Sunday | August 30, 2026 |

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ ಶೇ.200ಕ್ಕಿಂತಲೂ ಹೆಚ್ಚಿನ ದರದಲ್ಲಿ ಕಲ್ಲು ಸಕ್ಕರೆ ಮತ್ತು ಖರ್ಜೂರ ಪ್ರಸಾದವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ದೇವಾಲಯ ಪ್ರಾಧಿಕಾರ ಕಾರ್ಯದರ್ಶಿ ಪಿ ದಿನೇಶ್‌ ಎಂಬುವರ ವಿರುದ್ಧವೇ ಸ್ಥಳೀಯ ಪ್ರಸಾದ ಮಾರಾಟಗಾರರು ಈ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಮುಜುರಾಯಿ ಮತ್ತು ಧಾರ್ಮಿಕ ದತ್ತಿಗಳ ಇಲಾಖೆಯಲ್ಲಿ ತನಿಖೆಯು ತೀವ್ರಗೊಂಡಿದೆ.

ವಿಶೇಷವೆಂದರೇ ಕಲ್ಲು ಸಕ್ಕರೆ ಮತ್ತು ಖರ್ಜೂರ ಪ್ರಸಾದವನ್ನು ಸ್ಥಳೀಯರು ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದ್ದರೂ ಸಹ ದೇವಾಲಯ ಪ್ರಾಧಿಕಾರವು ಎರಡು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದೆ. ಇದು ಭಕ್ತರ ಮೇಲೆ ಅನಗತ್ಯ ಆರ್ಥಿಕ ಹೊರೆಯಾಗಿದೆ ಎಂಬ ಮಾತುಗಳೂ ಸಹ ಕೇಳಿ ಬಂದಿದೆ.

ದೇವಾಲಯಗಳಲ್ಲಿ ನೀಡುವ ಕಾಣಿಕೆ ಡಬ್ಬಿಗೆ ವೆಬ್‌ ಕ್ಯಾಮ್‌ ಅಳವಡಿಸಿ ಕ್ರಮಕೈಗೊಂಡಿರುವ ಬೆನ್ನಲ್ಲೇ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ದುಪ್ಪಟ್ಟು ದರದಲ್ಲಿ ಪ್ರಸಾದ ಮಾರಾಟ ಮಾಡುತ್ತಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯಲ್ಲಿ ತೆರೆದಿರುವ ಕಡತದ (ಕಡತ ಸಂಖ್ಯೆ;RD/54/MAAB/2025- COMPUTER NUMBER 1893003) ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಪ್ರಸಾದ ಹಾಗೂ ಇತರೆ ಪೂಜಾ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸ್ಥಳೀಯರನ್ನು ತೆರವುಗೊಳಿಸಲಾಗಿತ್ತು. ಈ ಸಂಬಂಧ ಸ್ಥಳೀಯ ಮಾರಾಟಗಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ನೀಡಿದ್ದ ಮಧ್ಯಂತರ ಆದೇಶವನ್ನು ದೇವಾಲಯ ಪ್ರಾಧಿಕಾರದ ಕಾರ್ಯದರ್ಶಿ ಪಿ ದಿನೇಶ್‌ ಎಂಬುವರು ಉಲ್ಲಂಘಿಸಿದ್ದಾರೆ ಎಂದು ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿರುವುದು ಗೊತ್ತಾಗಿದೆ. ಈ ದೂರಿನ ಕುರಿತು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬೆಳ್ಳಿಯ ಹರಕೆ ಸಾಮಾನುಗಳು, ವಿಗ್ರಹಗಳು, ಕಲ್ಲು ಸಕ್ಕರೆ, ಖರ್ಜೂರ, ಪಂಚ ಕಜ್ಜಾಯ, ಪಂಚಾಮೃತ ಅಭಿಷೇಕ ಮುಂತಾದ ಪ್ರಸಾದ ಇನ್ನಿತರೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ಉಚ್ಛ ನ್ಯಾಯಾಲಯವು ಮಧ್ಯಂತರ ಆದೇಶ ನೀಡಿತ್ತು. ಆದರೆ ಈ ಮಧ್ಯಂತರ ಆದೇಶವನ್ನು ಪ್ರಾಧಿಕಾರವು ಅನುಷ್ಠಾನ ಮಾಡಿರಲಿಲ್ಲ. ಹೀಗಾಗಿ ನೊಂದ ವ್ಯಕ್ತಿಗಳು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

‘ಉಚ್ಛ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಕೂಡಲೇ ವಿಳಂಬಕ್ಕೆ ಆಸ್ಪದವಿಲ್ಲದಂತೆ ಅನುಷ್ಠಾನಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು,’ ಎಂದು ಅಂತಿಮ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೂ ಸಹ ಪ್ರಾಧಿಕಾರವು ಇದರ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದು ತಿಳಿದು ಬಂದಿದೆ.

ಶೇ.200ಕ್ಕಿಂತಲೂ ಹೆಚ್ಚಿನ ದರದಲ್ಲಿ ಕಲ್ಲು ಸಕ್ಕರೆ ಮಾರಾಟ

ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಕಲ್ಲು ಸಕ್ಕರೆ ಮತ್ತು ಖರ್ಜೂರ ಪ್ರಸಾದ ಮಾರಾಟ ಮಾಡಲಾಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ಪ್ಯಾಕೇಟ್‌ ಒಂದಕ್ಕೆ 12 ರು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ದೇವಸ್ಥಾನವು ಕಲ್ಲು ಸಕ್ಕರೆ ಪ್ಯಾಕೇಟ್‌ವೊಂದಕ್ಕೆ 25 ಮತ್ತು ಖರ್ಜೂರ ಪ್ಯಾಕೇಟ್‌ವೊಂದಕ್ಕೆ 40 ರು ದರದಲ್ಲಿ ಮಾರಾಟ ಮಾಡುತ್ತಿದೆ. ‘ ಅಂದರೆ ನಮ್ಮ ದರಕ್ಕಿಂತ ಶೇ.200ಕ್ಕಿಂತ ಹೆಚ್ಚುವರಿ ದರದಲ್ಲಿ ಪ್ರಸಾದ ಮಾರಾಟ ಮಾಡಲಾಗುತ್ತಿದೆ,’ ಎಂದು ಸ್ಥಳೀಯ ವ್ಯಾಪಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಶೇ.300 ಹೆಚ್ಚುವರಿ ದರದಲ್ಲಿ ಖರ್ಜೂರ ಮಾರಾಟ

ಕೇವಲ ಕಲ್ಲು ಸಕ್ಕರೆ ಮಾತ್ರವಲ್ಲ, ಖರ್ಜೂರವನ್ನೂ ಸಹ ಶೇ. 300ಕ್ಕಿಂತಲೂ ಹೆಚ್ಚುವರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ‘ಖರ್ಜೂರ ಪ್ರಸಾದವನ್ನು ನಮ್ಮ ದರಕ್ಕಿಂತಲೂ ಶೆ. 300ಕ್ಕಿಂತ ಹೆಚ್ಚುವರಿಯಾಗಿ ಅಂದರೇ ಮೂರುಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಭಕ್ತರ ಮೇಲೆ ಅನಗತ್ಯ ಆರ್ಥಿಕ ಭಾರ ಉಂಟು ಮಾಡಿದಂತಾಗಿದೆ. ಪ್ರಸಾದದ ಪಾವಿತ್ರ್ಯತೆಯೂ ಮೇಲೂ ಹಾನಿಗೊಳಗಾಗಿದೆ. ಮತ್ತು ಅದು ಕೇವಲ ವ್ಯಾಪಾರ ಚಟುವಟಿಕೆಯಂತಾಗಿದೆ,’ ಎಂದು ಸ್ಥಳೀಯ ವ್ಯಾಪಾರಸ್ಥರು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ದೌರ್ಜನ್ಯದಿಂದ ಸ್ಥಳಾಂತರ

ನ್ಯಾಯಾಲಯವು ಸ್ಥಳೀಯ ವ್ಯಾಪಾರಿಗಳ ಪರವಾಗಿಯೇ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ದೇವಾಲಯ ಪ್ರಾಧಿಕಾರದ ದಿನೇಶ್‌ ಎಂಬುವರು ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಪ್ರಸಾದ ತಯಾರಿಸಲು ಕೊಠಡಿ ನೀಡಬೇಕು ಎಂದು ಸ್ಥಳೀಯ ವ್ಯಾಪಾರಸ್ಥರು ಕೋರಿದ್ದರು ಆದರೆ ಅವರಿಗೆ ಪ್ರಸಾದ ತಯಾರಿಸಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ದೂರಿನಲ್ಲಿ ಅಳಲು ವ್ಯಕ್ತಪಡಿಸಿರುವುದು ಗೊತ್ತಾಗಿದೆ.

‘ನಾನು ನಿಮಗೆ ನೀರು ಕಟ್‌ ಮಾಡುತ್ತೇನೆ, ಪ್ರಸಾದ ತಯಾರಿಸಲು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಸಿಬ್ಬಂದಿಗಳನ್ನು ಇಟ್ಟುಕೊಳ್ಳಲು ಬಿಡುವುದಿಲ್ಲ,’ ಎಂದು ಹಲವು ಬಾರಿ ದೌರ್ಜನ್ಯ ನಡೆಸಿದ್ದರು ಎಂದು ಆರೋಪದ ಮಾತುಗಳನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಅಲ್ಲದೆ ಪ್ರಸಾದ ತಯಾರು ಮಾಡುತ್ತಿದ್ದ ಟೇಬಲ್‌ಗಳನ್ನು ದುರುದ್ದೇಶದಿಂದ ಮತ್ತು ಏಕಾಏಕೀ 2026ರ ಏಪ್ರಿಲ್‌ 12ರಂದು ಸ್ಥಳಾಂತರಿಸಿದ್ದರು ಪ್ರಸಾದ ಮಾರಾಟ ಮಾಡುತ್ತಿದ್ದ ಸ್ಥಳದ ಪಕ್ಕದಲ್ಲಿ ಮತ್ತೊಂದು ಟೇಬಲ್‌ ಹಾಕಿಸಿದ್ದರು. ಕಲ್ಲು ಸಕ್ಕರೆ ಮತ್ತು ಪ್ರಸಾದ ವಸ್ತುಗಳನ್ನು ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿನ ಚಟುವಟಿಕೆ ನಡೆಸಲು ನ್ಯಾಯಾಲಯ ಆದೇಶಗಳನ್ನು ಪಾಲಿಸಿಲ್ಲ. ಅಲ್ಲದೆ 90 ರು ನಂತೆ ಮಾರಾಟ ಮಾಡಿದ್ದಾರೆ. ಇದೇ ರೀತಿಯ ದೇವಾಲಯದ ಇತರೆ ಪ್ರಾಂಗಣಗಳಲ್ಲಿ ದರ್ಶನದ ಸರತಿ ಸಾಲುಗಳ ಮುಂಭಾಗದಲ್ಲಿ ಕಲ್ಲು ಸಕ್ಕರೆ ಮತ್ತು ಪ್ರಸಾದ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಅಲ್ಲಿಂದ ತೆರವುಗೊಳಿಸುವ ಮುನ್ನ ಯಾವುದೇ ತಿಳಿವಳಿಕೆಯನ್ನೂ ಸಹ ನೀಡಿರಲಿಲ್ಲ ಎಂದು ಆಪಾದಿಸಿರುವ ಸ್ಥಳೀಯ ವ್ಯಾಪಾರಸ್ಥರು, ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶ ಮತ್ತು ಹಿರಿಯ ಅಧಿಕಾರಿಗಳು ನೀಡಿದ್ದ ಆದೇಶಗಳನ್ನು ಉದ್ಧೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

 

ಸ್ಥಳೀಯರಿಂದ 82.42 ಲಕ್ಷ ರು ಪಾವತಿ

ಪ್ರಸಾದ ಮತ್ತು ಇತರೆ ವಸ್ತುಗಳ ಮಾರಾಟದ ಬಾಬ್ತನ್ನು ದೇವಾಲಯದ ನಿಧಿಗೆ ಕಾಲಕಾಲಕ್ಕೆ ಯಾವುದೇ ಬಾಕಿ ಇಲ್ಲದೆಯೇ ಸಂದಾಯ ಮಾಡಲಾಗುತ್ತಿದೆ. 2018-201ರಲ್ಲಿ 58,48,650 ರು ಗಳನ್ನು ದೇವಾಲಯ ನಿಧಿಗೆ ಪಾವತಿಸಿದ್ದಾರೆ. ಅಲ್ಲದೇ 2025-26ರಲ್ಲಿ 11,40,001 ರು., 2026-27ರಲ್ಲಿ 12,54,002 ರು. ಸೇರಿ ಒಟ್ಟಾರೆ 82,42,653 ರು.ಗಳನ್ನುಪಾವತಿಸಿದ್ದಾರೆ. ಆದರೂ ಸಹ ದೇವಾಲಯ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್‌ ಎಂಬುವರು ಉದ್ದೇಶಪೂರ್ವವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿರುವುದು ಗೊತ್ತಾಗಿದೆ.

 

 

ಕರ್ನಾಟಕದ ಟಾಪ್ 10 ದೇವಸ್ಥಾನಗಳಲ್ಲಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು. ಹಾಗೆಯೇ ಹೆಚ್ಚು ಆದಾಯ ಬರುವ ಮುಜರಾಯಿ ದೇವಾಲಯವೂ ಹೌದು.  ಕರ್ನಾಟಕ ಸರ್ಕಾರವು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧಿಗೆ ‘ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ‘ವನ್ನು ರಚಿಸಿದೆ. ಈ ಪ್ರಾಧಿಕಾರದ ಮೂಲಕ ದೇವಸ್ಥಾನದ ಸುತ್ತ ವರ್ತುಲ ರಸ್ತೆ, ಬೃಹತ್ ದಾಸೋಹ ಭವನ ಮತ್ತು ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸಿ, ಪ್ರವಾಸಿಗರು ಹಾಗೂ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ಘಾಟಿ ಸುಬ್ರಹ್ಮಣ್ಯ ದೇವಾಲಯವು ವಾರ್ಷಿಕ ಸರಾಸರಿ ₹8  ಕೋಟಿ ಆದಾಯವನ್ನು ಹೊಂದಿದ್ದು, ವರ್ಷಕ್ಕೆ 30  ರಿಂದ 70 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಈ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅನ್ನದಾಸೋಹ ಭವನ, ವಾಹನ ನಿಲುಗಡೆ ತಾಣ (ಪಾರ್ಕಿಂಗ್) ಮತ್ತು ಮೂಲಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ದೇವಾಲಯ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ವಿವರಿಸಿದೆ.

Hot this week

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...
Please Scan to make Your Contribution

Topics

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

Related Articles

Popular Categories

error: Content is protected !!