ಬೆಂಗಳೂರು; ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ಬರೆದು ವಿವಿಧ ರ್ಯಾಂಕ್ಗಳಲ್ಲಿದ್ದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಪತ್ತೆ ಹಚ್ಚುತ್ತಿದ್ದ ಪವನ್ ಕುಮಾರ್ ರೆಡ್ಡಿ ಎಂಬಾತ ಲಕ್ಷಗಟ್ಟಲೇ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದ. ಅಭ್ಯರ್ಥಿಗಳ ಪೂರ್ವ ಪರಿಚಯವಿಲ್ಲದಿದ್ದರೂ ಆಯ್ಕೆ ಕರೆ ಮಾಡುತ್ತಿದ್ದ. ಅಲ್ಲದೇ ಲಂಚ ಪಾವತಿಸದೇ ಯಾರೂ ಆಯ್ಕೆಯಾಗಲು ಸಾಧ್ಯವೂ ಇಲ್ಲ ಎಂದು ಅಭ್ಯರ್ಥಿಗಳನ್ನು ನಂಬಿಸುತ್ತಿದ್ದ. ಕೆಲವರು ಈತನ ಮಾತುಗಳನ್ನು ನಂಬಿ ಲಕ್ಷಾಂತರ ರುಪಾಯಿ ನೀಡುತ್ತಿದ್ದರು. ಇನ್ನು ಕೆಲವರು ಆತ ಇಡುತ್ತಿದ್ದ ಬೇಡಿಕೆಯನ್ನು ನಿರಾಕರಿಸುತ್ತಿದ್ದರು.
ಅದರಲ್ಲೂ ವಿಶೇಷವಾಗಿ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ ಇರುವ ಬೀದರ್ ಭಾಗದ ಅಭ್ಯರ್ಥಿಗಳನ್ನೇ ಪವನ್ ಕುಮಾರ್ ರೆಡ್ಡಿ ಸಂಪರ್ಕಿಸುತ್ತಿದ್ದ ಎಂದು ಅಭ್ಯರ್ಥಿಗಳು ಜಾರಿ ನಿರ್ದೇಶನಾಲಯುದ ತನಿಖಾಧಿಕಾರಿಗೆ ಹೇಳಿಕೆ ನೀಡಿದ್ದಾರೆ. ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಮತ್ತಷ್ಟು ಅಭ್ಯರ್ಥಿಗಳು ನೀಡಿದ್ದ ಹೇಳಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 23ನೇ ರ್ಯಾಂಕ್ ಪಡೆದಿದ್ದ ಡಾ ಗಣೇಶ್ ಕುಮಾರ್ ಎಂಬಾತನಿಗೆ ಪವನ್ ಕುಮಾರ್ ರೆಡ್ಡಿ ಎಂಬಾತ ಖಚಿತವಾಗಿ ಆಯ್ಕೆ ಮಾಡಿಸಲು ₹30 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮತ್ತು ಲಂಚ ಪಾವತಿಸದೆ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲವೆಂದು ಹೇಳಿದ್ದ. ಆದರೆ ಆತನ ಬೇಡಿಕೆಯನ್ನು ನಿರಾಕರಿಸಿದ್ದೆ ಎಂದು ಖುದ್ದು ಗಣೇಶ್ ಕುಮಾರ್ ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಡಾ. ಗಣೇಶ್ ಕುಮಾರ್ ಅವರು 2023ರಲ್ಲಿ ಬೀದರ್ನ ಪಶುವೈದ್ಯಕೀಯ ಕಾಲೇಜಿನಿಂದ V.Sc. & A.H. ಪದವಿಯನ್ನು ಮತ್ತು 2025ರಲ್ಲಿ M.V.Sc. ಪದವಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದರು. ಪ್ರಸ್ತುತ ಕಮಲಾಪುರದ MVUಯಲ್ಲಿ ಗುತ್ತಿಗೆ ಪಶುವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ (ನೋಂದಣಿ ಸಂಖ್ಯೆ: 241418547) ಹಾಜರಾಗಿದ್ದರು. 600 ಅಂಕಗಳಲ್ಲಿ 356.25 ಅಂಕಗಳನ್ನು ಪಡೆದು 23ನೇ ರ್ಯಾಂಕ್ ಪಡೆದಿದ್ದರು.
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಮೊದಲು M/s ಜ್ಞಾನಗಂಗೋತ್ರಿಯಲ್ಲಿ ಆಫ್ಲೈನ್ ತರಬೇತಿ ಪಡೆದಿದ್ದರು. ಮತ್ತು ಅದಕ್ಕಾಗಿ ₹15,000 ಶುಲ್ಕ ಪಾವತಿಸಿದ್ದರು ಎಂದು ತಿಳಿಸಿದರು. ಕಳೆದ ಮೂರು ವರ್ಷಗಳಲ್ಲಿ ನಡೆದ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಯು ಡಾ ಗಣೇಶ್ ಕುಮಾರ್ರನ್ನು ಪ್ರಶ್ನಿಸಿದ್ದರು. 2026ರಲ್ಲಿ ನಡೆದಿದ್ದ ಜಾನುವಾರು ಅಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿ ಅಂತಿಮ ಆಯ್ಕೆಯಾಗಿದ್ದರೂ ಸಹ 2024ರಲ್ಲಿ ನಡೆದಿದ್ದ ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದರೂ ಆಯ್ಕೆಯಾಗಿರಲಿಲ್ಲ ಎಂದು ವಿವರ ಒದಗಿಸಿದ್ದರು.
ಪರೀಕ್ಷೆಗೂ ಮುನ್ನವೇ ಬಂದಿತ್ತು ಮೊಬೈಲ್ ಗೆ ಕರೆ
2025ರ ಡಿಸೆಂಬರ್ ತಿಂಗಳಲ್ಲಿ, 91820125725 ಸಂಖ್ಯೆಯಿಂದ ತಮ್ಮ ಮೊಬೈಲ್ಗೆ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಪವನ್ ಕುಮಾರ್ ರೆಡ್ಡಿ ಎಂದು ಪರಿಚಯಿಸಿಕೊಂಡಿದ್ದ. ಅದೇ ದಿನ ಬೀದರ್ನ ನೌಬಾದ್ನಲ್ಲಿ ಭೇಟಿಯಾಗುವಂತೆ ತಿಳಿಸಿದ್ದರು. ತಮಗೆ ಆಯ್ಕೆ ಮಾಡಿಸಲು ಸಹಾಯ ಮಾಡಬಹುದು ಎಂದು ಹೇಳಿದ್ದರು. ಪವನ್ ಕುಮಾರ್ ರೆಡ್ಡಿ ಅವರ ಪರಿಚಯ ತಮಗಿರದಿದ್ದರೂ ಅವರು ಸೂಚಿಸಿದ ಸ್ಥಳಕ್ಕೆ ಡಾ ಗಣೇಶ್ ಕುಮಾರ್ ಹೋಗಿದ್ದರು. ಭೇಟಿಯ ಸಂದರ್ಭದಲ್ಲಿ, ಖಚಿತ ಅಂತಿಮ ಆಯ್ಕೆ ಮಾಡಿಸಲು ₹30 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಪಾವತಿಸದೆ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲ ಎಂದೂ ತಿಳಿಸಿದ್ದರು.

ಪ್ರಸ್ತಾಪ ನಿರಾಕರಿಸಿದ್ದ ಗಣೇಶ್- ತಂದೆಯಿಂದ ತರಾಟೆ
ಪವನ್ ಕುಮಾರ್ ರೆಡ್ಡಿ ನೀಡಿದ್ದ ಪ್ರಸ್ತಾಪವನ್ನು ಡಾ ಗಣೇಶ್ ಕುಮಾರ್ ನಿರಾಕರಿಸಿದ್ದರು. ಅಲ್ಲದೇ ಈ ವಿಷಯವನ್ನು ತಂದೆಯೊಂದಿಗೆ ಹಂಚಿಕೊಂಡಿದ್ದರು. ಆಗ ವ್ಯಕ್ತಿಯನ್ನು ಭೇಟಿಯಾಗಿದ್ದಕ್ಕಾಗಿ ತಂದೆಯವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಮುಂದೆ ಅಂತಹ ವ್ಯಕ್ತಿಗಳನ್ನು ಸಂಪರ್ಕಿಸಬಾರದು ಎಂದು ಸೂಚಿಸಿದ್ದರು.
ಯಾವುದೇ ಪೂರ್ವ ಪರಿಚಯವಿಲ್ಲದಿದ್ದರೂ ಪವನ್ ಕುಮಾರ್ ರೆಡ್ಡಿ ಅವರು 025ರ ಡಿಸೆಂಬರ್ನಲ್ಲಿ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ್ದ. ಬೀದರ್ನ ನೌಬಾದ್ನಲ್ಲಿ ಭೇಟಿಯಾಗಿ, ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಖಚಿತ ಆಯ್ಕೆ ಮಾಡಿಸಲು ₹30 ಲಕ್ಷ ಅಕ್ರಮ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಲಂಚ ಪಾವತಿಸದೆ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲ ಎಂದೂ ಅವರು ತಿಳಿಸಿದ್ದರು. ಹಣದ ಕೊರತೆಯಿಂದ ಡಾ. ಗಣೇಶ್ ಕುಮಾರ್ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದರು.
ಅದೇ ತಿಂಗಳಲ್ಲಿ ಪವನ್ ಕುಮಾರ್ ರೆಡ್ಡಿ ಅವರು ಡಾ. ಬಸವರಾಜ್ ವಡಾರಿ ಅವರನ್ನು ಸಂಪರ್ಕಿಸಿ, ಅಂತಿಮವಾಗಿ ಅದೇ ₹30 ಲಕ್ಷ ಪಾವತಿಸಲು ಒಪ್ಪಿಕೊಂಡಿದ್ದರು ಎಂದು ನೀಡಿದ್ದ ಅವರ ಹೇಳಿಕೆಗೆ ಡಾ. ಗಣೇಶ್ ಕುಮಾರ್ ಅವರ ಹೇಳಿಕೆಯು ಪೂರಕವಾಗಿದೆ. ಪವನ್ ಕುಮಾರ್ ರೆಡ್ಡಿ ಅವರು ತಮಗಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದರು ಎಂದು ಬಸವರಾಜ್ ಕನ್ನಾಳೆ ಅವರ ಹೇಳಿಕೆಗಳನ್ನು ಇದು ಪುಷ್ಟೀಕರಿಸುತ್ತದೆ ಎಂದು ಜಾರಿ ನಿರ್ದೇಶನಾಲಯವು ವಿವರಿಸಿದೆ.

ಹೀಗಾಗಿ, ವಿಶೇಷವಾಗಿ ಬೀದರ್ ಪ್ರದೇಶದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳನ್ನು ಪವನ್ ಕುಮಾರ್ ರೆಡ್ಡಿ ಅವರು ಸಕ್ರಿಯವಾಗಿ ಸಂಪರ್ಕಿಸಿದ್ದ,. ಬಸವರಾಜ್ ಕನ್ನಾಳೆ ಅವರ ಪರವಾಗಿ ಭರವಸೆ ನೀಡಿದ್ದ. ಖಚಿತವಾಗಿ ಆಯ್ಕೆ ಮಾಡಿಸುವುದಾಗಿ ಹೇಳಿ ನಂಬಿಸುತ್ತಿದ್ದ ಮತ್ತು ಅಕ್ರಮ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಜಾರಿ ನಿರ್ದೇಶನಾಯವು ದೋಷಾರೋಪಣೆ ಪಟ್ಟಿಯಲ್ಲಿ ಹೇಳಿದೆ.
ವಿನೋದ್ ಸುಧಾಕರ್ ನಾಯಕ್ ಎಂಬ ಅಭ್ಯರ್ಥಿಯೂ ಸಹ ಪರೀಕ್ಷೆಯಲ್ಲಿ ಆಯ್ಕೆಯಾಗಿ 7ನೇ ರ್ಯಾಂಕ್ ಪಡೆದಿದ್ದರು. ಇವರಿಗೂ ಕನ್ನಾಳೆ ಭರವಸೆ ನೀಡಿದ್ದ. ದೇವನಹಳ್ಳಿಯ ಆರ್ಕಿಡ್ ನಿರ್ವಾಣದಲ್ಲಿ ಶ್ರೀ ಕನ್ನಾಳೆ ಅವರಿಂದ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದರು.

ಡಾ. ವಿನೋದ್ ಸುಧಾಕರ್ ನಾಯಕ್ ಅವರು 2018ರಲ್ಲಿ ಬೀದರ್ನ ಪಶುವೈದ್ಯಕೀಯ ಕಾಲೇಜಿನಿಂದ V.Sc. & A.H. ಪದವಿಯನ್ನು ಪೂರ್ಣಗೊಳಿಸಿದ್ದರು. ಬೆಂಗಳೂರಿನ ಯಲಹಂಕದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆ-2024ಕ್ಕೆ (ನೋಂದಣಿ ಸಂಖ್ಯೆ: 241418480) ಹಾಜರಾಗಿ 7ನೇ ರ್ಯಾಂಕ್ ಪಡೆದಿದ್ದರು. ಇವರು ಬರೆದಿದ್ದ OMR ಉತ್ತರ ಪತ್ರಿಕೆಯ ವಿಶ್ಲೇಷಣೆಯನ್ನು ಮುಂದಿರಿಸಿದ್ದ ತನಿಖಾಧಿಕಾರಿಗಳು ಈ ಬಗ್ಗೆ ವಿಚಾರಣೆ ಮಾಡಿದ್ದರು. ತಮ್ಮ ಉತ್ತರಗಳು ಆರಂಭಿಕ ಕೀ ಉತ್ತರಗಳೊಂದಿಗೆ ಏಕೆ ಹೊಂದಿಕೆಯಾಗಿದ್ದವು ಎಂದು ಕೇಳಿದ್ದರು.
50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕನ್ನಾಳೆ
ವಿನೋದ್ ಸುಧಾಕರ್ ನಾಯಕ್ ಅವರಿಗೂ ಬಸವರಾಜ ಕನ್ನಾಳೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ₹50 ಲಕ್ಷ ಅಕ್ರಮ ಹಣ ಪಾವತಿಸಿದರೆ ತಮ್ಮ ಆಯ್ಕೆಯನ್ನು ಖಚಿತಪಡಿಸುವುದಾಗಿ ಭರವಸೆ ನೀಡಿದ್ದರು. ನಂತರ ಆ ಮೊತ್ತವನ್ನು ₹35 ಲಕ್ಷಕ್ಕೆ ಇಳಿಸಿದ್ದರು. ಕನ್ನಾಳೆ ಅವರ ಸೂಚನೆಯಂತೆ ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಸ್ಥಳವೊಂದಕ್ಕೆ ತೆರಳಿದ್ದರು. ಅಲ್ಲಿಂದ ಮೊಹಮ್ಮದ್ ಸೊಹೈಲ್ ಅವರೊಂದಿಗೆ ಅವರನ್ನು ಆರ್ಕಿಡ್ ನಿರ್ವಾಣ ಹೌಸಿಂಗ್ ಸೊಸೈಟಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಕನ್ನಾಳೆ ಅವರು ಸುಮಾರು 70–80 ಪ್ರಶ್ನೆಗಳಿದ್ದ ದ್ವಿಭಾಷಾ ಪ್ರಶ್ನೆಪತ್ರಿಕೆಗಳನ್ನು ನೀಡಿದ್ದರು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಗುರುತಿಸಲಾಗಿತ್ತು. ಅವುಗಳನ್ನು ಕಂಠಪಾಠ ಮಾಡುವಂತೆ ಸೂಚಿಸಿದ್ದರು.
ಡಾ. ಬಸವರಾಜ್ ವಡಾರಿ ಸೇರಿದಂತೆ ಹಲವಾರು ಅಭ್ಯರ್ಥಿಗಳು ಆ ಸ್ಥಳದಲ್ಲಿ ಹಾಜರಿದ್ದರು. ತಾವು ರಾತ್ರಿಯಿಡೀ ಉತ್ತರಗಳನ್ನು ಕಂಠಪಾಠ ಮಾಡಿದ್ದಾಗಿ ತಿಳಿಸಿದ್ದರು. 2026ರ ಜನವರಿ 9ರಂದು ನಡೆದ ಪರೀಕ್ಷೆಯಲ್ಲಿನ ಪ್ರಶ್ನೆಗಳು ಕನ್ನಾಳೆ ಅವರು ನೀಡಿದ್ದ ಪ್ರಶ್ನೆಗಳಂತೆಯೇ ಇದ್ದವು. ನಂತರ ಕನ್ನಾಳೆ ಅವರು ಒಪ್ಪಿಕೊಂಡಿದ್ದ ಅಕ್ರಮ ಹಣವನ್ನು ಪಾವತಿಸುವಂತೆ ಕೇಳಿದ್ದರು. ಆದರೆ ತಮ್ಮ ಹೇಳಿಕೆ ದಾಖಲಿಸಿದ ದಿನಾಂಕದವರೆಗೆ ತಾವು ಆ ಹಣವನ್ನು ಪಾವತಿಸಿರಲಿಲ್ಲ ಎಂದು ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಲಂಚದ ಹಣ ಪಾವತಿಯಾಗಿದ್ದು ಯಾರಿಗೆ? ಕಮಿಷನ್ ಇಲ್ಲದೆಯೇ ಪಾವತಿ!
ಲಂಚದ ಹಣವನ್ನು ಯಾರಿಗೆ ಪಾವತಿಸಬೇಕಾಗಿತ್ತು ಎಂದು ತನಿಖಾಧಿಕಾರಿಯು ಕೇಳಿದ್ದರು. ಆಗ ಬಸವರಾಜ್ ಕನ್ನಾಳೆ ಅವರು ಕೆಪಿಎಸ್ಸಿ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್, ಪರೀಕ್ಷಾ ನಿಯಂತ್ರಕರಾದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಕೆಪಿಎಸ್ಸಿ ಇತರ ಸದಸ್ಯರೊಂದಿಗೆ ವೈಯಕ್ತಿಕ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದರು ಎಂದು ತಿಳಿಸಿದ್ದರು. ಒಟ್ಟು ₹35 ಲಕ್ಷದ ಅಕ್ರಮ ಹಣವನ್ನು ಯಾವುದೇ ಕಮಿಷನ್ ಉಳಿಸಿಕೊಳ್ಳದೆ ಈ ಅಧಿಕಾರಿಗಳಿಗೆ ಪಾವತಿಸಬೇಕಾಗುತ್ತದೆ ಎಂದು ಕನ್ನಾಳೆ ತಮಗೆ ತಿಳಿಸಿದ್ದರು ಎಂದು ವಿನೋದ್ ಅವರು ತನಿಖಾಧಿಕಾರಿ ಮುಂದೆ ಬಾಯಿಬಿಟ್ಟಿರುವುದು ತಿಳಿದು ಬಂದಿದೆ.
ಸಿದ್ಧಾರ್ಥ್ ಅವರು ನೀಡಿದ ಹೇಳಿಕೆಯ ಸಾರಾಂಶ
ಡಾ. ಸಿದ್ಧಾರ್ಥ್ ಅವರು 2026ರ ಜನವರಿ 9ರಂದು ಕೆಪಿಎಸ್ಸಿ ನಡೆಸಿದ್ದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿ 3ನೇ ರ್ಯಾಂಕ್ ಪಡೆದಿದ್ದರು. ಇವರನ್ನೂ ಸಹ ಸಂಪರ್ಕಿಸಿದ್ದ ಪವನ್ ಕುಮಾರ್ ರೆಡ್ಡಿ, ಲಂಚದ ಮೂಲಕ ಖಚಿತ ಆಯ್ಕೆ ಮಾಡಿಸುವುದಾಗಿ ಅವರಿಗೆ ಭರವಸೆ ನೀಡಿದ್ದ. ಅಲ್ಲದೆ, ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪವನ್ ಕುಮಾರ್ ರೆಡ್ಡಿ ಅವರಿಂದ ಪಡೆದಿದ್ದ. ಪರೀಕ್ಷೆಯ ಹಿಂದಿನ ದಿನ, ಅಂದರೆ 2026ರ ಜನವರಿ 8 ರಂದು ದೇವನಹಳ್ಳಿಯ ಆರ್ಕಿಡ್ ನಿರ್ವಾಣದಲ್ಲಿ ಬಸವರಾಜ್ ಕನ್ನಾಳೆ ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಅವರಿಗೆ ನೀಡಿದ್ದರು. M/s ಓಂ ಲಕ್ಷ್ಮೀ ಮತ್ತು ಶ್ರೀ ಬಾಲು ರೆಡ್ಡಿ ಅವರ ಖಾತೆಗಳಿಗೆ ಅವರು ಒಟ್ಟು ₹20 ಲಕ್ಷ ಅಕ್ರಮ ಹಣ ಪಾವತಿಸಿದ್ದರು ಎಂದು ಹೇಳಿಕೆ ನೀಡಿರುವುದು ಗೊತ್ತಾಗಿದೆ.

ಡಾ. ಸಿದ್ಧಾರ್ಥ್ ಅವರು 2024ರ ಆಗಸ್ಟ್ನಿಂದ ಕರ್ನಾಟಕದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ (AHVS) ಗುತ್ತಿಗೆ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2025ರ ಅಕ್ಟೋಬರ್ನಲ್ಲಿ ತಮ್ಮ ಸಹೋದ್ಯೋಗಿ ಡಾ. ಓಂ ಪ್ರಕಾಶ್ ಅವರ ಸ್ನೇಹಿತರಾದ ಪವನ್ ಕುಮಾರ್ ರೆಡ್ಡಿ ಅವರು ತಮ್ಮನ್ನು ಮತ್ತು ಡಾ. ರಾಜ್ ಮೊಹಮ್ಮದ್ ಅವರನ್ನು ಸಂಪರ್ಕಿಸಿದ್ದರು. ತಲಾ ₹60 ಲಕ್ಷ ಅಕ್ರಮ ಹಣಕ್ಕೆ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ತಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಆರಂಭದಲ್ಲಿ ಅವರು ಹಿಂಜರಿದಿದ್ದರು. ನಂತರ ಪವನ್ ಕುಮಾರ್ ರೆಡ್ಡಿ ಅವರು ಅವರ ಆರ್ಥಿಕ ಹಿನ್ನೆಲೆ ಮತ್ತು ವರ್ಗವನ್ನು ಪರಿಗಣಿಸಿ ಮೊತ್ತವನ್ನು ₹25 ಲಕ್ಷಕ್ಕೆ ಇಳಿಸಿದ್ದರು. ₹15 ಲಕ್ಷವನ್ನು ಮುಂಗಡವಾಗಿ ಮತ್ತು ಉಳಿದ ₹10 ಲಕ್ಷವನ್ನು ಪರೀಕ್ಷೆಯ ನಂತರ ಪಾವತಿಸಲು ಅವರು ಒಪ್ಪಿಕೊಂಡಿದ್ದರು. ಮುಂಗಡ ಹಣ ಪಾವತಿಸಲಾಗಿತ್ತೇ ಎಂದು ತನಿಖಾಧಿಕಾರಿ ವಿಚಾರಿಸಿದಾಗ ಪವನ್ ಕುಮಾರ್ ರೆಡ್ಡಿ ಅವರು ಕರೆ ಮಾಡಿ ತಕ್ಷಣ ₹15 ಲಕ್ಷ ಹೊಂದಿಸುವಂತೆ ತಿಳಿಸಿದ್ದರು ಎಂದು ಹೇಳಿಕೆ ನೀಡಿರುವುದು ಗೊತ್ತಾಗಿದೆ.
ಸೋದರನ ಮೂಲಕ ಒಮ್ಮೆ 10 ಮತ್ತು ಮಗದೊಮ್ಮೆ 15 ಲಕ್ಷ ಹಣ ವರ್ಗಾಯಿಸಿದ್ದರು. ಹಣ ಪಾವತಿಯಾಗಿರುವುದು ದೃಢಪಟ್ಟ ನಂತರ, ಪವನ್ ಕುಮಾರ್ ರೆಡ್ಡಿ ಅವರು ತಮ್ಮನ್ನು, ಡಾ. ರಾಜ್ ಮೊಹಮ್ಮದ್, ಡಾ. ಬಸವರಾಜ್ ವಡಾರಿ ಮತ್ತು ಇತರ ಅಭ್ಯರ್ಥಿಗಳನ್ನು ವಾಹನದಲ್ಲಿ ದೇವನಹಳ್ಳಿಯ ಆರ್ಕಿಡ್ ನಿರ್ವಾಣಕ್ಕೆ ಕರೆದೊಯ್ದಿದ್ದರು. ಅಲ್ಲಿ ಬಸವರಾಜ್ ಕನ್ನಾಳೆ ಅವರು ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೀಡತ್ತಾರೆ. ಮತ್ತು ಅದಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ಅದೇ ರೀತಿ ಕನ್ನಾಳೆ ಅವರು ಸಾಮಾನ್ಯ ಮತ್ತು ನಿರ್ದಿಷ್ಟ ವಿಷಯದ ಪತ್ರಿಕೆಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರಗಳ ಸಹಿತ ಒದಗಿಸಿದ್ದರು.

ಸಿದ್ದಾರ್ಥ ಅವರು 2026ರ ಫೆಬ್ರವರಿಯಲ್ಲಿ ₹13 ಲಕ್ಷದ ವೈಯಕ್ತಿಕ ಸಾಲ ಪಡೆದಿದ್ದರು.ಪವನ್ ಕುಮಾರ್ ರೆಡ್ಡಿ ಅವರು ನೀಡಿದ್ದ ಶ್ರೀ ಬಾಲು ರೆಡ್ಡಿ ಅವರ ಬ್ಯಾಂಕ್ ಖಾತೆಗೆ ₹5 ಲಕ್ಷ ವರ್ಗಾಯಿಸಿದ್ದರು. ಉಳಿದ ₹5 ಲಕ್ಷವನ್ನು ನೇಮಕಾತಿಯ ನಂತರ ಪಾವತಿಸಲು ಸಮಯಾವಕಾಶ ಕೇಳಿದ್ದರು. ಈ ಬ್ಯಾಂಕ್ ಖಾತೆಗಳ ಮೂಲಕ ಶ್ರೀ ಬಸವರಾಜ್ ಕನ್ನಾಳೆ ಅವರಿಗೆ ಒಟ್ಟು ₹20 ಲಕ್ಷ ಅಕ್ರಮ ಹಣ ಪಾವತಿಸಲಾಗಿತ್ತು ಎಂದು ಸಿದ್ದಾರ್ಥ ಅವರು ತನಿಖಾಧಿಕಾರಿ ಮುಂದೆ ದೃಢಪಡಿಸಿರುವುದು ತಿಳಿದು ಬಂದಿದೆ.

ಡಾ. ಸಿದ್ಧಾರ್ಥ್ ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯ ಮೂಲಕ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಮತ್ತು M/s ಓಂ ಲಕ್ಷ್ಮೀ ಹಾಗೂ ಶ್ರೀ ಬಾಲು ರೆಡ್ಡಿ ಅವರ ಖಾತೆಗಳ ಮೂಲಕ ವರ್ಗಾಯಿಸಲಾದ ₹20 ಲಕ್ಷ ಅಕ್ರಮ ಹಣವು ಕೆಪಿಎಸ್ಸಿ ನಡೆಸಿದ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಜಾರಿ ನಿರ್ದೇಶನಾಲಯವು ವಿವರಿಸಿದೆ.




