ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳನ್ನು ಬೆನ್ನೆತ್ತಿರುವ ಜಾರಿ ನಿರ್ದೇಶನಾಲಯವು ಆಯೋಗದ ಸದಸ್ಯೆ ಗೀತಾ ಶಿವಮೂರ್ತಿ ಮತ್ತು ಆಯೋಗದ ಮತ್ತೊಬ್ಬ ಸದಸ್ಯರಾದ ಡಾ ಎಚ್ ಎಸ್ ನರೇಂದ್ರ ಅವರ ಕುಟುಂಬ ಸದಸ್ಯರ ಮಧ್ಯೆ ನಡೆದಿರುವ ಹಣಕಾಸು ವಹಿವಾಟುಗಳನ್ನು ಪತ್ತೆ ಹಚ್ಚಿದೆ.
ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ನಡೆದಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರುಪಾಯಿಗಳನ್ನು ಸಂಗ್ರಹಿಸಿರುವ ಹಲವು ಪ್ರಕರಣಗಳು ಈಗಾಗಲೇ ಬಹಿರಂಗವಾಗಿವೆ. ಇದರ ಮಧ್ಯೆಯೇ ಜಾರಿ ನಿರ್ದೇಶನಾಲಯವು ಆಯೋಗದ ಇಬ್ಬರು ಹಾಲಿ ಸದಸ್ಯರೊಂದಿಗೆ ನಡೆದಿರುವ ಹಣಕಾಸಿನ ವಹಿವಾಟುಗಳನ್ನು ಬಹಿರಂಗಪಡಿಸಿರುವುದು ಈ ಅಕ್ರಮದ ಹಿಂದಿನ ಹಣಕಾಸಿನ ವಹಿವಾಟನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
‘ಕೆಪಿಎಸ್‌ಸಿ ಸದಸ್ಯರಾದ ಡಾ. ಎಚ್.ಎಸ್. ನರೇಂದ್ರ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಮೂಲಕ, ವ್ಯವಸ್ಥಿತವಾಗಿ ನಗದು ಠೇವಣಿಗಳನ್ನು ಮಾಡಿ ಹಾಗೂ ಬ್ಯಾಂಕ್‌ನಿಂದ ವಿವಿಧ ಹಂತದ ವರ್ಗಾವಣೆಗಳ ಮೂಲಕ ಬಿ.ವಿ. ಗೀತಾ ಶಿವಮೂರ್ತಿ ಮತ್ತು ಅವರ ಪುತ್ರಿಗೆ ಒಟ್ಟು 1 ಕೋಟಿ ರೂ.ಗಳನ್ನು ವರ್ಗಾಯಿಸಿರುವುದು, ‘ಭದ್ರತೆಯಿಲ್ಲದ ಸಾಲ’ ಎಂಬ ನೆಪದಲ್ಲಿ ಅಪರಾಧದಿಂದ ಗಳಿಸಿದ ಹಣವನ್ನು ಮರೆಮಾಚಿದಂತಿದೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಡಾ. ಎಚ್.ಎಸ್. ನರೇಂದ್ರ ಅವರು 2021ರಿಂದ ಕೆಪಿಎಸ್‌ಸಿ ಸದಸ್ಯರಾಗಿದ್ದಾರೆ. ಅವರ ಹಿರಿಯ ಸಹೋದರರಾದ ಎಚ್.ಎಸ್. ಮಹದೇವ್ ಅವರು ಎಲ್‌ಪಿಜಿ ವಿತರಕರಾಗಿರುವ ಮೆಸರ್ಸ್ ಸಿಡ್ಮಾ ಏಜೆನ್ಸೀಸ್‌ನ ಪಾಲುದಾರರಾಗಿದ್ದಾರೆ.

ಅಲ್ಲದೆ, ತಮ್ಮ ಪುತ್ರರಾದ ವಚನ್ ಎಸ್.ಎಂ. ಮತ್ತು ಶಶಾಂಕ್ ಎಸ್.ಎಂ. ಅವರೊಂದಿಗೆ ಮೆಸರ್ಸ್ ಸಿದ್ಮಾ ಇಂಡಸ್ಟ್ರಿಯಲ್ ಆ್ಯಂಡ್ ಲಾಜಿಸ್ಟಿಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಡಾ. ಎಚ್.ಎಸ್. ನರೇಂದ್ರ ಮತ್ತು ಅವರ ಪುತ್ರರೂ ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಇವರಿಬ್ಬರ ನಡುವೆ ನಡೆದಿರುವ ಹಣಕಾಸಿನ ವಹಿವಾಟು ಕುರಿತಾದ ಬ್ಯಾಂಕ್ ಖಾತೆಗಳ ವಹಿವಾಟಿನ ದಾಖಲೆಗಳನ್ನು ಜಾರಿ ನಿರ್ದೇಶನಾಲಯವು ಪರಿಶೀಲಿಸಿ ತನಿಖೆಗೆ ಒಳಪಡಿಸಿತ್ತು. ವ
ಸಿಡ್ಮಾ ಏಜೆನ್ಸೀಸ್ ಮೂಲಕ ನಗದು ಹಣ ವರ್ಗಾವಣೆ
ಬ್ಯಾಂಕ್ ಖಾತೆಗಳ ವಿಶ್ಲೇಷಣೆಯಿಂದ, ನಗದು ಠೇವಣಿಗಳನ್ನೂ ಒಳಗೊಂಡಂತೆ, ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ವರ್ಗಾಯಿಸಿರುವುದು ಜಾರಿ ನಿರ್ದೇಶನಾಲಯದ ದೋಷಾರೋಪಣೆ ಪಟ್ಟಿಯಿಂದ ಕಂಡುಬಂದಿದೆ. 2025ರ ಮೇ 221ರಂದು 10 ಲಕ್ಷ ರೂ. ಮತ್ತು ಮೇ 22ರಂದು 20 ಲಕ್ಷ ರೂ.ಗಳನ್ನು ಮೊದಲು ಮೆಸರ್ಸ್ ಸಿದ್ಮಾ ಇಂಡಸ್ಟ್ರಿಯಲ್ ಆ್ಯಂಡ್ ಲಾಜಿಸ್ಟಿಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ (ಸಂಖ್ಯೆ 50200050848155) ಯಿಂದ ವಚನ್ ಎಸ್.ಎಂ. ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ತಕ್ಷಣವೇ ಆ ಹಣವನ್ನು ಕು. ಶೀತಲ್ ಪಾಟೀಲ್ ಅವರಿಗೆ ವರ್ಗಾಯಿಸಲಾಗಿತ್ತು.

ವಚನ್ ಎಸ್.ಎಂ. ಮತ್ತು ಶಶಾಂಕ್ ಎಸ್.ಎಂ. ಅವರ ಬ್ಯಾಂಕ್ ಖಾತೆಗಳಿಂದ ಒಟ್ಟು 1 ಕೋಟಿ ರೂ. ಮೊತ್ತವನ್ನು ಬಿ.ವಿ. ಗೀತಾ ಶಿವಮೂರ್ತಿ ಮತ್ತು ಅವರ ಪುತ್ರಿ ಕು. ಶೀತಲ್ ಪಾಟೀಲ್ ಅವರಿಗೆ ವರ್ಗಾಯಿಸಿರುವುದು ತನಿಖೆಯಿಂದ ಗೊತ್ತಾಗಿದೆ.
| ಕ್ರ.ಸಂ. | ದಿನಾಂಕ | ಹಣ ವರ್ಗಾಯಿಸಿದವರು ಮತ್ತು ಖಾತೆ ವಿವರ | ಹಣ ಸ್ವೀಕರಿಸಿದವರು | ಮೊತ್ತ (ರೂ.) |
|---|---|---|---|---|
| 1 | 21/05/2025 | ಶ್ರೀ ವಚನ್ ಎಸ್.ಎಂ., HDFC ಬ್ಯಾಂಕ್ ಖಾತೆ ಸಂಖ್ಯೆ: 50100245271771 | ಕು. ಶೀತಲ್ ಪಾಟೀಲ್ (ಶ್ರೀಮತಿ ಬಿ.ವಿ. ಗೀತಾ ಅವರ ಪುತ್ರಿ) | 20,00,000 |
| 2 | 22/05/2025 | ಶ್ರೀ ವಚನ್ ಎಸ್.ಎಂ., HDFC ಬ್ಯಾಂಕ್ ಖಾತೆ ಸಂಖ್ಯೆ: 50100245271771 | ಕು. ಶೀತಲ್ ಪಾಟೀಲ್ | 20,00,000 |
| 3 | 25/06/2025 | ಶ್ರೀ ವಚನ್ ಎಸ್.ಎಂ., HDFC ಬ್ಯಾಂಕ್ ಖಾತೆ ಸಂಖ್ಯೆ: 50100245271771 | ಕು. ಶೀತಲ್ ಪಾಟೀಲ್ | 10,00,000 |
| 4 | 19/05/2026 | ಶ್ರೀ ಶಶಾಂಕ್ ಎಸ್.ಎಂ., HDFC ಬ್ಯಾಂಕ್ ಖಾತೆ ಸಂಖ್ಯೆ: 50100245271781 | ಶ್ರೀಮತಿ ಬಿ.ವಿ. ಗೀತಾ | 50,00,000 |
| ಒಟ್ಟು | 1,00,00,000 |
ಎಚ್.ಎಸ್. ಮಹದೇವ್ ಅವರು ಈ ಸಂಬಂಧ 2026ರ ಅಕ್ಟೋಬರ್ 16ರಂದು ಜಾರಿ ನಿರ್ದೇಶನಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಇದರ ಪ್ರಕಾರ ಬಿ.ವಿ. ಗೀತಾ ಶಿವಮೂರ್ತಿ ಅವರು ತಮ್ಮ ಸಾಲವನ್ನು ತೀರಿಸುವ ಸಲುವಾಗಿ ತಮ್ಮ ಸಹೋದರ ಹಾಗೂ ಕೆಪಿಎಸ್‌ಸಿಯಲ್ಲಿ ಸಹೋದ್ಯೋಗಿಯಾಗಿರುವ ಡಾ. ಎಚ್.ಎಸ್. ನರೇಂದ್ರ ಅವರಿಂದ ಹಣವನ್ನು ಕೋರಿದ್ದರು ಎಂದು ತಿಳಿಸಿದ್ದಾರೆ. ಡಾ. ಎಚ್.ಎಸ್. ನರೇಂದ್ರ ಅವರ ಸೂಚನೆಯ ಮೇರೆಗೆ, ಅವರ ಪುತ್ರನ ಬ್ಯಾಂಕ್ ಖಾತೆಯಿಂದ ಹಣವನ್ನು ಗೀತಾ ಅವರ ಪುತ್ರಿಗೆ ವರ್ಗಾಯಿಸಲಾಗಿತ್ತು ಎಂದು ಲೆಕ್ಕ ಕೊಟ್ಟಿದ್ದಾರೆ.
ಅದೇ ರೀತಿ, 50 ಲಕ್ಷ ರೂ.ಗಳನ್ನು ಬಿ.ವಿ. ಗೀತಾ ಅವರಿಗೆ ವರ್ಗಾಯಿಸಿರುವುದು ಮತ್ತು ತಮ್ಮ ಚಿಕ್ಕಪ್ಪನಾದ ಡಾ. ಎಚ್.ಎಸ್. ನರೇಂದ್ರ ಅವರ ಸೂಚನೆಯ ಮೇರೆಗೆ ನಡೆದಿತ್ತು ಎಂದು ಶಶಾಂಕ್ ಎಸ್.ಎಂ. ಅವರು ತಿಳಿಸಿದ್ದಾರೆ. ಅವರೇ ಗೀತಾ ಅವರ ಬ್ಯಾಂಕ್ ಖಾತೆಯ ವಿವರಗಳನ್ನೂ ಒದಗಿಸಿದ್ದರು. ತಮ್ಮ ತಂದೆಯ ಸೂಚನೆಯ ಮೇರೆಗೆ ಮಾತ್ರ ಹಣವನ್ನು ವರ್ಗಾಯಿಸಿದ್ದೇನೆ ಮತ್ತು ಹಣ ವರ್ಗಾವಣೆಯ ಉದ್ದೇಶವೇನು ಎಂಬುದು ತಮಗೆ ತಿಳಿದಿಲ್ಲ ಎಂದು ವಚನ್ ಎಸ್.ಎಂ. ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವುದು ಗೊತ್ತಾಗಿದೆ.
ಯಾವುದೇ ಸಾಲದ ಒಪ್ಪಂದವನ್ನು ಮಾಡಿಕೊಳ್ಳಲಾಗಿರಲಿಲ್ಲ, ಯಾವುದೇ ಭದ್ರತೆಯನ್ನು (ಸೆಕ್ಯೂರಿಟಿ) ಪಡೆಯಲಾಗಿರಲಿಲ್ಲ. ಅಲ್ಲದೆ, ಇಲ್ಲಿಯವರೆಗೆ ಸಾಲದ ಅಸಲು ಮೊತ್ತವಾಗಲಿ ಅಥವಾ ಯಾವುದೇ ಬಡ್ಡಿಯಾಗಲಿ ಮರುಪಾವತಿಯಾಗಿಲ್ಲ ಎಂದೂ ಹೇಳಿಕೆಯಲ್ಲಿ ವಿವರಿಸಿದೆ.
ಡಾ. ಎಚ್.ಎಸ್. ನರೇಂದ್ರ ಅವರೇ ನೇರವಾಗಿ ಸಾಲದ ಹಣವನ್ನು ನೀಡಿರಲಿಲ್ಲ. ಏಕೆಂದರೆ ಅವರ ಬಳಿ ಹಣವಿರಲಿಲ್ಲ ಎಂದು ಎಚ್.ಎಸ್. ಮಹದೇವ್ ಅವರೂ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2025ರ ಜೂನ್ ನಲ್ಲಿ ಸುಮಾರು 46 ಲಕ್ಷ ರೂ. ನಗದು ಹಣವನ್ನು ತಲಾ ಸುಮಾರು 9 ಲಕ್ಷ ರೂ.ಗಳಂತೆ ಐದು ಕಂತುಗಳಲ್ಲಿ ಮೆಸರ್ಸ್ ಸಿದ್ಮಾ ಏಜೆನ್ಸೀಸ್‌ನ ಎಸ್‌ಬಿಐ ಬ್ಯಾಂಕ್ ಖಾತೆ (ಸಂಖ್ಯೆ 35413847029)ಗೆ ಜಮೆ ಮಾಡಲಾಗಿತ್ತು. 2025ರ ಜೂನ್ 13ರಂದು 9,10,000 ರೂ, 2025ರ ಜೂನ್ 18ರಂದು 9,00,000 ರು, ಜೂನ್ 19ರಂದು 9,00,000 ರು., ಜೂನ್ 20ರಂದು 9,86,500 ರು., ಜೂನ್ 23ರಂದು 9,00,000 ರೂ. ಮತ್ತು ಇದೇ ದಿನಾಂಕಗಳಲ್ಲಿ ಒಟ್ಟು 45.50 ಲಕ್ಷ ರೂ.ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆ ಸಂಖ್ಯೆಗೆ ವರ್ಗಾಯಿಸಲಾಗಿತ್ತು.

ಎಚ್.ಎಸ್. ಮಹದೇವ್ ಅವರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆ (ಸಂಖ್ಯೆ 17541000018944) ಗೆ ಹಣ ವರ್ಗಾವಣೆಯಾಗಿತ್ತು. ಈ ಖಾತೆಯಿಂದ 2025ರ ಜೂನ್ 23ರಂದು 31 ಲಕ್ಷ ರೂ.ಗಳನ್ನು ವಚನ್ ಎಸ್.ಎಂ. ಅವರಿಗೆ ವರ್ಗಾಯಿಸಲಾಗಿತ್ತು. ತರುವಾಯ ಜೂನ್ 25ರಂದು 10 ಲಕ್ಷ ರೂ.ಗಳನ್ನು ಕು. ಶೀತಲ್ ಪಾಟೀಲ್ ಅವರಿಗೆ ವರ್ಗಾಯಿಸಿದ್ದರು. ಹಾಗೆಯೇ ಜೂನ್ 24ರಂದು 21 ಲಕ್ಷ ರೂ.ಗಳನ್ನು ಮರಳಿ ಮೆಸರ್ಸ್ ಸಿದ್ಮಾ ಇಂಡಸ್ಟ್ರಿಯಲ್ ಆ್ಯಂಡ್ ಲಾಜಿಸ್ಟಿಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ಗೆ ವರ್ಗಾಯಿಸಿದ್ದರು.
ಇದಲ್ಲದೆ 2025ರ ಜನವರಿ 1ರಿಂದ 2026ರ ಮಾರ್ಚ್ 31ರವರೆಗಿನ ಅವಧಿಯಲ್ಲಿ, ಮೆಸರ್ಸ್ ಸಿದ್ಮಾ ಏಜೆನ್ಸೀಸ್‌ನಿಂದ ಎಚ್.ಎಸ್. ಮಹದೇವ್ ಅವರ ಹಿಂದೂ ಅವಿಭಕ್ತ ಕುಟುಂಬದ (HUF) ಖಾತೆಗೆ ಒಟ್ಟು 1,56,61,000 ರೂ.ಗಳನ್ನು ವರ್ಗಾಯಿಸಲಾಗಿತ್ತು. ಇದೇ ದಿನಾಂಕಗಳಲ್ಲಿ ಮೆಸರ್ಸ್ ಸಿದ್ಮಾ ಏಜೆನ್ಸೀಸ್‌ನ ಬ್ಯಾಂಕ್ ಖಾತೆಗೆ ಸುಮಾರು 1.40 ಕೋಟಿ ರೂ.ಗಳ ನಗದು ಹಣ ಜಮೆಯಾಗಿತ್ತು. 2026ರ ಮೇ 19ರಂದು ಸಿದ್ಮಾ ಇಂಡಸ್ಟ್ರಿಯಲ್ ಆ್ಯಂಡ್ ಲಾಜಿಸ್ಟಿಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ನಿಂದ ಶಶಾಂಕ್ ಎಸ್.ಎಂ. ಅವರು ಸ್ವೀಕರಿಸಿದ್ದ 50 ಲಕ್ಷ ರೂ.ಗಳನ್ನು ಅದೇ ದಿನ ಬಿ.ವಿ. ಗೀತಾ ಶಿವಮೂರ್ತಿ ಅವರಿಗೆ ವರ್ಗಾಯಿಸಲಾಗಿತ್ತು.
ಸಿದ್ಮಾ ಏಜೆನ್ಸೀಸ್‌ನ ಕೈಯಲ್ಲಿದ್ದ ನಗದು ಹಣ ಮತ್ತು ಕೃಷಿಯಿಂದ ಬಂದ ಆದಾಯದಿಂದ ಈ ನಗದು ಠೇವಣಿಗಳನ್ನು ಮಾಡಲಾಗಿದೆ. ಹಾಗೂ ಆ ಹಣವನ್ನು ತಮ್ಮ ವೈಯಕ್ತಿಕ ಬಳಕೆಗಾಗಿ ವರ್ಗಾಯಿಸಲಾಗಿದೆ ಎಂದು ಎಚ್.ಎಸ್. ಮಹದೇವ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಒಂದೇ ದಿನಾಂಕಗಳಲ್ಲಿ ನಗದು ಹಣವನ್ನು ಠೇವಣಿ ಮಾಡಿರುವುದು, ‘ಸಾಲ’ ಎಂಬುದು ಕೇವಲ ನಗದು ಹಣಕ್ಕೆ ಪ್ರತಿಯಾಗಿ ಮಾಡಲಾದ ಹೆಸರಿನ ನಮೂದು (Accommodation Entry) ಎಂಬ ಅಂಶ ಎಂದು ಜಾರಿ ನಿರ್ದೇಶನಾಲಯವು ವಿಚಾರಣೆ ನಡೆಸಿತ್ತು. ಆಗ ಅವರು ಯಾವುದೇ ಸಮರ್ಪಕ ವಿವರಣೆಯನ್ನು ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಬದಲಿಗೆ, ಇದು ಭದ್ರತೆಯಿಲ್ಲದ ಸಾಲವಾಗಿತ್ತು ಎಂದು ಮಾತ್ರ ಅವರು ಹೇಳಿದ್ದಾರೆ.
’10 ಲಕ್ಷ ರೂ.ಗಿಂತ ಕಡಿಮೆ ಮೊತ್ತದಲ್ಲಿ ನಗದು ಠೇವಣಿಗಳನ್ನು ವ್ಯವಸ್ಥಿತವಾಗಿ ಮಾಡಿರುವುದು, ಮೂರು ಬ್ಯಾಂಕ್ ಖಾತೆಗಳ ಮೂಲಕ ತಕ್ಷಣವೇ ಹಣವನ್ನು ವರ್ಗಾಯಿಸಿರುವುದು, ಕೆಪಿಎಸ್‌ಸಿ ಸದಸ್ಯರಾದ ಗೀತಾ ಅವರಿಗೇ ನೇರವಾಗಿ ಹಣ ನೀಡುವ ಬದಲು ಅವರ ಪುತ್ರಿಗೆ ಹಣ ಪಾವತಿಸಿರುವುದು ಹಾಗೂ ಯಾವುದೇ ದಾಖಲೆ ಅಥವಾ ಮರುಪಾವತಿ ಇಲ್ಲದಿರುವುದು – ಇವೆಲ್ಲವೂ ಸದರಿ ‘ಸಾಲಗಳು’ ಅಕ್ರಮವಾಗಿ ಹಣದ ಲಾಭವನ್ನು (Illegal Gratification) ಬಿ.ವಿ. ಗೀತಾ ಶಿವಮೂರ್ತಿ ಅವರಿಗೆ ವರ್ಗಾಯಿಸಲು ಮತ್ತು ಅದೇ ಹಣವನ್ನು ಯಾವುದೇ ಅಕ್ರಮದ ಕಳಂಕವಿಲ್ಲದ ಸಾಲದ ಹಣವೆಂದು ಬಿಂಬಿಸಲು ರೂಪಿಸಿದ ತಂತ್ರವಾಗಿದ್ದವು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.

ಹೀಗಾಗಿ, ಕೆಪಿಎಸ್‌ಸಿ ಸದಸ್ಯರಾದ ಡಾ. ಎಚ್.ಎಸ್. ನರೇಂದ್ರ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಮೂಲಕ, ವ್ಯವಸ್ಥಿತವಾಗಿ ನಗದು ಠೇವಣಿಗಳನ್ನು ಮಾಡಿ ಹಾಗೂ ಬ್ಯಾಂಕ್ ವರ್ಗಾವಣೆಗಳ ಹಲವು ಹಂತಗಳನ್ನು ಸೃಷ್ಟಿಸುವ ಮೂಲಕ ಬಿ.ವಿ. ಗೀತಾ ಶಿವಮೂರ್ತಿ ಮತ್ತು ಅವರ ಪುತ್ರಿಗೆ ಒಟ್ಟು 1 ಕೋಟಿ ರೂ.ಗಳನ್ನು ವರ್ಗಾಯಿಸಿರುವುದು, ‘ಭದ್ರತೆಯಿಲ್ಲದ ಸಾಲ’ ಎಂಬ ನೆಪದಲ್ಲಿ ಅಪರಾಧದಿಂದ ಗಳಿಸಿದ ಹಣವನ್ನು ಮರೆಮಾಚುವುದು, ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅದನ್ನು ಅಕ್ರಮದ ಕಳಂಕವಿಲ್ಲದ ಆಸ್ತಿಯೆಂದು ಬಿಂಬಿಸುವ ಕೃತ್ಯಗಳಾಗಿವೆ ಎಂದೂ ವಿವರಿಸಿದೆ.




