Tuesday | November 17, 2026 |

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಪಡೆದು, ಅದನ್ನು ಅಭ್ಯರ್ಥಿಗಳ ನಡುವೆ ಬಸವರಾಜ ಕನ್ನಾಳೆ  ಹಂಚಿದ್ದರು. ಅಲ್ಲದೇ  ಅಭ್ಯರ್ಥಿಗಳಿಂದ ಸ್ವೀಕರಿಸಿದ ಅಕ್ರಮ ಹಣವನ್ನು ವರ್ಗಾಯಿಸುವ ಕಾರ್ಯವನ್ನೂ ನಿರ್ವಹಿಸಿದ್ದರು!

ಪಶುವೈದ್ಯಾಧಿಕಾರಿಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಮತ್ತಿತರ ಪ್ರಕ್ರಿಯೆಗಳಲ್ಲಿ ಬಸವರಾಜ ಕನ್ನಾಳೆ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್ ಗಂಗ್ವಾರ್ ಮಧ್ಯೆ ನಡೆದಿರುವ ಹಣಕಾಸಿನ ವಹಿವಾಟನ್ನು ಜಾರಿ ನಿರ್ದೇಶನಾಲಯವು ತನಿಖೆ ವೇಳೆ ಪತ್ತೆ ಹಚ್ಚಿದೆ.

ಜಾರಿ ನಿರ್ದೇಶನಾಲಯವು ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವ ಪ್ರಕಾರ  ಬಸವರಾಜ್ ಕನ್ನಾಳೆ ಅವರು ಆಗಿನ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಆಪ್ತ ಸಹವರ್ತಿಯಾಗಿದ್ದರು. ಅವರ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸುತ್ತಿದ್ದರು.

2026ರ ಜನವರಿಯಲ್ಲಿ ನಡೆದಿದ್ದ ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಮತ್ತು ಸರಿಯಾದ ಉತ್ತರಗಳು ಹೇಗೆಲ್ಲಾ ಅಭ್ಯರ್ಥಿಗಳ ಮಧ್ಯೆ ಹಂಚಿಕೆಯಾಗಿದ್ದವು, ಇದರ ಹಿಂದೆ ನಡೆದಿದೆ ಎನ್ನಲಾಗಿರುವ ಹಣದ ವಹಿವಾಟು ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಸಮಗ್ರ ವಿವರಗಳಿವೆ.

ಇದರ  ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಈ ಹಗರಣದಲ್ಲಿ 4ನೇ ಆರೋಪಿಯಾಗಿರುವ ಬಸವರಾಜ ಕನ್ನಾಳೆ ಅವರನ್ನು 2026ರ ಸೆ. 12, 13 30, ಅಕ್ಟೋಬರ್‍‌ 1, 2, 4, 5, 8, 9, 10, 11, 12, 24ರಂದು ವಿಚಾರಣೆಗೊಳಪಡಿಸಿದ್ದ ಜಾರಿ ನಿರ್ದೇಶನಾಲಯವು ಹಣಕಾಸಿನ ವಹಿವಾಟಿನ ಬಗ್ಗೆ  ಹೇಳಿಕೆ ಪಡೆದುಕೊಂಡಿದೆ.

ಬಸವರಾಜ್ ಅಲಿಯಾಸ್ ಬಸವರಾಜ್ ಕನ್ನಾಳೆ,   ಬೀದರ್ ಜಿಲ್ಲೆಯ ಭಾಲ್ಕಿ ಮೂಲದವ.  ತಮ್ಮ ಮಾಲೀಕತ್ವದ M/s Bhagavati Enterprises ಸಂಸ್ಥೆಯ ಮೂಲಕ ರಿಯಲ್ ಎಸ್ಟೇಟ್, ಹೈನುಗಾರಿಕೆ, ಬಸ್ ಕಾರ್ಯಾಚರಣೆ ಮತ್ತು ಕೃಷಿ ವ್ಯಾಪಾರ ನಡೆಸುತ್ತಿರುವುದಾಗಿ ತಿಳಿಸಿದರು.

ಗಂಗ್ವಾರ್ ಹಣಕಾಸಿನ ವಹಿವಾಟು  ನಿರ್ವಹಿಸುತ್ತಿದ್ದ ಕನ್ನಾಳೆ

2019ರಲ್ಲಿ  ಗಂಗ್ವಾರ್ ಅವರು ಬೀದರ್‌ನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ಅವರನ್ನು ಭೇಟಿಯಾಗಿದ್ದಾಗಿದ್ದರು.  ಗಂಗ್ವಾರ್ ಅವರು ಆಹಾರ ಜಾಗೃತ ಆಯುಕ್ತರಾಗಿ ಮತ್ತು ನಂತರ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಬೆಳೆದಿತ್ತು. ಅವರ ಹಣಕಾಸಿನ ವಹಿವಾಟುಗಳನ್ನು ತಾವೇ ನಿರ್ವಹಿಸುತ್ತಿದ್ದರು ಎಂದು ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಗಂಗ್ವಾರ್‍‌ ಬಳಕೆಗಾಗಿಯೇ ಬ್ಯಾಂಕ್‌ ಖಾತೆ- ಖಾತೆ  ನಿರ್ವಹಿಸುತ್ತಿದ್ದ  ಕನ್ನಾಳೆ

2022ರಲ್ಲಿ ಆನಂದರಾವ್ ವೃತ್ತದಲ್ಲಿ ತೆರೆಯಲಾಗಿದ್ದ ಆಕ್ಸಿಸ್ ಬ್ಯಾಂಕ್ ಖಾತೆಯು ಸಂಪೂರ್ಣವಾಗಿ  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಬಳಕೆಗಾಗಿ ತೆರೆಯಲಾಗಿತ್ತು. ಆದರೆ, ತಾವೂ ಆ ಖಾತೆಯನ್ನು ಬಳಸುತ್ತಿದ್ದುದಾಗಿ ತಿಳಿಸಿದರು.  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸರಿಯಾದ ಉತ್ತರಗಳೊಂದಿಗೆ ಸಾಫ್ಟ್ ಕಾಪಿ ರೂಪದಲ್ಲಿ ಪೆನ್‌ಡ್ರೈವ್‌ನಲ್ಲಿ ತಮಗೆ ಹಸ್ತಾಂತರಿಸಿದ್ದರು ಎಂದು ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

2026ರ ಜನವರಿ 8ರಂದು ಪವನ್ ರೆಡ್ಡಿ ಎಂಬಾತನ ಮೂಲಕ ಒಟ್ಟು 9 ಅಭ್ಯರ್ಥಿಗಳನ್ನು ಆರ್ಕಿಡ್‌ ನಿರ್ಮಾಣದಲ್ಲಿರುವ Airbnb ವಿಲ್ಲಾಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರ ನಡುವೆ ಪ್ರಶ್ನೆಪತ್ರಿಕೆಯನ್ನು ಹಂಚಲಾಗಿತ್ತು. ಪ್ರತಿ ಅಭ್ಯರ್ಥಿಯಿಂದ ಸುಮಾರು ₹40 ಲಕ್ಷ , ಇದರಲ್ಲಿ ರಾಜ್ ಮೊಹಮ್ಮದ್ ಅವರಿಂದ ₹30 ಲಕ್ಷ ಶುಲ್ಕ ವಿಧಿಸಿದ್ದರು.  ಸುಮಾರು ₹1.10 ಕೋಟಿ ಮುಂಗಡವಾಗಿ ಸ್ವೀಕರಿಸಲಾಗಿತ್ತು.  ಮತ್ತು ಆ ನಗದು ಹಣದ ಬಹುಪಾಲನ್ನು  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಹಸ್ತಾಂತರಿಸಲಾಗಿತ್ತು. ವಿಶೇಷವೆಂದರೇ 9 ಅಭ್ಯರ್ಥಿಗಳು ವಿಲ್ಲಾಕ್ಕೆ ಹೋದ ದಿನವೇ ಪರೀಕ್ಷೆ ನಡೆದಿತ್ತು.

ಅಭ್ಯರ್ಥಿಗಳಿಂದ ಲಕ್ಷ ಲಕ್ಷ ಸ್ವೀಕಾರ

ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಾದ ಡಾ. ಕಿರಣ್ ಕುಮಾರ್ ಗೌಡ ಅವರಿಂದ ₹10 ಲಕ್ಷ, ಡಾ. ರಾಜ್ ಮೊಹಮ್ಮದ್ ಅವರಿಂದ ₹25 ಲಕ್ಷ ಮತ್ತು ಡಾ. ಅಮರೇಗೌಡ ಅವರಿಂದ ₹10 ಲಕ್ಷ ನಗದು ಸ್ವೀಕರಿಸಿದ್ದಾಗಿ ತಿಳಿಸಿದರು. ಕಮಲಾಪತಿ ಅವರು  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸಹೋದರರಾಗಿದ್ದರು.  ಅವರ ಹೆಸರಿನಲ್ಲಿ ದೇವನಹಳ್ಳಿಯ ಗೋದ್ರೇಜ್ ಪ್ರಾಪರ್ಟೀಸ್‌ನಲ್ಲಿ ಒಂದು ಫ್ಲ್ಯಾಟ್ ಖರೀದಿಸಲಾಗಿತ್ತು ಎಂದು ತನಿಖಾಧಿಕಾರಿ ಮುಂದೆ ಹೇಳಿಕೆ  ನೀಡಿರುವುದು ತಿಳಿದು ಬಂದಿದೆ.

ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯಂತೆ ಯಾಶಿ ಜೈಸ್ವಾಲ್ ಮತ್ತು ಗರಿಮಾ ಪಾಂಡೆ ಅವರಿಗೆ ಹಣ ಕಳುಹಿಸುತ್ತಿದ್ದರು.  ತಿಳಿಸಿದರು.

 

 

ಪರೀಕ್ಷೆ ನಡೆಯುವ ಹಿಂದಿನ ದಿನ ಅಂದರೇ 2026ರ ಜನವರಿ 7ರಂದು  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಉತ್ತರಗಳೊಂದಿಗೆ ಪ್ರಶ್ನೆಪತ್ರಿಕೆಯನ್ನು ಕನ್ನಾಳೆ ಪೆನ್‌ಡ್ರೈವ್‌ನಲ್ಲಿ ಸ್ವೀಕರಿಸಿದ್ದರು. ತಮ್ಮ ನಿವಾಸದಲ್ಲಿ ಅದರ ಪ್ರಿಂಟ್‌ಔಟ್‌ಗಳನ್ನು ತೆಗೆದುಕೊಂಡು, ನಂತರ ಪೆನ್‌ಡ್ರೈವ್ ಅನ್ನು ನಾಶಪಡಿಸಿ, ಪ್ರಿಂಟ್‌ಔಟ್‌ಗಳನ್ನು ವಿಲ್ಲಾದ ಸಮೀಪ ಸುಟ್ಟುಹಾಕಿದ್ದಾಗಿ ಹೇಳಿದರು

 

 

.2026ರ ಜನವರಿ 8ರಂದು  ಡಾ. ಕಿರಣ್ ಗೌಡ ಬಿ.ಎಸ್. ಮತ್ತು ಇತರ ಎಂಟು ಅಭ್ಯರ್ಥಿಗಳನ್ನು ವಿಲ್ಲಾದಲ್ಲಿ ಇರಿಸಲಾಗಿತ್ತು. ಸರಿಯಾದ ಉತ್ತರಗಳನ್ನು ಗುರುತಿಸಲಾಗಿದ್ದ ಪ್ರಶ್ನೆಪತ್ರಿಕೆಯ ಎರಡು ಸೆಟ್‌ಗಳನ್ನು ತಮ್ಮ ಸಹಾಯಕರಾದ  ಪವನ್ ರೆಡ್ಡಿ, ಪ್ರಶಾಂತ್ ಕನ್ನಾಳೆ ಮತ್ತು  ಪ್ರವೀಣ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಅಭ್ಯರ್ಥಿಗಳ ನಡುವೆ ಹಂಚಲಾಗಿತ್ತು ಎಂದು ತನಿಖಾಧಿಕಾರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

1.50 ಕೋಟಿ ಸಂಗ್ರಹ

ಈ ರೀತಿಯಲ್ಲಿ ಸುಮಾರು ₹1.50 ಕೋಟಿ ಸಂಗ್ರಹಿಸಲಾಗಿತ್ತು ಎಂದು ಬಸವರಾಜ ಕನ್ನಾಳೆ ತನಿಖಾಧಿಕಾರಿಗೆ ವಿವರಣೆ ಒದಗಿಸಿದ್ದಾರೆ. ಡಾ  ಕಿರಣ್ ಗೌಡ  ಬಿ.ಎಸ್. ಅವರಿಂದ ಪಾವತಿಸಬೇಕಿದ್ದ ಬಾಕಿ ಮೊತ್ತಕ್ಕೆ ಭದ್ರತೆಯಾಗಿ  ರಾಕೇಶ್ ಜಿ.ಎಸ್. ಅವರು ₹80,00,000 ಮೊತ್ತದ ಸಹಿ ಮಾಡಿದ ಚೆಕ್‌ಗಳು ಮತ್ತು ಸಹಿ ಮಾಡಿದ ಖಾಲಿ ಪ್ರಾಮಿಸರಿ ನೋಟುಗಳನ್ನು ಹಸ್ತಾಂತರಿಸಿದ್ದರು.  ಡಾ. ರಾಜ್ ಮೊಹಮ್ಮದ್ ಅವರ ಹೇಳಿಕೆಯನ್ನು ಮುಂದಿಟ್ಟಿದ್ದ ತನಿಖಾಧಿಕಾರಿಯು ಕನ್ನಾಳೆಯನ್ನು ವಿಚಾರಿಸಿದ್ದರು. ಆಗ ಅವರು 2026ರ ಜನವರಿ 8ರಂದು  ಒಪ್ಪಂದದಂತೆ ₹30 ಲಕ್ಷ ಮೊತ್ತಕ್ಕೆ ಪ್ರಶ್ನೆಪತ್ರಿಕೆಯನ್ನು ಅವರಿಗೆ ನೀಡಲಾಗಿತ್ತು. ಅದರಲ್ಲಿ ಕೇವಲ ₹5 ಲಕ್ಷ ಮಾತ್ರ ಸ್ವೀಕರಿಸಲಾಗಿತ್ತು ಎಂದು ತಿಳಿಸಿದರು.

ಆರ್ಕಿಡ್ ನಿರ್ವಾಣದ ಪ್ರಾಪರ್ಟಿ ಮ್ಯಾನೇಜರ್  ಕಾರ್ತಿಕ್ ಎಂ. ಅವರು, ತಾವು ಬುಕ್ ಮಾಡಿದ್ದ ನಾಲ್ಕು ವಿಲ್ಲಾಗಳಲ್ಲಿ 20ಕ್ಕೂ ಹೆಚ್ಚು ಜನರು ವಾಸ್ತವ್ಯ ಹೂಡಿದ್ದರು ಎಂದು ನೀಡಿದ ಹೇಳಿಕೆಯನ್ನು ಮುಂದಿಟ್ಟು ವಿಚಾರಿಸಿದಕ್ಕೆ ಕನ್ನಾಳೆ  ಯಾವುದೇ ವಿವರಣೆ ನೀಡಲು ಸಾಧ್ಯವಾಗಲಿಲ್ಲ. ಇದಲ್ಲದೆ, ನಾಲ್ಕರಿಂದ ಐದು ಅಭ್ಯರ್ಥಿಗಳು ತಮ್ಮ ಕುಟುಂಬ ಸದಸ್ಯರ ಖಾತೆಗಳಿಂದ ಸುಮಾರು ₹80 ಲಕ್ಷವನ್ನು ಭಾಲ್ಕಿಯ M/s Om Lakshmi Souharda Sahakari Niyamita ಖಾತೆಗೆ ವರ್ಗಾಯಿಸಿದ್ದರು. ಅದರಲ್ಲಿ ಸುಮಾರು ₹14 ಲಕ್ಷವನ್ನು  ಓಂಕಾರ್ ಅವರು ಯಾಶಿ ಜೈಸ್ವಾಲ್ ಅವರ ಹೆಸರಿನಲ್ಲಿ ಖರೀದಿಸಲಾದ ಆಭರಣಗಳಿಗಾಗಿ M/s Bhima Jewellers ಸಂಸ್ಥೆಗೆ ವರ್ಗಾಯಿಸಿದ್ದರು ಎಂದರು.

 

 

ಫೋನ್‌ಪೇ ವಹಿವಾಟುಗಳ ಬಗ್ಗೆಯೂ ತನಿಖಾಧಿಕಾರಿಯು ವಿಚಾರಣೆ  ನಡೆಸಿದ್ದರು. ಯಾಶಿ ಜೈಸ್ವಾಲ್ ಅವರಿಗೆ ₹40,000 ಮತ್ತು ₹1,99,999 ಹಾಗೂ ಗಂಗ್ವಾರ್ ಅವರ ಕ್ವಾರ್ಟರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ  ಕಿಶೋರ್ ಪಾಸ್ವಾನ್ ಅವರಿಗೆ ₹15,610 ಪಾವತಿಸಿರುವುದನ್ನು ಒಪ್ಪಿಕೊಂಡರು. ಅಲ್ಲದೆ,  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಬಳಸುತ್ತಿದ್ದ  7892795267 ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡಿದ್ದನ್ನೂ ಒಪ್ಪಿಕೊಂಡಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಸಲ್ಲಿಸಿರುವ ಹೇಳಿಕೆಯಿಂದ ತಿಳಿದು ಬಂದಿದೆ.

ಈ ಪಾವತಿಗಳನ್ನು ಗಂಗ್ವಾರ್ ಅವರ ಸೂಚನೆಯಂತೆ ಮಾಡಲಾಗಿತ್ತು. ಈ ಹಣದ ಮೂಲವು  ಗಂಗ್ವಾರ್ ಸ್ವೀಕರಿಸುತ್ತಿದ್ದ ಅಕ್ರಮ ಹಣವಾಗಿತ್ತು. ಪಾವತಿಗಾಗಿ ಅವರು ವಾಟ್ಸಾಪ್ ಮೂಲಕ ಕ್ಯೂಆರ್ ಕೋಡ್‌ಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ತಿಳಿಸಿದರು ಇದಲ್ಲದೆ, ದೇವನಹಳ್ಳಿಯ ಗೋದ್ರೇಜ್ ಅಪಾರ್ಟ್‌ಮೆಂಟ್‌ನಲ್ಲಿ  ಕಮಲಾಪತಿ ಅವರ ಹೆಸರಿನಲ್ಲಿ ಸುಮಾರು ₹60 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿಸಲು ತಾವು ಸಹಾಯ ಮಾಡಿರುವುದನ್ನು ತನಿಖಾಧಿಕಾರಿಗೆ ತಿಳಿಸಿರುವುದು ಗೊತ್ತಾಗಿದೆ.

ಗಂಗ್ವಾರ್ ವಿಮಾನ ಪ್ರಯಾಣದ ಬಿಲ್‌ ಪಾವತಿಸಿದ್ದು ಯಾರು?

ಕಳೆದ ನಾಲ್ಕು ವರ್ಷಗಳಿಂದ M/s Soumya Air Travels ಮೂಲಕ  ಗಂಗ್ವಾರ್ ಅವರ ವಿಮಾನ ಪ್ರಯಾಣದ ಬಿಲ್‌ಗಳನ್ನು ತಾವೇ ಪಾವತಿಸುತ್ತಿದ್ದುದಾಗಿ ಹೇಳಿದರು. ಪಶುವೈದ್ಯಾಧಿಕಾರಿಗಳ ಪರೀಕ್ಷೆಯಿಂದ ಸಂಗ್ರಹಿಸಲಾದ ಸುಮಾರು ₹1.30 ಕೋಟಿ ಹಣವನ್ನು ನಗದು ರೂಪದಲ್ಲಿ  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ನೀಡಲಾಗಿತ್ತು ಎಂದು ತಿಳಿಸಿದರು.

ಸೋರಿಕೆಯಾಗಿದ್ದ ಪ್ರಶ್ನೆಪತ್ರಿಕೆ ಸ್ವೀಕರಿಸಿದ್ದು 10 ಮಂದಿ

ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿದ್ದ 10 ಅಭ್ಯರ್ಥಿಗಳ ಪಟ್ಟಿಯನ್ನು ಕನ್ನಾಳೆ ಅವರು ತನಿಖಾಧಿಕಾರಿಗೆ ಒದಗಿಸಿದ್ದಾರೆ. ಡಾ. ರಾಜ್ ಮೊಹಮ್ಮದ್, ಡಾ. ಅಮರೇಗೌಡ ವಿರೂಪಾಪುರ, ಡಾ. ಸಿದ್ಧಾರ್ಥ್, ಡಾ. ಬಸವರಾಜ್ ವಡಾರಿ ಡಾ. ನಿರಂಜನ್ ಪಾಟೀಲ್ ಡಾ. ಮಹೇಂದ್ರಕುಮಾರ್ ಹೊಸಳ್ಳಿ, ಡಾ. ವಿನೋದ್ ಸುಧಾಕರ್ ನಾಯಕ್, ಡಾ. ಮೊಹಮ್ಮದ್‌ಶೋಯಿಲ್ ನಬಿಲಾಲ್ ಬದೇಂಗೋಳ, ಡಾ. ಕಿರಣ್ ಕುಮಾರ್ ಗೌಡ, ಡಾ. ಚೈತ್ರಾ ಎಚ್.ಎಲ್. ಇವರಲ್ಲಿ ಆರು ಅಭ್ಯರ್ಥಿಗಳನ್ನು  ಪವನ್ ಕುಮಾರ್ ರೆಡ್ಡಿ ಅವರ ಮೂಲಕ ಸಂಪರ್ಕಿಸಲಾಗಿತ್ತು. ಸಂಗ್ರಹಿಸಲಾದ ಮೊತ್ತಗಳ ವಿವರಗಳನ್ನು ತನಿಖಾಧಿಕಾರಿಗೆ ಒದಗಿಸಿದ್ದರು.

 

 

ಡಾ. ಕಿರಣ್ ಕುಮಾರ್ ಗೌಡ ಅವರಿಂದ ₹10 ಲಕ್ಷ ಮತ್ತು ಡಾ. ವಿನೋದ್ ಸುಧಾಕರ್ ನಾಯಕ್ ಅವರಿಂದ ₹15 ಲಕ್ಷ., 2026ರ ಜನವರಿಯಲ್ಲಿ ಶ್ರೀ ಪವನ್ ಕುಮಾರ್ ರೆಡ್ಡಿ ಅವರ ಮೂಲಕ ಡಾ. ಮೊಹಮ್ಮದ್‌ಶೋಯಿಲ್ ನಬಿಲಾಲ್ ಬದೇಂಗೋಳ ಅವರಿಂದ ₹25 ಲಕ್ಷ.,  ಡಾ. ಚೈತ್ರಾ ಎಚ್.ಎಲ್. ಅವರಿಂದ ₹20 ಲಕ್ಷ ಸಂಗ್ರಹಿಸಲಾಗಿತ್ತು. ಆ ಮೊತ್ತವನ್ನು ಅವರಿಗೆ ಹಿಂದಿರುಗಿಸಲಾಗಿತ್ತು. ಉಳಿದ ಆರು ಅಭ್ಯರ್ಥಿಗಳು M/s Om Lakshmi Souharda Sahakari Sangha Niyamitha, ಬೀದರ್‌ನ ಖಾತೆಗೆ ₹70 ಲಕ್ಷ ಠೇವಣಿ ಮಾಡಿದ್ದರು.

ಅಲ್ಲದೆ, ಅವರಿಂದ  ಪವನ್ ಕುಮಾರ್ ರೆಡ್ಡಿ ಅವರು ₹15 ಲಕ್ಷ ನಗದು ಸಂಗ್ರಹಿಸಿದ್ದರು., 2026ರ ಜುಲೈನಲ್ಲಿ M/s Om Lakshmi ಖಾತೆಯಿಂದ M/s Bhima Jewelleryಗೆ ₹18 ಲಕ್ಷ ಪಾವತಿಸಲಾಗಿತ್ತು. 2026ರ ಮಾರ್ಚ್‌ನಲ್ಲಿ ಶ್ರೀ ಉಮೇಶ್ ಮತ್ತು ಶ್ರೀ ರಾಜ್ ಕುಮಾರ್ ಅವರ ಮೂಲಕ  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗಾಗಿ ಆಭರಣ ಖರೀದಿಸಲು ₹28 ಲಕ್ಷ ಪಾವತಿಸಲಾಗಿತ್ತು ಎಂದು ಅವರು ಮತ್ತಷ್ಟು ವಿವರಗಳನ್ನು  ತಿಳಿಸಿರುವುದು ಗೊತ್ತಾಗಿದೆ.

ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಜನವರಿ 2026ರಲ್ಲಿ ಅವರ ನಿವಾಸದ ಸಮೀಪದ ಜಯಮಹಲ್‌ನಲ್ಲಿ ₹30 ಲಕ್ಷ. ಫೆಬ್ರವರಿ 2026ರಲ್ಲಿ ಆರ್.ಟಿ. ನಗರದ ಕೆಫೆ ಕಾಫಿ ಡೇ ಸಮೀಪ ₹40 ಲಕ್ಷ. ಮಾರ್ಚ್ 2026ರಲ್ಲಿ ಜಯಮಹಲ್‌ನಲ್ಲಿ ₹15 ಲಕ್ಷ ರು  ನಗದು ಹಸ್ತಾಂತರಿಸಿದ್ದರು.  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿದ್ದಾರೆ ಎಂಬುದು ತಿಳಿದಿದ್ದರಿಂದೇ  ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಒದಗಿಸುವಂತೆ ತಾವು ಅವರನ್ನು ಕೇಳಿಕೊಂಡಿದ್ದರು. ಇದು ಒಮ್ಮೆ ಮಾತ್ರ ನಡೆದ ಘಟನೆಯಾಗಿತ್ತು ಎಂದು ಹೇಳಿಕೆ ನೀಡಿರುವುದು ತಿಳಿದು ಬಂದಿದೆ.

 

 

ಪೆನ್‌ಡ್ರೈವ್‌ನ ತಯಾರಕ ಸಂಸ್ಥೆಯ ಬಗ್ಗೆ ಕೇಳಿದಾಗ, ಅದು ಸ್ಯಾನ್‌ಡಿಸ್ಕ್ ಅಥವಾ ಎಚ್‌ಪಿ ಎಂಬುದು ನೆನಪಿಲ್ಲ. ಆದರೆ, ಪೆನ್‌ಡ್ರೈವ್ ಕಪ್ಪು ಮತ್ತು ಕೆಂಪು ಬಣ್ಣದ್ದಾಗಿತ್ತು ಎಂದು ತಿಳಿಸಿದರು. ತಮ್ಮ ಆದಾಯದ ಮೂಲಗಳ ವಿವರಗಳನ್ನು ಒದಗಿಸಿ, 2024–25ರ ಹಣಕಾಸು ವರ್ಷಕ್ಕೆ ಸುಮಾರು ₹60 ಲಕ್ಷ ಆದಾಯದ ಐಟಿಆರ್ ಸಲ್ಲಿಸಿದ್ದಾಗಿ ಮತ್ತು 2025–26ರ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸಿಲ್ಲ ಎಂದು ತಿಳಿಸಿದರು.

ಆರು  ಅಭ್ಯರ್ಥಿಗಳನ್ನು  ಪವನ್ ರೆಡ್ಡಿ ಅವರ ಮೂಲಕ ಸಂಪರ್ಕಿಸಲಾಗಿತ್ತು. ಆದರೆ, ಪವನ್ ರೆಡ್ಡಿ ಇತರ ಅಭ್ಯರ್ಥಿಗಳಿಂದಲೂ ಹಣ ಪಡೆದಿದ್ದಾರೆಯೇ ಎಂಬುದನ್ನು ತಮಗೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.  ಗಂಗ್ವಾರ್ ಅವರು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿ ನೇಮಕಗೊಂಡಿದ್ದರಲ್ಲಿ ತಮ್ಮ ಪಾತ್ರವಿರಲಿಲ್ಲ ಮತ್ತು ಅಭ್ಯರ್ಥಿಗಳನ್ನು ಸಂಪರ್ಕಿಸುವಂತೆ ಯಾವುದೇ ಕೆಪಿಎಸ್‌ಸಿ ಸದಸ್ಯರು ತಮ್ಮನ್ನು ಸಂಪರ್ಕಿಸಿರಲಿಲ್ಲ ಎಂದರು.  ತಮ್ಮ ಅರೆಕಾಲಿಕ ಲೆಕ್ಕಿಗರಾದ ಉಮೇಶ್ ಬಿ.ಆರ್. ಅವರ ಹೇಳಿಕೆಯನ್ನು ಮುಂದಿಟ್ಟು ತನಿಖಾಧಿಕಾರಿಯು  ವಿಚಾರಿಸಿದಾಗ, ಅದನ್ನು ದೃಢಪಡಿಸಿದರು.   ಉಮೇಶ್ ಬಿ.ಆರ್. ನಡೆಸಿದ ವಹಿವಾಟುಗಳು ತಮ್ಮ ಸೂಚನೆಯಂತೆ ನಡೆದಿದ್ದವು ಎಂದು ಒಪ್ಪಿಕೊಂಡಿರುವುದು ತಿಳಿದು ಬಂದಿದೆ.

ತಮ್ಮ ಸ್ವಂತ ಖಾತೆಯಿಂದ ಅಥವಾ ತಮ್ಮ ವ್ಯಾಪಾರ ಸಂಸ್ಥೆಯ ಖಾತೆಯಿಂದ ಯಾವುದೇ ಪಾವತಿ ಮಾಡಬಾರದೆಂದು  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ತಮಗೆ ಸೂಚಿಸಿದ್ದರು ಎಂದು ಹೇಳಿದರು. ಅದರಂತೆ, ತಾವು ಹಣವನ್ನು ವರ್ಗಾಯಿಸಿ, ನಗದು ರೂಪದಲ್ಲಿ  ಉಮೇಶ್ ಬಿ.ಆರ್. ಅವರಿಗೆ ನೀಡುತ್ತಿದ್ದರು. ಅವರು ಅದನ್ನು M/s Bhima Gold Pvt. Ltd. ಸಂಸ್ಥೆಗೆ ಪಾವತಿಸುತ್ತಿದ್ದರು. ಉಮೇಶ್ ಬಿ.ಆರ್. ಅವರಿಗೆ ನೀಡಿದ ನಗದು ಹಣವು ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣವಾಗಿತ್ತು ಎಂದು ಒಪ್ಪಿಕೊಂಡರು.

ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ವರ್ಗಾಯಿಸಲು M/s Om Lakshmi Souharda Sahakari Sangha Niyamita ಸಂಸ್ಥೆಯ ಬ್ಯಾಂಕ್ ಖಾತೆ ಮತ್ತು ಅದರ ಉಪಾಧ್ಯಕ್ಷರಾದ ಓಂಕಾರ್ ಕೆ. ಅವರ ಖಾತೆಯನ್ನೂ ಬಳಸಿರುವುದನ್ನು ತನಿಖಾಧಿಕಾರಿ ಮುಂದೆ ಒಪ್ಪಿಕೊಂಡಿದ್ದಾರೆ. ಅರುಣ್ ಕುಮಾರ್ ಅವರ ಹೆಸರಿನಲ್ಲಿದ್ದ ತಲಾ ₹6 ಲಕ್ಷ ಮಿತಿಯ ಎರಡು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳನ್ನು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಬಳಸುತ್ತಿದ್ದರು ಎಂದೂ ತಿಳಿಸಿದರು.

ಉಮೇಶ್ ಬಿ.ಆರ್. ಅವರ ಆಕ್ಸಿಸ್ ಬ್ಯಾಂಕ್ ಖಾತೆ (ಸಂಖ್ಯೆ 33301010009376) ಯಿಂದ M/s Bhima Gold Pvt. Ltd. ಸಂಸ್ಥೆಗೆ ಮಾಡಲಾದ ₹8,31,000, ₹3,00,000 ಮತ್ತು ₹5,00,000 ಪಾವತಿಗಳ ಬಗ್ಗೆ ವಿಚಾರಿಸಲಾಯಿತು. ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣವು ತಮ್ಮ ಬಳಿ ನಗದು ರೂಪದಲ್ಲಿಯೂ ಮತ್ತು M/s Om Lakshmi ಸಂಸ್ಥೆಯ ಖಾತೆಯಲ್ಲಿಯೂ ಇತ್ತು. ಆ ಹಣವನ್ನು ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಹಿಂದಿರುಗಿಸಬೇಕಾಗಿತ್ತು. ಅವರ ಸೂಚನೆಯಂತೆ ಈ ಪಾವತಿಗಳನ್ನು ಮಾಡಲಾಗಿತ್ತು ಎಂದು ತಿಳಿಸಿದರು.

ಈ ಬಿಲ್‌ಗಳನ್ನು ಗಂಗ್ವಾರ್ ಅವರ ಗೆಳತಿ ಯಾಶಿ ಜೈಸ್ವಾಲ್ ಅವರ ಹೆಸರಿನಲ್ಲಿ ನೀಡಲಾಗಿತ್ತು. ಈ ಉದ್ದೇಶಕ್ಕಾಗಿ M/s Bhagavati Enterprises ಸಂಸ್ಥೆಯಿಂದ  ಉಮೇಶ್ ಬಿ.ಆರ್. ಅವರಿಗೆ ಹಣ ವರ್ಗಾಯಿಸಿದ್ದಾಗಿ ಹೇಳಿದರು. ತಮ್ಮ ಸೂಚನೆಯಂತೆ ಓಂಕಾರ್ ಕೆ. ಅವರು M/s Bhima Gold Pvt. Ltd. ಸಂಸ್ಥೆಗೆ ₹15 ಲಕ್ಷ ಪಾವತಿಸಿದ್ದರು. ಇದರಲ್ಲಿ ₹7 ಲಕ್ಷವನ್ನು M/s Om Lakshmi ಸಂಸ್ಥೆಯಿಂದ ಮತ್ತು ₹8 ಲಕ್ಷವನ್ನು M/s Shree Sidda (ಸಹಕಾರಿ ಬ್ಯಾಂಕ್) ಮೂಲಕ ಪಾವತಿಸಲಾಗಿತ್ತು . ಯಾಶಿ ಜೈಸ್ವಾಲ್ ಅವರನ್ನು ತಾವು ಭೇಟಿಯಾಗಿಲ್ಲ ಅಥವಾ ಅವರೊಂದಿಗೆ ಮಾತನಾಡಿಲ್ಲ. 2026ರ ಮಾರ್ಚ್‌ 10ರ ಇನ್‌ವಾಯ್ಸ್ ಪ್ರಕಾರ ₹29,30,000 ಮೌಲ್ಯದ ಫ್ಯಾನ್ಸಿ ಸರಪಳಿಯನ್ನು  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯಂತೆ ಯಾಶಿ ಜೈಸ್ವಾಲ್ ಅವರ ಹೆಸರಿನಲ್ಲಿ ಖರೀದಿಸಲಾಗಿತ್ತು ಎಂದು ತಿಳಿಸಿದರು.

ಯಾಶಿ ಜೈಸ್ವಾಲ್ ಅವರ ಅಧಿಕೃತ ಪತ್ರದ ಆಧಾರದ ಮೇಲೆ  ಉಮೇಶ್ ಬಿ.ಆರ್. ಅವರು ಆ ಸರಪಳಿಯನ್ನು ಪಡೆದುಕೊಂಡು, ಅದೇ ದಿನ ಶ್ರೀ ಗಂಗ್ವಾರ್ ಅವರಿಗೆ ಹಸ್ತಾಂತರಿಸಿದ್ದರು.  ಉಮೇಶ್ ಬಿ.ಆರ್. ಅವರ ಮೂಲಕ ₹1.99 ಲಕ್ಷ ನಗದು, 2026ರ ಮಾರ್ಚ್‌ 9ರಂದು M/s Bhagavati Enterprises ಸಂಸ್ಥೆಯಿಂದ  ಉಮೇಶ್ ಬಿ.ಆರ್. ಅವರಿಗೆ ವರ್ಗಾಯಿಸಲಾದ ₹10 ಲಕ್ಷದಲ್ಲಿ, 10.03.2026ರಂದು ಅವರು ₹8.31 ಲಕ್ಷ ಪಾವತಿಸಿದ್ದರು. ಬೀದರ್‌ನ ತಮ್ಮ ಕುಟುಂಬ ಸ್ನೇಹಿತರಾದ  ರಾಜಶೇಖರ್ ಅವರು, ತಾವು ಠೇವಣಿ ಮಾಡಿದ್ದ ಚಿಟ್‌ಫಂಡ್ ಮೊತ್ತದಿಂದ 02.03.2026ರಂದು ₹18 ಲಕ್ಷ ಪಾವತಿಸಿದ್ದರು. ಯಾಶಿ ಜೈಸ್ವಾಲ್ ಅವರು ತಮ್ಮ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ₹1 ಲಕ್ಷ ಪಾವತಿಸಿದ್ದರು. ಅದಕ್ಕೂ ಮೊದಲು ತಾವು ಅವರಿಗೆ ₹1 ಲಕ್ಷ ವರ್ಗಾಯಿಸಿದ್ದಾಗಿ ತಿಳಿಸಿದರು.

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣದಲ್ಲಿ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗಾಗಿ ಆಭರಣ ಖರೀದಿಸಲು M/s Bhima Gold Pvt. Ltd. ಸಂಸ್ಥೆಗೆ ಒಟ್ಟು ₹52.30 ಲಕ್ಷ ಪಾವತಿಸಿದ್ದಾಗಿ ಒಪ್ಪಿಕೊಂಡರು.  M/s Sowmiya Air Travels ಸಂಸ್ಥೆಯ ಶ್ರೀ ತಮಿಳರಸನ್ ಎ. ಅವರ ಹೇಳಿಕೆ ಮತ್ತು ಆ ಸಂಸ್ಥೆಯ ಲೆಡ್ಜರ್ ದಾಖಲೆಗಳನ್ನು ಮುಂದಿಟ್ಟು ತನಿಖಾಧಿಕಾರಿಯು ವಿಚಾರಿಸಿದ್ದರು. 2025ರ ಏಪ್ರಿಲ್‌ 5ರಿಂದ 2026ರ ಜುಲೈ 1ರವರೆಗೆ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಅವರ ಕುಟುಂಬ ಹಾಗೂ ಸ್ನೇಹಿತರ ಪ್ರಯಾಣ ವೆಚ್ಚಕ್ಕಾಗಿ ₹13,31,435 ಪಾವತಿಸಿರುವುದನ್ನು ಒಪ್ಪಿಕೊಂಡಿರುವುದು ಗೊತ್ತಾಗಿದೆ.

ಈ ಹಣವನ್ನು   ಶ್ರೀಶೈಲ್ ಬಸವಂತ್ ಮೂಲಕ  ₹99,999, ವೀರಶೆಟ್ಟಿ  ₹3,36,780.,  ರಾಜೇಶ್,  ₹1,72,720, s Sharadha Enterprises, ಅವರ ಸಹೋದರನ ಅಂಗಡಿ – ₹40,000,  Bhagavati Enterprises – ₹3,88,474 ಪಾವತಿಸಲಾಗಿತ್ತು. ಅಲ್ಲದೇ ₹2,93,462. ತಾವೇ ನಗದು ಠೇವಣಿ ಮಾಡಿದ್ದರು.  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಸೂಚನೆಯಂತೆ ವಿವಿಧ ವ್ಯಕ್ತಿಗಳು ತಮ್ಮ ಬಳಿ ಇಡಲು ನಗದು ಹಣ ನೀಡುತ್ತಿದ್ದರು. ತಮ್ಮ ಪರವಾಗಿ ಯಾವ ಸ್ಥಳದಲ್ಲಿ ಪಾವತಿ ಮಾಡಬೇಕು ಎಂಬುದನ್ನು  ಗಂಗ್ವಾರ್ ಸೂಚಿಸುತ್ತಿದ್ದರು ಎಂದು ತಿಳಿಸಿದರು.

 

 

ಗಂಗ್ವಾರ್ ಅವರ ಶಾಪಿಂಗ್ ಮತ್ತು ಇತರ ಖರ್ಚುಗಳಿಗೂ ತಾವು ಹಣ ಪಾವತಿಸುತ್ತಿದ್ದರು. ಆದರೆ, ಪಾವತಿಸಿದ ಮೊತ್ತಗಳು ಅಥವಾ ಅವರ ಪರವಾಗಿ ಸಂಗ್ರಹಿಸಿದ ಒಟ್ಟು ಹಣದ ಪ್ರಮಾಣ ನೆನಪಿಲ್ಲ ಎಂದು ಹೇಳಿದರು. 2023ರಿಂದ ಜಲಮಂಡಳಿಯಲ್ಲಿನ ಅವರ ಅಧಿಕಾರಾವಧಿ ಮತ್ತು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ,  ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ ಸುಮಾರು ₹12 ಕೋಟಿಯಿಂದ ₹15 ಕೋಟಿ ನಗದು ಹಣವನ್ನು ತಾವು ನಿರ್ವಹಿಸಿದ್ದಾಗಿ ತಿಳಿಸಿದರು. ಆ ಹಣದ ಬಹುಪಾಲನ್ನು ಜಯಮಹಲ್ ಪ್ಯಾಲೇಸ್ ರಸ್ತೆಯ ಸಮೀಪ ಅವರಿಗೆ ಹಸ್ತಾಂತರಿಸಲಾಗುತ್ತಿತ್ತು ಎಂದು ಕನ್ನಾಳೆ, ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿರುವುದು ತಿಳಿದು ಬಂದಿದೆ.

Hot this week

ಮನೆಯಲ್ಲಿ ವಾಸಿಸದಿದ್ದರೂ ಬಾಡಿಗೆದಾರ, ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಿದ್ದ ಸಾಹುಕಾರ್; ಸದಸ್ಯೆ ಗೀತಾ ಹೇಳಿಕೆಯಲ್ಲಿದೆ ಕುತೂಹಲಕರ ಸಂಗತಿ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು 2026ರ ಜನವರಿಯಲ್ಲಿ  ನಡೆಸಿದ್ದ ಪಶು ವೈದ್ಯಾಧಿಕಾರಿಗಳ...

ಪ್ರಶ್ನೆಪತ್ರಿಕೆ, ಉತ್ತರ ಸೋರಿಕೆ, ಅರ್ಹತಾ ಪಟ್ಟಿಯೂ ದುರುಪಯೋಗ; ಅಪರಾಧದ ಮೂಲಕ ಆರೋಪಿತರು ಗಳಿಸಿದ್ದು 8.69 ಕೋಟಿ, ಹೇಳಿಕೆ ಬಿಡುಗಡೆ ಮಾಡಿದ ಜಾರಿ ನಿರ್ದೇಶನಾಲಯ

ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ  ಪರೀಕ್ಷೆಯ ಪ್ರಶ್ನೆ ಪತ್ರಿಕೆ...

ಕನ್ನಾಳೆಗೆ ಪೆನ್‌ಡ್ರೈವ್‌ನಲ್ಲಿ ಪ್ರಶ್ನೆ, ಉತ್ತರ ಹಂಚಿಕೆ, ಟ್ಯಾಬ್ಲೆಟ್‌ ತುಂಡುತುಂಡಾಗಿಸಿ ನಾಶಪಡಿಸಿದ್ದ ಗ್ಯಾನೇಂದ್ರ ; ಅಕ್ರಮದ ಹಿಂದಿನ ರಹಸ್ಯ ಬಯಲು ಮಾಡಿದ ಚಾರ್ಜ್ ಶೀಟ್‌

ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ  ಸಾಮಾನ್ಯ...

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...
Please Scan to make Your Contribution

Topics

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ; ಸಾಹುಕಾರ್, ಗೀತಾ, ಗಂಗ್ವಾರ್‍‌ಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಚರ, ಸ್ಥಿರಾಸ್ತಿ ಜಪ್ತಿ

ಬೆಂಗಳೂರು;  ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಲ್ಲಿನ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ...

ಬರ ಪರಿಹಾರ ಮೊತ್ತವನ್ನೇ ಕಡಿತಗೊಳಿಸಿದ್ದ ರಾಜ್ಯ ಸರ್ಕಾರದಿಂದ ಪ್ರಧಾನಿಯ ಒಂದು ದಿನದ ಕಾರ್ಯಕ್ರಮಕ್ಕೆ 10.78 ಕೋಟಿ ರು ವೆಚ್ಚ

ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು  ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು...

Related Articles

Popular Categories

error: Content is protected !!