Tuesday | November 24, 2026 |

ಒಪ್ಪಂದದಂತೆ ಗಂಗ್ವಾರ್ ಗೆ ಹಣ ಪಾವತಿಸದ ಸಾಹುಕಾರ್, ಅನುಚಿತ ಕೆಲಸಕ್ಕೆ ಒತ್ತಡ!; ಶಾಂತಾ ಮೇಡಂ ಊರಿನವರ ಆಯ್ಕೆ, ಆತಂಕದಲ್ಲಿದ್ದ ಗಂಗ್ವಾರ್!, ರಹಸ್ಯ ಸಂಗತಿ ಬಹಿರಂಗಪಡಿಸಿದ ಯಶಿ ಜೈಸ್ವಾಲ್ ಹೇಳಿಕೆ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್  ಗಂಗ್ವಾರ್ ಮತ್ತು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಡುವೆ ಹಣಕಾಸಿನ ಒಪ್ಪಂದವಿತ್ತು.  ಶಿವಶಂಕರಪ್ಪ ಸಾಹುಕಾರ್ ಮತ್ತು ಆಯೋಗದ ಇತರ ಸದಸ್ಯರು ಕೆಲವು ಅನುಚಿತ ಕೆಲಸಗಳನ್ನು ಮಾಡುವಂತೆ ಗ್ಯಾನೇಂದ್ರ ಕುಮಾರ್ ಮೇಲೆ ಒತ್ತಡವೂ ಇತ್ತು  ಎಂಬ ಸಂಗತಿಯನ್ನು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಬಹಿರಂಗಪಡಿಸಿದೆ.

ಅಲ್ಲದೇ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದ ಒಂದು ತಿಂಗಳ ನಂತರ ಗಂಗ್ವಾರ್ ತೀರಾ ಆತಂಕದಲ್ಲಿದ್ದರು. ಶಾಂತಾ ಮೇಡಂ ಎಂಬುವವರ ಊರಿನವರೇ ಸುಮಾರು 9-10 ಮಂದಿ ಆಯ್ಕೆಯಾಗಿದ್ದರು. ಹೀಗಾಗಿ ಈ ಪರೀಕ್ಷೆ ಕುರಿತು ಗಂಗ್ವಾರ್ ಚಿಂತಿತರಾಗಿದ್ದರು. ಕೆಪಿಎಸ್‌ಸಿಯ ಒಂದು ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಒಪ್ಪಿಕೊಂಡಿದ್ದ ಹಣವನ್ನು ಪಾವತಿಸದೇ  ಸಾಹುಕಾರ್ ಅವರು ಗಂಗ್ವಾರ್ ಅವರನ್ನು ವಂಚಿಸಿದ್ದರು!

ಗ್ಯಾನೇಂದ್ರಕುಮಾರ್ ಗಂಗ್ವಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಧು ಯಶಿ ಜೈಸ್ವಾಲ್ ಅವರು, ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಹಲವು ರಹಸ್ಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಗಂಗ್ವಾರ್ ಅವರು ಆ ಸಂದರ್ಭದಲ್ಲಿ ಎದುರಿಸಿದ್ದ ಬಿಕ್ಕಟ್ಟುಗಳನ್ನು ತನಿಖಾಧಿಕಾರಿಗೆ ವಿವರಿಸಿದ್ದಾರೆ. ಯಶಿ ಜೈಸ್ವಾಲ್ ಅವರು ನೀಡಿರುವ ಹೇಳಿಕೆಯು ಈ ಹಗರಣದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಯಶಿ ಜೈಸ್ವಾಲ್‌ ಹೇಳಿಕೆಯಲ್ಲೇನಿದೆ?

ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯಶಿ ಜೈಸ್ವಾಲ್‌ ಅವರು ಅಯೋಧ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ವ್ಯವಹಾರವನ್ನೂ ಅವರೇ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್ 2022ರಿಂದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ಪರಿಚಯವಿತ್ತು. ನವೆಂಬರ್ 2024ರಲ್ಲಿ ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದರೆ ಇನ್ನೂ ವಿವಾಹವಾಗಿರಲಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಅಭ್ಯರ್ಥಿಗಳಿಂದ ಸಂಗ್ರಹಿಸಲಾದ ಅಕ್ರಮ ಹಣ ಗಳಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಬಸವರಾಜ್ ಕನ್ನಾಳೆ  ಎಂಬಾತನಿಂದ ಯಶಿ ಜೈಸ್ವಾಲ್‌ ಅವರು ಯುಪಿಐ ಮೂಲಕ ಹಣ ಸ್ವೀಕರಿಸಿದ್ದರು ಎಂಬ ಮಾಹಿತಿಯು ಈ ಹೇಳಿಕೆಯಲ್ಲಿದೆ. ಕನ್ನಾಳೆ ಅವರಿಂದ ಯುಪಿಐ ಮೂಲಕ ನಾಲ್ಕು ಬಾರಿ ಹಣವರ್ಗಾವಣೆ ಆಗಿರುವುದನ್ನು ತನಿಖಾಧಿಕಾರಿ ಮುಂದೆ ಯಶಿ ಜೈಸ್ವಾಲ್‌ ಅವರು ಒಪ್ಪಿಕೊಂಡಿರುವುದು ಗೊತ್ತಾಗಿದೆ.

2025ರ ಡಿಸೆಂಬರ್‍‌ 11ರಂದು  ₹40,000,  2026ರ ಮಾರ್ಚ್‌ 17ರಂದು  ₹99,999, 2026ರ ಜೂನ್‌ 3ರಂದು ₹50,000, 2026ರ ಆಗಸ್ಟ್‌ 2ರಂದು  ₹50,000 ರು ವರ್ಗಾವಣೆಯಾಗಿತ್ತು.  ₹99,999 ಮೊತ್ತವು  ಭೀಮಾ ಗೋಲ್ಡ್‌ನಿಂದ ಚಿನ್ನಾಭರಣ ಖರೀದಿಸಲು ತಾವು ಮುಂಗಡವಾಗಿ ಪಾವತಿಸಿದ್ದ ₹1 ಲಕ್ಷಕ್ಕೆ ಸಂಬಂಧಿಸಿದ್ದಾಗಿದೆ ಎಂದು ಯಶಿ ಜೈಸ್ವಾಲ್  ವಿವರಿಸಿರುವುದು ತಿಳಿದು ಬಂದಿದೆ.

ಉಳಿದ ಮೂರು ಹಣ ವರ್ಗಾವಣೆಗಳು, ಬೆಂಗಳೂರಿನಲ್ಲಿರುವ  ಗಂಗ್ವಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ಮಾಡಿದ ಮನೆಯ ಖರ್ಚುಗಳಿಗೆ ಗಂಗ್ವಾರ್ ಅವರು ಮರುಪಾವತಿಸಿದ ಹಣವಾಗಿತ್ತು ಎಂದು ತನಿಖಾಧಿಕಾರಿಗೆ ಲೆಕ್ಕ ನೀಡಿದ್ದರು. ಹಣ ಯಾವ ಖಾತೆಯಿಂದ ಬಂದಿದೆ ಎಂಬುದನ್ನು ತಾವು ಎಂದಿಗೂ ಪರಿಶೀಲಿಸಿರಲಿಲ್ಲ.  ಮತ್ತು ಅದು  ಕನ್ನಾಳೆ ಅವರ ಖಾತೆಯಿಂದ ಬಂದಿತ್ತು ಎಂಬುದೂ ತಮಗೆ ತಿಳಿದಿರಲಿಲ್ಲ ಎಂದು ತಿಳಿಸಿರುವುದು ಗೊತ್ತಾಗಿದೆ.

 

 

ಪಾವತಿಸಿದ್ದ ₹52.30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು  ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನಿಂದ ಖರೀದಿಸಲಾಗಿತ್ತು. ಈ ಆಭರಣಗಳಲ್ಲಿ ಕೆಲವು ಅವರ ಹೆಸರಿನಲ್ಲಿಯೂ ಖರೀದಿಸಲಾಗಿತ್ತು.

ಆರಂಭದಲ್ಲಿ, ತಾವು ಅಥವಾ ತಮ್ಮ ಕುಟುಂಬದವರು  ಗಂಗ್ವಾರ್ ಅಥವಾ ಅವರ ಕುಟುಂಬದವರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರ ಅಥವಾ ಸಾಲದ ವ್ಯವಹಾರ ಹೊಂದಿರಲಿಲ್ಲ ಎಂದು ಹೇಳಿದ್ದರು. ನಂತರ, ಜುಲೈ 2026ರಲ್ಲಿ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಭೀಮಾ ಜ್ಯುವೆಲ್ಲರ್ಸ್‌ನಿಂದ ಸುಮಾರು ₹22 ಲಕ್ಷ ಮೌಲ್ಯದ ವಜ್ರದ ಹಾರವನ್ನು  ಗಂಗ್ವಾರ್ ಅವರು ಉಡುಗೊರೆಯಾಗಿ ನೀಡಿದ್ದರು ಮತ್ತು ಅದರ ಸಂಪೂರ್ಣ ಮೊತ್ತವನ್ನು ಅವರೇ ಪಾವತಿಸಿದ್ದರು ಎಂದು ತನಿಖಾಧಿಕಾರಿ ಮುಂದೆ ಬಹಿರಂಗಪಡಿಸಿರುವುದು ತಿಳಿದು ಬಂದಿದೆ.

ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ಇನ್‌ವಾಯ್ಸ್‌ಗಳು ಮತ್ತು ಆರ್ಡರ್ ದಾಖಲೆಗಳನ್ನು ತೋರಿಸಿದ್ದ ತನಿಖಾಧಿಕಾರಿಯು ಇದರ ಬಗ್ಗೆ ಪ್ರಶ್ನಿಸಿದ್ದರು. ಮೂರು ಇನ್‌ವಾಯ್ಸ್‌ಗಳ ಅಡಿಯಲ್ಲಿ ಒಟ್ಟು ₹52.30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಲಾಗಿತ್ತು ಎಂಬುದನ್ನು ಅವರು ಒಪ್ಪಿಕೊಂಡರು. ₹29.30 ಲಕ್ಷ ಮೌಲ್ಯದ ಫ್ಯಾನ್ಸಿ ಸರ, 2026ರ ಮಾರ್ಚ್‌ 10ರಂದು  ಉಮೇಶ್ ಬಿ.ಆರ್. ಅವರ ಹೆಸರಿನಲ್ಲಿ ಇನ್‌ವಾಯ್ಸ್ ಮಾಡಲಾಗಿತ್ತು. ₹22,07,567 ಮೌಲ್ಯದ ಡಿ-ನೆಕ್ಲೆಸ್‌ಗೆ 2026ರ ಜುಲೈ 26ರಂದು ಅವರ ಹೆಸರಿನಲ್ಲಿ ಇನ್‌ವಾಯ್ಸ್ ಮಾಡಲಾಗಿತ್ತು.  ₹92,433 ಮೌಲ್ಯದ ಉಂಗುರಕ್ಕೆ 2026ರ ಜುಲೈ 26ರಂದು ಅವರ ಹೆಸರಿನಲ್ಲಿ ಇನ್‌ವಾಯ್ಸ್ ಮಾಡಲಾಗಿತ್ತು. ಆಭರಣಗಳನ್ನು ಸಂಗ್ರಹಿಸಲು ಉಮೇಶ್ ಬಿ.ಆರ್. ಅವರಿಗೆ ಅಧಿಕಾರ ನೀಡಿದ್ದರು.  ಭೀಮಾ ಗೋಲ್ಡ್ ಸಂಸ್ಥೆಗೆ ಪತ್ರ ಬರೆದಿದ್ದನ್ನು ತನಿಖಾಧಿಕಾರಿ ಮುಂದೆ ಒಪ್ಪಿಕೊಂಡಿರುವುದು ಗೊತ್ತಾಗಿದೆ.

 

 

ಕೆಪಿಎಸ್‌ಸಿ ಪರೀಕ್ಷೆ- ಆತಂಕದಲ್ಲಿದ್ದ ಗಂಗ್ವಾರ್‍‌

ಕೆಪಿಎಸ್‌ಸಿ  ಪರೀಕ್ಷೆಗಳಿಗೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಯನ್ನು  ಗಂಗ್ವಾರ್ ಅವರು ತಮ್ಮೊಂದಿಗೆ ಹಂಚಿಕೊಂಡಿದ್ದರೇ ಎಂದು ತನಿಖಾಧಿಕಾರಿಯು ಯಶಿ ಜೈಸ್ವಾಲ್‌ ಅವರನ್ನು ಪ್ರಶ್ನಿಸಿದ್ದರು.  ಆಗ ಅವರು ಹಲವು ಪ್ರಸಂಗಗಳನ್ನು ತನಿಖಾಧಿಕಾರಿ ಮುಂದೆ ತೆರೆದಿಟ್ಟಿದ್ದರು. ಯಶಿ ಜೈಸ್ವಾಲ್ ಅವರು ನೀಡಿರುವ ಹೇಳಿಕೆ ಪ್ರಕಾರ ಯಶಿ ಜೈಸ್ವಾಲ್‌ ಅವರು  ಫೆಬ್ರವರಿ 2026ರಲ್ಲಿ ಬೆಂಗಳೂರಿನಲ್ಲಿರುವ ಗಂಗ್ವಾರ್  ಅವರ ನಿವಾಸದಲ್ಲಿ ತಂಗಿದ್ದರು.  ಗಂಗ್ವಾರ್ ಅವರು ಒಂದು ರಾತ್ರಿ ಆತಂಕದಲ್ಲಿರುವುದನ್ನು ಗಮನಿಸಿದ್ದರು. ಆಗ, “ಶಾಂತಾ ಮೇಡಂ” ಅವರ ಊರಿನವರೇ ಸುಮಾರು 9–10 ಆಯ್ಕೆಯಾದ ಅಭ್ಯರ್ಥಿಗಳಾಗಿರುವ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯ ಬಗ್ಗೆ ತಮಗೆ ಚಿಂತೆಯಾಗಿದೆ ಎಂದು ಅವರು ತಿಳಿಸಿದ್ದರು,’ ಎಂಬ ಪ್ರಸಂಗವನ್ನು ವಿವರಿಸಿರುವುದು ತಿಳಿದು ಬಂದಿದೆ.

ಮಾರ್ಚ್ 2026ರಲ್ಲಿ ಎರಡು ಸಂದರ್ಭಗಳಲ್ಲಿ, ತಾವು ಹೆಸರಿಸದ ಒಂದು ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಗುಂಪೊಂದು ಒಂದೇ ಊರಿಗೆ ಸೇರಿದವರಾಗಿದ್ದಾರೆ. ಇದು ಅನುಮಾನಾಸ್ಪದವಾಗಿದೆ ಎಂದು ಗಂಗ್ವಾರ್ ತಿಳಿಸಿದ್ದರು. ಕೆಪಿಎಸ್‌ಸಿಯ ಆಗಿನ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಮತ್ತು ಇತರ ಕೆಪಿಎಸ್‌ಸಿ  ಸದಸ್ಯರು ಕೆಲವು ಅನುಚಿತ ಕೆಲಸಗಳನ್ನು ಮಾಡುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಸಂಗತಿಯನ್ನೂ ಯಶಿ ಜೈಸ್ವಾಲ್ ಅವರು ತನಿಖಾಧಿಕಾರಿ ಮುಂದೆ ಹಂಚಿಕೊಂಡಿರುವುದು ಹೇಳಿಕೆಯಿಂದ  ಗೊತ್ತಾಗಿದೆ.

ಸಾಹುಕಾರ್‍‌ರೊಂದಿಗೆ ಭಿನ್ನಾಭಿಪ್ರಾಯ

ಇದೇ ಅವಧಿಯಲ್ಲಿ, ಕೆಪಿಎಸ್‌ಸಿಗೆ ಸಂಬಂಧಿಸಿದ ಒಂದು ವಿಷಯದಲ್ಲಿ  ಸಾಹುಕಾರ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು  ಗಂಗ್ವಾರ್ ತಿಳಿಸಿದ್ದರು. ಆದರೆ ಅದರ ಸಂಪೂರ್ಣ ವಿವರಗಳನ್ನು ನೀಡಿರಲಿಲ್ಲ.  ಗಂಗ್ವಾರ್ ಅವರು ಸಾಹುಕಾರ್ ಅವರೊಂದಿಗೆ ದೂರವಾಣಿಯಲ್ಲಿ ದೀರ್ಘಕಾಲ ಮಾತನಾಡುವುದನ್ನು ತಾವು ಹಲವು ಬಾರಿ ನೋಡಿದ್ದರು. ಊಟಕ್ಕೆ ಹೊರಗೆ ಹೋದ ಸಂದರ್ಭಗಳಲ್ಲಿಯೂ ಮತ್ತು ರಾತ್ರಿ ತಡವಾಗಿಯೂ ಅವರು ಮಾತನಾಡುತ್ತಿದ್ದರು ಎಂದು ಯಶಿ ಜೈಸ್ವಾಲ್  ಅವರು ತನಿಖಾಧಿಕಾರಿ ಮುಂದೆ ವಿವರಣೆ ನೀಡಿರುವುದು ಹೇಳಿಕೆಯಿಂದ ತಿಳಿದು ಬಂದಿದೆ.

 

 

ಸಾಹುಕಾರ್‍‌ರಿಂದ ವಂಚನೆ- ಮೊತ್ತವೆಷ್ಟು?

ಗಂಗ್ವಾರ್ ಅವರು ಯಾರ ಬಳಿಯೂ ದೂರು ನೀಡಿರಲಿಲ್ಲ ಅಥವಾ ತಮ್ಮ ಮೇಲಿನ ಒತ್ತಡದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಿರಲಿಲ್ಲ.  ಕೆಪಿಎಸ್‌ಸಿ  ಒಂದು ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಒಪ್ಪಿಕೊಂಡಿದ್ದ ಹಣವನ್ನು ಪಾವತಿಸದೆ  ಸಾಹುಕಾರ್ ಅವರು ತಮ್ಮನ್ನು ವಂಚಿಸಿದ್ದಾರೆ ಎಂದು  ಗಂಗ್ವಾರ್ ಅವರು 2026ರ ಜುಲೈನಲ್ಲಿ  ತಿಳಿಸಿದ್ದರು. ಆದರೆ ಯಾವ ಪರೀಕ್ಷೆ ಅಥವಾ ಎಷ್ಟು ಮೊತ್ತ ಎಂಬುದನ್ನು ಬಹಿರಂಗಪಡಿಸಿರಲಿಲ್ಲ ಎಂಬ ಸಂಗತಿಯನ್ನು ಯಶಿ ಜೈಸ್ವಾಲ್‌ ಅವರು ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

2024–2026ರ ಅವಧಿಯಲ್ಲಿ ಸ್ವಾಧೀನಪಡಿಸಿಕೊಂಡ ಆಸ್ತಿಗಳ ಬಗ್ಗೆಯೂ ತನಿಖಾಧಿಕಾರಿಯು ಪ್ರಶ್ನಿಸಿದ್ದರು. ‘ತಾವು ಯಾವುದೇ ಚರಾಸ್ತಿಯನ್ನು ಖರೀದಿಸಿರಲಿಲ್ಲ.  ತಮ್ಮ ತಂದೆ ಜನವರಿ 2025ರಲ್ಲಿ ಬರೇಲಿಯಲ್ಲಿ ಸುಮಾರು ₹20 ಲಕ್ಷಕ್ಕೆ ಖಾಲಿ ನಿವೇಶನವನ್ನು ಖರೀದಿಸಿದ್ದರು. ಆ ನಿವೇಶನವನ್ನು ತಮ್ಮ ಮತ್ತು ತಮ್ಮ ತಂದೆಯ ಜಂಟಿ ಹೆಸರಿನಲ್ಲಿ ನೋಂದಾಯಿಸಲಾಗಿತ್ತು.   ಸಂಪೂರ್ಣ ಹಣವನ್ನು ಅವರ ತಂದೆಯೇ ಪಾವತಿಸಿದ್ದರು,’ ಎಂದು ಯಶಿ ಜೈಸ್ವಾಲ್ ಉತ್ತರಿಸಿರುವುದು ಹೇಳಿಕೆಯಿಂದ ತಿಳಿದು ಬಂದಿದೆ.

ತಮಗೆ ತಿಳಿದಿರುವ ಮಟ್ಟಿಗೆ, ಈ ಖರೀದಿಯ ಬಗ್ಗೆ ತಮ್ಮ ತಂದೆ  ಗಂಗ್ವಾರ್ ಅವರೊಂದಿಗೆ ಚರ್ಚಿಸಿರಲಿಲ್ಲ. ಆದರೆ  ಗಂಗ್ವಾರ್ ಅವರ ಹಿರಿಯ ಸಹೋದರ  ಕಮಲಾಪತಿ ಅವರೊಂದಿಗೆ ಚರ್ಚಿಸಿರಬಹುದೆಂದು ಹೇಳಿದರು. ಗಂಗ್ವಾರ್ ಅವರು ತಮ್ಮ ತಂದೆಗೆ ಎಂದಿಗೂ ನಗದು ಹಣ ನೀಡಿಲ್ಲ ಎಂದು ಅವರು ಸ್ಪಷ್ಟವಾಗಿ ನಿರಾಕರಿಸಿದ್ದರು.  ತಮ್ಮ ತಾಯಿಯ ಸಹೋದರರಾದ  ಹರಿ ಓಂ ಜೈಸ್ವಾಲ್ ಅವರು ಗೋರಖ್‌ಪುರದ ಉರ್ದು ಬಜಾರ್‌ನಲ್ಲಿರುವ ಹೀರಾಲಾಲ್ ಗಂಗಾಪ್ರಸಾದ್ ಸರಾಫ್ ಸಂಸ್ಥೆಯಲ್ಲಿ ಚಿನ್ನಾಭರಣ ವ್ಯಾಪಾರಿಯಾಗಿದ್ದಾರೆ. ಅವರಿಗೆ ಗಂಗ್ವಾರ್ ಅವರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರಗಳಿರಲಿಲ್ಲ.  ತಮ್ಮ ನಿಶ್ಚಿತಾರ್ಥದ ಸಂದರ್ಭದಲ್ಲಿ  ಗಂಗ್ವಾರ್ ಮತ್ತು ಅವರ ಕುಟುಂಬದವರು ತನಗೆ ಕೇವಲ ಒಂದು ಚಿನ್ನದ ಉಂಗುರ ಮತ್ತು ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತನಿಖಾಧಿಕಾರಿಗೆ ತಿಳಿಸಿದ್ದರು.

‘ಯಶಿ ಜೈಸ್ವಾಲ್ ಅವರ ಮೇಲಿನ ಹೇಳಿಕೆಗಳಿಂದ  ಭೀಮಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನಿಂದ ಅವರ ಹೆಸರಿನಲ್ಲಿ ಮತ್ತು  ಉಮೇಶ್ ಬಿ.ಆರ್. ಅವರ ಹೆಸರಿನಲ್ಲಿ ₹52.30 ಲಕ್ಷ ಮೌಲ್ಯದ ಆಭರಣಗಳನ್ನು ಖರೀದಿಸಲಾಗಿತ್ತು.  ಮತ್ತು ಅವರ ಅನುಮತಿಯ ಮೇರೆಗೆ ಉಮೇಶ್ ಬಿ.ಆರ್. ಅವರು ಆ ಆಭರಣಗಳನ್ನು ಸಂಗ್ರಹಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ವಿವರಿಸಿರುವುದು ತಿಳಿದು ಬಂದಿದೆ.

ಆರಂಭದಲ್ಲಿ ಅವರು ಗಂಗ್ವಾರ್ ಅವರೊಂದಿಗೆ ಯಾವುದೇ ಹಣಕಾಸಿನ ವ್ಯವಹಾರಗಳಿರಲಿಲ್ಲ ಎಂದು ನಿರಾಕರಿಸಿದ್ದರು. ಮತ್ತು  ಬಸವರಾಜ್ ಕನ್ನಾಳೆ ಅವರನ್ನು ಪರಿಚಯವೇ ಇಲ್ಲವೆಂದು ಹೇಳಿದ್ದರು. ಆದರೆ ದಾಖಲೆಗಳನ್ನು ತೋರಿಸಿ ಪ್ರಶ್ನಿಸಿದ ನಂತರವಷ್ಟೇ ಆಭರಣಗಳ ಇನ್‌ವಾಯ್ಸ್‌ಗಳನ್ನು ಮತ್ತು  ಕನ್ನಾಳೆ ಅವರ ಖಾತೆಯಿಂದ ಬಂದ ಒಟ್ಟು ₹2,39,999 ಮೊತ್ತದ ನಾಲ್ಕು ಬಾರಿ ಯುಪಿಐ ಮೂಲಕ ಹಣ ವರ್ಗಾವಣೆ ಆಗಿರುವುದನ್ನು ತನಿಖಾಧಿಕಾರಿ ಮುಂದೆ ಒಪ್ಪಿಕೊಂಡಿರುವುದು ಹೇಳಿಕೆಯಿಂದ ಗೊತ್ತಾಗಿದೆ.

ಅಭ್ಯರ್ಥಿಗಳಿಂದ ಸಂಗ್ರಹಿಸಲಾದ ಅಕ್ರಮ ಹಣದಿಂದ ಗಂಗ್ವಾರ್ ಅವರ ಸೂಚನೆಯ ಮೇರೆಗೆ ತಮ್ಮ ಹೆಸರಿನಲ್ಲಿ ₹52.30 ಲಕ್ಷ ಮೌಲ್ಯದ ಆಭರಣಗಳನ್ನು ಖರೀದಿಸಿರುವುದು ಮತ್ತು ಅವರಿಗೆ ಫೋನ್‌ಪೇ ಮೂಲಕ ಹಣ ಪಾವತಿಸಿರುವುದು  ಬಸವರಾಜ್ ಕನ್ನಾಳೆ ನೀಡಿದ್ದ ಹೇಳಿಕೆಗೆ ಇದು ಪೂರಕವಾಗಿದೆ ಎಂದು ಜಾರಿ ನಿರ್ದೇಶನಾಲಯವು ಅಭಿಪ್ರಾಯಿಸಿದೆ.

ಗಂಗ್ವಾರ್‍‌ ಗಿತ್ತೇ ಪರೀಕ್ಷಾ ಅಕ್ರಮಗಳ ಅರಿವು?

ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ  ಗಂಗ್ವಾರ್ ಅವರಿಗೆ ಅರಿವಿತ್ತು, ಅವರು ಆಗಿನ ಕೆಪಿಎಸ್‌ಸಿ ಅಧ್ಯಕ್ಷರಾದ ಶಿವಶಂಕರಪ್ಪ  ಸಾಹುಕಾರ್ ಅವರೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿದ್ದರು, ತಮ್ಮ ಮೇಲಿನ ಆರೋಪಿತ ಒತ್ತಡದ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.  ಮತ್ತು ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯೊಂದಕ್ಕೆ ಸಂಬಂಧಿಸಿದಂತೆ ಸಾಹುಕಾರ್ ಅವರು ತಮಗೆ “ಒಪ್ಪಿಕೊಂಡಿದ್ದ ಹಣ” ಪಾವತಿಸಿಲ್ಲ ಎಂದು ಗಂಗ್ವಾರ್ ತಮ್ಮೊಂದಿಗೆ ಹೇಳಿಕೊಂಡಿದ್ದರು ಎಂಬುದನ್ನೂ ಅವರ ಹೇಳಿಕೆಗಳು ತೋರಿಸುತ್ತವೆ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿದೆ.

 

 

‘ಹೀಗಾಗಿ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಮೂಲಕ ಗಳಿಸಿದ್ದ ಆದಾಯವನ್ನು  ಬಸವರಾಜ್ ಕನ್ನಾಳೆ ಅವರ ಮೂಲಕ ಬಳಸಿಕೊಂಡು,  ಯಶಿ ಜೈಸ್ವಾಲ್ ಅವರ ಹೆಸರಿನಲ್ಲಿ ಆಭರಣಗಳನ್ನು ಖರೀದಿಸಲು ಮತ್ತು ಹಣ ಪಾವತಿಸಲು ಬಳಸಲಾಗಿದೆ. ಇದು ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ಪ್ರಯೋಜನಕ್ಕಾಗಿ ಮಾಡಲಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಅಲ್ಲದೆ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಗಂಗ್ವಾರ್  ಮತ್ತು  ಸಾಹುಕಾರ್ ಅವರ ನಡುವೆ ಹಣಕಾಸಿನ ಒಪ್ಪಂದವಿತ್ತು ಎಂಬುದನ್ನೂ ಈ ಹೇಳಿಕೆಯು ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

Hot this week

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...
Please Scan to make Your Contribution

Topics

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

Related Articles

Popular Categories

error: Content is protected !!