ಬೆಂಗಳೂರು; ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆ, ಕಿರುಕುಳ, ದೈಹಿಕ ಹಲ್ಲೆ, ಬಿಡುಗಡೆಗಾಗಿ ಹಣದ ಬೇಡಿಕೆ, ಜಾತಿ ನಿಂದನೆ, ಸುಳ್ಳು ಪ್ರಕರಣಗಳ ದಾಖಲು ಮುಂತಾದ ಅಪರಾಧಗಳನ್ನು ಆರೋಪಿಸಿರುವ ಪಿಎಸ್‌ಐ ಹಗರಣದ ಆರೋಪಿ ಆರ್ ಡಿ ಪಾಟೀಲ್ ಅವರ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಲು ಯೋಗ್ಯ ಪ್ರಕರಣ ಎಂದು ಕಾನೂನು ಕೋಶವು ಅಭಿಪ್ರಾಯಿಸಿದೆ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರ್ ಡಿ ಪಾಟೀಲ್ ಅವರು ರಾಜ್ಯ ಸರ್ಕಾರದ ವಿರುದ್ಧ ರಿಟ್ ಅರ್ಜಿ (ಸಂಖ್ಯೆ 202160/2026) ದಾಖಲಿಸಿದ್ದರು.
ಈ ಪ್ರಕರಣದಲ್ಲಿ 5ನೇ ಪ್ರತಿವಾದಿಯಾಗಿರುವ ಕಲ್ಬುರ್ಗಿ ಫರಹಾತ್‌ಬಾದ್‌ನ ಸ್ಟೇಷನ್ ಹೌಸ್ ಆಫೀಸರ್ 2026ರ ಜನವರಿ 12ರಂದು ಹೊರಡಿಸಿದ್ದ ಹಿಂಬರಹ ರದ್ದುಪಡಿಸುವುದು, ಪ್ರತಿವಾದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮ್ಯಾಂಡ್‌ಮಸ್ ರಿಟ್ ಹೊರಡಿಸುವುದು, ಜಾತಿ ಪ್ರಮಾಣ ಪತ್ರವು ಮಾನ್ಯವಾಗಿದೆ ಎಂದು ಘೋಷಿಸಬೇಕು ಮತ್ತು ಹಲವು ಪರಿಹಾರಗಳನ್ನು ಭಾರತದ ಸಂವಿಧಾನದ ವಿಧಿಗಳು 226 ಮತ್ತು 227ರ ಅಡಿಯಲ್ಲಿ ರಿಟ್ ಅರ್ಜಿಯಲ್ಲಿ ಕೋರಿದ್ದರು.
ಈ ಅರ್ಜಿಯನ್ನು ಪ್ರಾಥಮಿಕ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಾಧೀಶ ಎಸ್ ಆರ್ ಕೃಷ್ಣ ಕುಮಾರ್ ನೇತೃತ್ವದ ಪೀಠವು 2026ರ ಆಗಸ್ಟ್ 20ರಂದು ಮೌಖಿಕ ಆದೇಶ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಈ ಸಂಬಂಧ ಗೃಹ ಸಚಿವಾಲಯದ ಕಾನೂನು ಕೋಶಕ್ಕೆ 2026ರ ಸೆ.9ರಂದು ಪತ್ರ ಬರೆದಿದೆ.
ಈ ಕುರಿತು ಗೃಹ ಇಲಾಖೆ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಮೌಖಿಕ ಆದೇಶದಲ್ಲೇನಿದೆ?
ಅರ್ಜಿದಾರರು ಕೋರಿರುವ ಪರಿಹಾರಗಳಿಗೆ ಸಂಬಂಧಿಸಿದಂತೆ ಕಡತದಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದಾಗ, ಪ್ರಸ್ತುತ ಅರ್ಜಿಯಲ್ಲಿ ಅರ್ಜಿದಾರರ ಸಂಬಂಧವು ಸೀಮಿತವಾಗಿದೆ. ಇದರ ಪ್ರಕಾರ ಅರ್ಜಿದಾರರು 2025ರ ಡಿಸೆಂಬರ್ 29ರಂದು ಸಲ್ಲಿಸಿರುವ (ಅನುಬಂಧ–Eನಲ್ಲಿನ) ದೂರಿನಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘನೆ, ಕಿರುಕುಳ, ದೈಹಿಕ ಹಲ್ಲೆ, ಬಿಡುಗಡೆಗಾಗಿ ಹಣದ ಬೇಡಿಕೆ, ಜಾತಿ ನಿಂದನೆ, ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಮುಂತಾದ ಅಪರಾಧಗಳನ್ನು ಆರೋಪಿಸಲಾಗಿದೆ.

ಆದರೆ, ಸದರಿ ದೂರನ್ನು ಎಫ್‌ಐಆರ್ ಆಗಿ ದಾಖಲಿಸಲಾಗಿರಲಿಲ್ಲ. ಪ್ರತಿವಾದಿಗಳಾದ ಪೊಲೀಸ್ ಅಧಿಕಾರಿಗಳು, ಅರ್ಜಿದಾರರು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದವರಲ್ಲ ಎಂಬ ಕಾರಣವನ್ನು ನೀಡಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ. ಅಲ್ಲದೇ (ಅನುಬಂಧ–Fನಲ್ಲಿ) 2026ರ ಜನವರಿ 11ರಂದು ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್/ಆದೇಶವನ್ನು ಹೊರಡಿಸಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು 2023ರ ಮಾರ್ಚ್ 9ರಂದು ನೀಡಿದ್ದ (ಅನುಬಂಧ–Aನಲ್ಲಿರುವ) ಜಾತಿ ಪ್ರಮಾಣಪತ್ರದ ಕುರಿತು ಗಮನ ಸೆಳೆದರು. ಈ ಜಾತಿ ಪ್ರಮಾಣಪತ್ರದಲ್ಲಿ ಅರ್ಜಿದಾರರು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದವರು ಎಂದು ವರ್ಗೀಕರಿಸಿ/ಘೋಷಿಸಿ/ವಿವರಿಸಲಾಗಿದೆ. ಆ ಪ್ರಮಾಣಪತ್ರವನ್ನು ರದ್ದುಗೊಳಿಸದಿರುವ, ಅಮಾನ್ಯಗೊಳಿಸದಿರುವ ಅಥವಾ ಹಿಂಪಡೆಯದಿರುವವರೆಗೆ, ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸಮುದಾಯಕ್ಕೆ ಸೇರಿದವರಲ್ಲ ಎಂಬ ತಪ್ಪು ಆಧಾರದ ಮೇಲೆ ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್‌ನ್ನು ಹೊರಡಿಸುವ ಮೂಲಕ ಪ್ರತಿವಾದಿಗಳು ತಪ್ಪು ಮಾಡಿದ್ದಾರೆ. ಆದ್ದರಿಂದ, ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್‌ನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಅರ್ಜಿದಾರರ ಪರ ವಕೀಲರು ಮಂಡಿಸಿದ್ದ ವಾದವನ್ನು ಸರ್ಕಾರಿ ವಕೀಲರು ಮತ್ತು ಪ್ರತಿವಾದಿ 4 ಪರ ಹಾಜರಾಗಿದ್ದ ವಕೀಲರು ವಿರೋಧಿಸಿದರು. ಈ ಅರ್ಜಿಯಲ್ಲಿ ಯಾವುದೇ ಅರ್ಹತೆ/ಸಮರ್ಥನೆ ಇಲ್ಲ ಮತ್ತು ಅರ್ಜಿಯನ್ನು ವಜಾಗೊಳಿಸಬೇಕು ಎಂದು ವಾದಿಸಿದರು.
ಪರಸ್ಪರ ವಿರುದ್ಧವಾದ ವಾದಗಳಿಗೆ ಮುಂದಾಗುವ ಮೊದಲು (ಅನುಬಂಧ–Aನಲ್ಲಿರುವ) ಜಾತಿ ಪ್ರಮಾಣಪತ್ರವನ್ನು ಉಲ್ಲೇಖಿಸುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದರು.

ಆರ್ ಡಿ ಪಾಟೀಲ್ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು ಎಂದು ಮಾನ್ಯ ಮಾಡಲಾಗಿರುವ ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರಿರುತ್ತಾರೆ ಎಂದು ಪ್ರಮಾಣೀಕರಿಸಿದೆ ಎಂದು ಹೇಳಿದ ನ್ಯಾಯಾಧೀಶರು ಅಫಜಲಪುರ ತಾಲೂಕು ತಹಶೀಲ್ದಾರ್ ಅವರು ನೀಡಿದ್ದ ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳ ಪ್ರಮಾಣ ಪತ್ರವನ್ನು ಉಲ್ಲೇಖಿಸಿದ್ದರು.

‘ಜಾತಿ ಪ್ರಮಾಣಪತ್ರವನ್ನು ಪರಿಶೀಲಿಸಿದಾಗ, ಅರ್ಜಿದಾರರು ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ ಸೇರಿದವರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಹೀಗಿರುವಾಗ, ಸದರಿ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸದಿರುವ, ಹಿಂಪಡೆಯದಿರುವ ಅಥವಾ ಅಮಾನ್ಯಗೊಳಿಸದಿರುವ ಸಂದರ್ಭದಲ್ಲಿ, ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್‌ನ್ನು ಹೊರಡಿಸುವ ಮೂಲಕ ಪ್ರತಿವಾದಿಗಳು ಸ್ಪಷ್ಟವಾಗಿ ತಪ್ಪು ಮಾಡಿದ್ದಾರೆ,’ ಎಂದು ನ್ಯಾಯಾಧೀಶರು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಪ್ರಶ್ನಿತ ಜಾತಿ ಪ್ರಮಾಣಪತ್ರವನ್ನು ಹೊರಡಿಸಿದ ದಿನಾಂಕದಂದು ರದ್ದಾಗಿರಲಿಲ್ಲ, ಹಿಂಪಡೆದಿರಲಿಲ್ಲ ಮತ್ತು ಅಮಾನ್ಯವಾಗಿರಲಿಲ್ಲ ಎಂಬುದನ್ನು ಪ್ರತಿವಾದಿಗಳು ಪರಿಗಣಿಸಬೇಕಿತ್ತು. ಅಂತಹ ಸಂದರ್ಭದಲ್ಲಿ ದೂರಿನ ಮೇಲೆ ಕ್ರಮ ಕೈಗೊಳ್ಳಲು ನಿರಾಕರಿಸುವ ಹಕ್ಕು ಪ್ರತಿವಾದಿಗಳಿಗೆ ಇರಲಿಲ್ಲ. ಬದಲಾಗಿ ಕಾನೂನಿನ ಪ್ರಕಾರ ಮುಂದಿನ ಕ್ರಮವನ್ನು ಕೈಗೊಳ್ಳಬೇಕಿತ್ತು ಎಂದು ನ್ಯಾಯಾಧೀಶರು ಅವಲೋಕಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಇದಲ್ಲದೆ, ದೂರನ್ನು ಸ್ವೀಕರಿಸಿ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವ ಬದಲು, ಅರ್ಜಿದಾರರು ಸುಳ್ಳು ದೂರನ್ನು ಸಲ್ಲಿಸಿದ್ದಾರೆ ಎಂಬ ತಪ್ಪು ನಿರ್ಣಯಕ್ಕೆ ಪ್ರತಿವಾದಿಗಳು ಬಂದಿರುವುದು ಗಮನಾರ್ಹವಾಗಿದೆ. ಈ ನಿರ್ಣಯವು ಕಾನೂನು ಮತ್ತು ವಾಸ್ತವಾಂಶಗಳಿಗೆ ಮಾತ್ರವಲ್ಲದೆ, ತತ್ವಗಳಿಗೂ ಸ್ಪಷ್ಟವಾಗಿ ವಿರುದ್ಧವಾಗಿದೆ ಎಂದು ನ್ಯಾಯಾಲಯವು ಹೇಳಿದೆ.

ಅದೇ ರೀತಿ ಮೇಲ್ಮನವಿ ಸಲ್ಲಿಸಲು ಕಾರಣವಾಗಿರುವ ವಿಷಯವು ಲಲಿತಾಕುಮಾರಿ/ಉತ್ತರ ಪ್ರದೇಶ ಸರ್ಕಾರದ ಪ್ರಕರಣದಲ್ಲಿ ( AIR 2014 SC 187ರಲ್ಲಿ) ವರದಿಯಾಗಿರುವ ತೀರ್ಪು ಹಾಗೂ ಬಿಎನ್‌ಎಸ್‌ಎಸ್‌ನ ಸೆಕ್ಷನ್ 173ರಲ್ಲಿ ಪ್ರತಿಪಾದಿಸಿರುವ ಕಾನೂನು ತತ್ವಗಳಿಗೆ ವಿರುದ್ಧವಾಗಿದೆ. ಈ ಕಾರಣದಿಂದಲೂ ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್‌ನ್ನು ರದ್ದುಪಡಿಸಬೇಕಾಗಿದೆ ಎಂದು ಅಭಿಪ್ರಾಯಿಸಿದೆ.

ಈ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಾಧೀಶರು ಆರ್ ಡಿ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ಅನುಮತಿಸಿತ್ತು. ಅಲ್ಲದೇ 5ನೇ ಪ್ರತಿವಾದಿಯು ಅವರು 2026ರ ಜನವರಿ 12ರಂದು ಹೊರಡಿಸಿರುವ ಪ್ರಶ್ನಿಸಲಾದ ಎಂಡೋರ್ಸ್‌ಮೆಂಟ್‌ನ್ನು ರದ್ದುಪಡಿಸಿತು. 2025ರ ಡಿಸೆಂಬರ್ 29ರಂದು ಸಲ್ಲಿಸಿದ್ದ ದೂರನ್ನು ಪರಿಗಣಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದರು.

ಹೈಕೋರ್ಟ್ ನೀಡಿರುವ ಈ ಆದೇಶವನ್ನು ಪ್ರಶ್ನಿಸಲು ಗೃಹ ಇಲಾಖೆಯ ಕಾನೂನು ಕೋಶಕ್ಕೆ ಪತ್ರ ಬರೆಯಲಾಗಿದೆ. ರಿಟ್ ಅಪೀಲ್ ಮೂಲಕ ಪ್ರಶ್ನಿಸಿರುವ ಈ ತೀರ್ಪನ್ನು ಪ್ರಶ್ನಿಸುವ ಅಗತ್ಯವಿದೆ ಎಂದು ಕಾನೂನು ಕೋಶಕ್ಕೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ತಹಶೀಲ್ದಾರ್ ಮತ್ತು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಪ್ರಕಾರ, ಅರ್ಜಿದಾರರಾದ ಆರ್.ಡಿ. ಪಾಟೀಲ್ ಅವರು ಕೋಲಿ ಕಬ್ಬಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪರಿಶಿಷ್ಟ ಪಂಗಡಗಳ (Scheduled Tribes) ವ್ಯಾಪ್ತಿಗೆ ಬರುವುದಿಲ್ಲ. ತಮ್ಮ ಹೇಳಿಕೆಗಳನ್ನು ಬೆಂಬಲಿಸುವುದಕ್ಕಾಗಿ ಅವರು ಸಲ್ಲಿಸಿರುವ ಹಲವಾರು ದಾಖಲೆಗಳೂ ಸಹ ಕೋಲಿ ಕಬ್ಬಲಿಗ ಸಮುದಾಯವು ಪರಿಶಿಷ್ಟ ಪಂಗಡಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಕಾನೂನು ಕೋಶಕ್ಕೆ ತಿಳಿಸಿರುವುದು ಗೊತ್ತಾಗಿದೆ.

ಅರ್ಜಿದಾರರು ಈಗಾಗಲೇ ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಪ್ರತೀಕಾರದ ಉದ್ದೇಶದಿಂದ ಹಾಗೂ ಪ್ರತೀಕಾರಾತ್ಮಕ ದೂರುಗಳನ್ನು ಹಲವು ಬಾರಿ ಸಲ್ಲಿಸಿರುವ ಹಿನ್ನೆಲೆ ಇದೆ.
ಹೀಗಾಗಿ ಅವರು ಜೈಲು ಅಧೀಕ್ಷಕರು ಮತ್ತು ಜೈಲು ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ದೈಹಿಕ ಹಲ್ಲೆ ಮತ್ತು ಜಾತಿ ನಿಂದನೆಗೆ ಸಂಬಂಧಿಸಿದಂತೆ ಅವರು ಮಾಡಿರುವ ಆರೋಪಗಳ ಕುರಿತು ಉನ್ನತ ಅಧಿಕಾರಿಗಳು ನಡೆಸಿದ ನಿಷ್ಪಕ್ಷಪಾತ ತನಿಖೆಯಲ್ಲಿ, ಅಂತಹ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿದ್ದು, ಅವುಗಳಿಗೆ ಯಾವುದೇ ಪೂರಕ ವಾಸ್ತವಾಂಶ ಅಥವಾ ಸಾಕ್ಷ್ಯಾಧಾರಗಳಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ಕಾನೂನು ಕೋಶದ ಗಮನಸೆಳೆದಿರುವುದು ತಿಳಿದು ಬಂದಿದೆ.

ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುವುದಾಗಿ ಹೇಳಿಕೊಂಡು, ತಮ್ಮ ಸಮುದಾಯದ ಸ್ಥಾನಮಾನವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಪ್ರತಿನಿಧಿಸುವ ಮೂಲಕ, ಅರ್ಜಿದಾರರು ಎಫ್‌ಐಆರ್ ದಾಖಲಿಸುವಂತೆ ನಿರಂತರವಾಗಿ ಒತ್ತಾಯಿಸಿದ್ದಾರೆ. ಮತ್ತು ಅವರು ವ್ಯವಸ್ಥಿತವಾಗಿ ಜೈಲಿನೊಳಗೆ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಆದ್ದರಿಂದ, ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವುದು ಸೂಕ್ತವೆಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣ ಸೇರಿದಂತೆ ಹಲವು ನೇಮಕಾತಿ ಅಕ್ರಮಗಳ ಹಿಂದಿನ ರೂವಾರಿ ಎನ್ನಲಾದ ಆರ್ ಡಿ ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್‌ಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ಜಾಮೀನು ನಿರಾಕರಿಸಿತ್ತು.
“ಅರ್ಜಿದಾರ ರುದ್ರೇಗೌಡ ಪಾಟೀಲ್ ಮೇಲ್ನೋಟಕ್ಕೆ ಹಲವು ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಮವೆಸಗುವುದೇ ಚಟವಾಗಿದೆ. ಹೀಗಾಗಿ, ಜಾಮೀನು ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿತ್ತು.
ನೇಮಕಾತಿ ಪರೀಕ್ಷೆಗಳನ್ನು ತಿರುಚುವ, ಅಕ್ರಮ ಎಸಗುವ ಕ್ರಿಮಿನಲ್ ಪಿತೂರಿಗಳಲ್ಲಿ ಪಾಟೀಲ್ ಪಾತ್ರವನ್ನು ತೋರಿಸುವ ಪ್ರಾಥಮಿಕ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ. ತನಿಖಾಧಿಕಾರಿಗಳು ಪಾಟೀಲ್ ಖರೀದಿಸಿದ ಮೊಬೈಲ್ ಫೋನ್ ಮತ್ತು ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಂಚನೆಗೆ ಅವರನ್ನು ಲಿಂಕ್ ಮಾಡುವ ಕರೆ ವಿವರ ದಾಖಲೆ ಸಲ್ಲಿಸಿದ್ದಾರೆ. ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳ ಸಂಬಂಧ ಎಂಟು ಪ್ರಕರಣಗಳು ಮತ್ತು 2021ರ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸೇರಿದಂತೆ ಪರೀಕ್ಷಾ ದುಷ್ಕೃತ್ಯಕ್ಕಾಗಿ ಪಾಟೀಲ್ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಹೀಗಾಗಿ, ಜಾಮೀನು ನೀಡಲಾಗದು” ಎಂದು ಆದೇಶಿಸಿತ್ತು.
ಹಣಕಾಸು ಗುಪ್ತಚರ ಘಟಕದ ಪೊಲೀಸ್ ವರಿಷ್ಠಾಧಿಕಾರಿ ರಾಘವೇಂದ್ರ ಹೆಗ್ಡೆ ನೇತೃತ್ವದ ಅಪರಾಧ ತನಿಖಾ ವಿಭಾಗದ (ಸಿಐಡಿ)ವಿಶೇಷ ತಂಡ ಪಾಟೀಲ್‌ರನ್ನು 2023ರ ನವೆಂಬರ್‌ನಲ್ಲಿ ಬಂಧಿಸಿತ್ತು. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಕೋಕಾ) ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ಹೂಡಿದೆ. ಸದ್ಯ ಆತ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ನೇಮಕ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಐಡಿ ಪಾಟೀಲ್ ಅವರನ್ನು ಬಂಧಿಸಿತ್ತು.
ಆರೋಪ ಪಟ್ಟಿಯ ಪ್ರಕಾರ ಕಲಬುರ್ಗಿಯ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ಪಾಟೀಲ್, ಅಭ್ಯರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಸಹಾಯ ಮಾಡಲು ಬ್ಲೂಟೂತ್ ಸಾಧನಗಳು ಮತ್ತು ವಾಕಿ-ಟಾಕಿಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರೈಸಿದ್ದಾರೆ. ತನಿಖಾಧಿಕಾರಿಗಳು ಅವರು ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಇದೇ ರೀತಿಯ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದರು.




