ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಪಿಎಸ್ಐಗಳ ನೇಮಕಾತಿಯಲ್ಲಿನ ವಿವಿಧ ಸ್ವರೂಪದ ಅಕ್ರಮ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧ ಇಲಾಖೆ ವಿಚಾರಣೆ ನಿರ್ವಹಣೆಗೆ ಒಟ್ಟಾರೆ 15.00 ಲಕ್ಷ ರು ವೆಚ್ಚವಾಗಲಿದೆ.
ಅಮೃತ್ ಪೌಲ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರನ್ನು ವಿಚಾರಣಾಧಿಕಾರಿಯಾಗಿ ರಾಜ್ಯ ಸರ್ಕಾರವು ಈಗಾಗಲೇ ನೇಮಿಸಿದೆ. ಇದರ ಬೆನ್ನಲ್ಲೇ ಇಲಾಖೆ ವಿಚಾರಣೆ ನಡೆಸಲಿರುವ ವಿಚಾರಣಾಧಿಕಾರಿಯಾಗಿರುವ ಎ ಎನ್ ವೇಣುಗೋಪಾಲ ಗೌಡ ಅವರಿಗೆ 15 ಲಕ್ಷ ರು ಸಂಭಾವನೆ ನೀಡಲಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಸೆ.11ರಂದು ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರಿಗೆ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಹೈಗ್ರೌಂಡ್, ಕೋರಮಂಗಲ, ಹಲಸೂರು, ಯಲಹಂಕ ನ್ಯೂಟೌನ್ ಮತ್ತು ರಾಮಮೂರ್ತಿ ನಗರ ಠಾಣೆಯಲ್ಲಿ ಒಟ್ಟು 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಕುರಿತು ಪ್ರತ್ಯೇಕವಾಗಿ ಇಲಾಖೆ ವಿಚಾರಣೆ ನಡೆಸಲಿದೆ. ಈ ಎಲ್ಲ ವಿಚಾರಣೆಗಳಿಗೂ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಇಲಾಖೆ ವಿಚಾರಣೆ ಆರಂಭವಾದ ದಿನದಿಂದ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವರೆಗಿನ ಪೂರ್ಣ ಕಾರ್ಯಕ್ಕೆ ಸಂಭಾವನೆ ನೀಡಲಿದೆ. ಇಲಾಖೆ ವಿಚಾರಣೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ 15 ಲಕ್ಷ ರು ಮೊತ್ತದ ಸಂಭಾವನೆಯನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಸೆ.11ರಂದು ಪತ್ರ ಮುಖೇನ ತಿಳಿಸಿರುವುದು ಗೊತ್ತಾಗಿದೆ.

ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿದ್ದ ವಿವಿಧ ಸ್ವರೂಪದ ಅಕ್ರಮಗಳು ರಾಜ್ಯಾದಾದ್ಯಂತ ಸಂಚಲನ ಎಬ್ಬಿಸಿತ್ತು. ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಈ ಹಗರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿತ್ತು. ಪಿಎಸ್ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ/ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು–1969ರ ಅಡಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಈ ಐದು ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮ ಮುಂದುವರಿಸಲು ಸರ್ಕಾರ ಈಗಾಗಲೇ ಸಿಆರ್ಪಿಸಿ ಸೆಕ್ಷನ್ 197 ಹಾಗೂ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 170ರ ಅಡಿ ಅನುಮತಿ ನೀಡಿತ್ತು. ಅಮೃತ್ ಪೌಲ್ ಅವರಿಗೆ 2026ರ ಜುಲೈ 9ರಂದು ಆರೋಪಪಟ್ಟಿಯ ಅಂಶಗಳೊಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು.





ಅಲ್ಲದೇ ದೋಷಾರೋಪಣೆ ಪಟ್ಟಿಯನ್ನೂ ಜಾರಿಗೊಳಿಸಲಾಗಿತ್ತು.
ಆಗಸ್ಟ್ 6ರಂದು ಲಿಖಿತ ಪ್ರತಿವಾದ ಸಲ್ಲಿಸಿದ್ದ ಅವರು, ತಮ್ಮ ವಿರುದ್ಧ ಹೊರಿಸಲಾಗಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅವರ ಪ್ರತಿವಾದವನ್ನು ಪರಿಶೀಲಿಸಿದ ಶಿಸ್ತು ಪ್ರಾಧಿಕಾರವು ಆರೋಪಗಳ ಕುರಿತು ಇಲಾಖಾ ವಿಚಾರಣೆ ನಡೆಸಲು ನಿರ್ಧರಿಸಿದೆ.
ಪ್ರಕರಣದ ಹಿನ್ನೆಲೆ
ರಾಜ್ಯದಲ್ಲಿ 545 ಪಿಎಸ್ಐ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆಯನ್ನು 54,287 ಅಭ್ಯರ್ಥಿಗಳು ಎದುರಿಸಿದ್ದರು. ಇಲ್ಲಿ ಪ್ರಾವಿಷನಲ್ ಆಯ್ಕೆ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಹಲವು ಅಭ್ಯರ್ಥಿಗಳು ವಿದ್ಯುನ್ಮಾನ ಸಾಧನಗಳು, ಆನಂತರ ಓಎಂಆರ್ ತಿರುಚುವ ಮೂಲಕ ಅನುಕೂಲ ಪಡೆದಿದ್ದರು ಎಂಬುದು ಆರೋಪವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು ಹಲವು ಮಂದಿಯನ್ನು ಬಂಧಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಅಮೃತ್ ಪೌಲ್ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್ ಕಿಟ್ಬಾಕ್ಸ್ಗಳನ್ನು ಇರಿಸಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಒಎಂಆರ್ ತಿರುಚಿರುವುದಾಗಿ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್ ಹೇಳಿಕೆ ನೀಡಿದ್ದರು.
ಪ್ರಕರಣ ಸಂಬಂಧ 2022ರ ಜುಲೈ 4ರಂದು ಪೌಲ್ ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಪೌಲ್ ವಿರುದ್ಧ ಏಳು ಆರೋಪ ಪಟ್ಟಿ ಸಲ್ಲಿಸಿದ್ದರು. ಹೈಕೋರ್ಟ್ 2023ರ ಸೆಪ್ಟೆಂಬರ್ 25ರಂದು ಪೌಲ್ಗೆ ಜಾಮೀನು ಮಂಜೂರು ಮಾಡಿತ್ತು.




