Sunday | November 22, 2026 |

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮ್ಮ  ಕುಟುಂಬ ಸದಸ್ಯರ ಪ್ರಯಾಣ ವೆಚ್ಚವನ್ನು  ಸ್ವತಃ ಭರಿಸಿರಲಿಲ್ಲ.  ಬದಲಿಗೆ ಮೂರನೇ ವ್ಯಕ್ತಿಗಳ ಖಾತೆಗಳಿಂದ ಮತ್ತು ಇದೇ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಸಂಸ್ಥೆಯಿಂದ ಪಾವತಿಸಲಾಗುತ್ತಿತ್ತು ಎಂಬ ಸಂಗತಿಯನ್ನು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯು ಬಹಿರಂಗಗೊಳಿಸಿದೆ.

ಅಷ್ಟೇ ಅಲ್ಲ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ವೈಯಕ್ತಿಕ ವೆಚ್ಚಗಳನ್ನು ಉದ್ದೇಶಪೂರ್ವಕವಾಗಿ ಬಸವರಾಜ್ ಕನ್ನಾಳೆ ಮತ್ತು ಮೂರನೇ ವ್ಯಕ್ತಿಗಳ ಮೂಲಕ ಪಾವತಿಸಲಾಗುತ್ತಿತ್ತು. ಇದರಿಂದ ಆ ವೆಚ್ಚಗಳು ಗಂಗ್ವಾರ್ ಅವರ ಸ್ವಂತ ಖಾತೆಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎಂಬ ಸಂಗತಿಯನ್ನೂ ಜಾರಿ ನಿರ್ದೇಶನಾಲಯವು ಹೊರಗೆಡವಿದೆ.

ಈ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಹಲವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗೊಳಪಡಿಸಿದೆ. ಆರೋಪಿತರು ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ಮೂಲಕ ನಡೆಸಿರುವ  ವಹಿವಾಟುಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ ವಿಶ್ಲೇಷಿಸಿದೆ. ಈ ವೇಳೆ ಆರೋಪಿತರು ಮತ್ತು ಹಲವು ಅಭ್ಯರ್ಥಿಗಳು ನೀಡುತ್ತಿರುವ ಹೇಳಿಕೆಗಳು ದಂಗುಬಡಿಸುವಂತಿದೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಗಂಗ್ವಾರ್ ಮತ್ತು ಅವರ ಕುಟುಂಬ ಸದಸ್ಯರ ಪ್ರಯಾಣ ವೆಚ್ಚಕ್ಕೆ ಆಗಿರುವ ಪಾವತಿಗಳ ಕುರಿತು ಸೌಮ್ಯ ಏರ್ ಟ್ರಾವೆಲ್ಸ್‌ನ  ತಮಿಳರಸನ್ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಸೌಮ್ಯ ಏರ್ ಟ್ರಾವೆಲ್ಸ್‌ನ ತಮಿಳರಸನ್ ಹೇಳಿಕೆಯಲ್ಲೇನಿದೆ?

ಕೆಪಿಎಸ್‌ಸಿ ಆಗಿನ ಪರೀಕ್ಷಾ ನಿಯಂತ್ರಕರಾದ (CoE) ಗ್ಯಾನೇಂದ್ರ ಕುಮಾರ್ ಗಂಗ್ವಾರ್  ಅವರ ಕುಟುಂಬದವರಿಗಾಗಿ ವಿಮಾನ ಪ್ರಯಾಣ, ಹೋಟೆಲ್ ಹಾಗೂ ಟ್ಯಾಕ್ಸಿ ಬುಕ್ಕಿಂಗ್‌ಗಳನ್ನು  ಸೌಮ್ಯ ಏರ್ ಟ್ರಾವೆಲ್ಸ್‌  ಸಂಸ್ಥೆಯ ಮೂಲಕ ಮಾಡಲಾಗಿತ್ತು. ಈ ಬುಕ್ಕಿಂಗ್‌ಗಳಿಗೆ ಸಂಬಂಧಿಸಿದ ಹಣವನ್ನು  ಗಂಗ್ವಾರ್ ಅವರ ಸ್ವಂತ ಖಾತೆಯಿಂದ ಪಾವತಿಸದೆ, ಮೂರನೇ ವ್ಯಕ್ತಿಗಳ ಖಾತೆಗಳಿಂದ ಮತ್ತು  ಬಸವರಾಜ್ ಕನ್ನಾಳೆ ಅವರ ಸಂಸ್ಥೆಯಾದ ಭಗವತಿ ಎಂಟರ್‌ಪ್ರೈಸಸ್‌ನಿಂದ ಪಾವತಿಸಲಾಗಿತ್ತು ಎಂದು ತಮಿಳರಸನ್‌ ಹೇಳಿಕೆಯಲ್ಲಿ ಬಹಿರಂಗಪಡಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

 

 

ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ಆಹಾರ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿದ್ದ ಅವಧಿಯಿಂದಲೂ ಅಂದರೇ 2025ರಿಂದಲೂ ತಮಿಳರಸನ್ ಅವರಿಗೆ ಪರಿಚಯವಿತ್ತು.  ಆರಂಭದಲ್ಲಿ ಶ್ರೀ ಗಂಗ್ವಾರ್ ಅವರ ಆಪ್ತ ಸಹಾಯಕರಾದ  ಶ್ರೀನಿವಾಸ ಗೌಡ ಅವರು ಗಂಗ್ವಾರ್  ಅವರ ಕುಟುಂಬದ ಸದಸ್ಯರು ಮತ್ತು ಅವರು ಸೂಚಿಸುವ ಇತರ ವ್ಯಕ್ತಿಗಳ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವಂತೆ ತಿಳಿಸಿದ್ದರು. ನಂತರ ಗಂಗ್ವಾರ್ ಅವರೇ ವಿಮಾನ ಪ್ರಯಾಣ, ಹೋಟೆಲ್ ಮತ್ತು ಟ್ಯಾಕ್ಸಿ ಬುಕ್ಕಿಂಗ್‌ಗಳಿಗಾಗಿ ನೇರವಾಗಿ ಅವರನ್ನು ಸಂಪರ್ಕಿಸಲು ಆರಂಭಿಸಿದರು.

ಮೂರನೇ ವ್ಯಕ್ತಿಗಳಿಂದ ಹಣ ಪಾವತಿ

ಗಂಗ್ವಾರ್ ಅವರ ಸ್ವಂತ ಬ್ಯಾಂಕ್ ಖಾತೆಯಿಂದ ಹಣ ಪಾವತಿಯಾಗುತ್ತಿರಲಿಲ್ಲ. ಬದಲಿಗೆ M/s ಶಾರದಾ ಎಂಟರ್‌ಪ್ರೈಸಸ್, ಶ್ರೀ ಶ್ರೀಶೈಲ್ ಬಸವಂತ್, ವೀರಶೆಟ್ಟಿ ಮತ್ತು  ರಾಜೇಶ್ ಅವರ ಮೂರನೇ ವ್ಯಕ್ತಿಗಳ ಖಾತೆಗಳಿಂದ ಹಣ ಬರುತ್ತಿತ್ತು. ಏಪ್ರಿಲ್ 2026ರಿಂದ ಬಸವರಾಜ್ ಕನ್ನಾಳೆ ಅವರು ಗಂಗ್ವಾರ್ ಅವರ ಪ್ರಯಾಣ ಮತ್ತು ಇತರ ಬುಕ್ಕಿಂಗ್‌ಗಳ ವೆಚ್ಚವನ್ನು ಪಾವತಿಸುವಂತೆ  ಗಂಗ್ವಾರ್ ಸೂಚಿಸಿದ್ದರು ಎಂದು ತಿಳಿಸಿದ್ದರು. ನಂತರ ಕನ್ನಾಳೆ ಅವರಿಗೆ ಸೇರಿದ M/s ಭಗವತಿ ಎಂಟರ್‌ಪ್ರೈಸಸ್ ಅಂಡ್ ಡೆವಲಪರ್ಸ್ ಸಂಸ್ಥೆಯಿಂದ ಹಣ ಪಾವತಿಯಾಗ ತೊಡಗಿತ್ತು ಎಂದು ತಮಿಳರಸನ್ ಹೇಳಿಕೆಯಲ್ಲಿ ಬಾಯಿಬಿಟ್ಟಿರುವುದು ತಿಳಿದು ಬಂದಿದೆ.

2025ರ ಏಪ್ರಿಲ್‌ 1ರಿಂದ 2026ರ ಮಾರ್ಚ್‌ 31ರವರೆಗೆ  ಮೂರನೇ ವ್ಯಕ್ತಿಗಳ ಖಾತೆಗಳ ಮೂಲಕ ಒಟ್ಟು ₹9,42,961 ಸ್ವೀಕರಿಸಲಾಗಿತ್ತು. 2026ರ ಏಪ್ರಿಲ್‌ 1ರಿಂದ 2026ರ ಅಕ್ಟೋಬರ್‍‌ 7ರವರೆಗೆ  ಭಗವತಿ ಎಂಟರ್‌ಪ್ರೈಸಸ್ ಅಂಡ್ ಡೆವಲಪರ್ಸ್‌ನಿಂದ ₹3,88,474 ಸ್ವೀಕರಿಸಲಾಗಿತ್ತು. 2025ರ ಏಪ್ರಿಲ್‌ 1ರಿಂದ 2026ರ ಅಕ್ಟೋಬರ್‍‌ 7ರವರೆಗೆ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಅವರ ಕುಟುಂಬದವರ ಪ್ರಯಾಣ ವೆಚ್ಚವಾಗಿ ಒಟ್ಟು ₹13,31,435 ಪಾವತಿಸಲಾಗಿತ್ತು. ಈ ಹಣವನ್ನು ಗಂಗ್ವಾರ್ ಅವರ ಸ್ವಂತ ಖಾತೆಯಿಂದ ಪಾವತಿಸಿರಲಿಲ್ಲ.

ಇದರಲ್ಲಿ ₹9,42,961 ಅನ್ನು ಮೂರನೇ ವ್ಯಕ್ತಿಗಳ ಖಾತೆಗಳಿಂದ ಮತ್ತು ₹3,88,474 ಅನ್ನು  ಬಸವರಾಜ್ ಕನ್ನಾಳೆ ಅವರ ಸಂಸ್ಥೆಯಾದ  ಭಗವತಿ ಎಂಟರ್‌ಪ್ರೈಸಸ್‌ನಿಂದ ಪಾವತಿಸಲಾಗಿತ್ತು. ಇದಕ್ಕೆ  ಗಂಗ್ವಾರ್ ಅವರ ಸೂಚನೆಯಿತ್ತು. ಬಸವರಾಜ ಕನ್ನಾಳೆ 2026ರ ಅಕ್ಟೋಬರ್‍‌ 9ರಂದು ದಾಖಲಿಸಿದ್ದ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದ  ₹13,31,435 ಮೊತ್ತಕ್ಕೆ ಹೊಂದಿಕೆಯಾಗುತ್ತದೆ. ಅಲ್ಲದೆ, ಅವರು ಹೆಸರಿಸಿರುವ ಮೂರನೇ ವ್ಯಕ್ತಿಗಳ ಖಾತೆಗಳೂ  ಕನ್ನಾಳೆ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಖಾತೆಗಳೇ ಆಗಿವೆ.

‘ಹೀಗಾಗಿ, ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುವುದೇನೆಂದರೇ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅಅವರ ವೈಯಕ್ತಿಕ ವೆಚ್ಚಗಳನ್ನು ಉದ್ದೇಶಪೂರ್ವಕವಾಗಿ  ಬಸವರಾಜ್ ಕನ್ನಾಳೆ ಮತ್ತು ಮೂರನೇ ವ್ಯಕ್ತಿಗಳ ಮೂಲಕ ಪಾವತಿಸಲಾಗುತ್ತಿತ್ತು. ಇದರಿಂದ ಆ ವೆಚ್ಚಗಳು ಅವರ ಸ್ವಂತ ಖಾತೆಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ವೆಚ್ಚಗಳನ್ನು  ಕನ್ನಾಳೆ ಅವರ ಬಳಿ ಅವರ ಪರವಾಗಿ ಇರಿಸಲಾಗಿದ್ದ ಅಪರಾಧದ ಆದಾಯದಿಂದ ಭರಿಸಲಾಗುತ್ತಿತ್ತು ಎಂಬುದನ್ನು ಈ ಸಂಗತಿಗಳು ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಿಂದ ಗೊತ್ತಾಗಿದೆ.

 

 

ಯಾರಿದು ಪವನ್ ಕುಮಾರ್ ರೆಡ್ಡಿ?

ಹಲವು ಅಭ್ಯರ್ಥಿಗಳನ್ನು ಪರೀಕ್ಷೆಗೂ ಮುನ್ನವೇ ಪವನ್ ಕುಮಾರ್ ರೆಡ್ಡಿ ಎಂಬಾತ ಸಂಪರ್ಕಿಸುತ್ತಿದ್ದ. ಅಸಲಿಗೆ ಈ ಪವನ್ ಕುಮಾರ್ ರೆಡ್ಡಿ ಬಸವರಾಜ ಕನ್ನಾಳೆಯ ಆಪ್ತ ಸಹಾಯಕನಾಗಿದ್ದ ಎಂಬ ಸಂಗತಿಯನ್ನು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ. ಆತನಿಂದಲೂ ಜಾರಿ ನಿರ್ದೇಶನಾಲಯವು ಹೇಳಿಕೆ ಪಡೆದುಕೊಂಡಿದೆ.

ಈ  ಪವನ್ ಕುಮಾರ್ ರೆಡ್ಡಿ ಎಂಬಾತ ಬಸವರಾಜ್ ಕನ್ನಾಳೆ ಅವರ ಬಾಲ್ಯದಿಂದಲೂ ಪರಿಚಿತ.  ಹಾಗೂ ಆಪ್ತ ಸಹಾಯಕರಾಗಿದ್ದಾರೆ. ಕನ್ನಾಳೆ ಅವರ ಸೂಚನೆಯ ಮೇರೆಗೆ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿದ್ದ ಆರು ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ, ದೇವನಹಳ್ಳಿಯ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ದು, ಅವರಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಒದಗಿಸಿದ್ದರು. ಅಲ್ಲದೆ, ಅವರಿಂದ ಅಕ್ರಮ ಹಣ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಿದ್ದರು.

ಪವನ್ ರೆಡ್ಡಿಯ ಹೇಳಿಕೆ ಸಾರಾಂಶದಲ್ಲೇನಿದೆ?

2026ರ ಅಕ್ಟೋಬರ್‍‌ 15ರಂದು ಪವನ್ ಕುಮಾರ್ ರೆಡ್ಡಿ ಪಿಎಂಎಲ್‌ಎ ಸೆಕ್ಷನ್‌ 50ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಈ ಹೇಳಿಕೆ ಪ್ರಕಾರ ಪವನ್ ಕುಮಾರ್ ರೆಡ್ಡಿ ಅವರು, ಗುಲ್ಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ಕಾಲೇಜಿನಿಂದ  ಪದವಿ ಪೂರ್ಣಗೊಳಿಸಿದ್ದಾರೆ.   ಬೀದರ್ ಜಿಲ್ಲೆಯ ಮನ್ನೇಖಳ್ಳಿಯಲ್ಲಿ ವಾಸಿಸುತ್ತಿದ್ದಾರೆ.  ಬಸವರಾಜ್ ಕನ್ನಾಳೆ ಅವರನ್ನು ಬಾಲ್ಯದಿಂದಲೂ ಪರಿಚಯವಿದೆ ಎಂದೂ ತಿಳಿಸಿದ್ದಾರೆ. ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರು ಐಎಎಸ್  ಅಧಿಕಾರಿಯಾಗಿದ್ದಾರೆ ಎಂಬುದು ತಮಗೆ ತಿಳಿದಿತ್ತು, ಆದರೆ ಅವರೊಂದಿಗೆ ನೇರ ಸಂಪರ್ಕ ಹೊಂದಿರಲಿಲ್ಲ ಎಂದು ಪವನ್ ಕುಮಾರ್‍‌ ರೆಡ್ಡಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.

 

 

ಪಶುವೈದ್ಯಾಧಿಕಾರಿ ಪರೀಕ್ಷೆ ಬಗ್ಗೆ ಪವನ್ ರೆಡ್ಡಿ ಹೇಳಿರುವುದೇನು?

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಬಗ್ಗೆಯೂ ಪವನ್ ಕುಮಾರ್ ರೆಡ್ಡಿ ತನಿಖಾಧಿಕಾರಿಗಳ ಮುಂದೆ ಹಲವು ವಿಷಯಗಳನ್ನು ಹೇಳಿದ್ದಾರೆ.  ಬಸವರಾಜ್ ಕನ್ನಾಳೆ ಅವರು ವಾಟ್ಸಾಪ್ ಮೂಲಕ ತಮ್ಮನ್ನು ಸಂಪರ್ಕಿಸಿದ್ದರು. ತಮ್ಮ ಸ್ನೇಹಿತರಾದ ಡಾ. ರಾಜ್ ಮೊಹಮ್ಮದ್ ಮತ್ತು ಡಾ. ಸಿದ್ಧಾರ್ಥ್ ಅವರು ಪರೀಕ್ಷೆಯಲ್ಲಿ ಆಯ್ಕೆಯಾಗಲು ಆಸಕ್ತಿ ಹೊಂದಿದ್ದಾರೆಯೇ ಎಂದು ಕೇಳಿದ್ದರು. ಅವರು ಆಸಕ್ತಿ ಹೊಂದಿರುವುದಾಗಿ  ಕನ್ನಾಳೆ ಅವರಿಗೆ ಪವನ್ ಕುಮಾರ್ ರೆಡ್ಡಿ  ತಿಳಿಸಿದ್ದರು.

ಆ ನಂತರ ಕನ್ನಾಳೆ ಅವರು ಪ್ರತಿ ಅಭ್ಯರ್ಥಿಗೆ ₹40–50 ಲಕ್ಷ ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ಈ ಮೊತ್ತವನ್ನು ಪ್ರತಿ ಅಭ್ಯರ್ಥಿಗೆ ₹30 ಲಕ್ಷಕ್ಕೆ ಇಳಿಸಲಾಗಿತ್ತು. ಕನ್ನಾಳೆ ಅವರ ಸೂಚನೆಯಂತೆ, ಅವರು ಡಾ. ರಾಜ್ ಮೊಹಮ್ಮದ್, ಡಾ. ಸಿದ್ಧಾರ್ಥ್, ಡಾ. ಮಹೇಂದ್ರಕುಮಾರ್ ಹೊಸಳ್ಳಿ, ಡಾ. ನಿರಂಜನ್ ಪಾಟೀಲ್, ಡಾ. ಬಸವರಾಜ್ ವಡಾರಿ ಮತ್ತು ಡಾ. ಅಮರೇಗೌಡ ಎಂಬ ಆರು ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ, ಅವರಿಂದ ಅಕ್ರಮ ಹಣ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದರು.

ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ಹೇಗೆ ನೀಡಲಾಯಿತು ಎಂದು ತನಿಖಾಧಿಕಾರಿ ಪ್ರಶ್ನಿಸಿದ್ದರು.  2026ರ ಜನವರಿ 8ರಂದು  ತಾವು ಮತ್ತು ಆರು ಅಭ್ಯರ್ಥಿಗಳು ಬೆಂಗಳೂರಿನ ಮೆಜೆಸ್ಟಿಕ್‌ನ ಗಣೇಶ ದೇವಸ್ಥಾನದ ಸಮೀಪ ಸೇರಿದ್ದೆವು. ತಿಳಿಸಿದರು. ಬಸವರಾಜ್ ಕನ್ನಾಳೆ ಅವರು ಸಾರಿಗೆ ವ್ಯವಸ್ಥೆ ಮಾಡಿದ್ದರು.  ತಮ್ಮ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಅವರನ್ನು ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ದಿದ್ದರು. ತಮಗೆ ಪ್ರತ್ಯೇಕ ವಿಲ್ಲಾದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿಗಳನ್ನು ಮತ್ತೊಂದು ವಿಲ್ಲಾಕ್ಕೆ ಕರೆದೊಯ್ದು, ಸುಮಾರು 70–80 ಪ್ರಶ್ನೆಗಳನ್ನು ಹೊಂದಿದ್ದ ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿತ್ತು. ಅವುಗಳಲ್ಲಿ ತಲಾ ನಾಲ್ಕು ಉತ್ತರ ಆಯ್ಕೆಗಳಿದ್ದು, ಸರಿಯಾದ ಉತ್ತರಗಳನ್ನು ಗುರುತಿಸಲಾಗಿತ್ತು. ಅವುಗಳನ್ನು ಕಂಠಪಾಠ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ಘಟನೆಯನ್ನು ವಿವರಿಸಿರುವುದು ಗೊತ್ತಾಗಿದೆ.

ಬಸವರಾಜ್ ಕನ್ನಾಳೆ ಅವರಿಗೆ ಹಣವನ್ನು ಹೇಗೆ ಪಾವತಿಸಲಾಯಿತು ಎಂದು ಕೇಳಿದಾಗ, ಬ್ಯಾಂಕಿಂಗ್ ಮಾರ್ಗಗಳ ಮೂಲಕವೂ ನಗದು ರೂಪದಲ್ಲಿಯೂ ಹಣ ಸ್ವೀಕರಿಸಲಾಗಿತ್ತು ಎಂದು ತಿಳಿಸಿದರು. ಕನ್ನಾಳೆ ಅವರು M/s ಓಂ ಲಕ್ಷ್ಮಿ ಮತ್ತು ಶ್ರೀ ಬಾಲು ರೆಡ್ಡಿ ಅವರ ಖಾತೆ ವಿವರಗಳನ್ನು ನೀಡಿದ್ದರು. ಅವುಗಳನ್ನು ಅಭ್ಯರ್ಥಿಗಳಿಗೆ ತಾವು ಕಳುಹಿಸಿದ್ದಾಗಿ ತಿಳಿಸಿದರು. ಸಂಗ್ರಹಿಸಲಾದ ಹಣದ ವಿವರಗಳನ್ನು ಪವನ್ ಕುಮಾರ್ ರೆಡ್ಡಿ ಒದಗಿಸಿದ್ದರು.

 

 

1.22 ಕೋಟಿ ವಸೂಲಿಯಾಗಿತ್ತೇ?

ಡಾ. ರಾಜ್ ಮೊಹಮ್ಮದ್ ಅವರು  ಪರೀಕ್ಷೆಯ ನಂತರ ₹30 ಲಕ್ಷ ನಗದು ರೂಪದಲ್ಲಿ ಪಾವತಿಸಿದ್ದರು. ಪ್ರತ್ಯೇಕವಾಗಿ, ಸಲೀಂ  ಅವರು ಆಯ್ಕೆಗಾಗಿ ತಮ್ಮನ್ನು ಸಂಪರ್ಕಿಸಿ, 2026ರ ಜನವರಿ ಕೊನೆಯ ವಾರದಲ್ಲಿ ₹10 ಲಕ್ಷ ಮತ್ತು ಫೆಬ್ರವರಿ ಮಧ್ಯಭಾಗದಲ್ಲಿ ₹20 ಲಕ್ಷ ಪಾವತಿಸಿದ್ದರು. ಇಬ್ಬರೂ ಸಹೋದ್ಯೋಗಿಗಳಾಗಿದ್ದರಿಂದ, ಪರಸ್ಪರ ಒಪ್ಪಂದದ ಮೇರೆಗೆ ಈ ಮೊತ್ತವನ್ನು ಡಾ. ರಾಜ್ ಮೊಹಮ್ಮದ್ ಅವರು ಪಾವತಿಸಬೇಕಿದ್ದ ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗಿತ್ತು.

ಡಾ. ಸಿದ್ಧಾರ್ಥ್ ಅವರು  ಒಟ್ಟು ₹20 ಲಕ್ಷ ಪಾವತಿಸಿದ್ದರು. ಇದರಲ್ಲಿ 2026ರ ಜನವರಿ 8ರಂದು  ಓಂ ಲಕ್ಷ್ಮಿ ಖಾತೆಗೆ ₹15 ಲಕ್ಷ ಮತ್ತು 2026ರ ಫೆ.19ರಂದು ಬಾಲು ರೆಡ್ಡಿ ಅವರ ಖಾತೆಗೆ ₹5 ಲಕ್ಷ ಪಾವತಿಸಲಾಗಿತ್ತು. ಡಾ. ಬಸವರಾಜ್ ವಡಾರಿ ಅವರು 2026ರ ಜನವರಿ 12ರಿಂದ 21ರ ನಡುವೆ  ಹಲವು ಕಂತುಗಳಲ್ಲಿ  ಓಂ ಲಕ್ಷ್ಮಿ ಖಾತೆಗೆ ₹27 ಲಕ್ಷ ಪಾವತಿಸಿದ್ದರು. ಡಾ. ನಿರಂಜನ್ ಪಾಟೀಲ್ ಅವರು  ಒಟ್ಟು ₹20 ಲಕ್ಷ ಪಾವತಿಸಿದ್ದರು. ಇದರಲ್ಲಿ  2026ರ ಫೆ.4ರಂದು ಓಂ ಲಕ್ಷ್ಮಿಗೆ ₹10 ಲಕ್ಷ ಮತ್ತು 2026ರ ಫೆ.23 ಹಾಗೂ 25ರಂದು  23/02/2026 ರಂದು ಎರಡು ಕಂತುಗಳಲ್ಲಿ ಬಾಲು ರೆಡ್ಡಿ ಅವರಿಗೆ ₹10 ಲಕ್ಷ ಪಾವತಿಸಲಾಗಿತ್ತು.  ಡಾ. ಮಹೇಂದ್ರಕುಮಾರ್ ಹೊಸಳ್ಳಿ ಅವರು  ಓಂ ಲಕ್ಷ್ಮಿ ಖಾತೆಗೆ ಮೂರು ಕಂತುಗಳಲ್ಲಿ ಒಟ್ಟು ₹25 ಲಕ್ಷ ಪಾವತಿಸಿದ್ದರು. 2026ರ ಜನವರಿ 23ರಂದು ₹10 ಲಕ್ಷ, 2026ರ ಫೆ.5ರಂದು  ₹5 ಲಕ್ಷ ಮತ್ತು ಫೆ.12ರಂದು ₹10 ಲಕ್ಷ ಪಾವತಿಸಲಾಗಿತ್ತು.  

ಡಾ. ಅಮರೇಗೌಡ ವಿರೂಪಾಪುರ ಅವರನ್ನೂ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ದಿದ್ದರು.  ಬಸವರಾಜ್ ಕನ್ನಾಳೆ ಅವರು ಸರಿಯಾದ ಉತ್ತರಗಳೊಂದಿಗೆ 70–80 ಪ್ರಶ್ನೆಗಳನ್ನು ಒದಗಿಸಿದ್ದರು. ಆಯ್ಕೆಯಾದ ನಂತರ ಹಣ ಪಾವತಿಸುವುದಾಗಿ ಅವರು ಒಪ್ಪಿಕೊಂಡಿದ್ದರು. ಹೇಳಿಕೆ ದಾಖಲಿಸಿದ ದಿನಾಂಕದವರೆಗೆ ಅವರಿಂದ ಯಾವುದೇ ಹಣ ಸಂಗ್ರಹಿಸಲಾಗಿರಲಿಲ್ಲ ಎಂದು ಪವನ್ ಕುಮಾರ್ ರೆಡ್ಡಿ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

‘ಪಿಎಂಎಲ್ಎ 2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ  ಪವನ್ ಕುಮಾರ್ ರೆಡ್ಡಿ ಅವರ ಮೇಲಿನ ಹೇಳಿಕೆಯಿಂದ ಬಸವರಾಜ್ ಕನ್ನಾಳೆ ಅವರ ಸೂಚನೆಯ ಮೇರೆಗೆ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಆರು ಅಭ್ಯರ್ಥಿಗಳನ್ನು ಒಟ್ಟುಗೂಡಿಸಿದ್ದರು.  ಪ್ರತಿ ಅಭ್ಯರ್ಥಿಯಿಂದ ಮಾತುಕತೆಯ ಮೂಲಕ ನಿಗದಿಪಡಿಸಿದ ₹30 ಲಕ್ಷ ಅಕ್ರಮ ಹಣ ಪಡೆಯುವ ವ್ಯವಸ್ಥೆ ಮಾಡಿದ್ದರು ಎಂಬುದು ಸ್ಪಷ್ಟವಾಗುತ್ತದೆ,’ ಎಂದು ಜಾರಿ ನಿರ್ದೇಶನಾಲಯವು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಕನ್ನಾಳೆ ನೀಡಿದ್ದ  ಓಂ ಲಕ್ಷ್ಮಿ ಮತ್ತು  ಬಾಲು ರೆಡ್ಡಿ ಅವರ ಖಾತೆ ವಿವರಗಳನ್ನು ಅಭ್ಯರ್ಥಿಗಳಿಗೆ ರವಾನಿಸಿ, ಆ ಖಾತೆಗಳ ಮೂಲಕ ಮತ್ತು ನಗದು ರೂಪದಲ್ಲಿ ಸುಮಾರು ₹1.22 ಕೋಟಿ ಅಕ್ರಮ ಹಣ ಸಂಗ್ರಹಿಸಿದ್ದರು ಅಥವಾ ಅದರ ಪಾವತಿಗೆ ವ್ಯವಸ್ಥೆ ಮಾಡಿದ್ದರು. ಆರು ಅಭ್ಯರ್ಥಿಗಳನ್ನು  ಪವನ್ ಕುಮಾರ್ ರೆಡ್ಡಿ ಅವರ ಮೂಲಕ ಸಂಪರ್ಕಿಸಲಾಗಿತ್ತು. M/s ಓಂ ಲಕ್ಷ್ಮಿ ಹಾಗೂ  ಬಾಲು ರೆಡ್ಡಿ ಅವರ ಖಾತೆಗಳನ್ನು ತಾವೇ ಒದಗಿಸಿದ್ದಾಗಿ  ಬಸವರಾಜ್ ಕನ್ನಾಳೆ ಒಪ್ಪಿಕೊಂಡಿರುವ ಹೇಳಿಕೆಗೆ ಇದು ಪೂರಕವಾಗಿದೆ. ಅಲ್ಲದೆ, ಡಾ. ಬಸವರಾಜ್ ವಡಾರಿ, ಡಾ. ಸಿದ್ಧಾರ್ಥ್, ಡಾ. ಮಹೇಂದ್ರಕುಮಾರ್ ಹೊಸಳ್ಳಿ ಮತ್ತು ಡಾ. ನಿರಂಜನ್ ಪಾಟೀಲ್ ಅವರ ಹೇಳಿಕೆಗಳಲ್ಲಿನ ಪ್ರಮುಖ ಅಂಶಗಳನ್ನೂ ಇದು ದೃಢಪಡಿಸುತ್ತದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

 

 

‘ಹೀಗಾಗಿ ಕೆಪಿಎಸ್‌ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿರುವ ಅಕ್ರಮ ಹಣವನ್ನು ಸಂಗ್ರಹಿಸುವ ಮತ್ತು ವರ್ಗಾಯಿಸುವುದರ ಜೊತೆಗೆ, ಅಭ್ಯರ್ಥಿಗಳನ್ನು ಒಟ್ಟುಗೂಡಿಸುವ ಹಾಗೂ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಹಂಚುವ ಕಾರ್ಯದಲ್ಲಿ  ಪವನ್ ಕುಮಾರ್ ರೆಡ್ಡಿ ಅವರು  ಬಸವರಾಜ್ ಕನ್ನಾಳೆ ಅವರಿಗೆ ಸಕ್ರಿಯವಾಗಿ ನೆರವಾಗಿದ್ದರು ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ,’ ಎಂದು ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

ಪರಿಚಯವಿರದಿದ್ದರೂ ಅಭ್ಯರ್ಥಿಗಳ ಬೆನ್ನತ್ತಿದ್ದ, ಪರೀಕ್ಷೆಗೂ ಮೊದಲೇ ಪವನ್ ಕುಮಾರ್ ರೆಡ್ಡಿಯಿಂದ ಕರೆ; ಕಮಿಷನ್‌ ಉಳಿಸಿಕೊಳ್ಳದೇ ಸಾಹುಕಾರ್, ಗ್ಯಾನೇಂದ್ರಗೆ 35 ಲಕ್ಷ ಪಾವತಿ

ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವಿವಿಧ ರ್‍ಯಾಂಕ್‌ಗಳಲ್ಲಿದ್ದ...
Please Scan to make Your Contribution

Topics

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

Related Articles

Popular Categories

error: Content is protected !!