Friday | November 13, 2026 |

ಮುಚ್ಚಿದ ಕೈಮಗ್ಗ ಅಭಿವೃದ್ದಿ ನಿಗಮ, ಗಾಂಧಿ ಆಶ್ರಮ ನೆಲಸಮ, ಗ್ರಾಮಸಭೆ ನಿರ್ಣಯಗಳಿಗೆ ಸಿಗದ ಮನ್ನಣೆ; ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿವಾದಿ ಪ್ರಸನ್ನ ರಾಜೀನಾಮೆ

ಬೆಂಗಳೂರು;  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿಯ ಹೊನ್ನೇಸರ ಗ್ರಾಮದ ಕೆರೆಕಟ್ಟೆ ಮತ್ತು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ನೆಲಸಮಗೊಳಿಸಿರುವುದನ್ನು ವಿರೋಧಿಸಿರುವ ರಂಗಕರ್ಮಿ ಪ್ರಸನ್ನ ಅವರು ಕೈಮಗ್ಗ ಮತ್ತು ಜವಳಿ ಇಲಾಖೆಯಡಿಯಲ್ಲಿರುವ  ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇದೀಗ ಬಹಿರಂಗವಾಗಿದೆ.

ಗ್ರಾಮಸಭೆಗಳ ನಿರ್ಣಯಗಳನ್ನು ಕಡಗೆಣಿಸಿ ಮಂತ್ರಿಗಳು ಮತ್ತು  ಅಧಿಕಾರಿಗಳು ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಪ್ರಸನ್ನ ಅವರು ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಇದೇ ಪತ್ರದಲ್ಲಿ ಹೇಳಿದ್ದಾರೆ.

2026ರ ಅಕ್ಟೋಬರ್‍‌ 12ರಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಗಾಂಧಿವಾದಿ ಮತ್ತು ರಂಗಕರ್ಮಿ ಪ್ರಸನ್ನ ಅವರು ಪತ್ರ ರವಾನಿಸಿದ್ದಾರೆ. ಈ ಪತ್ರದ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

ಸಾಗರ ತಾಲೂಕಿನ ಹೊನ್ನೆಸರ ಕೆರೆಯ ಒತ್ತುವರಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಈ ಪಟ್ಟಿಗೆ ಮಣಿದಿದ್ದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ್ ಖಂಡ್ರೆ ಅವರು ಒತ್ತುವರಿ ಮಾಡಲಾಗಿದೆ ಎನ್ನಲಾಗಿರುವ ಜಾಗವನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದ್ದರು. ಸಚಿವ ಈಶ್ವರ್‍‌ ಖಂಡ್ರೆ ಅವರು ನೀಡಿದ್ದ ಗಡುವಿನೊಳಗೇ ಒತ್ತುವರಿಯಾಗಿದೆ ಎಂದು ಹೇಳಲಾಗಿದ್ದ ಜಾಗವನ್ನು ತೆರವುಗೊಳಿಸಿದ್ದರು.

ಈ ಬೆಳವಣಿಗೆ  ನಡುವೆಯೇ ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಅವರು ಮಹಾತ್ಮಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮುನ್ನೆಲೆಗೆ ಬಂದಿದೆ.

ಪ್ರಸನ್ನ ಅವರ ಪತ್ರದಲ್ಲೇನಿದೆ?

ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹೊನ್ನೇಸರ ಗ್ರಾಮದ ಕೆರೆಯನ್ನು ಚರಕ ಸಂಸ್ಥೆಯು ಒಂದು ಕರೆ ಸಮಿತಿ ರೂಪಿಸಿ ಪುನಶ್ಚೇತನಗೊಳಿಸಿತ್ತು. ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೆರೆಯನ್ನು ಲೋಕಾರ್ಪಣೆ ಮಾಡಿದ್ದರು. ಶಾಸಕರು ಗಂಗೆಯ ಪೂಜೆ ಮಾಡಿ ಲೋಕಾರ್ಪಣೆ ಮಾಡಿದ್ದ ಕಟ್ಟೆಯನ್ನು ಸರ್ಕಾರಿ ಅಧಿಕಾರಿಗಳು ಭಗ್ನಗೊಳಿಸಿದ್ದಾರೆ. ಹಾಗೂ ಗಾಂಧಿ ಸಂಸ್ಥೆಯೊಂದರ  ಮೇಲೆ ಕೆರೆ ಒತ್ತುವರಿಯ ಅನಗತ್ಯ ಆರೋಪ ಹೊರಿಸಿರುತ್ತಾರೆ ಎಂದು ಪ್ರಸನ್ನ ಅವರು ತಮ್ಮ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅದೇ ರೀತಿ ಎರಡು ತಿಂಗಳ ಹಿಂದೆ ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಗ್ರಾಮಸಭೆ ನಿರ್ಣಯವನ್ನು ಧಿಕ್ಕರಿಸಿ ಬದನವಾಳು ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ಸರಕಾರಿ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಗಾಂಧಿವಾದಿಗಳು ಪ್ರತಿಭಟನೆ ನಡೆಸಿದ್ದಾರೆ. ಹಾಗೆಯೆ ಸರ್ಕಾರವು ಕೈಮಗ್ಗ ಅಭಿವೃದ್ದಿ ನಿಗಮವನ್ನು ಮುಚ್ಚಿದೆ. ಗ್ರಾಮೋದ್ಯೋಗ ಕ್ಷೇತ್ರವು ಕರ್ನಾಟಕದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ ಎಂದು ಪತ್ರದಲ್ಲಿ ಪ್ರಸನ್ನ ಅವರು ಗಮನಸೆಳೆದಿರುವುದು ತಿಳಿದು ಬಂದಿದೆ.

ಕರ್ನಾಟಕದ ಗ್ರಾಮಸ್ಥರು ಗುಳೆ ಎದ್ದು ಗ್ರಾಮಗಳೇ ಬರಿದಾಗ ತೊಡಗಿವೆ. ಇಲ್ಲವೇ ಹೊರ ರಾಜ್ಯಗಳಿಂದ ಬಂದು ಕೂಲಿ ಮಾಡುತ್ತಿರುವವರಿಂದ ತುಂಬಿದೆ. ಮಹಾತ್ಮಗಾಂಧಿ ಅವರ ಹೆಸರಿನಲ್ಲಿರುವ ಗ್ರಾಮ ಪಂಚಾಯ್ತಿ ವ್ಯವಸ್ಥೆಯನ್ನು ಅಧಿಕಾರಿಗಳು ಮತ್ತು ಮಂತ್ರಿಗಳು ತಮ್ಮ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ಗ್ರಾಮ ಸಭೆಯ ನಿರ್ಣಯಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ ಎಂದು ಪ್ರಸನ್ನ ಅವರು ಪತ್ರದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿರುವುದು ಗೊತ್ತಾಗಿದೆ.

 

 

 

‘ನನ್ನ ಮನಸ್ಸಿಗೆ ತೀವ್ರ ಆಘಾತವಾಗಿದೆ. ರಾಜ್ಯ ಸರ್ಕಾರದ ಜವಳಿ ಮತ್ತು ಕೈ ಮಗ್ಗ ಮಂತ್ರಾಲಯದ ಮಹಾತ್ಮಗಾಂಧಿ ವಸ್ತ್ರೋದ್ಯೋಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ನನ್ನ ರಾಜೀನಾಮೆ ಸ್ವೀಕರಿಸುವುದು,’ ಎಂದು ಪತ್ರದಲ್ಲಿ ಪ್ರಸನ್ನ ಅವರು ಹೇಳಿರುವುದು ತಿಳಿದು ಬಂದಿದೆ.

ಮಹಾತ್ಮ ಗಾಂಧಿ ವಸ್ತ್ರೋದ್ಯಮ ಕೋಶವು ಕರ್ನಾಟಕದ ಕೈಮಗ್ಗ ನೇಕಾರರ ಅಭಿವೃದ್ಧಿ ಮತ್ತು ಕೈಮಗ್ಗ ಉದ್ಯಮದ ಪುನರುಜ್ಜೀವನಕ್ಕಾಗಿ ರೂಪಿಸಲಾದ ಒಂದು ಪ್ರಮುಖ ಉಪಕ್ರಮವಾಗಿದೆ. ರಾಜ್ಯದ ನೇಕಾರರಿಗೆ ಆರ್ಥಿಕ ಬಲ ತುಂಬಲು ಮತ್ತು ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ನೇಕಾರರ ಸಬಲೀಕರಣ. ಗ್ರಾಮೀಣ ಪ್ರದೇಶದ ಕೈಮಗ್ಗ ನೇಕಾರರಿಗೆ ನಿರಂತರ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವುದು ಇದರ ಮುಖ್ಯ ಗುರಿಯಾಗಿದೆ. ಆಧುನಿಕ ವಿನ್ಯಾಸ ಮತ್ತು ಮಾರುಕಟ್ಟೆ. ಸಾಂಪ್ರದಾಯಿಕ ನೇಕಾರಿಕೆಯ ಜೊತೆಗೆ ಆಧುನಿಕ ವಿನ್ಯಾಸಕಾರರನ್ನು ಒಗ್ಗೂಡಿಸಿ, ಪರಿಸರ ಸ್ನೇಹಿ ಮತ್ತು ಕೈಯಿಂದ ನೇಯ್ದ ಬಟ್ಟೆಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಇದು ನೆರವಾಗುತ್ತದೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಮತ್ತು ರಾಜ್ಯದ ನೇಕಾರರ ಸಂಘಗಳಿಗೆ ಈ ಕೋಶವು ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಈ ಕೋಶವನ್ನು  ನೇಕಾರ ಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗುತ್ತಿತ್ತು. ಈ ಮಧ್ಯೆಯೇ ಈ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಂಗಕರ್ಮಿ ಹಾಗೂ ಗಾಂದಿವಾದಿ ಪ್ರಸನ್ನ ಅವರು ರಾಜೀನಾಮೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಹೊನ್ನೆಸರದ ಪ್ರಕರಣವೇನು?

ಹೊನ್ನೇಸರದ ಗ್ರಾಮದ ಕೆರೆಯ ಒಟ್ಟು ವಿಸ್ತೀರ್ಣದ ಪೈಕಿ 16 ಗುಂಟೆ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಒತ್ತುವರಿ  ತೆರವು ಕಾರ್ಯಾಚರಣೆಯು  2022ರಿಂದಲೂ ನೆನೆಗುದಿಗೆ ಬಿದ್ದಿತ್ತು ಎಂದು ಹೇಳಲಾಗಿತ್ತು. ಈ ಬಗ್ಗೆ 2026ರ ಸೆಪ್ಟಂಬರ್‍‌ 29ರಂದು ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿತ್ತು. ಆ ಸಂದರ್ಭದಲ್ಲಿ ಹಾಜರಿದ್ದ ಸಚಿವ ಈಶ್ವರ ಖಂಡ್ರೆ ಅವರು ಒತ್ತುವರಿ ತೆರವುಗೊಳಿಸಬೇಕು ಎಂದು ತಾಕೀತು ಮಾಡಿದ್ದರು. ಅದರಂತೆ ಅಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ಜಾಗವನ್ನು ತೆರವುಗೊಳಿಸಿದ್ದರು.

 

ಕೆರೆ ಜೀರ್ಣೋದ್ಧಾರ ಮಾಡಿದ್ದ ಚರಕ ಸಂಸ್ಥೆ

 

 

ಗಾಂಧಿ ಆಶ್ರಮ ನೆಲಸಮಕ್ಕೆ ಆಕ್ಷೇಪವೇಕೆ?

ಅದೇ ರೀತಿ  ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಐತಿಹಾಸಿಕ ಬದನವಾಳು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿದ್ದ ಸುಮಾರು ಐದರಿಂದ ಆರು ಹಳೆಯ ಕಟ್ಟಡಗಳನ್ನು ಆಗಸ್ಟ್ 2026ರಲ್ಲಿ ನೆಲಸಮಗೊಳಿಸಲಾಗಿತ್ತು.  ಕೇಂದ್ರದ ಅಭಿವೃದ್ಧಿ ಮತ್ತು ಪುನಶ್ಚೇತನ ಕಾಮಗಾರಿಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಗಾಂಧಿವಾದಿಗಳು ಮತ್ತು ಸ್ಥಳೀಯ ಕಾರ್ಯಕರ್ತರ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

 

ಬದನವಾಳು ಗಾಂಧಿ ಆಶ್ರಮ ನೆಲಸಮಗೊಳಿಸುತ್ತಿರುವುದು

 

ಆಗಸ್ಟ್ 1, 2026ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಬೆನ್ನಲ್ಲೇ ಜೆಸಿಬಿ ಯಂತ್ರಗಳ ಮೂಲಕ ಆವರಣದಲ್ಲಿದ್ದ ಹಳೆಯ ಕಟ್ಟಡಗಳನ್ನು ಕೆಡವಲಾಗಿತ್ತು. ಇವುಗಳಲ್ಲಿ ಈ ಹಿಂದೆ ಬೆಂಕಿಪೊಟ್ಟಣ ಮತ್ತು ಕಾಗದ ತಯಾರಿಸುತ್ತಿದ್ದ ಎರಡು ಘಟಕಗಳು ಹಾಗೂ ಮೂರರಿಂದ ನಾಲ್ಕು ವಸತಿ ಗೃಹಗಳು ಸೇರಿವೆ. ಪ್ರಸ್ತುತ ಕೈಮಗ್ಗ ಮತ್ತು ನೂಲುವ ಚಟುವಟಿಕೆಗಳು ನಡೆಯುತ್ತಿರುವ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1927 ಮತ್ತು 1932ರಲ್ಲಿ ಎರಡು ಬಾರಿ ಬದನವಾಳು ಖಾದಿ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿದ್ದರು. ಶತಮಾನದ ಇತಿಹಾಸವಿರುವ ಈ ತಾಣದ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕು ಎಂಬುದು ಗಾಂಧಿವಾದಿಗಳು ಒತ್ತಾಯಿಸಿದ್ದರು.

ಗುಜರಾತಿನ ಸಬರಮತಿ ಆಶ್ರಮದ ಮಾದರಿಯಲ್ಲಿ ಬದನವಾಳು ಖಾದಿ ಕೇಂದ್ರವನ್ನು ಪ್ರವಾಸಿ, ಯೋಗ ಮತ್ತು ಧ್ಯಾನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸುಮಾರು ₹40 ಕೋಟಿ ಅನುದಾನ ಮಂಜೂರು ಮಾಡಿತ್ತು. ರಂಗಕರ್ಮಿ ಪ್ರಸನ್ನ ಸೇರಿದಂತೆ ಹಲವು ಗಾಂಧಿವಾದಿಗಳು ಈ ನೆಲಸಮ ಕಾರ್ಯವನ್ನು ತೀವ್ರವಾಗಿ ಖಂಡಿಸಿದ್ದರು.  ಸರ್ಕಾರ ನೇಮಿಸಿದ್ದ ಗಾಂಧಿವಾದಿಗಳ ಸಮಿತಿಯ ವರದಿಯನ್ನು ಕಡೆಗಣಿಸಿ, ಪರಿಸರಕ್ಕೆ ಪೂರಕವಾಗಿದ್ದ ಹಳೆಯ ಮರಗಳನ್ನು ಕಡಿದು ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಗಾಂಧಿ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು,

ನೆಲಸಮಗೊಳಿಸಲಾದ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದವು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು.  ಮೇಲ್ಛಾವಣಿಗಳು ಈಗಾಗಲೇ ಕುಸಿದಿದ್ದು, ಕೇವಲ ಗೋಡೆಗಳು ಮಾತ್ರ ಉಳಿದಿದ್ದರಿಂದ ಹೊಸ ಕಾಮಗಾರಿಗಾಗಿ ಅವುಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದರು.

Hot this week

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ...

ಹಾಸನ ಡಿ ಸಿ ಲತಾಕುಮಾರಿ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿದ ಸಹಾಯಕ ಪ್ರಾಧ್ಯಾಪಕ; ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

ಬೆಂಗಳೂರು;  ಪ್ರಸ್ತುತ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕೆ ಎಸ್ ಲತಾಕುಮಾರಿ ಅವರ...
Please Scan to make Your Contribution

Topics

ಸ್ಟಿಂಗ್‌ ಆಪರೇಷನ್‌; ಬಾಲ ನ್ಯಾಯಸಮಿತಿಯ ಮುಂದಿದ್ದ ಮನವಿ ಗೃಹ ಇಲಾಖೆ ಅಂಗಳಕ್ಕೆ, ಕ್ರಮ ಕೈಗೊಳ್ಳುವುದೇ ಸರ್ಕಾರ?

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಡೆದಿದೆ ಎನ್ನಲಾಗಿರುವ ಮಾರುವೇಷದ...

‍ಐದು ಪೊಲೀಸ್ ಆಯುಕ್ತಾಲಯ ರಚನೆ; 856.95 ಕೋಟಿ ವೆಚ್ಚ, ಬೊಕ್ಕಸಕ್ಕೆ ಆಗಲಿದೆಯೇ ಹೊರೆ?

ಬೆಂಗಳೂರು; ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಸಮಗ್ರವಾಗಿ 5 ವಿಭಾಗಗಳಾಗಿ ಪುನರ್...

ಇಎಸ್‌ಐ ಅನುದಾನದಲ್ಲಿ ಗಣನೀಯ ಮೊತ್ತ ಕಡಿತ; ಬಿಡುಗಡೆಯಾಗದ 80 ಕೋಟಿ, ವೈದ್ಯಕೀಯ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ?

ಬೆಂಗಳೂರು; ಕರ್ನಾಟಕದಲ್ಲಿ ಇಎಸ್‌ಐ ಯೋಜನೆಯಡಿ ವಿಮೆ ಹೊಂದಿರುವ ವ್ಯಕ್ತಿಗಳು ಮತ್ತು ಅವರ...

Related Articles

Popular Categories

error: Content is protected !!