಮೂಲಕ ನಗದು ರೂಪದಲ್ಲಿ ಪಾವತಿಸಿದ್ದರು.

ಶಹಾಪುರದ ಮದ್ರಕಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಮತ್ತು ರೆಸ್ಟೋರೆಂಟ್ ನಿರ್ಮಿಸಲು ಅಪರಾಧದಿಂದ ಗಳಿಸಿದ ಹಣವನ್ನು ಬಳಸುವ ಉದ್ದೇಶದಿಂದ, ಬೇರೊಬ್ಬ ವ್ಯಕ್ತಿಯನ್ನು ಮುಂಚೂಣಿಯಲ್ಲಿಟ್ಟು ಯೋಜನೆ ರೂಪಿಸಿದ್ದರು. ಈ ಯೋಜನೆಯಲ್ಲಿ ತಮಗೆ ಯಾವುದೇ ಆಸಕ್ತಿ ಇಲ್ಲ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಇದರ ಜೊತೆಗೆ, ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಇತರೆ ವಿವರಣೆಯಿಲ್ಲದ ಹೂಡಿಕೆಗಳನ್ನೂ ಮಾಡಿದ್ದರು.

 

 

‘ಮೇಲಿನ ಸಂಗತಿಗಳಿಂದ ಸ್ಪಷ್ಟವಾಗುವುದೇನೆಂದರೆ ಶಿವಶಂಕರಪ್ಪ ಸಾಹುಕಾರ್ ಅವರು ಇತರ ಆರೋಪಿಗಳೊಂದಿಗೆ ಸೇರಿ ಅಪರಾಧ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದು, ಅಂದಾಜು 4.17 ಕೋಟಿ ರೂ.ಗಳ ಅಪರಾಧದ ಆದಾಯವನ್ನು ಸ್ವಾಧೀನಪಡಿಸಿಕೊಳ್ಳುವುದು, ತಮ್ಮ ವಶದಲ್ಲಿಟ್ಟುಕೊಳ್ಳುವುದು, ಬಳಸುವುದು ಮತ್ತು ಮರೆಮಾಚುವ ಕೃತ್ಯಗಳಲ್ಲಿ ತೊಡಗಿದ್ದರು. ಅಲ್ಲದೆ, ಸದರಿ ಹಣವನ್ನು ಯಾವುದೇ ಕಳಂಕವಿಲ್ಲದ ಕಾನೂನುಬದ್ಧ ಆಸ್ತಿಯೆಂದು ಬಿಂಬಿಸಲು ಪ್ರಯತ್ನಿಸಿದ್ದರು. ಈ ಮೂಲಕ ಅವರು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಕಲಂ 3ರ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆ ಅಪರಾಧ ಎಸಗಿದ್ದು, ಕಾಯ್ದೆಯ ಕಲಂ 4ರ ಅಡಿಯಲ್ಲಿ ಶಿಕ್ಷಾರ್ಹರಾಗಿದ್ದಾರೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಕೆಪಿಎಸ್‌ಸಿ ಸದಸ್ಯರ ಮಕ್ಕಳ ಮಧ್ಯೆ 1 ಕೋಟಿ ರು ವಹಿವಾಟು; ಒಂದೇ ದಿನಾಂಕಗಳಲ್ಲಿ ನಗದು ಠೇವಣಿ, ಸಾಲದ ಹೆಸರಿನಲ್ಲಿ ಅಕ್ರಮ ಹಣದ ಲಾಭ ಹಂಚಿಕೊಳ್ಳಲಾಗಿತ್ತೇ?

ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ...

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...
Please Scan to make Your Contribution

Topics

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

Related Articles

Popular Categories

error: Content is protected !!