ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ ಆದೇಶಗಳ ಅನುಸಾರ ಬ್ಯಾಂಕ್ ವ್ಯವಹಾರಗಳನ್ನು ನಡೆಸಿರಲಿಲ್ಲ ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಹೊರಗೆಡವಿದೆ.
2022ರಿಂದ 2026ರವರೆಗಿನ ಅವಧಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ವಿಶ್ವವಿದ್ಯಾಲಯದ ಹಣಕಾಸು ಆಡಳಿತದಲ್ಲಿನ ಹಲವು ಲೋಪಗಳನ್ನು ಪತ್ತೆ ಹಚ್ಚಿದೆ.
ಈ ವರದಿಯ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಈ ವರದಿಯಲ್ಲಿನ ಆಕ್ಷೇಪಣೆಗಳು, ನಿಯಮ ಉಲ್ಲಂಘನೆಗಳು ಮತ್ತು ನ್ಯೂನತೆಗಳ ಕುರಿತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇನ್ನಷ್ಟೇ ಪರಿಶೀಲಿಸಬೇಕಿದೆ.
ವಿಶ್ವವಿದ್ಯಾಲಯ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ಬ್ಯಾಂಕ್ ವ್ಯವಹಾರಗಳನ್ನು ಬಾರ್ ಕೋಡ್, ಆರ್‍ಟಿಜಿಎಸ್, ಎನ್‌ಇಎಫ್‌ಟಿ, ಐಎಂಪಿಎಸ್ ಇನ್ನಿತರೆ ಮೂಲಕ ನಡೆಸಬೇಕು ಎಂದು 2017ರಲ್ಲಿಯೇ ಸರ್ಕಾರವು ಆದೇಶ ಹೊರಡಿಸಿತ್ತು. ಅಲ್ಲದೇ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ, ಮುಖ್ಯ ಆಡಳಿತಾಧಿಕಾರಿ ಅಥವಾ ಹಣಕಾಸು ವಿಭಾಗದ ಮುಖ್ಯಸ್ಥರ ಜಂಟಿ ಸಹಿಯೂ ಸಹ ಇರಬೇಕು. ಅಲ್ಲದೇ ವಿಶ್ವವಿದ್ಯಾಲಯದಿಂದ ಯಾವುದೇ ಹಣವನ್ನು ಡ್ರಾ ಮಾಡಿಕೊಂಡು ತಮ್ಮ ಸ್ವಂತ ಖಾತೆಗೆ ಜಮೆ ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ನಿರ್ಬಂಧಿಸಿತ್ತು.

‘ವಿಶ್ವವಿದ್ಯಾಲಯದ ಪ್ರತಿಯೊಂದು ಪಾವತಿಯು ಪಿಎಫ್ಎಂಎಸ್‌ನಿಂದಲೇ ನಡೆಯಬೇಕು. ಹಾಗೂ ಎಲ್ಲಾ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆಗಳಿಗೆ ಸಂಬಂಧಿಸಿದ ಚೆಕ್‌ಗಳನ್ನು ಗೊತ್ತುಪಡಿಸಿದ ಇಬ್ಬರು ಅಧಿಕಾರಿಗಳು ಜಂಟಿ ಸಹಿ ಮಾಡಬೇಕು. ಅದರಲ್ಲಿ ಒಬ್ಬರು ಹಣಕಾಸು ಅಧಿಕಾರಿ ಇನ್ನೊಬ್ಬರು ಯಾರಾದರೂ ಉನ್ನತ ಅಧಿಕಾರಿಯಾಗಿಬೇಕು. ಇಬ್ಬರೂ ಜಂಟಿ ಸಹಿಯೊಂದಿಗೆ ಆರ್ಥಿಕ ವ್ಯವಹಾರಗಳನ್ನು ಕೈಗೊಂಡರೇ ವಿಶ್ವವಿದ್ಯಾಲಯದ ಆರ್ಥಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇದು ನಿಯಮಗಳ ಪ್ರಕಾರ ಕಡ್ಡಾಯವಾಗಿರುತ್ತದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ.
ಅಲ್ಲದೇ ಸೆಲ್ಫ್ ಚೆಕ್ ಮುಖಾಂತರ ಸೆಳೆಯುವುದು ಹಾಗೂ ಸರ್ಕಾರದ ಹಣವನ್ನು ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವುದು ನಿಯಮಬಾಹಿರವಾಗಿದೆ. ಮತ್ತು ಬಟಾವಡೆ ಅಧಿಕಾರಿಗಳು ಪ್ರತಿ ತಿಂಗಳ ಕೊನೆಯಲ್ಲಿ ಬ್ಯಾಂಕ್ ಲೆಕ್ಕಗಳನ್ನು ಪಡೆದು ಹಾಗೂ ನಗದು ಪುಸ್ತಕಗಳನ್ನು ಪರಿಶೀಲಿಸಿ ಅಂತಿಮ ಶಿಲ್ಕಿನ ಮೊತ್ತವನ್ನು ಪರಿಶೀಲಿಸಬೇಕು. ನಂತರ ಎರಡರ ಲೆಕ್ಕವನ್ನು ಸಮನ್ವಯ ಮಾಡಬೇಕು. ಧೃಢೀಕರಿಸಬೇಕು. ಇದು ಕಡ್ಡಾಯ ಎಂದು ಕರ್ನಾಟಕ ಆರ್ಥಿಕ ಸಂಹಿತೆ ಎಂದು ನಿಯಮ 329ರಲ್ಲಿ ಹೇಳಲಾಗಿದೆ.

ಆದರೆ ಈ ವಿಶ್ವವಿದ್ಯಾಲಯದಲ್ಲಿ ಹಣಕಾಸು ಅಧಿಕಾರಿಯವರ ಮೂಲಕವೇ ಆರ್ಥಿಕ ವ್ಯವಹಾರಗಳು ನಡೆಯುತ್ತಿವೆ. ಹಣಕಾಸು ಅಧಿಕಾರಿಗಳು ವಿಶ್ವವಿದ್ಯಾಲಯದ ಆರ್ಥಿಕ ವ್ಯವಹಾರಗಳ ಬ್ಯಾಂಕ್ ಖಾತೆಗಳ ತಃಖ್ತೆ ಹಾಗೂ ನಗದು ಪುಸ್ತಕಗಳ ಬ್ಯಾಂಕ್ ಲೆಕ್ಕ ಸಮನ್ವಯ ಮಾಡಿಲ್ಲ. ಇದು ನಿಯಮಬಾಹಿರವಾಗಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2022-23ರಲ್ಲಿ 24.04 ಕೋಟಿ ಮತ್ತು 2023-24ನೇ ಸಾಲಿನಲ್ಲಿ 27.17 ಕೋಟಿ ರು ವ್ಯವಹಾರ ಮಾಡಲಾಗಿದೆ. ಮುಂದಿನ ವರ್ಷಗಳಲ್ಲಿ ನಿಯಮಗಳ ಪ್ರಕಾರ ಆರ್ಥಿಕ ವಹಿವಾಟು ನಡೆಸಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಈ ವರ್ಷಗಳ ಒಟ್ಟು ಪಾವತಿಯನ್ನು ಆಕ್ಷೇಪಣೆಯಲ್ಲಿ ಇಡಲಾಗುವುದು ಎಂದು ಲೆಕ್ಕ ಪರಿಶೋಧಕರು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.
ಈ ಸಂಬಂಧ ವಿಶ್ವವಿದ್ಯಾಲಯಕ್ಕೆ 2024ರಲ್ಲೇ ವಿಚಾರಣೆ ನೋಟೀಸ್ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ವಿಶ್ವವಿದ್ಯಾಲಯವು ‘ ಹಣಕಾಸಿನ ವ್ಯವಹಾರಗಳನ್ನು ಮುಂಬರುವ ದಿನಗಳಲ್ಲಿ ನಿಯಮಾನುಸಾರ ನಿರ್ವಹಿಸಲಾಗುವುದು,’ ಎಂದು ಉತ್ತರಿಸಿತ್ತು. ಆದರೆ ವಿಶ್ವವಿದ್ಯಾಲಯವು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹಣಕಾಸು ವ್ಯವಹಾರ ನಿರ್ವಹಿಸದ ಕಾರಣ ಈ ಕಂಡಿಕೆಯನ್ನು ಲೆಕ್ಕ ಪರಿಶೋಧಕರು ಮುಂದುವರೆಸಿರುವುದು ತಿಳಿದು ಬಂದಿದೆ.
ನಗದು ಪುಸ್ತಕ ನಿರ್ವಹಣೆಯಲ್ಲಿಯೂ ಲೋಪ
ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ ವಿಶ್ವವಿದ್ಯಾಲಯವು 2022-23ರಲ್ಲಿ ಒಟ್ಟು 13 ಖಾತೆಗಳನ್ನು ಹೊಂದಿದೆ. ಈ ಪೈಕಿ 12 ಖಾತೆಗಳು ಮಾತ್ರ ಚಾಲನೆಯಲ್ಲಿದ್ದವು. ಇನ್ನು ಒಂದು ಖಾತೆ ನಿಷ್ಕ್ರೀಯವಾಗಿತ್ತು. ಎಸ್‌ಬಿಐನಲ್ಲಿ 08 ಖಾತೆಗಳನ್ನು ಹೊಂದಿತ್ತು. ಈ ಪೈಕಿ 4 ಖಾತೆಗಳು ಮಾತ್ರ ಚಾಲ್ತಿಯಲ್ಲಿತ್ತು. ಇನ್ನು 04 ಖಾತೆಗಳು ನಿಷ್ಕ್ರೀಯವಾಗಿದ್ದವು. ಒಟ್ಟು 21 ಖಾತೆಗಳ ಪೈಕಿ 16 ಖಾತೆಗಳು ಮಾತ್ರ ಚಾಲ್ತಿಯಲ್ಲಿದ್ದವಲ್ಲದೇ 05 ಖಾತೆಗಳು ನಿಷ್ಕ್ರೀಯವಾಗಿದ್ದವು.

2023-24ರಲ್ಲಿ ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ 17 ಖಾತೆಗಳಿದ್ದವು. ಈ ಪೈಕಿ 16 ಖಾತೆಗಳು ಮಾತ್ರ ಚಾಲ್ತಿಯಲ್ಲಿದ್ದವು. ಇನ್ನು ಒಂದು ಖಾತೆ ನಿಷ್ಕ್ರೀಯವಾಗಿತ್ತು. ಎಸ್‌ಬಿಐನಲ್ಲಿ 08 ಖಾತೆಗಳ ಪೈಕಿ 4 ಖಾತೆಗಳು ಮಾತ್ರ ಚಾಲ್ತಿಯಲ್ಲಿದ್ದವು. ಇನ್ನು 4 ಖಾತೆಗಳು ನಿಷ್ಕ್ರೀಯವಾಗಿದ್ದವು. ಈ ಅವಧಿಯಲ್ಲಿ ಒಟ್ಟಾರೆ 25 ಖಾತೆಗಳ ಪೈಕಿ 20 ಖಾತೆಗಳು ಚಾಲ್ತಿಯಲ್ಲಿದ್ದರೇ ಇನ್ನು 5 ಖಾತೆಗಳು ನಿಷ್ಕ್ರೀಯವಾಗಿದ್ದವು.
ಈ ಎರಡೂ ವರ್ಷಗಳ ಬ್ಯಾಂಕ್ ಖಾತೆಗಳ ನಿರ್ವಹಣೆಯನ್ನು ಲೆಕ್ಕ ಪರಿಶೋಧಕರು ಪರಿಶೀಲನೆ ಮಾಡಿದ್ದಾರೆ. ನಗದು ಪುಸ್ತಕಗಳನ್ನು ಕರ್ನಾಟಕ ಆರ್ಥಿಕ ಸಂಹಿತೆ ಪ್ರಕಾರ ನಿರ್ವಹಿಸಿಲ್ಲ ಎಂಬುದನ್ನು ಲೆಕ್ಕ ಪರಿಶೋಧಕರು ಪರಿಶೀಲನೆ ಸಂದರ್ಭದಲ್ಲಿ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.
ಆರ್ಥಿಕ ಸಂಹಿತೆಯಲ್ಲೇನಿದೆ?
ಕರ್ನಾಟಕ ಆರ್ಥಿಕ ಸಂಹಿತೆ 331ರ ಪ್ರಕಾರ ನಗದು ಪುಸ್ತಕವನ್ನು ಪ್ರತಿನಿತ್ಯವು ಬರೆಯಬೇಕು. ಪ್ರತಿಯೊಂದು ಜಮೆ ಅಥವಾ ವೆಚ್ಚಕ್ಕೆ ಸಂಬಂಧಿಸಿದ ನಮೂದನ್ನು ವ್ಯವಹಾರಕ್ಕೆ ತಕ್ಕಂತೆ ಏಕಕಾಲದಲ್ಲಿ ಮಾಡಬೇಕು. ಪ್ರತಿ ದಿನವು ನಗದು ಪುಸ್ತಕವನ್ನು ಪ್ರಾರಂಭದ ಶಿಲ್ಕನ್ನು ಜಮೆಗಳ ಸಾಲಿನಲ್ಲಿ ಅವುಗಳ ಸ್ವೀಕೃತಿಗಳ ಅನುಕ್ರಮದಲ್ಲಿ ಬರೆಯಬೇಕು. ಹಾಗೆಯೇ ಪ್ರತಿ ಬಾಬ್ತಿನ ಬಗ್ಗೆ ಮಾಡಿದ ವೆಚ್ಚಗಳ ಎದುರಿಗೆ ವೋಚರ್ ನಂಬರ್‍ನ್ನು ಸೂಚಿಸಬೇಕು. ಪ್ರತಿ ದಿನವೂ ನಗದು ಪುಸ್ತಕವನ್ನು ಪೂರ್ತಿಗೊಳಿಸಿ ಶಿಲ್ಕನ್ನು ತಿಂಗಳ ಕೊನೆಯ ದಿನದ ಕೊನೆಯಲ್ಲಿ ಪೂರ್ಣಗೊಳಿಸಬೇಕು. ನಗದು ಶಿಲ್ಕುಗಳಿಗೆ ಅನುಗುಣವಾಗಿ ವಿವರವಾಗಿ ಬಾಬ್ತುಗಳ ವಿವರಗಳನ್ನು ಕೊಡಬೇಕು.
ಆದರೆ ಈ ವಿಶ್ವವಿದ್ಯಾಲಯವು ನಿರ್ವಹಿಸುತ್ತಿರುವ ನಗದು ಪುಸ್ತಕಗಳನ್ನು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಇರುವಂತೆ ಯಥಾವತ್ತಾಗಿ ನಮೂದಿಸಿದೆ. ಅಲ್ಲದೇ ಬ್ಯಾಂಕ್ ಸಮನ್ವಯ ಮಾಡದೇ ಇರುವುದು ಕಂಡು ಬಂದಿದೆ. ಹೀಗಾಗಿ ಆಂತಿಮ ಶಿಲ್ಕಿನಲ್ಲಿ ಉಳಿದಿರುವ ಮೊತ್ತಕ್ಕೆ ವಿವರವೇ ತಿಳಿದು ಬಂದಿಲ್ಲ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ವಿಶ್ವವಿದ್ಯಾಲಯದಲ್ಲಿ ನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕ್ ಖಾತೆಗಳು ಉಳಿತಾಯ ಖಾತೆಗಳಾಗಿವೆ. ಖಾತೆಗಳಲ್ಲಿನ ಮೊತ್ತಕ್ಕೆ ಕಡಿಮೆ ಬಡ್ಡಿ ಸ್ವೀಕೃತವಾಗುತ್ತಿದೆ. ಈ ಉಳಿತಾಯ ಖಾತೆಗಳನ್ನು ಎಸ್‌ಬಿ ಫ್ಲೆಕ್ಸಿ ಡಿಪಾಸಿಟ್ ಅಕೌಂಟ್‌ಗಳನ್ನಾಗಿ ಮಾಡಿದಲ್ಲಿ ಅಧಿಕ ಮೊತ್ತದ ಬಡ್ಡಿಯನ್ನು ಪಡೆಯಬಹುದಾಗಿತ್ತು ಎಂದು ಲೆಕ್ಕ ಪರಿಶೋಧನೆ ವರದಿಯು ಅಭಿಪ್ರಾಯಪಟ್ಟಿದೆ.

ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ ನಂತರ ವಿಶ್ವವಿದ್ಯಾಲಯವು ಇನ್ನು ಮುಂದೆ ನಗದು ಪುಸ್ತಕವನ್ನು ನಿರ್ವಹಿಸಲಿದೆ ಎಂದು ಉತ್ತರಿಸಿತ್ತು. ಆದರೆ ಲೆಕ್ಕ ಪರಿಶೋಧಕರು ‘ಕರ್ನಾಟಕ ಆರ್ಥಿಕ ಸಂಹಿತೆ ಅನ್ವಯ ನಗದು ಪುಸ್ತಕ ನಿರ್ವಹಣೆ ಮಾಡದ ಕಾರಣ ಈ ಕಂಡಿಕೆಯನ್ನು ಮಂದುವರೆಸಲಾಗುವುದು,’ ಎಂದು ವರದಿಯಲ್ಲಿ ಷರಾ ಬರೆದಿರುವುದು ತಿಳಿದು ಬಂದಿದೆ.
ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ 38.98 ಕೋಟಿ ರು ಮೊತ್ತಕ್ಕೆ ಲೆಕ್ಕ ಪರಿಶೋಧಕರು ಅಕ್ಷೇಪಣೆ ವ್ಯಕ್ತಪಡಿಸಿದ್ದರು. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




