ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ತಯಾರಿ ನಡೆಸಿದೆ. ಈ ಸಂಬಂಧ ಪ್ರಸ್ತಾವನೆಯನ್ನು ಸಿದ್ಧಪಡಿಸಿರುವ ಕಂದಾಯ ಇಲಾಖೆಯು, ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ಪಡೆಯಲು ಸಚಿವ ಸಂಪುಟದ ಅನುಮೋದನೆ ಕೋರಿರುವುದು ಇದೀಗ ಬಹಿರಂಗವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕಡತವನ್ನು ಕಂದಾಯ ಇಲಾಖೆಯು ಇಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಮಂಡಿಸಿದೆ.! ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಿದೆ. ಅಲ್ಲದೆ ಈ ಬಗ್ಗೆ ಅಧಿಕೃತ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಹಾಗೆಯೇ ಸಚಿವ ಸಂಪುಟ ಸಭೆಯ ನಂತರ ಈ ಸಂಗತಿಯನ್ನು ಘೋಷಿಸಲಿದೆ!
ಈ ಸಂಬಂಧ ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯ (RD-TNV-4/2025/2026) ರಹಸ್ಯ ಹಾಳೆಗಳು ದಿ ಫೈಲ್ ಗೆ ಲಭ್ಯವಾಗಿವೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆ ನಡುವೆಯೇ ಮಂಗಳೂರಿನಲ್ಲಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಲು ಮಂಡಿಸಿರುವ ಕಡತವು ಮುನ್ನೆಲೆಗೆ ಬಂದಿದೆ.
ಪ್ರಸ್ತಾವನೆಯಲ್ಲೇನಿದೆ?
ವಿಜಯನಗರ ಅರಸರ ಕಾಲದಿಂದಲೂ ಮಂಗಳೂರು ಎಂದು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ. ದಕ್ಷಿಣ ಕನ್ನಡ (ಸೌತ್ ಕೆನರಾ) ಎಂಬುದಾಗಿ ವಸಾಹತುಶಾಹಿಗಳು (ಪೋರ್ಚುಗೀಸರು, ಬ್ರಿಟಿಷರು) ನೀಡಿದ್ದ ಹೆಸರನ್ನು ಬದಲಿಸಿದ್ದು ಮತ್ತೊಮ್ಮೆ ದೇಸಿಯ ಹೆಸರಾದ ಮಂಗಳೂರು ಎಂಬುದಾಗಿ ಬದಲಿಸಬೇಕು ಎಂದು ರಾಜಕಾರಣಿಗಳ, ಸಾಮಾಜಿಕ ಚಿಂತಕರ, ಸರ್ವಧರ್ಮದ ಹಿರಿಯರ, ದಕ್ಷಿಣ ಕನ್ನಡದ ವಿವಿಧ ಸಂಘಟನೆಗಳ ಹಾಗೂ ಸಾರ್ವಜನಿಕರ ಒಕ್ಕೊರಲ ಬೇಡಿಕೆಯಾಗಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಸಚಿವ ಸಂಪುಟದ ರಹಸ್ಯ ಹಾಳೆಗಳಿಂದ ತಿಳಿದು ಬಂದಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮದ 1964ರ ಕಲಂ 4(1) ಮತ್ತು 4(2) ಪ್ರಕಾರ ರಾಜ್ಯದಲ್ಲಿ ಒಂದು ಪ್ರದೇಶವೆಂದು ರಚಿತವಾಗಬೇಕಾದ ಪ್ರದೇಶಗಳನ್ನು ರಾಜ್ಯ ಸರ್ಕಾರವು ಅಧಿಸೂಚನೆ ಮೂಲಕ ನಿರ್ಧರಿಸಬಹುದು. ಮತ್ತು ರಚಿತವಾದ ಪ್ರದೇಶದ ಸರಹದ್ದುಗಳನ್ನು ಅಧಿಸೂಚನೆ ಮೂಲಕ ಅದು ಬದಲಾಯಿಸಬಹುದು ಅಥವಾ ರದ್ದುಗೊಳಿಸಬಹುದು. ಅದೇ ರೀತಿ ಪ್ರತಿಯೊಂದು ಪ್ರದೇಶವನ್ನು ಅಂಥ ಮಿತಿಗಳೊಂದಿಗೆ ಅಂಥ ಜಿಲ್ಲೆಗಳನ್ನಾಗಿ ರಾಜ್ಯ ಸರ್ಕಾರ ಅಧಿಸೂಚನೆ ಮೂಲಕ ನಿರ್ಧರಿಸಿದಂತೆ ವಿಭಜನೆ ಮಾಡಬಹುದು ಎಂದಿರುವುದನ್ನು ಸಚಿವ ಸಂಪುಟದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಅದೇ ಭಾರತ ಸರ್ಕಾರದ ಗೃಹ ಮಂತ್ರಾಲಯದ ಪತ್ರವನ್ನೂ ಸಚಿವ ಸಂಪುಟ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವಿಮಾನ ನಿಲ್ದಾಣ, ಬಂದರು, ವಿಶ್ವವಿದ್ಯಾಲಯ, ರೈಲ್ವೆ ವಲಯಗಳಿಗೆ ಮಂಗಳೂರು ಎಂದೇ ಹೆಸರು ಇದೆ. ಹಾಗೂ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗಳಿಗಾಗಿ ಸಹಕಾರಿಯಾಗಿ ಬೆಂಗಳೂರಿನಷ್ಟೇ ಪ್ರಖ್ಯಾತಿ ಪಡೆಯಬಲ್ಲ ಸಾಮರ್ಥ್ಯವಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಲು ಕುರಿತು ಸಚಿವ ಸಂಪುಟವು ಅನುಮೋದಿಸಬೇಕು ಎಂದು ಕಂದಾಯ ಇಲಾಖೆಯು ಕೋರಿರುವುದು ತಿಳಿದು ಬಂದಿದೆ.

ಸಮರ್ಥನೆಯಲ್ಲೇನಿದೆ?
ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ಪ್ರಸ್ತಾವನೆ ಪಡೆಯಬೇಕು. ಆ ನಂತರ ಭಾರತ ಸರ್ಕಾರದ ಗೃಹ ಸಚಿವಾಲಯವು 1953ರ ಸೆ.11ರಂದು ಹೊರಡಿಸಿರುವ ಮಾರ್ಗಸೂಚಿ ಅನ್ವಯ ಯಾವುದೇ ಜಿಲ್ಲೆ, ಪಟ್ಟಣ, ಗ್ರಾಮ, ರೈಲ್ವೇ ನಿಲ್ದಾಣಗಳ ಹೆಸರುಗಳ ಬದಲಾವಣೆ, ಮರು ನಾಮಕರಣ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಕಳಿಸಬೇಕು. ಗೃಹ ಸಚಿವಾಲಯವು ನಿರಾಕ್ಷೇಪಣಾ ಪತ್ರ ದೊರೆತ ನಂತರ ಈ ಕುರಿತು ಕ್ರಮ ವಹಿಸಬೇಕಾಗಿದೆ ಎಂದು ಕಂದಾಯ ಇಲಾಖೆಯು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.
ಈ ಪ್ರಸ್ತಾವನೆಗೆ ಕಂದಾಯ ಸಚಿವ ಡಾ ಜಿ ಪರಮೇಶ್ವರ್ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯದ ನಿರಾಕ್ಷೇಪಣ ಪತ್ರ ಪಡೆಯಲು ಸಚಿವ ಸಂಪುಟವು ಅನುಮೋದಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

ಸಚಿವ ಸಂಪುಟ ಪರಿಗಣನೆಗೆ ಮಂಡಿಸಿರುವ ಇತರೆ ಪ್ರಸ್ತಾವನೆಗಳ ವಿವರ
ಎಂಆರ್ಪಿಎಲ್ಗೆ ಸಂಬಂಧಿಸಿದ 27 ಎಕರೆ ಜಮೀನಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕಂದಾಯ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು ಮಂಡಿಸಿದೆ. ಹಾಗೆಯೆ ಕಂದಾಯ ಇಲಾಖೆಯು ಡಿ ಸಿ ಮನ್ನಾ ಜಮೀನುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಪರಿಶೀಲನೆಗೆ ಸಂಬಂಧಿಸಿದಂತೆ ಕಡತ ಮಂಡಿಸಿದೆ. ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧಿಸಿದ 356 ಎಕರೆ ಜಮೀನನ್ನು ಕಂದಾಯ ಇಲಾಖೆಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವರ್ಗಾವಣೆ ಮಾಡುವ ಪ್ರಸ್ತಾವನೆಯೂ ಸಹ ಸಚಿವ ಸಂಪುಟದಲ್ಲಿ ಚರ್ಚೆಗಳಾಗಲಿವೆ ಎಂದು ತಿಳಿದು ಬಂದಿದೆ.
ತುಳು ಭಾಷೆಯನ್ನು ರಾಜ್ಯದ ಹೆಚ್ಉಚವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಪ್ರಸ್ತಾವವೂ ಸಹ ಮಂಡನೆಯಾಗಿದೆ. ಮಂಗಳೂರು ಮಹಾನಗರಪಾಲಿಕೆ ಯುಜಿಡಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 5 ವರ್ಷಗಳ ಅವಧಿಯಲ್ಲಿ 1,250 ಕೋಟಿ ರು ವೆಚ್ಚದಲ್ಲಿ ಕೈಗೊಳ್ಳುವ ಪ್ರಸ್ತಾವ, ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಸಂಬಂಧಿಸಿದಂತೆ 180 ಕೋಟಿ ರು ಅನುದಾನ ಮತ್ತು ಅನುಮೋದನೆ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಕಡತ ಮಂಡಿಸಿದೆ.

ಮಂಗಳೂರು ಐ ಕಾನ್ಸೆಪ್ಟ್ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಎತ್ತರದ ಕಟ್ಟಡ ಅಭಿವೃದ್ಧಿ ಪರಿಕಲ್ಪನೆಯ ಪ್ರಸ್ತಾವನೆ, ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆ/ತಿದ್ದುಪಡಿ ತರಲು ಅರಣ್ಯ , ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯು ಪ್ರಸ್ತಾವ ಮಂಡಿಸಿದೆ. ಕರಾವಳಿ ಭಾಗಕ್ಕೆ ಪ್ರತ್ಯೇಕವಾದ ಪ್ರವಾಸೋದ್ಯಮ ನೀತಿ ರೂಪಿಸುವುದು, ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (ಎನ್ಎಂಪಿಎ) ಸಹಯೋಗದಲ್ಲಿ 300 ಎಕರೆ ಜಮೀನಿನಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಮತ್ತು ಬಂದರು ಇಲಾಖೆಯು ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಮುಂದಿರಿಸಿರುವುದು ಗೊತ್ತಾಗಿದೆ.
ನೇತ್ರಾವತಿ ಮತ್ತು ಗುರುಪುರ ನದಿಗಳಲ್ಲಿ ಹೂಳೆತ್ತುವ ತುರ್ತು ಅಗತ್ಯತೆ ಕುರಿತು, ಬೆಟ್ಟಂಪಾಟಿ, ಸೋಮೇಶ್ವರ ಪ್ರದೇಶದಲ್ಲಿ ಸಮುದ್ರ ಕೊರತೆ ತಡೆಗಟ್ಟಲು ಶಾಶ್ವತ ಕ್ರಮಗಳ ಕುರಿತು ಲೋಕೋಪಯೋಗಿ ಇಲಾಖೆಯು ಪ್ರಸ್ತಾವನೆ ಮಂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಶಿಬಿರ ಸ್ಥಾಪಿಸಲು ಅರಣ್ಯ ಇಲಾಖೆಯು ಪ್ರಸ್ತಾವವನ್ನು ಮುಂದಿರಿಸಿದೆ. ಬಲ್ಕುಂಜೆಯಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು ಪ್ರಸ್ತಾವ ಮಂಡಿಸಿದೆ. ಗೇರು ಬೆಳೆ ಗುತ್ತಿಗೆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಪರಿಹಾರ ಕುರಿತು ತೋಟಗಾರಿಕೆ ಮತ್ತು ಕಂದಾಯ ಇಲಾಖೆಯು ಪ್ರಸ್ತಾವ ಮಂಡಿಸಿರುವುದು ಗೊತ್ತಾಗಿದೆ.
ಮಂಗಳೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಶಾಖೆಗಳನ್ನು ಸ್ಥಾಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾವ ಮಂಡಿಸಿದೆ. ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯು ಕಡತ ಮಂಡಿಸಿದೆ. ಉಳ್ಳಾಲದಲ್ಲಿ ಕೌಶಲ್ಯಾಭಿವೃದ್ದಿ ಕೆಂದ್ರವನ್ನು ಸ್ಥಾಪಿಸಲು ಕಾರ್ಮಿಕ ಇಲಾಖೆ ಪ್ರಸ್ತಾವ ಮಂಡಿಸಿದೆ. ಪುತ್ತೂರು ಕ್ಷೇತ್ರದ ಮಾಣಿಲ ಗ್ರಾಮದ ಕಾಮಜಲುವಿನಿಂದ ಪೂವನಡ್ಕ ಸಂಪರ್ಕಿಸಲು ಸಿರಿಯಾ ನಿದಿಗೆ ಅಡ್ಡಲಾಗಿ ಸೇತುವೆ ಮತ್ತು ಸಂಪರ್ಕ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯು ಕಡತ ಮಂಡಿಸಿದೆ.

ಸುರತ್ಕಲ್ ಕಬಕ ರಾಜ್ಯ ಹೆದ್ದಾರಿಯಲ್ಲಿ ಚತುಷ್ಪತ ರಸ್ತೆಯನ್ನು 69.73ರಿಂದ 71.73 ಕಿ ಮೀ ವರೆಗೆ ಒಟ್ಟು 10 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ಕಡತ ಮಂಡಿಸಲಾಗಿದೆ. ಪುತ್ತೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯ ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯು ಪ್ರಸ್ತಾವನೆ ಮಂಡಿಸಿದೆ.
ಮುಜುರಾಯಿ ಇಲಾಖೆಯು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ, ವಿಟ್ಲದ ಒಡಿಯೂರು ಮಠಕ್ಕೆ 1 ಕೋಟಿ, ಗುರುಪುರದ ವಜ್ರದೇಹಿ ಮಠಕ್ಕೆ 1 ಕೋಟ, ಶ್ರೀಧಾಮ ಮಾಣಿಲ ಮಠಕ್ಕೆ 1 ಕೋಟಿ, ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಕನ್ಯಾನಕ್ಎಕ 1 ಕೋಟಿ, ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರ ಮಾಣಿಲಕ್ಕೆ 1 ಕೋಟಿ ರು ಅನುದಾನ ನೀಡಲು ಪ್ರಸ್ತಾವನೆ ಮಂಡಿಸಿದೆ ಎಂದು ಗೊತ್ತಾಗಿದೆ.

ಈ ಎಲ್ಲವುಗಳ ಕುರಿತು ಇಲಾಖೆಗಳ ಕಾರ್ಯದರ್ಶಿಗಳು ಆದ್ಯತೆ ಮೇರೆಗೆ ಪರಿಶೀಲಿಸಿದ್ದಾರೆ. ಮತ್ತು ಅಗತ್ಯವಿರುವಲ್ಲಿ ಹಣಕಾಸು, ಕಾನೂನು ಮತ್ತು ಇತರೆ ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚಿಸಿದ್ದಾರೆ. ಮತ್ತು ಪೂರ್ಣ ಪ್ರಮಾಣದ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸಚಿವ ಸಂಪುಟದ ಪರಿಗಣನೆಗೆ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.




