ಬೆಂಗಳೂರು; ಮಹಿಳಾ ಸ್ವೀಕಾರ ಕೇಂದ್ರಗಳಲ್ಲಿನ ಹೆಣ್ಣು ಮಕ್ಕಳನ್ನು ಐಎಎಸ್ ಅಧಿಕಾರಿಗಳ ಮನೆಗೆಲಸಕ್ಕೆ ಕಳಿಸಲಾಗುತ್ತಿದೆ ಮತ್ತು ಅವರ ಮನೆಗಳಿಂದ ಹೆಣ್ಣು ಮಕ್ಕಳು ಮರಳಿ ಬಂದಿಲ್ಲ ಎಂದು ಆಪಾದಿಸಿ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದ ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಇದೀಗ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತೊಂದು ದೂರು ನೀಡಿದೆ.
ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಲೋಕಾಯುಕ್ತಕ್ಕೆ ದೂರು ನೀಡಿದ್ದರ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಸಮಿತಿಯು ಮುಖ್ಯ ಕಾರ್ಯದರ್ಶಿಗಳಿಗೆ ಐಎಎಸ್ ಅಧಿಕಾರಿಗಳಿಬ್ಬರ ಹೆಸರು ಮತ್ತು ಇದಕ್ಕೆ ಪೂರಕ ದಾಖಲೆಗಳನ್ನು 2026ರ ಆಗಸ್ಟ್ 12ರಂದು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.
ಇದರ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಐಎಎಸ್ ಮಹಿಳಾ ಅಧಿಕಾರಿ ಶಮ್ಲಾ ಇಕ್ಬಾಲ್ ಮತ್ತು ನಿವೃತ್ತ ಮಹಿಳಾ ಐಎಎಸ್ ಅಧಿಕಾರಿ ಶೋಭಾ ನಂಬೀಸನ್, ಮತ್ತೊಬ್ಬ ಐಎಎಸ್ ಅಧಿಕಾರಿ ಪಿ ಜಿ ನಾಯಕ್ ಅವರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ. ವಿಶೇಷವೆಂದರೇ ಶಮ್ಲಾ ಇಕ್ಬಾಲ್ ಅವರು ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಮ್ಲಾ ಇಕ್ಬಾಲ್ ಅವರ ಮನೆ ಕೆಲಸ ನಿರ್ವಹಿಸಲು ಮಹಿಳಾ ಸ್ವೀಕಾರ ಕೇಂದ್ರದಿಂದ ಸೂಕ್ತ ನಿವಾಸಿಯನ್ನು 08ರ ಏಪ್ರಿಲ್ 9ರಂದು ಬಿಡುಗಡೆ ಮಾಡಿತ್ತು.

ನಿವೃತ್ತ ಐಎಎಸ್ ಅಧಿಕಾರಿ ಶೋಭಾ ನಂಬೀಸನ್ ಅವರ ಮನೆ ಕೆಲಸಕ್ಕಾಗಿ 2014-15ನೇ ಸಾಲಿನಲ್ಲಿ ಸ್ವೀಕಾರ ಕೇಂದ್ರದಿಂದ ಸೂಕ್ತ ನಿವಾಸಿ ಬಿಡುಗಡೆ ಮಾಡಿತ್ತು.

ಮತ್ತೊಬ್ಬ ಐಎಎಸ್ ಅಧಿಕಾರಿ ಪಿ ಜಿ ನಾಯಕ್ (ಈಗ ನಿವೃತ್ತ) ಅವರ ಮನೆಗೆ 2006ರಲ್ಲಿ ಸ್ವೀಕಾರ ಕೇಂದ್ರದಿಂದ ಸೂಕ್ತ ನಿವಾಸಿ ಬಿಡುಗಡೆ ಮಾಡಿತ್ತು ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಆರ್‍ಟಿಐ ಆಡಿಯಲ್ಲಿ ಪಡೆದಿದ್ದ ದಾಖಲೆಯನ್ನು ಮುಖ್ಯಕಾರ್ಯದರ್ಶಿಗೆ ಸಲ್ಲಿಸಿರುವುದು ಗೊತ್ತಾಗಿದೆ.

‘ಐಎಎಸ್ ಅಧಿಕಾರಿಗಳಾದ ಶಮ್ಲಾ ಇಕ್ಬಾಲ್, ಶೋಭಾ ನಂಬೀಸನ್, ಪಿ ಜಿ ನಾಯಕ್ ಇವರುಗಳು ಕೆಲಸಕ್ಕೆ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಆದರೆ ಮರಳಿ ಬಂದಿರುವುದಕ್ಕೆ ಯಾವುದೇ ದಾಖಲೆಗಳಿರುವುದಿಲ್ಲ. ಆದ್ದರಿಂದ ಇವರುಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಡಾ ಶಮ್ಲಾ ಇಕ್ಬಾಲ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನು ಈ ಹುದ್ದೆಯಿಂದ ತೆರವುಗೊಳಿಸಿ ಬೇರೆಡೆ ವರ್ಗಾಯಿಸಿ ತನಿಖೆ ನಡೆಸಬೇಕು,’ ಎಂದು ಮನವಿಯಲ್ಲಿ ಕೋರಿರುವುದು ತಿಳಿದು ಬಂದಿದೆ.
ಈ ದೂರಿನ ಕುರಿತು ದಿ ಫೈಲ್, ಡಾ ಶಮ್ಲಾ ಇಕ್ಬಾಲ್ ಅವರ ಪ್ರತಿಕ್ರಿಯೆ,ಸ್ಪಷ್ಟೀಕರಣ ಕೋರಿ ಅಧಿಕೃತ ಇ-ಮೈಲ್ ಗೆ ಕಳಿಸಿದೆ. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ, ಸ್ಪಷ್ಟೀಕರಣ ನೀಡಿಲ್ಲ. ಅವರು ಪ್ರತಿಕ್ರಿಯೆ/ಸ್ಪಷ್ಟೀಕರಣ ನೀಡಿದ ನಂತರ ಇದೇ ವರದಿಯನ್ನು ನವೀಕೃತಗೊಳಿಸಲಾಗುವುದು.
‘ಬೆಂಗಳೂರು ನಗರದಲ್ಲಿರುವ ಮಹಿಳಾ ಸ್ವೀಕಾರ ಕೇಂದ್ರದ 1,776 ಅನಾಥ, ನಿರ್ಗತಿಕ ಮಹಿಳೆಯರು, ಹೆಣ್ಣು ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿದೆ. ಹಲವರಿಗೆ ಗರ್ಭಪಾತ ಮಾಡಿಸಿ ಅನೈತಿಕ ಚಟುವಟಿಕೆಗಳೀಗೆ ಮಾರಾಟ ಮಾಡಲಾಗಿದೆ. ಕೆಲವರನ್ನು ಸಾಯಿಸಿ, ವಿದ್ಯುತ್ ಚಿತಾಗಾರದಲ್ಲಿ ಸುಟ್ಟು ಬೂದಿ ಮಾಡಲಾಗಿದೆ,’ ಎಂಬ ಆಘಾತಕಾರಿ, ಕಳವಳಕಾರಿ ಘಟನೆಗಳನ್ನು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಲೋಕಾಯುಕ್ತರ ಗಮನಕ್ಕೆ ತಂದಿತ್ತು.
ಅಲ್ಲದೇ ‘ಈ ಸ್ವೀಕಾರ ಕೇಂದ್ರದಲ್ಲಿನ ಹಲವು ಹೆಣ್ಣು ಮಕ್ಕಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್ ಅಧಿಕಾರಿಗಳ ಮನೆಗೂ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ,’ ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಗುರುತರವಾಗಿ ಆಪಾದಿಸಿದೆ. ಆದರೆ ಐಎಎಸ್ ಅಧಿಕಾರಿಗಳ ಹೆಸರುಗಳನ್ನು ದೂರಿನಲ್ಲಿ ಹೆಸರಿಸಿಲ್ಲ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿರುವ ಅಧಿಕಾರಿ, ಸಿಬ್ಬಂದಿಗಳ ಪಟ್ಟಿಯನ್ನೂ ಸಹ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಲೋಕಾಯುಕ್ತರಿಗೆ ಒದಗಿಸಿತ್ತು.
ಈ ಸಂಬಂಧ ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಒಟ್ಟು 33 ದಾಖಲೆಗಳನ್ನು ಲೋಕಾಯುಕ್ತರಿಗೆ ದೂರಿನಲ್ಲಿ ಒದಗಿಸಿದೆ. ಸ್ವೀಕಾರ ಕೇಂದ್ರದಿಂದ ಹಲವು ದಾಖಲೆಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶಗಳು, ನಿವಾಸಿ ನಾಪತ್ತೆ, ಗೃಹ ತನಿಖೆ, ಅಂತ್ಯಕ್ರಿಯೆ, ನಿವಾಸಿ ವರ್ಗಾವಣೆ ಸೇರಿದಂತೆ ಇನ್ನಿತರೆ ಆದೇಶಗಳ ಪ್ರತಿಗಳನ್ನೂ ಸಹ ದೂರಿನಲ್ಲಿ ಒದಗಿಸಿತ್ತು.
ಈ ದೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಕೆಎಎಸ್ ಅಧಿಕಾರಿ ಮಹೇಶ್ ಬಾಬು ಅವರನ್ನು ಪ್ರತಿವಾದಿಯನ್ನಾಗಿಸಿತ್ತು.

ಈ ದೂರನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ಸಂಸ್ಥೆಯು ಇದರ ವಿಚಾರಣೆಯನ್ನು 2026ರ ಸೆ.10ರಂದು ನಡೆಸಲಿದೆ.

ದೂರಿನಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಗಳೂರು ನಗರ ಸ್ವೀಕಾರ ಕೇಂದ್ರದಲ್ಲಿ 2000ರಿಂದ 2018ರವರೆಗೆ ನಿವಾಸಿಗಳು ದಾಖಲಾಗಿ ಒಳ ಹೋದವರು ಮತ್ತೆ ಹೊರಗಡೆ ಹೋಗಿರುವುದಕ್ಕೆ ದಾಖಲೆಗಳು ಇರುವುದಿಲ್ಲ. ಕೆಲವು ನಿವಾಸಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಅನೈತಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆಗೆ ತಳ್ಳಿರುವುದು ಮತ್ತು ಸಾಯಿಸಿ ವಿದ್ಯುತ್ ಚಿತಾಗಾರಕ್ಕೆ ಹಾಕಿ ಬೂದಿ ಮಾಡಿರುವುದು ದಾಖಲೆಗಳಲ್ಲಿ ಕಂಡುಬರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಆಪಾದಿಸಿದ್ದರು.
2000ರಿಂದ 2018ರವರೆಗೆ 1,776 ನಿವಾಸಿಗಳನ್ನು ದಾಖಲೆ ಮಾಡಿಕೊಂಡ ಹಾಗೇ ಅವರ ಕಡತಗಳಲ್ಲಿ ಬರೆದಿರುವಂತೆ ಸ್ವೀಕಾರ ಕೇಂದ್ರದಲ್ಲಿ ದಾಖಲಾಗಿರುವುದು ಸತ್ಯವಾಗಿದೆ. ವರ ವೈಯಕ್ತಿಕ ಕಡತಗಳು ಮತ್ತು ಅವರ ಚಲನವಲನದ ಜವಾಬ್ದಾರಿ ಹೊತ್ತಿದ್ದ ಸ್ವೀಕಾರ ಕೇಂದ್ರದ ಸಿಬ್ಬಂದಿಗಳು ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮತ್ತು ಅವರ ದಾಖಲೆಗಳನ್ನು ನಾಶ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕೋರಿದ್ದರೂ ಆ ಕಡತಗಳು ಇರುವುದಿಲ್ಲ ಎಂದು ಷರಾ ಬರೆದಿದ್ದಾರೆ ಎಂದು ಲೋಕಾಯುಕ್ತರ ಗಮನಕ್ಕೆ ತಂದಿದ್ದರು.
ಸ್ವೀಕಾರ ಕೇಂದ್ರದಲ್ಲಿ ನಿವಾಸಿಗಳು ತಂದೆ ತಾಯಿ ಇಲ್ಲದೇ ಅವರಿಂದ ದೂರವಾಗಿ ಅವರು ಬೇರೆ ದಾರಿ ಇಲ್ಲದೇ ಪೊಲೀಸರಿಂದ ಹಾಗೂ ವೈಯಕ್ತಿಕವಾಗಿ ಸಹಾಯ ಪಡೆಯಲು ದಾಖಲಾಗಿದ್ದಾರೆ. ಇಂತಹ ಹೆಣ್ಣು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿವಾಸಿಗಳನ್ನು ಮನೆ ಕೆಲಸದ ನೆಪದಲ್ಲಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ಕಳಿಸಿರುವುದು ದಾಖಲೆಗಳಲ್ಲಿ ರುಜುವಾತಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

ಅದೇ ರೀತಿ ಐಎಎಸ್ ಅಧಿಕಾರಿಗಳ ಮನೆಗಳಿಗೆ ಹೋದ ನಿವಾಸಿಗಳು ಮತ್ತು ಸಂಸ್ಥೆಗೆ ವಾಪಸ್ ಬಂದಿರುವುದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ. ಹಾಗೆಯೇ ಅವರು ಕೆಲಸದ ಅವಧಿಯಲ್ಲಿ ದುಡಿದ ಸಂಬಳ ಸಹ ಅವರ ಅಕೌಂಟ್‌ಗೆ ಜಮಾ ಆಗಿಲ್ಲ. ಈ ನಿವಾಸಿಗಳಿಗೆ ಬ್ಯಾಂಕ್ ಖಾತೆ ತೆರೆದು ನಿವಾಸಿ ಬಿಡುಗಡೆ ಆಗುವಾಗ ಅವರು ದುಡಿದಿರುವ ಹಣವನ್ನು ಅವರಿಗೆ ನೀಡಬೇಕು. ಇದು ಇಲಾಖೆಯ ನಿಯಮ. ಆದರೆ ಇವರುಗಳು ಮನೆ ಕೆಲಸದಲ್ಲೇನೆ, ನಿವಾಸಿಗಳಿಗೆ ವೇಶ್ಯಾವಾಟಿಕೆ ಮಾಡಿಸಿ ಗರ್ಭಪಾತ ಮಾಡಿಸಿ ಸಾಯಿಸುವುದು, ಕೊನೆಗೆ ವಿದ್ಯುತ್ ಚಿತಾಗಾರಗಳಿಗೆ ಹಾಕಿರುವುದು ಮತ್ತು ದಾಖಲೆಗಳನ್ನು ನಾಶ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಗುರುತರವಾಗಿ ಆರೋಪಿಸಿದ್ದರು.
‘ಈ ವಿಚಾರಕ್ಕೆ ಸಂಬಂಧಿಸಿದಂತೆ 2018ರಿಂದಲೂ ದಾಖಲೆಗಳನ್ನು ಪಡೆಯಲಾಗಿದೆ. ಅವುಗಳನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮತ್ತು ಕರ್ನಾಟಕ ಸರ್ಕಾರಕ್ಕೆ ದೂರು ನೀಡಲಾಗಿದೆ. ಆದರೆ ಇದುವರೆಗೂ ಯಾವುದೇ ಅಧಿಕಾರಿ, ಸಿಬ್ಬಂದಿಗಳನ್ನು ತನಿಖೆ ಮಾಡಿಲ್ಲ. ಶಿಕ್ಷೆಗೂ ಒಳಪಡಿಸಿಲ್ಲ,’ ಎಂದು ದೂರಿನಲ್ಲಿ ಆಪಾದಿಸಿತ್ತು.
ಹಾಗೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವಾಲಯದ ಸಿಬ್ಬಂದಿ, ನಿರ್ದೇಶನಾಲಯದ ಸಿಬ್ಬಂದಿ, ಅಧಿಕಾರಿಗಳು, ಬೆಂಗಲೂರು ನಗರದ ಉಪ ನಿರ್ದೇಶಕರ ಕಚೇರಿ, ಅಧಿಕಾರಿ ಸಿಬ್ಬಂದಿಗಳು, ಇಂತಹ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಮಾಹಿತಿ ಕೋರಿದವರಿಗೆ ಯಾವುದೇ ಹಿಂಬರಹ ನೀಡುತ್ತಿಲ್ಲ. ಸಚಿವಾಲಯದ ಸಿಬ್ಬಂದಿಗಳು ಕಡತವನ್ನು ಮುಕ್ತಾಯಗೊಳಿಸಿದ್ದೇವೆ ಎಂದು ದಾಖಲೆ ನೀಡುತ್ತಿದ್ದಾರೆ ಎಂದು ಆರೋಪಿಸಿತ್ತು.

ಈ ಸಂಬಂಧ ಇಲಾಖೆಯ ಬೆಂಗಳೂರು ನೋಡಲ್ ಅಧಿಕಾರಿಯನ್ನು ಕರ್ನಾಟಕ ರಾಜ್ಯ ಸರ್ವಶಕ್ತಿ ಸಮಿತಿಯು ಸಂಪರ್ಕಿಸಿತ್ತು. ಈ ಪ್ರಕರಣಗಳ ಕುರಿತು ಗಮನಸೆಳದಿತ್ತು. ಆ ಸಂದರ್ಭದಲ್ಲಿ ‘ ಪ್ರತಿಯೊಂದು ನಾಯಿಗೂ ಸಹ ಲೆಕ್ಕ ಇರಬೇಕು. ಅಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ನಾಪತ್ತೆಯಾಗಿರುವ ಗಂಭೀರ ಪ್ರಕರಣದಲ್ಲಿ ವರದಿ ಕೇಳುತ್ತೇವೆ,’ ಎಂದು ಹೇಳಿದ್ದರು. ಆದರೆ ಈ ಹೇಳಿಕೆ ನೀಡಿದ ನಂತರವೂ ನೋಡಲ್ ಅಧಿಕಾರಿ ಈ ಪ್ರಕರಣದಲ್ಲಿ ಕಳೆದ 6 ತಿಂಗಳಿನಿಂದಲೂ ಯಾವುದೇ ಶಿಸ್ತುಕ್ರಮ ವಹಿಸಿಲ್ಲ. ಬದಲಿಗೆ ಕ್ರಮ ಕೈಗೊಳ್ಳಬೇಕಾಗಿರುವುದನ್ನು ಮುಂದೂಡುತ್ತಿದ್ದಾರೆ ಎಂದು ಆರೋಪಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸೇರಿದಂತೆ ಹಲವರ ಹೆಸರನ್ನೂ ದೂರಿನಲ್ಲಿ ಹೆಸರಿಸಿದೆ. ಇಲಾಖೆಯ ನಿರ್ದೇಶಕರಾಗಿದ್ದ ಅರುಂಧತಿ ಚಂದ್ರಶೇಖರ್, ಮಹೇಶ್ ಬಾಬು, ಉಪ ನಿರ್ದೇಶಕರಾಗಿದ್ದ ಸುಮಂಗಲ ಮಾಲಾಪುರ್, ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಗೀತಾ ಲಕ್ಷ್ಮಿ, ರಾಜಣ್ಣ, ಕಲ್ಪನಾ, ರೇವತಿ, ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್, ವನಿತಾ, ಜಯಶ್ರೀ, ಮೋಹನ್ ಕುಮಾರ್, ಸರ್ವಮಂಗಳ, ಪ್ರಸನ್ನ ಪಾರ್ವತಿ ಸೇರಿದಂತೆ ಹಲವರ ಹೆಸರುಗಳನ್ನು ದೂರಿನಲ್ಲಿ ಹೆಸರಿಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ವಿವರಣೆ ಒದಗಿಸಲು ಸೂಚಿಸಿದ್ದರು. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಡಿಜಿಪಿಯಿಂದ ವರದಿ ಕೇಳಿತ್ತು. ಆದರೆ ಯಾವುದೇ ವರದಿ ನೀಡಿರಲಿಲ್ಲ. ಈ ಕುರಿತು ದಿ ಫೈಲ್ 2026ರ ಆಗಸ್ಟ್ 11ರಂದು ವರದಿ ಪ್ರಕಟಿಸಿತ್ತು.




