ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ ಕಲ್ಲು ಮತ್ತು ಡೋಲಮೈಟ್ ಗಣಿಗಾರಿಕೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆರ್ಥಿಕ ನೆರವು ನೀಡುವ ಯೋಜನೆಗೆ ರಾಜ್ಯದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ 2,418 ಶಾಲೆಗಳಲ್ಲಿ ಒಟ್ಟು 6,991 ಅರ್ಜಿಗಳು ಸಂಸ್ಥೆಯ ನೋಡಲ್ ಅಧಿಕಾರಿ (INO) ಹಂತದಲ್ಲಿ ಪರಿಶೀಲನೆಗಾಗಿ ಬಾಕಿ ಉಳಿದಿರುವುದು ಇದೀಗ ಬಹಿರಂಗವಾಗಿವೆ.
2026-27ನೇ ಶೈಕ್ಷಣಿಕ ವರ್ಷವು ಪೂರ್ಣಗೊಳ್ಳುತ್ತಿದ್ದರೂ ಸಹ ಇನ್ನೂ 2,418 ಶಾಲೆಗಳಲ್ಲಿ ಒಟ್ಟು 6,991 ಅರ್ಜಿಗಳು ಪರಿಶೀಲನೆ ಹೆಸರಿನಲ್ಲಿ ಬಾಕಿ ಉಳಿಸಿಕೊಂಡಿರುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯವೈಖರಿಗೆ ಕೈ ಗನ್ನಡಿ ಹಿಡಿದಂತಾಗಿದೆ.
ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ ಕಲ್ಲು ಮತ್ತು ಡೋಲಮೈಟ್ ಗಣಿಗಾರಿಕೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೊಳಿಸಿದೆ. 2026-27ನೇ ಶೈಕ್ಷಣಿಕ ವರ್ಷದ ಬಾಕಿ ಇರುವ ಅರ್ಜಿಗಳನ್ನು ಸಂಸ್ಥೆಯ ನೋಡಲ್ ಅಧಿಕಾರಿ (INO) ಮಟ್ಟದಲ್ಲಿ ತ್ವರಿತವಾಗಿ ಪರಿಶೀಲಿಸುತ್ತಿದೆ.
ಈ ಸಂಬಂಧ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು 2026ರ ನವೆಂಬರ್ 5ರಂದು ವಿಭಾಗೀಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ 2,418 ಶಾಲೆಗಳಲ್ಲಿ ಒಟ್ಟು 6,991 ಅರ್ಜಿಗಳು ಪರಿಶೀಲನೆ ಹೆಸರಿನಲ್ಲಿ ಬಾಕಿ ಉಳಿದಿರುವುದರ ಕುರಿತು ಗಮನಸೆಳೆದಿರುವುದು ಗೊತ್ತಾಗಿದೆ.
2026ರ ನವೆಂಬರ್ 5ರಂದು ಕಲ್ಬುರ್ಗಿ ವಿಭಾಗದ ಹೆಚ್ಚುವರಿ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಅವರಿಗೆ ಬರೆದಿರುವ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಲ್ಯಾಣ ಆಯುಕ್ತರು (LWO) 2026ರ ಅಕ್ಟೋಬರ್ 29ರಂದೇ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಇ-ಮೇಲ್ ಕಳಿಸಿದ್ದಾರೆ. ಇದರಲ್ಲಿ, ಬೀಡಿ, ಚಲನಚಿತ್ರ ಮತ್ತು ಕಲ್ಲಿದ್ದಲನ್ನು ಹೊರತುಪಡಿಸಿದ ಇತರೆ ಗಣಿಗಾರಿಕೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಯೋಜನೆಯನ್ನು ಕಾರ್ಮಿಕ ಕಲ್ಯಾಣ ಯೋಜನೆಯಡಿ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ಮೂಲಕ ಪ್ರಕ್ರಿಯೆಗೊಳಿಸಲಾಗುತ್ತಿದ್ದು, ವಿವಿಧ ನಿಗದಿತ ಹಂತಗಳಲ್ಲಿ ಅವುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಮಾಹಿತಿ ಒದಗಿಸಿದ್ದರು.
ಅಲ್ಲದೇ 2026-27ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ, ರಾಜ್ಯದಾದ್ಯಂತ ಇರುವ 2,418 ಶಾಲೆಗಳಲ್ಲಿ ಒಟ್ಟು 6,991 ಅರ್ಜಿಗಳು ಸಂಸ್ಥೆಯ ನೋಡಲ್ ಅಧಿಕಾರಿ (INO) ಹಂತದಲ್ಲಿ ಪರಿಶೀಲನೆಗಾಗಿ ಬಾಕಿ ಉಳಿದಿವೆ ಎಂಬ ವಿಷಯವನ್ನು ಅವರು ಈ ಇಲಾಖೆಯ ಗಮನಕ್ಕೆ ತಂದಿರುವುದು ರಶ್ಮಿ ಮಹೇಶ್ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

ನೋಡಲ್ ಅಧಿಕಾರಿ ಹಂತದಲ್ಲಿ ಅರ್ಜಿಗಳ ಪರಿಶೀಲನೆಗೆ 2026ರ ನವೆಂಬರ್ 15ರಂದು ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ದೃಢೀಕರಿಸುವುದು ಅತ್ಯಗತ್ಯವಾಗಿದೆ. ಇದರಿಂದ ಅರ್ಜಿಗಳ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ವಿತರಿಸಲು ಅನುಕೂಲವಾಗಲಿದೆ ಎಂದು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬಾಕಿ ಉಳಿದಿರುವ ವಿದ್ಯಾರ್ಥಿವೇತನ ಅರ್ಜಿಗಳನ್ನು ಸಕಾಲದಲ್ಲಿ ಪರಿಶೀಲಿಸಲು ರಾಜ್ಯ ಸರ್ಕಾರದ ಸಹಕಾರವನ್ನು ಕೋರಿದೆ. ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ತಮ್ಮ ಹಂತದಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ಪರಿಶೀಲಿಸಿ ದೃಢೀಕರಿಸುವಂತೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEOs) ಖಚಿತಪಡಿಸಿಕೊಳ್ಳಬೇಕು. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಸಿಪಿಐ, ಧಾರವಾಡ ಮತ್ತು ಕಲಬುರಗಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ತಮ್ಮ ತಮ್ಮ ವ್ಯಾಪ್ತಿಗೆ ಒಳಪಡುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗೂ ಸಂಸ್ಥೆಯ ನೋಡಲ್ ಅಧಿಕಾರಿಗಳು (INO), ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ನಲ್ಲಿ ನೋಡಲ್ ಹಂತದಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ಪರಿಶೀಲಿಸಿ ದೃಢೀಕರಿಸುವಂತೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.
ನಿಗದಿಪಡಿಸಿರುವ ಕೊನೆಯ ದಿನಾಂಕದವರೆಗೆ ಕಾಯದೆ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಉಪನಿರ್ದೇಶಕರು (DDPI) ಸೂಚನೆ ನೀಡಬೇಕು. ಆ ಮೂಲಕ ಯಾವುದೇ ಅರ್ಜಿಯು ಅನಗತ್ಯವಾಗಿ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಪರಿಶೀಲನಾ ಪ್ರಕ್ರಿಯೆಯ ಪ್ರಗತಿಯನ್ನು ಸಂಬಂಧಪಟ್ಟ ಮುಖ್ಯಸ್ಥರು (HoDs) ಮತ್ತು ಉಪನಿರ್ದೇಶಕರು (DDPIs) ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು. ನಿಗದಿತ ಕೊನೆಯ ದಿನಾಂಕವಾದ 15.11.2026ಕ್ಕೂ ಮುನ್ನವೇ ಈ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಅಗತ್ಯ ಅನುಸರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪತ್ರದಲ್ಲಿ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.

ಕೊನೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಉದ್ದೇಶಿತ ಆರ್ಥಿಕ ನೆರವು ಸಕಾಲದಲ್ಲಿ ತಲುಪುವುದನ್ನು ಖಚಿತಪಡಿಸುವ ಮಹತ್ವವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ವಿಷಯವನ್ನು ಅತ್ಯಂತ ತುರ್ತು ಮತ್ತು ಉನ್ನತ ಆದ್ಯತೆಯ ವಿಷಯವೆಂದು ಪರಿಗಣಿಸಬೇಕು. ತಕ್ಷಣವೇ ಅಗತ್ಯ ಕ್ರಮಗಳನ್ನು ಪ್ರಾರಂಭಿಸಬೇಕು ಹಾಗೂ ನಿಗದಿಪಡಿಸಿದ ಕಾಲಮಿತಿಯೊಳಗೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಶ್ಮಿ ಮಹೇಶ್ ಅವರು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.




