Thursday | August 6, 2026 |

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ ಮುಗಿದಿದ್ದರೂ ಸಹ ಅಕ್ರಮ ಗಣಿಗಾರಿಕೆ ಮಾಡಿರುವುದು ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ ಎಂದು ಆರ್ಥಿಕ ಇಲಾಖೆಯು ಇದೀಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯನ್ನು ನೇರಾನೇರ ಪ್ರಶ್ನಿಸಿರುವುದು  ಬಹಿರಂಗವಾಗಿದೆ.

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಬಾಕಿ ಉಳಿಸಿಕೊಂಡಿರುವ ರಾಜಧನ ಮತ್ತು ದಂಡದ ಒಟ್ಟು ಮೊತ್ತವಾದ  850 ಕೋಟಿ ರುಪಾಯಿಗಳನ್ನು ವಸೂಲು ಮಾಡುವಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)  ವಿಫಲವಾಗಿರುವ ಬೆನ್ನಲ್ಲೇ ಆರ್ಥಿಕ ಇಲಾಖೆಯು ಕೇಳಿರುವ ಪ್ರಶ್ನೆಯು ಮುನ್ನೆಲೆಗೆ ಬಂದಿದೆ.

ನಿಯಮಬಾಹಿರವಾಗಿ ಲೆಟರ್ ಆಫ್‌ ಇಂಟೆಂಟ್ ಅನುಷ್ಠಾನಗೊಳಿಸಲು ಮುಂದಾಗಿದ್ದರ ಬಗ್ಗೆ ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿರುವ ಬೆನ್ನಲ್ಲೇ ಇದೀಗ ವಕೀಲ ಉಮಾಪತಿ ಮತ್ತಿತರರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌ ಜಾರಿಗೊಳಿಸಿದ್ದರು. ಈ ಬೆಳವಣಿಗೆ ನಡುವೆಯೇ ಆರ್ಥಿಕ ಇಲಾಖೆಯು ಈ ಕಂಪನಿಗೆ ಸಂಬಂಧಿಸಿದಂತೆ ಹಲವು ಸ್ಪಷ್ಟನೆ ಮತ್ತು ಮಾಹಿತಿ ಒದಗಿಸಬೇಕು ಎಂದು 2026ರ ಜೂನ್‌ 23ರಂದೇ  ಪತ್ರ ಬರೆದಿದೆ.

ಆರ್ಥಿಕ ಇಲಾಖೆಯು  ಈ ಪತ್ರ ಬರೆದು ತಿಂಗಳಾಗಿದ್ದರೂ ಸಹ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು ಆರ್ಥಿಕ ಇಲಾಖೆಗೆ ಇನ್ನೂ ಪೂರ್ಣ ಪ್ರಮಾಣದ ಮಾಹಿತಿಯನ್ನೇ ಒದಗಿಸಿಲ್ಲ ಎಂದು ಗೊತ್ತಾಗಿದೆ. ಸಚಿವ ಸಂಪುಟವು ಈಗಷ್ಟೇ ವಿಸ್ತರಣೆಯಾಗಿದೆ. ಇನ್ನೂ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ. ಹೀಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸದ್ಯ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಳಿಯೇ ಇದೆ.

 

ಆರ್ಥಿಕ ಇಲಾಖೆ ಕೋರಿರುವ ಮಾಹಿತಿಯೇನು?

  1. ಈ ಪ್ರಕರಣವು ವಸೂಲಾತಿ ಆಯುಕ್ತರ ಪರಿಶೀಲನಾ ವ್ಯಾಪ್ತಿಯಡಿ ಬರುತ್ತದೆಯೇ, ಇದ್ದಲ್ಲಿ ವಸೂಲಾತಿ ಆಯುಕ್ತರ ಅಭಿಪ್ರಾಯ ಪಡೆಯಲಾಗಿದೆಯೇ?
  2. ಎಸಿಸಿ ಲಿಮಿಟೆಡ್‌ ಕಂಪನಿ ಮಾದರಿ ರೀತಿಯಲ್ಲಿ ಯಾವುದಾದರೂ ಇತರೆ ಪ್ರಕರಣಗಳಲ್ಲಿ ಇಲಾಖೆಯು ಪ್ರಕರಣವನ್ನು ಇತ್ಯರ್ಥಪಡಿಸಲು ಕೈಗೊಂಡಿರುವ ಕ್ರಮಗಳೇನು?
  3. ಅಕ್ರಮ ಗಣಿಗಾರಿಕೆ ನಡೆಸುವ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿ ಮಾಡದಿರುವ ಕಂಪನಿಗಳ ವಿರುದ್ಧ ಇಲಾಖೆಯು ಕೈಗೊಂಡಿರುವ ಕ್ರಮಗಳೇನು?
  4. ಇನ್ನೂ ಯಾವ ಯಾವ ಗಣಿ ಗುತ್ತಿಗೆಗಳನ್ನು ಎಸಿಸಿ ಕಂಪನಿಗೆ ನೀಡಲಾಗಿದೆ, ಹಾಗೂ ಸದ್ಯ ಗಣಿ ಗುತ್ತಿಗೆಗಳಿಗೆ ಈ ಕಂಪನಿಯಿಂದ ಕಾಲಾನುಕಾಲಕ್ಕೆ ರಾಜಧನ ಪಾವತಿಯಾಗಿದೆಯೇ ಅಥವಾ ಬಾಕಿ ಉಳಿಸಿಕೊಂಡಿದೆಯೇ?
  5. ಲೀಸ್‌ ಅವಧಿ ಮುಗಿದಿದ್ದರೂ ಸಹ ಎಸಿಸಿ ಲಿಮಿಟೆಡ್‌ ಕಂಪನಿಯು ಅಕ್ರಮ ಗಣಿಗಾರಿಕೆ ಮಾಡಿರುವುದು ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ, ಈ ಅಕ್ರಮ ಗಣಿಗಾರಿಕೆ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿತ್ತು?
  6.  ನ್ಯಾಯಾಲಯಗಳಲ್ಲಿ ದಾಖಲಾಗಿರುವ 3 ಪ್ರಕರಣಗಳಿಗೆ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆಯೇ?
  7. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿನ ನಿಯಮಾನುಸಾರ ಎಸಿಸಿ ಲಿಮಿಟೆಡ್ ಕಂಪನಿಗೆ ಎಂಡಿಐಪಿ ನೀಡದಿದ್ದಲ್ಲಿ ಉಂಟಾಗಬಹುದಾದ ಕಾನೂನು ತೊಡಕುಗಳೇನು?
  8. ಕೇಂದ್ರ ಸರ್ಕಾರದ ಗಣಿ ಮಂತ್ರಾಲಯವು ( 26-02-206) ಆಡಳಿತ ಇಲಾಖೆಗೆ ಮಾಹಿತಿ ಒದಗಿಸಿದೆಯೇ, ಒದಗಿಸಿದ್ದಲ್ಲಿ ಕೇಂದ್ರ ಸರ್ಕಾರದಿಂದ ಮುಂದಿನ ನಿರ್ದೇಶನ ಸ್ವೀಕೃತವಾಗಿದೆಯೇ?
  9. ಭೂ ಕಂದಾಯ ರೂಪದಲ್ಲಿ ಗಣಿ ಗುತ್ತಿಗೆ ಬಾಕಿಯನ್ನು ವಸೂಲು ಮಾಡಲು 2023ರ ಮಾರ್ಚ್ 23ರಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ವಸೂಲಾತಿಯು ಯಾವ ಹಂತದಲ್ಲಿದೆ?

ಆರ್ಥಿಕ ಇಲಾಖೆಯು ಒಂದು ತಿಂಗಳ ಹಿಂದೆಯೇ  ಈ ಮಾಹಿತಿ ಕೋರಿತ್ತು.

 

 

ಈ ಮಾಹಿತಿ ಒದಗಿಸುವ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಚರ್ಚೆಯಾಗಿತ್ತು. ಆದರೆ ಇದುವರೆಗೂ ಆರ್ಥಿಕ ಇಲಾಖೆಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ ಎಂದು ತಿಳಿದು ಬಂದಿದೆ. ಆರ್ಥಿಕ ಇಲಾಖೆಯು ಕೋರಿರುವ ಮಾಹಿತಿಯ ಒದಗಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಕಲ್ಬುರ್ಗಿಯ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಪಡೆದಿದ್ದ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌  ಲಿಮಿಟೆಡ್‌ ಅಕ್ರಮವಾಗಿ ಗಣಿಗಾರಿಕೆ ನಡೆಸಿತ್ತು. ಮತ್ತು ಶಾಸನಬದ್ಧವಾಗಿ ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡಬೇಕಿದ್ದ ರಾಜಧನ ಪಾವತಿಸಿರಲಿಲ್ಲ. ಅಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸಿದ್ದರಿಂದಾಗಿ ರಾಜ್ಯ ಸರ್ಕಾರವು ವಿಧಿಸಿದ್ದ ದಂಡದ ಮೊತ್ತವನ್ನೂ ಪಾವತಿಸಿರಲಿಲ್ಲ. ಆದರೂ ಈ ಕಂಪನಿಗೆ ಲೆಟರ್ ಆಫ್‌ ಇಂಟೆಂಟ್‌ನ್ನು ಅನುಷ್ಠಾನಗೊಳಿಸುತ್ತಿರುವುದು ಸರಿಯಲ್ಲ ಎಂದು ವಕೀಲ ಉಮಾಪತಿ ಅವರು 2026ರ ಮಾರ್ಚ್‌ 3ರಂದೇ ಲೀಗಲ್ ನೋಟೀಸ್‌ ಜಾರಿಗೊಳಿಸಿದ್ದರು.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

 

ಲೀಗಲ್ ನೋಟೀಸ್‌ನಲ್ಲೇನಿತ್ತು?

ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌, ಒಟ್ಟಾರೆ 850.21 ಕೋಟಿಯಷ್ಟು ಮೊತ್ತವನ್ನು ಬಾಕಿ ಇರಿಸಿಕೊಂಡಿದೆ. ಇದರಲ್ಲಿ ರೂ. 492.51 ಕೋಟಿ ರು ಮೊತ್ತವು ರಾಜಧನ ಮತ್ತು ಬಡ್ಡಿಗೆ ಸಂಬಂಧಿಸಿದೆ. 125.00 ಕೋಟಿ ರು ಗಳನ್ನು ಠೇವಣಿ ಇರಿಸಿದೆ. ಇದಲ್ಲದೆ, ರೂ. 482.69 ಕೋಟಿಗಳ ದಂಡ ವಿಧಿಸಲಾಗಿದೆ (ಅಧಿಕೃತವಾಗಿ ರೂ. 482.59 ಕೋಟಿಗಳು ಎಂದು ಪರಿಗಣಿಸಲಾಗಿದೆ). ಮತ್ತು ಕಾನೂನು ಇಲಾಖೆಯ ಟಿಪ್ಪಣಿಯ ಪ್ರಕಾರ, ಅಕ್ರಮ ಗಣಿಗಾರಿಕೆಗಾಗಿ ಎಂಎಂಡಿಆರ್ ಕಾಯ್ದೆಯ ಕಲಂ 21(5) ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಧೈರ್ಯದಿಂದ ನಡೆದಿದೆ ಅಕ್ರಮ ಗಣಿಗಾರಿಕೆ

ಎಸಿಸಿ ಲಿಮಿಟೆಡ್ ಕಂಪನಿಯು ಮಾನ್ಯತೆ ಮತ್ತು ನೋಂದಾಯಿತ ಲೀಸ್ ಇಲ್ಲದೆ ಸುಮಾರು ಎರಡು ವರ್ಷಗಳ ಕಾಲ, ಅಂದರೆ 2023ರ ಫೆ.19 ರಿಂದ 2024ರ ಆಗಸ್ಟ್‌ 14ರವರೆಗೆ ಗಣಿಗಾರಿಕೆ ನಡೆಸಿದೆ. ಈ ಅವಧಿಯಲ್ಲಿ ಕಂಪನಿಯು ಸುಮಾರು 78,33,415 ಮೆಟ್ರಿಕ್ ಟನ್ ಸುಣ್ಣದ ಕಲ್ಲನ್ನು ಅಕ್ರಮವಾಗಿ ತೆಗೆದಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಇಂತಹ ಕ್ರಮಗಳು “ಅಕ್ರಮ ಗಣಿಗಾರಿಕೆ” ಎಂಬ ವ್ಯಾಖ್ಯಾನದ ಒಳಗೆ ಬರುತ್ತವೆ ಎಂದು ಲೀಗಲ್ ನೋಟೀಸ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.

 

 

ಸರ್ಕಾರದ ಉತ್ತರವೇನು?

ಎಸಿಸಿ ಕಂಪನಿಯು ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಬ್ಲಾಕ್‌ ಅನ್ನು ಹರಾಜಿನಲ್ಲಿ ಪಡೆದಿದೆ. ಆದರೆ, ನಿಯಮಾನುಸಾರ ನಿರ್ಧರಿಸಲಾದ ಅವಧಿಯೊಳಗೆ ಗಣಿಗಾರಿಕೆ ಲೀಸ್ ಡೀಡ್ ಅನ್ನು ಅನುಷ್ಠಾನಗೊಳಿಸಲು ಕಂಪನಿ ವಿಫಲವಾಗಿದೆ. ಲೆಟರ್ ಆಫ್ ಇಂಟೆಂಟ್ ಅನ್ನು ಅನುಮತಿಸಲಾದ ಅವಧಿಯನ್ನು ಮೀರಿ ವಿಸ್ತರಿಸಲಾಗಿಲ್ಲ. ಮತ್ತು ಪ್ರಸ್ತುತ ಅವಧಿ ಮೀರಿದೆ. ಆದ್ದರಿಂದ ಕಣ್ಣೂರು ವಾಡಿಯಲ್ಲಿನ ಲೈಮ್‌ಸ್ಟೋನ್ ಬ್ಲಾಕ್‌ಗೆ ಸಂಬಂಧಿಸಿದಂತೆ ಯಾವುದೇ ಗಣಿಗಾರಿಕೆ ಲೀಸ್ ಅನುಷ್ಠಾನಗೊಂಡಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಎಸ್ ರಂಗಪ್ಪ ಅವರು 2026ರ ಮಾರ್ಚ್‌ 27ರಂದು ಸಮಜಾಯಿಷಿ ನೀಡಿದ್ದರು.

 

 

 

 

 

 

 

ಎಸಿಸಿ ನೀಡಿದ್ದ ಉತ್ತರವೇನು?

ಈ ಸಂಬಂಧ 2026ರ ಮಾರ್ಚ್‌ 7ರಂದು ಎಸಿಸಿ ಲಿಮಿಟೆಡ ಉತ್ತರವನ್ನು ಸಲ್ಲಿಸಿದೆ. ಕಂಪನಿಯ ಉತ್ತರವನ್ನು ಇಲಾಖೆಯು ಅಂಗೀಕರಿಸಿಲ್ಲ. ಮತ್ತು 2026ರ ಮಾರ್ಚ್‌ ಆದೇಶದ ಮೂಲಕ ವಸೂಲಾತಿ ಕ್ರಮ ಆರಂಭಿಸಲಾಗಿದೆ. ಜೊತೆಗೆ ಎಂಎಂಡಿಆರ್‍‌ ಕಾಯ್ದೆ ಕಲಂ 4(1), 4(1-A) ಜೊತೆಗೆ 21(1) ಮತ್ತು (2) ಅನ್ವಯ ಕ್ರಮ ಕೈಗೊಳ್ಳಲು ಕಲಬುರಗಿ ಉಪನಿರ್ದೇಶಕರಿಗೆ ನಿರ್ದೇಶಿಸಲಾಗಿದೆ ಎಂಬ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

ರಾಜ್ಯದ ಹಿತಾಸಕ್ತಿ ಬದಿಗೊತ್ತಿ ರಾಜ್ಯ ಸರ್ಕಾರವು ಅದಾನಿ ಸಮೂಹದ ಪರವಾಗಿ ಲೆಟರ್ ಆಫ್‌ ಇಂಟೆಂಟ್‌ನ್ನು ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರದ ಮಾರ್ಗದರ್ಶನ ಕೋರಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

ಈ ಪ್ರಕರಣದಲ್ಲಿ ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಕೋರಿದ್ದ ಅರ್ಜಿಗೆ ಕಾನೂನು ಇಲಾಖೆಯು ಮಾಹಿತಿಯನ್ನೇ ನೀಡಿರಲಿಲ್ಲ. ಬದಲಿಗೆ ಸಚಿವ ಎಚ್‌ ಕೆ ಪಾಟೀಲ್ ಅವರು ಯಾವುದೇ ಅಭಿಪ್ರಾಯವನ್ನೂ ನೀಡಿಲ್ಲ ಸುಳ್ಳು ಮಾಹಿತಿ ನೀಡಿತ್ತು.

ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

 

ಈ ಬೆಳವಣಿಗೆಗಳ ನಡುವೆಯೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಗಣಿ) ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿತ್ತು.

ಅದಾನಿ ಎಸಿಸಿಗೆ ಲೆಟರ್ ಆಫ್‌ ಇಂಟೆಂಟ್‌; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ

ಈ ಮಧ್ಯೆ ಅದಾನಿ ಎಸಿಸಿ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಶಿಫಾರಸ್ಸು ಮಾಡಿತ್ತು.

ಅದಾನಿ ಎಸಿಸಿ ಲಿಮಿಟೆಡ್‌ನಿಂದ ಅಕ್ರಮ ಗಣಿಗಾರಿಕೆ; ನಿರ್ದೇಶಕರು, ಅಧಿಕಾರಿಗಳ ವಿರುದ್ಧ ಲೋಕಾ ತನಿಖೆಗೆ ಶಿಫಾರಸ್ಸು, ಕಡತಕ್ಕೆ ಧೂಳು

ಈ ಕುರಿತು ದಿ ಫೈಲ್ ಪ್ರಕಟಿಸಿದ್ದ ಎಲ್ಲಾ ವರದಿಗಳನ್ನಾಧರಿಸಿ   ಜೆಪಿ ಶಾಸಕ ಸುರೇಶ್‌ ಕುಮಾರ್ ಅವರು ಸರ್ಕಾರವನ್ನು ಪ್ರಶ್ನಿಸಿದ್ದರು. ಅಲ್ಲದೇ ವಿಧಾನಪರಿಷತ್‌ನಲ್ಲಿ ಸಿ ಟಿ ರವಿ ಮತ್ತು ಆರತಿ ಕೃಷ್ಣ ಅವರು ಅಧಿವೇಶನದಲ್ಲಿ ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

Hot this week

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ 86.19 ಕೋಟಿ ರು ವೆಚ್ಚ, ಆರ್‍‌ಟಿಐ ಮಾಹಿತಿ ಬಹಿರಂಗ

ಬೆಂಗಳೂರು;  ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹಂಚಿಕೆ ಮತ್ತು ಸಾಮಾಜಿಕ...
Please Scan to make Your Contribution

Topics

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ 86.19 ಕೋಟಿ ರು ವೆಚ್ಚ, ಆರ್‍‌ಟಿಐ ಮಾಹಿತಿ ಬಹಿರಂಗ

ಬೆಂಗಳೂರು;  ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹಂಚಿಕೆ ಮತ್ತು ಸಾಮಾಜಿಕ...

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ...

Related Articles

Popular Categories

error: Content is protected !!