ಬೆಂಗಳೂರು; ಬರ ಪರಿಹಾರ, ಗುತ್ತಿಗೆದಾರರಿಗೆ ಬಾಕಿ ಮತ್ತು ಮೂಲಸೌಕರ್ಯಗಳಿಗೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರವು ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ ಮತ್ತು ಪ್ರಶಾಂತಿ ಕುಟೀರದ 50ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಒಂದೇ ಒಂದು ದಿನಕ್ಕೆ ಬರೋಬ್ಬರಿ 10.78 ಕೋಟಿ ರುಪಾಯಿ ಖರ್ಚು ಮಾಡಿದೆ.
ನಮ್ಮ ಮೆಟ್ರೋ ಕಾಳೇನಅಗ್ರಹಾರ-ತಾವರೆಕೆರೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮ ಮತ್ತು ಮೆಟ್ರೋ ಕಾಮಗಾರಿಗಳಿಗೆ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಬರಪರಿಹಾರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಘೋಷಿಸಿದ ಮೊತ್ತದಲ್ಲೇ ಕಡಿತಗೊಳಿಸಿದ್ದನ್ನು ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದವು.
ಈ ಬೆಳವಣಿಗೆ ನಡುವೆಯೇ ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 10.78 ಕೋಟಿ ರು ಖರ್ಚಾಗಿರುವುದು ಮುನ್ನೆಲೆಗೆ ಬಂದಿದೆ.
ಬೆಂಗಳೂರು ನಗರ ಜಿಲ್ಲೆಯ ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ, ಪ್ರಶಾಂತಿ ಕುಟೀರದ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ನಗರಾಭಿವೃದ್ದಿ ಮತ್ತು ಲೋಕೋಪಯೋಗಿ ಇಲಾಖೆಯು ಭರಿಸಿವೆ. ಈ ಎರಡೂ ಇಲಾಖೆಗಳಿಗೆ ಈ ಸಂಬಂಧ ಆರ್ಥಿಕ ಇಲಾಖೆಯು 2026ರ ನವೆಂಬರ್ 11ರಂದು 4 ಜಿ ವಿನಾಯಿತಿಯನ್ನೂ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳು ( PWD 1092/IFA/2026, UDD/287/GEL 2026) ದಿ ಫೈಲ್ ಗೆ ಲಭ್ಯವಾಗಿವೆ.
ಮೆಟ್ರೋ ಪಿಂಕ್ ಮಾರ್ಗ ಉದ್ಘಾಟನೆ, ಪ್ರಶಾಂತಿ ಕುಟೀರದ 50ನೇ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಒಟ್ಟಾರೆ 6 ಕೋಟಿ ರು ವೆಚ್ಚವಾಗಿದೆ. ಜಯನಗರ ಪೆರೇಡ್ ಗ್ರೌಂಡ್ನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ಪ್ರಶಾಂತಿ ಕುಟೀರದಲ್ಲಿ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಾಗಿ 4.30 ಕೋಟಿ ರು., ವಾಟರ್ ಫ್ರೂಫ್ ಜರ್ಮನ್ ಹ್ಯಾಂಗರ್, ಪೆಂಡಾಲ್, ಪಿಎಂ ಲಾಂಜ್, ಟೆಂಟ್, ಪ್ಲಾಟ್ಫಾರ್ಮ್, ಕಾರ್ಪೆಂಟಿಂಗ್, ಪಾರ್ಟಿಷನ್ ವಾಲ್ಸ್, ಟೇಬಲ್, ಟೇಬಲ್ ಕ್ಲಾತ್, ಸೋಫಾ, ಗ್ರೀನ್ ರೂಂ, ಬ್ಯಾರಿಕೇಡ್ ಗಳನ್ನು ಸಜ್ಜುಗೊಳಿಸಲು 1.70 ಕೋಟಿ ರು ವೆಚ್ಚವಾಗಿದೆ.
ಅದೇ ರೀತಿ ಕಾಳೇನ ಅಗ್ರಹಾರ ತಾವರೆಕೆರೆ ಮಾರ್ಗದ ಉದ್ಘಾಟನೆ ಕಾರ್ಯಕ್ರಮಕ್ಕೆ ಅವಶ್ಯಕವಿರುವ ಸಾರಿಗೆ , ವಸತಿ, ಭದ್ರತೆ ಮತ್ತು ಇತರೆ ಸೇವೆಗಳನ್ನು ಒದಗಿಸಲು 4.78 ಕೋಟಿ ರು ವೆಚ್ಚವಾಗಿರುವುದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡುವ ಕಾರ್ಯಕ್ರಮದ ಭಾಗವಾಗಿ ಹೆಲಿಕ್ಯಾಪ್ಟರ್ಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲು ಹೆಚ್ ಹೆಚ್ ಜಯಚಾಮರಾಜ ಒಡೆಯರ್ ಹೆಲಿಪ್ಯಾಡ್ನಲ್ಲಿ 03 ಹೆಲಿಪ್ಯಾಡ್, ಈ ಹೆಲಿಪ್ಯಾಡ್ಗೆ ಸಂಪರ್ಕಿಸುವ ರಸ್ತೆಯ ನಿರ್ವಹಣೆ ಕಾಮಗಾರಿಯನ್ನು 32.50 ಲಕ್ಷ ರು ವೆಚ್ಚವಾಗಿದೆ.
ಬೆಂಗಳೂರಿನಲ್ಲಿ ಸುಮಾರು 15,600 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ‘ಪ್ರಶಾಂತಿ ಕುಟೀರ’ದಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಕಾರದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಕಾರ್ಯಕ್ರಮಗಳ ನಂತರ ಪ್ರಧಾನಿಯವರು ಮೈಸೂರಿಗೆ ಭೇಟಿ ನೀಡಿದ್ದ ಕಾರ್ಯಕ್ರಮಕ್ಕೆ ಒಟ್ಟಾರೆ 10.72 ಕೋಟಿ ರು ವೆಚ್ಚವಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಮಳಖೇಡದಲ್ಲಿ ಸಾಂಕೇತಿಕವಾಗಿ ಐದು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಬರೋಬ್ಬರಿ 11.18 ಕೋಟಿ ರು. ವೆಚ್ಚವಾಗಿತ್ತು. ಕಲ್ಬುರ್ಗಿ ಕಾರ್ಯಕ್ರಮಕ್ಕೂ ಮುನ್ನ ಯಾದಗಿರಿಯಲ್ಲಿಯೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೂ ಕಂದಾಯ ಇಲಾಖೆಯು 7 ಕೋಟಿ ರು.ವೆಚ್ಚ ಮಾಡಿತ್ತು.
ಯಾದಗಿರಿಯಲ್ಲಿ ಕಾರ್ಯಕ್ರಮ ನಡೆಯದ ಕಾರಣ ಅದೇ ಹಣವನ್ನು ಕಲ್ಬುರ್ಗಿ ಕಾರ್ಯಕ್ರಮಕ್ಕೆ ಮರು ಹಂಚಿಕೆ ಮಾಡಿತ್ತು. ಹೀಗಾಗಿ ಕಲ್ಬುರ್ಗಿ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲೆಗೆ ಹಂಚಿಕೆಯಾಗಿದ್ದ 7 ಕೋಟಿ ಸೇರಿಸಿ ಒಟ್ಟು 11.18 ಕೋಟಿ ರು. ವೆಚ್ಚವಾಗಿತ್ತು.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮ, ಮೂರು ಕಾಮಗಾರಿಗಳು, ವ್ಯವಸ್ಥೆ ಹಾಗೂ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಆಯೋಜನೆಗೆ ಒಟ್ಟಾರೆ 48.44 ಕೋಟಿ ರು. ವೆಚ್ಚವಾಗಿತ್ತು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್ ಅವರು ಹಿಂದಿನ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದರು.
ಮೂರು ಕಾಮಗಾರಿಗಳು/ವ್ಯವಸ್ಥೆಗೆ ತಗಲುವ ಅಂದಾಜು ಮೊತ್ತ 45.73 ಕೋಟಿ ರು. ವೆಚ್ಚವನ್ನು ಲೆಕ್ಕ ಶೀರ್ಷಿಕೆ (8443-00-117-0-18-542) ಅನುದಾನ ಬಿಡುಗಡೆ ಮಾಡಿತ್ತು. ಇದಕ್ಕಾಗಿ ಲೋಕೋಪಯೋಗಿ ಇಲಾಖೆಗೆ 4 ಜಿ ವಿನಾಯಿತಿ ನೀಡಿದ್ದನ್ನು ಸ್ಮರಿಸಬಹುದು.
ಕರ್ನಾಟಕಕ್ಕೆ ಪ್ರಧಾನಿಯವರು ಈ ಹಿಂದಿನ ವರ್ಷಗಳಲ್ಲಿ ಭೇಟಿ ನೀಡಿದಾಗಲೂ ಸಕರ್ಕಾರಿ ಬೊಕ್ಕಸದಿಂದ ಬಹುಕೋಟಿ ವೆಚ್ಚವಾಗಿತ್ತು.ಆರ್ ಟಿ ಐ ದಾಖಲೆಗಳ ಪ್ರಕಾರ 2023ರ ಫೆಬ್ರುವರಿಯಲ್ಲಿ ಪ್ರಧಾನಿ ಅವರ ಒಂದು ದಿನದ ಕನರ್ನಾಟಕ ಭೇಟಿ ವ್ಯವಸ್ಥೆಗಾಗಿ ರಾಜ್ಯ ಸಕರ್ಕಾರವು ಸುಮಾರು 33.16 ಕೋಟಿ ಸಾರ್ವಜನಿಕ ಹಣವನ್ನು ಖರ್ಚು ಮಾಡಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದ ವ್ಯವಸ್ಥೆಗಾಗಿ 18.81 ಕೋಟಿ ಹಾಗೂ ಬೆಳಗಾವಿ ಕಾರ್ಯಕ್ರಮಕ್ಕೆ 14.35 ಕೊಟಿ ವೆಚ್ಚ ಮಾಡಿತ್ತು. ಇದರಲ್ಲಿ ಜನರನ್ನು ಕರೆತರಲು 1,800 ಬಸ್ಗಳ ಬಾಡಿಗೆಗೆ 4.11 ಕೊಟಿ ಹಾಗೂ ವೇದಿಕೆ ಮತ್ತು ಪೆಂಡಾಲ್ಗಾಗಿ 1.8 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿತ್ತು. ಧಾರವಾಡ ಐಐಡಿ ಕ್ಯಾಂಪಸ್ ಉದ್ಘಾಟನೆಗೆ ಪ್ರಧಾನಿ ಭೇಟಿ ನೀಡಿದ್ದಾಗ ಜಿಲ್ಲಾಡಳಿತದ ನಿಧಿಯಿಂದ 9.49 ಕೊಟಿ ರು ಖರ್ಚಾಗಿತ್ತು.
ಭಾರತದ ಪ್ರಧಾನಮಂತ್ರಿಯವರ ಅಧಿಕೃತ ಭೇಟಿಗಳ ಸಾರ್ವಜನಿಕ ವೆಚ್ಚವನ್ನು ಕೇಂದ್ರ ಸಕರ್ಕಾರದ ವಿವಿಧ ಸಚಿವಾಲಯಗಳು ಮತ್ತು ಆಯಾ ರಾಜ್ಯ ಸಕರ್ಕಾರಗಳು ಭರಿಸುತ್ತವೆ. ಭೇಟಿ ಸ್ವರೂಪ ಮತ್ತು ಕಾರ್ಯಕ್ರಮದ ಉದ್ದೇಶದ ಆಧಾರದ ಮೇಲೆ ಈ ವೆಚ್ಚವನ್ನು ವಿಂಗಡಿಸಲಾಗುತ್ತದೆ.
ವಿಮಾನ ಮತ್ತು ಪ್ರಯಾಣ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳ ಕಚೇರಿ ಮಾಹಿತಿ ಪ್ರಕಾರ ಪ್ರಧಾನಿಯವರ ದೇಶೀಯ ಅಧಿಕೃತ ಭೇಟಿಗಳ ಪ್ರಯಾಣ ವೆಚ್ಚವನ್ನು ಕೇಂದ್ರ ರಕ್ಷಣಾ ಸಚಿವಾಲಯದ ಬಜೆಟ್ನಿಂದ ಭರಿಸಲಾಗುತ್ತದೆ. ಭಾರತಿಯ ವಾಯುಪಡೆಯ ವಿಶೇಷ ವಿಮಾನಗಳ ನಿರ್ವಹಣೆಯೂ ಇದರಲ್ಲಿ ಸೇರಿರುತ್ತದೆ. ಪ್ರಧಾನಿಯವರ ಭದ್ರತೆಯನ್ನು ವಿಶೆಷ ರಕ್ಷಣಾ ಪಡೆಯ ನೋಡಿಕೊಳ್ಳುತ್ತದೆ. ಭೇಟಿ ನೀಡುವ ರಾಜ್ಯದಲ್ಲಿ ಸ್ಥಳೀಯ ಭದ್ರತೆ, ಬ್ಯಾರಿಕೇಡ್ಗಳು, ರಸ್ತೆ ದುರಸ್ತಿ ಮತ್ತು ಅಧಿಕೃತ ಕಾರ್ಯಕ್ರಮಗಳ ವೇದಿಕೆ ನಿಮರ್ಮಾಣದ ವೆಚ್ಚವನ್ನು ಆಯಾ ರಾಜ್ಯ ಸಕರ್ಕಾರದ ಸಾಮಾನ್ಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಗಳು ಭರಿಸುತ್ತವೆ.




