ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಯ 21 ಪ್ಯಾಕೇಜ್ಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯು ಟೆಂಡರ್ನಲ್ಲಿ ಒಬ್ಬರೇ ಟೆಂಡರ್ದಾರರು ಸಲ್ಲಿಸಿದ ಬೇಷರತ್ತಾದ ಬ್ಯಾಂಕರ್ಸ್ ಸರ್ಟಿಫಿಕೇಟ್, ಕ್ರೆಡಿಟ್ ಲೈನ್ಸ್, ಲೆಟರ್ ಆಫ್ ಕ್ರೆಡಿಟ್ನ್ನು ಪರಿಗಣಿಸಿ ಮೌಲ್ಯಮಾಪನ ಮಾಡಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಬಯಲು ಮಾಡಿದೆ.
ಅಲ್ಲದೇ ಟೆಂಡರ್ದಾರರು ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ. ಅಲ್ಲದೇ ಲೀಡ್ ಮೆಂಬರ್ಗೆ ಟರ್ನ್ ಓವರ್ ಸಾಮರ್ಥ್ಯವೇ ಇಲ್ಲ ಎಂಬ ಸಂಗತಿಯನ್ನೂ ಸಮಿತಿಯು ಬಹಿರಂಗಪಡಿಸಿದೆ.
21 ಪ್ಯಾಕೇಜ್ಗಳ ಟೆಂಡರ್ ಪ್ರಕ್ರಿಯೆ ಮತ್ತು ಸಮಿತಿ ರಚನೆ ಮಾಡದೆಯೇ ಅನುಮೋದಿಸಿರುವ ಟೆಂಡರ್, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ ಮತ್ತು ಇದರಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಆರೋಪಗಳ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಕನ್ಸೋಟೋರಿಯಂನ ಮತ್ತೊಂದು ಮುಖವನ್ನು ಪರಿಚಯಿಸಿದೆ.
ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ನೀಡಿರುವ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
21 ಪ್ಯಾಕೇಜ್ಗಳ ಟೆಂಡರ್ ಪ್ರಕ್ರಿಯೆ, ಟೆಂಡರ್ ದಾಖಲೆ, ವಿಧಿಸಿರುವ ಷರತ್ತುಗಳನ್ನು ಅಮೂಲಾಗ್ರವಾಗಿ ಅಂಜುಂ ಪರ್ವೇಜ್ ಸಮಿತಿಯು ವಿಶ್ಲೇಷಿಸಿ ತನ್ನ ಅಭಿಪ್ರಾಯವನ್ನು ನೀಡಿದೆ.
ಹಣಕಾಸು ಪಡೆಯುವ ಸಾಮರ್ಥ್ಯದ (Unconditional Banker’s Certificate/credit lines/letter of credit) ಷರತ್ತನ್ನು ಎಲ್ಲಾ ಸದಸ್ಯರು ಪೂರೈಸಬೇಕು ಎಂದು ಮಾದರಿ ಟೆಂಡರ್ ದಾಖಲೆಯಲ್ಲಿ ತಿಳಿಸಿದೆ. ಆದರೆ ಪ್ರಸ್ತಾಪಿತ ಟೆಂಡರ್ನಲ್ಲಿ ಒಬ್ಬರೇ ಟೆಂಡರ್ದಾರರು ಸಲ್ಲಿಸಿದ Unconditional Banker’s Certificate/credit lines/letter of credit ಪರಿಗಣಿಸಿ ಮೌಲ್ಯಮಾಪನ ಮಾಡಿದೆ. ಇದು ಮಾದರಿ ದಾಖಲೆಯ ಅಂಶಕ್ಕೆ ವ್ಯತಿರಿಕ್ತವಾಗಿದೆ ಎಂದು ಅಂಜುಂ ಪರ್ವೇಜ್ ಸಮಿತಿಯು ಅಭಿಪ್ರಾಯಿಸಿದೆ.
ಇದಕ್ಕೆ ಸಮರ್ಥನೆ ನೀಡಿರುವ ಬಿಎಸ್ಡಬ್ಲ್ಯೂಎಂಎಲ್ ಈ ಷರತ್ತಿನ ಉದ್ದೇಶವು ಒಪ್ಪಂದದ ಯಶಸ್ವಿ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ಹೇಳಿದೆ. ಅಲ್ಲದೇ ಮಾದರಿ ಟೆಂಡರ್ ದಾಖಲೆ (ಕೆಡಬ್ಲ್ಯೂ 6)ಯಲ್ಲಿಯೂ ಸಹ ಜಂಟಿ ಉದ್ಯಮ/ ಕನ್ಸೋಟೋರಿಯಂನ ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕವಾಗಿ Unconditional Banker’s Certificate/credit lines/letter of credit ಸಲ್ಲಿಸಬೇಕು ಎಂಬ ಕಡ್ಡಾಯ ಷರತ್ತನ್ನು ವಿಧಿಸಿಲ್ಲ.

ಕನ್ಸೋರ್ಟಿಯಂನ ಯಾವುದೇ ಒಬ್ಬ ಸದಸ್ಯರು ಅಗತ್ಯ ಪ್ರಮಾಣದ Unconditional Banker’s Certificate/credit lines/letter of credit ಸಲ್ಲಿಸುವ ಮೂಲಕ ಒಪ್ಪಂದದ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಗಳ ಲಭ್ಯತೆಯನ್ನು ಸಾಬೀತುಪಡಿಸಬಹುದು. ಆಧ್ದರಿಂದ ಪ್ರತಿಯೊಬ್ಬ ಕನ್ಸೋರ್ಟಿಯಂ ಸದಸ್ಯರು ಪ್ರತ್ಯೇಕವಾಗಿ ದಾಖಲೆ ಸಲ್ಲಿಸುವ ಅವಶ್ಯಕತೆಯೇ ಇಲ್ಲ ಎಂದು ಪ್ರತಿಪಾದಿಸಿರುವುದು ವರದಿಯಿಂದ ಗೊತ್ತಾಗಿದೆ.
ಕನ್ಸೋರ್ಟಿಯಂನ ಯಾವುದೇ ಸದಸ್ಯರು ಅಗತ್ಯ ಪ್ರಮಾಣದ ಹಣಕಾಸಿನ ಸಾಮರ್ಥ್ಯವನ್ನು Unconditional Banker’s Certificate/credit lines/letter of credit ಮೂಲಕ ಪ್ರದರ್ಶಿಸಿದಲ್ಲಿ ಕನ್ಸೋಟೋರಿಯಂಗೆ ಅಗತ್ಯವಿರುವ ಹಣಕಾಸಿನ ಸಂಪನ್ಮೂಲಗಳು ಲಭ್ಯವಿರುವ ಉದ್ದೇಶ ಈಡೇರುತ್ತದೆ ಎಂದು ಸಮಜಾಯಿಷಿ ನೀಡಿದೆ.
‘ಹೀಗಾಗಿ ಈ ಷರತ್ತು ತಾಂತ್ರಿಕ ಅಥವಾ ಹಣಕಾಸಿನ ಅರ್ಹತೆಯಲ್ಲಿ ಯಾವುದೇ ಸಡಿಲಿಕೆ ನೀಡುವುದಿಲ್ಲ. ಬದಲಾಗಿ ದೊಡ್ಡಪ್ರಮಾಣದ ಸೇವಾ ಒಪ್ಪಂದಗಳಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಒಪ್ಪಂದದ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸಿನ ಸಾಮರ್ಥ್ಯ ಖಚಿತಪಡಿಸುವ ಉದ್ದೇಶದಿಂಧ ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿದೆ,’ ಎಂದು ಪುನರುಚ್ಛರಿಸಿದೆ.

ಕನ್ಸೋರ್ಟಿಯಂನ ಯಾವುದೇ ಸದಸ್ಯರಿಂದ ಸಲ್ಲಿಸಲಾದ Unconditional Banker’s Certificate/credit lines/letter of credit ನ್ನು ಪರಿಗಣಿಸಿರುವುದು ಟೆಂಡರ್ ದಸ್ತಾವೇಜಿನ ಉದ್ದೇಶ, ಕನ್ಸೋರ್ಟಿಯಂ ವ್ಯವಸ್ಥೆಯ ಮೂಲ ತತ್ವ ಹಾಗೂ ಮಾದರಿ ಟೆಂಡರ್ ದಾಖಲೆಯಲ್ಲಿನ ಹಣಕಾಸಿನ ಸಾಮರ್ಥ್ಯವನ್ನು ಕನ್ಸೋಟೋರಿಯಂ ಮಟ್ಟದಲ್ಲಿ ಪರಿಗಣಿಸುವ ತತ್ವಕ್ಕೆ ಅನುಗುಣವಾಗಿದೆ. ಹಣಕಾಸಿನ ಅರ್ಹತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿದೆ ಎಂದು ಪರಿಗಣಿಸಲಾಗದು ಎಂದು ವಿವರಿಸಿದೆ.
ಬಿಡ್ ಸಾಮರ್ಥ್ಯವನ್ನು ಟರ್ನ್ ಓವರ್ ಆಧಾರದ ಮೇಲೆ ಮಾಡಿರುವ ಮೌಲ್ಯಮಾಪನ ಕುರಿತು ಸಮಿತಿಯು ಅವಲೋಕಿಸಿದೆ. ಲಭ್ಯ ಬಿಡ್ ಸಾಮರ್ಥ್ಯವನ್ನು ಟರ್ನ್ ಓವರ್ ಆಧಾರದ ಮೇಲೆ ಮತ್ತು ಟೆಂಡರ್ದಾರರು ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. ಮಾದರಿ ಟೆಂಡರ್ ದಾಖಲೆ ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಅಳವಡಿಸಿದ ಟೆಂಡರ್ ಷರತ್ತುಗಳ ಅನುಸಾರ ಸಂಬಂಧಪಟ್ಟ ಟೆಂಡರ್ದಾರರು ಹೊಂದಿರುವ ಕಾರ್ಯನುಭವ/ ನಿರ್ವಹಿಸಿರುವ ಕಾರ್ಯದ ಮೌಲ್ಯದ ಆಧಾರದ ಟೆಂಡರ್ದಾರರ ಸಾಮರ್ಥ್ಯವನ್ನು ಬಿಂಬಿಸುವುದಿಲ್ಲ ಎಂದು ಸಮಿತಿಯು ಗಮನಿಸಿದೆ.
ಸಮಿತಿಯ ಈ ಅವಲೋಕನಕ್ಕೆ ಬಿಎಸ್ಡಬ್ಲ್ಯೂಎಂಎಲ್ ಸಮರ್ಥನೆ ನೀಡಿದೆ.

ಪ್ರಸ್ತುತ ಟೆಂಡರ್ ದಾಖಲೆಯಲ್ಲಿ ಅಳವಡಿಸಲಾಗಿರುವ ಲಭ್ಯ ಬಿಡ್ ಸಾಮರ್ಥ್ಯದ ಮೌಲ್ಯಮಾಪನ ವಿಧಾನವು ಮಾದರಿ ಟೆಂಡರ್ ದಾಖಲೆಯಲ್ಲಿನ ತತ್ವ ಹಾಗೂ ಸೂತ್ರವನ್ನೇ ಆಧರಿಸಿದೆ. ಈ ಸೂತ್ರದಲ್ಲಿನ ಎ ಎಂಬ ಅಂಶವು ಟೆಂಡರ್ದಾರರು ಕಳೆದ 5 ವರ್ಷಗಳಲ್ಲಿ ಯಾಔಉದೇ ಒಂದು ವರ್ಷದಲ್ಲಿ ನಿರ್ವಹಿಸಿರುವ ಗರಿಷ್ಠ ಮೌಲ್ಯದ ಕಾರ್ಯ, ಯೋಜನೆಯನ್ನು ಸೂಚಿಸಿದೆ. ಟೆಂಡರ್ದಾರರ ಈ ಹಿಂದಿನ ಕಾರ್ಯನಿರ್ವಹಣೆ ಸಾಮರ್ಥ್ಯವೇ ಲಭ್ಯ ಬಿಡ್ ಸಾಮರ್ಥ್ಯ ನಿರ್ಧಾರಕ್ಕೆ ಮೂಲಾಧಾರವಾಗಿದೆ ಎಂದು ಸಮಿತಿಗೆ ವಿವರಣೆ ನೀಡಿರುವುದು ಗೊತ್ತಾಗಿದೆ.
ಅಅಲ್ಲದೇ ಟೆಂಡರ್ದಾರರು ಪ್ರಸ್ತುತ ಕೈಗೊಂಡಿರುವ ಕಾರ್ಯಬದ್ಧತೆಗಳ ಮೌಲ್ಯವನ್ನು ಬಿ ಅಂಶದ ಮೂಲಕ ಹಾಗೂ ಟೆಂಡರ್ನಲ್ಲಿ ನಿಗದಿಪಡಿಸಿರುವ ಕಾರ್ಯಾವಧಿಯನ್ನು ಎನ್ ಅಂಶದ ಮೂಲಕ ಪರಿಗಣೀಸಲಾಗಿದೆ. ನಿಗದಿತ ಸೂತ್ರದ ಅನ್ವಯ ಲಭ್ಯ ಬಿಡ್ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಬಿಡ್ ಸಾಮರ್ಥ್ಯದ ಮೌಲ್ಯಮಾಪನವು ಕೇವಲ ವಾರ್ಷಿಕ ವಹಿವಾಟು ಅಥವಾ ಟೆಂಡರ್ದಾರರು ಸಲ್ಲಿಸಿರುವ ಹಣಕಾಸು ಸಂಬಂಧಿತ ಅಂಕಿ ಅಂಶಗಳ ಮೇಲೆ ಮಾತ್ರ ಆಧರಿಸಿಲ್ಲ ಎಂದು ಪ್ರತಿಪಾದಿಸಿದೆ.

ಅಲ್ಲದೇ ವಾಸ್ತವದಲ್ಲಿ ಈ ವಿಧಾನವು ಟೆಂಡರ್ದಾರರು ಈ ಹಿಂದೆ ಯಶಸ್ವಿಯಾಗಿ ನಿರ್ವಹಿಸಿರುವ ಕಾರ್ಯಗಳ ಮೌಲ್ಯ, ಪ್ರಸ್ತುತ ಅವರ ಮೇಲಿರುವ ಕಾರ್ಯಬದ್ಧತೆಗಳು ಹಾಗೂ ಹೊಸ ಕಾರ್ಯವನ್ನು ನಿರ್ವಹಿಸಲು ಉಳಿದಿರುವ ಕಾರ್ಯನಿರ್ವಹಣೆ ಸಾಮರ್ಥ್ಯವನ್ನು ಸಮಗ್ರವಾಗಿ ಪರಿಗಣಿಸಲಾಗಿದೆ. ಈ ಮೂಲಕ ಲಭ್ಯ ಬಿಡ್ ಸಾಮರ್ಥ್ಯವನ್ನು ನಿರ್ಧರಿಸುವ ಉದ್ದೇಶದಿಂದ ಇದನ್ನು ರೂಪಿಸಿದೆ. ಆದ್ದರಿಂದ ಲಭ್ಯ ಬಿಡ್ ಸಾಮರ್ಥ್ಯದ ಮೌಲ್ಯಮಾಪನವು ಟೆಂಡರ್ದಾರರ ಕಾರ್ಯಾನುಭವ ಅಥವಾ ಕಾರ್ಯನಿರ್ವಹಣೆ ಸಾಮರ್ಥ್ಯವನ್ನು ಪ್ರತಿಬಿಂಬಿಸುವುದಿಲ್ಲ ಎಂಬ ಸಮಿತಿಯ ಅಭಿಪ್ರಾಯವು ಮಾದರಿ ಟೆಂಡರ್ ದಾಖಲೆಯಲ್ಲಿ ನಿಗದಿಪಡಿಸಿರುವ ಬಿಡ್ ಸಾಮರ್ಥ್ಯದ ಮೌಲ್ಯಮಾಪನ ವಿಧಾನದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸಮಿತಿಯ ಅವಲೋಕನವನ್ನೇ ತಳ್ಳಿ ಹಾಕಿದೆ.
ಲೀಡ್ ಮೆಂಬರ್ಗೆ ಟರ್ನ್ ಓವರ್ ಸಾಮರ್ಥ್ಯ ಇಲ್ಲ ಎಂದು ಸಮಿತಿಯು ಆಕ್ಷೇಪಿಸಿದೆ. ಯಾವುದೇ ಲೀಡ್ ಮೆಂಬರ್ ಅಥವಾ ಹಣಕಾಸು ಸಾಮರ್ಥ್ಯ ಹೊಂದಿರದ ಲೀಡ್ ಮೆಂಬರ್ ಗೆ ಅವಕಾಶ ನೀಡುವುದು ಮತ್ತು ಟೆಂಡರ್ ಪ್ರಕ್ರಿಯೆಯಲ್ಲಿ ಸಾಮೂಹಿಕ ಟರ್ನ್ ಓವರ್ ಸಾಮರ್ಥ್ಯವನ್ನು ಪರಿಗಣಿಸಿ ಮೌಲ್ಯಮಾಪನ ಮಾಡಿ ಅರ್ಹಗೊಳಿಸಲಾಗಿದೆ. ಇದು ಒಪ್ಪಂದದ ಕಾರ್ಯನಿರ್ವಹಣೆ ಮತ್ತು ಹೊಣೆಗಾರಿಕೆ ದುರ್ಬಲಗೊಳಿಸುತ್ತದೆ ಎಂದು ಸಮಿತಿಯು ಹೇಳಿದೆ.

ಸಮಿತಿಯು ಮಾಡಿರುವ ಈ ಅವಲೋಕನಕ್ಕೆ ಬಿಎಸ್ಡಬ್ಲ್ಯೂಎಂಎಲ್ ಸಮರ್ಥನೆ ನೀಡಿದೆ. ಪ್ರಸ್ತುತ ಟೆಂಡೆರ್ನಲ್ಲಿ ಕನ್ಸೋರ್ಟಿಯಂ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಅಳವಡಿಸಲಾಗಿದೆ. ದೊಡ್ಡ ಪ್ರಮಾಣದ ಹಾಗೂ ಬಹುಮುಖ ಸ್ವರೂಪದ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಸಂಸ್ಥೆಗಳ ತಾಂತ್ರಿಕ, ಹಣಕಾಸು, ಕಾರ್ಯಾಚರಣೆ, ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ.
ಹಿಂದಿನ ವ್ಯವಸ್ಥೆಯಂತೆ ಒಂದು ಅಥವಾ ಎರಡು ವಾರ್ಡ್ಗಳನ್ನು ಒಳಗೊಂಡ ಸಣ್ಣ ಪ್ಯಾಕೇಜ್ಗಳನ್ನು ಆಹ್ವಾನಿಸಿಲ್ಲ. ಬಿಬಿಎಂಪಿಯ 243 ವಾರ್ಡ್ಗಳನ್ನು ಪುನರ್ ರಚಿಸಿ 33 ದೊಡ್ಡ ಪ್ಯಾಕೇಜ್ಗಳನ್ನಾಗಿ ರೂಪಿಸಿದೆ. ಇದರಿಂದಾಗಿ ಪ್ರತಿ ಪ್ಯಾಕೇಜ್ನ ವ್ಯಾಪ್ತಿ, ಕಾರ್ಯಭಾರವು ಗಣನೀಯವಾಗಿ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯ ವಾಹನಗಳೂ, ಗಣನೀಯ ಪ್ರಮಾಣದ ಮಾನವ ಸಂಪನ್ಮೂಲ , ಸುಸಂಘಟಿತ ಕಾರ್ಯಾಚರಣೆ ವ್ಯವಸ್ಥೆ ಹಾಗೂ ಹೆಚ್ಚಿನ ಹಣಕಾಸಿನ ಸಾಮರ್ಥ್ಯದ ಅಗತ್ಯ ಉಂಟಾಗಿದೆ ಎಂದು ವಿವರಿಸಿದೆ.

ಇಂತಹ ದೊಡ್ಡ ಪ್ರಮಾಣದ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೆಚ್ಚಿನ ಸಂಖ್ಯೆಯ ಅರ್ಹ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಸಂಸ್ಥೆಗಳ ತಾಂತ್ರಿಕ ಕಾರ್ಯಾಚರಣೆ, ಹಣಕಾಸಿನ ಸಂಪನ್ಮೂಲಗಳನ್ನು ಒಗ್ಗೂಡಿಸಲು ಅನುಕೂಲವಾಗುವ ಉದ್ದೇಶದಿಂದ ಕನ್ಸೋಟೋರಿಯಂ ವ್ಯವಸ್ಥೆ ಅಳವಡಿಸಿದೆ ಎಂದು ಪ್ರತಿಪಾದಿಸಿದೆ.
‘ಈ ಹಿನ್ನೆಲೆಯಲ್ಲಿ ಟೆಂಡರ್ ದಾಖಲೆಯಲ್ಲಿ ಒಕ್ಕೂಟದ ಪ್ರಮುಖ ಸದಸ್ಯರು ಅಥವಾ ಎಲ್ಲಾ ಸದಸ್ಯರ ಒಟ್ಟು ಮೊತ್ತವು ತಾಂತ್ರಿಕ ಮತ್ತು ಹಣಕಾಸು ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ಸ್ಪಷ್ಟವಾಗಿ ನಮೂದಿಸಿದೆ.

ಹೀಗಾಗಿ ಲೀಡ್ ಮೆಂಬರ್ ಮಾತ್ರ ಸ್ವತಂತ್ರವಾಗಿ ಸಂಪೂರ್ಣ ಟರ್ನ್ ಓವರ್ ಅಥವಾ ಹಣಕಾಸು ಸಾಮರ್ಥ್ಯ ಹೊಂದಿರಬೇಕು ಎಂಬ ಪ್ರತ್ಯೇಕ ಕಡ್ಡಾಯವನ್ನು ಟೆಂಡರ್ ದಾಖಲೆಯಲ್ಲಿ ವಿಧಿಸಿಲ್ಲ. ಬದಲಿಗೆ ಕನ್ಸೋರಿಟಿಯಂನ ಒಟ್ಟು ತಾಂತ್ರಿಕ ಹಾಗೂ ಹಣಕಾಸಿನ ಸಾಮರ್ಥ್ಯವು ನಿಗದಿತ ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಟೆಂಡರ್ ದಾಖಲೆಯು ಅಂಗೀಕರಿಸಿದೆ,’ ಎಂದು ಹೇಳಿದೆ.

ಲೀಡ್ ಮೆಂಬರ್ ಗರಿಷ್ಠ ಷೇರು ಪಾಲು ಹೊಂದಿರಬೇಕು. ಯಾವುದೇ ಸಂದರ್ಭದಲ್ಲಿಯೂ ಶೇ.30ಕ್ಕಿಂತ ಕಡಿಮೆ ಷೇರು ಪಾಲು ಹೊಂದಿರಲು ಅವಕಾಶವಿಲ್ಲ ಎಂದು ಷರತ್ತು ವಿಧಿಸಿದೆ. ಕನ್ಸೋಟೋರಿಯಂ ಸದಸ್ಯರ ನಡುವಿನ ಎಂಒಯು, ಷೇರು ಹಂಚಿಕೆ, ಜವಾಬ್ದಾರಿಗಳ ಸ್ಪಷ್ಟ ನಿರ್ಧಾರ, ಲಾಕ್ ಇನ್ ಪೀರಿಯಡ್, ಜಂಟಿ ಮತ್ತು ಹಲವು ಹೊಣೆಗಾರಿಕೆ ಮೂಲಕ ಒಕ್ಕೂಟದ ಎಲ್ಲಾ ಸದಸ್ಯರನ್ನೂ ಒಪ್ಪಂದದ ಜವಾಬ್ದಾರಿಗಾಗಿ ಬದ್ಧಗೊಳಿಸಿದೆ ಎಂದು ವಿವರಿಸಿದೆ.




