ಬೆಂಗಳೂರು; ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಸಂದರ್ಭದಲ್ಲೇ ಅದೂ ಅವರ ತವರು ಜಿಲ್ಲೆ ಕಲ್ಬುರ್ಗಿ ಜಿಲ್ಲೆಯ ಗ್ರಾಮಪಂಚಾಯ್ತಿಯಲ್ಲಿಯೇ ನರೇಗಾ ಸೇರಿದಂತೆ ಇನ್ನಿತರೆ ನಿರ್ದಿಷ್ಟ ಯೋಜನೆಗಳಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದ ಪ್ರಕರಣಗಳನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿದೆ.
ಅದೇ ರೀತಿ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 1,764.83 ಕೋಟಿ ರುಪಾಯಿ ಬಳಕೆಯಾಗದೇ ಹಾಗೇ ಉಳಿದಿತ್ತು ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ.
ಅದೇ ರೀತಿ ನರೇಗಾ ಯೋಜನೆಯಡಿ ಕೂಲಿ ಮತ್ತು ಸಾಮಗ್ರಿಗಳಿಗೆ ಅನುದಾನವನ್ನೂ ವೆಚ್ಚ ಮಾಡಿಲ್ಲ. ಬದಲಿಗೆ ಖರೀದಿ ಮತ್ತು ಇತರ ಉದ್ದೇಶಗಳಿಗೆ ಬಳಕೆ ಮಾಡಿರುವ ಹಲವು ಪ್ರಕರಣಗಳನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಹಿರಂಗಗೊಳಿಸಿದೆ.
2023-24ನೇ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ 2024ರ ಮಾರ್ಚ್ ಅಂತ್ಯಕ್ಕೆ ಕ್ರೋಢೀಕೃತ ವಾರ್ಷಿಕ ಲೆಕ್ಕ ಪರಿಶೋಧನೆಯು ನರೇಗಾ, 15ನೇ ಹಣಕಾಸು ಆಯೋಗದ ಅನುದಾನ ಬಳಕೆ, ಮಾರ್ಗಪಲ್ಲಟಗೊಂಡಿರುವ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯು ಸಲ್ಲಿಸಿರುವ ಲೆಕ್ಕ ಪರಿಶೋಧನಾ ವರದಿಯು ದಿ ಫೈಲ್ ಗೆ ಲಭ್ಯವಾಗಿದೆ.

ನರೇಗಾ ಯೋಜನೆಯಡಿಯಲ್ಲಿ 2024ರ ಮಾರ್ಚ್ ಅಂತ್ಯಕ್ಕೆ 5,127.61 ಕೋಟಿ ರು ಅನುದಾನವನ್ನು ಬಳಕೆ ಮಾಡಿಕೊಂಡಿದೆ. ಆದರೆ ಈ ಯೋಜನೆಯ ಸೌಲಭ್ಯಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಿಲ್ಲ. ಮತ್ತು ಮಾರ್ಗಸೂಚಿಗಳ ಅನ್ವಯ 60;40ರ ಅನುಪಾತದಲ್ಲಿ ಕೂಲಿ ಮತ್ತು ಸಾಮಗ್ರಿಗಳಿಗೆ ಅನುದಾನ ವೆಚ್ಚ ಮಾಡಿಲ್ಲ. ಬದಲಿಗೆ ಖರೀದಿ ಮತ್ತು ಇತರೆ ಉದ್ದೇಶಗಳಿಗೆ ಬಳಸಿಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ ಈ ಯೋಜನೆ ಅನ್ವಯ ಗ್ರಾಮ ಪಂಚಾಯ್ತಿಗಳು 9 ನಮೂನೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಆದರೆ ಈ ರೀತಿ ಕಡ್ಡಾಯವಾಗಿ ನಿರ್ವಹಿಸಿರುವ ಯಾವುದೇ ನಮೂನೆಗಳನ್ನು ಲೆಕ್ಕ ಪರಿಶೋಧಕರಿಗೆ ಹಾಜರುಪಡಿಸಿಲ್ಲ. ಅಲ್ಲದೇ ನರೇಗಾ ಕಾಮಗಾರಿಗಳನ್ನು ಪರಿಶೀಲನೆ ಮತ್ತು ತಪಾಸಣೆ ಮಾಢಿರುವ ವಿವರಗಳೂ ಸಹ ಲೆಕ್ಕ ಪರಿಶೋಧಕರಿಗೆ ಲಭ್ಯವಾಗಿಲ್ಲ. ಇದರಿಂದಾಗಿ ಈ ಯೋಜನೆಯ ಉದ್ದೇಶವು ಈಡೇರಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

15ನೇ ಹಣಕಾಸು ಆಯೋಗದ ಅನುದಾನವೂ ಸಹ ಪರಿಣಾಮಕಾರಿಯಾಗಿ ಬಳಕೆಯಾಗಿಲ್ಲ. ರಾಜ್ಯದ ಗ್ರಾಮ ಪಂಚಾಯ್ತಿಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಪ್ರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಈ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ. 90ರಷ್ಟು ಅನುದಾನವನ್ನು ಮೂಲಭೂತ ಅನುದಾನವಾಗಿದೆ. ಈ ಅನುದಾನವನ್ನು ಆಸ್ತಿ ಸೃಜನೆ ಕಾಮಗಾರಿಗೆ ಮೀಸಲಿಡಬೇಕಕು. ಅಲ್ಲದೇ ಶೇ. 10ರಷ್ಟು ಅನುದಾನವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗೆ ಉಪಯೋಗಿಬೇಕು.
ಶೇ. 25ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಮಗಾರಿಗಳಿಗೆ ಹಾಗೂ ಶೇ. 5ರಷ್ಟು ಅನುದಾನವನ್ನು ವಿಕಲಚೇತನ ಕಲ್ಯಾಣಕ್ಕಾಗಿ ಮೀಸಲಿಡಬೇಕು. ವಿಕಲಚೇತನ ಕಲ್ಯಾಣಕ್ಕಾಗಿ ಮೀಸಲಿಸಿರುವ ಶೇ. 5ರಷ್ಟು ಅನುದಾನವು ಪರಿಣಾಮಕಾರಿಯಾಗಿ ಬಳಕೆಯಾಗಿಲ್ಲ. ಅಲ್ಲದೇ ಈ ಯೋಜನೆಯಡಿ 2024ರ ಮಾರ್ಚ್ ಅಂತ್ಯಕ್ಕೆ 1,764.83 ಕೋಟಿ ರು ಬಳಕೆಯಾಗದೇ ಉಳಿದಿತ್ತು.

ಹಾಗೆಯೆ ಯೋಜನಾ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಅನುದಾನಗಳ ಮಾರ್ಗಪಲ್ಲಟ ಮಾಡಿ 4 ಕೋಟಿ 25 ಲಕ್ಷ ರುಪಾಯಿ ಮೊತ್ತ ಖರ್ಚು ಮಾಡಿರುವ ಹಲವು ಪ್ರಕರಣಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ ಅನುಚ್ಛೇದ 161 (ಬಿ)(5)ರ ಪ್ರಕಾರ ಯಾವುದೇ ನಿರ್ದಿಷ್ಟ ಯೋಜನೆಗೆ ಬಿಡುಗಡೆ ಮಾಡಲಾದ ಅನುದಾನವನ್ನು ಬೇರೆ ಉದ್ದೇಶಗಳಿಗೆ ಉಪಯೋಗ, ಮಾರ್ಗಪಲ್ಲಟ ಮಾಡಿ ಬಳಸಲು ಅವಕಾಶವಿಲ್ಲ. ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಯೋಜನಾ ಮಾರ್ಗಸೂಚಿಗಳ ಪ್ರಕಾಋವೇ ಕ್ರಿಯಾ ಯೋಜನೆ ತಯಾರಿಸಬೇಕು. ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದೇ ಯೋಜನೆಯನ್ನು ಕಾರ್ಯಗತಗೊಳಿಸಬೇಕು.
ಆದರೆ ಈ ನಿಯಮಗಳನ್ನು ಹಲವು ಗ್ರಾಮ ಪಂಚಾಯ್ತಿಗಳು ಕಡೆಗಣಿಸಿವೆ. ಅಲ್ಲದೇ ಆಯಾ ಯೋಜನೆಗಳಡಿ ಬಿಡುಗಡೆ ಮಾಡಿದ ಅನುದಾನಗಳನ್ನು ಆಯಾ ಮಾರ್ಗಸೂಚಿಗಳಲ್ಲಿ ತಿಳಿಸಿರುವ ಕಾರ್ಯಕ್ರಮಗಳಿಗೆ ವಿನಿಯೋಗಿಸಿಲ್ಲ. ಬೇರೆ ಬೇರೆ ಕಾರ್ಯಕ್ರಮ, ಯೋಜನೆಗಳೀಗೆ ಮಾರ್ಗಪಲ್ಲಟ ಮಾಡಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

ರಾಜ್ಯದ 10 ಜಿಲ್ಲೆಗಳ 261 ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟಾರೆ 4.25 ಕೋಟಿ ರು ಮೊತ್ತವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವುದನ್ನು ಲೆಕ್ಕ ಪರಿಶೋಧಕರು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ 20 ಲಕ್ಷ ರು ಅನುದಾನವನ್ನು ನೀರು ನಿರ್ವಹಣೆ ಖಾತೆಗೆ ವರ್ಗಾಯಿಸಿ ಕುಡಿಯುವ ನೀರು ಒದಗಿಸುವ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ. ಇದು ಯೋಜನಾ ಮಾರ್ಗಸೂಚಿಗಳ ನೇರ ಉಲ್ಲಂಘನೆಯಾಗಿದೆ. ಹೀಗಾಗಿ 20 ಲಕ್ಷ ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ತಿಳಿದು ಬಂದಿದೆ.
ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಬಡವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಕೈಗೊಂಡ ಎಲ್ಲಾ ಕಾಮಗಾರಿಗಳ ಪಾವತಿಯನ್ನು ಇ-ಗ್ರಾಮ ಸ್ವರಾಜ್ ತಂತ್ರಾಂಶದಲ್ಲಿಯೇ ಪಾವತಿಸಬೇಕಿತ್ತು. ಆದರೆ ಈ ಯೋಜನೆಯಡಿ ಕೈಗೊಂಡ ಕಾಮಗಾರಿಗೆ 14.69 ಲಕ್ಷ ರು ಕಾಮಗಾರಿ ಪಾವತಿಯನ್ನು ಮಾರ್ಗಸೂಚಿಗೆ ವ್ಯತಿರಿಕ್ತವಾಗಿ ಚೆಕ್ ಮೂಲಕ ಪಾವತಿಸಿದೆ. ಹಾಗೂ ಈ ಯೋಜನೆಯಡಿ ಉಳಿದ ಮೊತ್ತ 15.99 ಲಕ್ಷ ರು.ಗಳಿಗೆ ಕ್ರಿಯಾ ಯೋಜನೆ ತಯಾರಿಸದೇ ಬೀದಿ ದೀಪ ಮತ್ತು ಸಾಮಗ್ರಿಗಳನ್ನು ಖರೀದಿಸಿದೆ. ಇದು ಸಹ ಯೋಜನಾ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ವಿವರಿಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಸ್ಕ್ರೋ ಯೋಜನೆಯಡಿ ನಿರ್ದಿಷ್ಟ ಉದ್ದೇಶಕ್ಕಾಗಿ ಬಿಡುಗಡೆಯಾದ ಅನುದಾನದ ಮೊತ್ತ 35.33 ಲಕ್ಷ ರು.ಗಳನ್ನು ಅಭಿವೃದ್ಧಿ ಯೋಜನೆಯ ಖಾತೆಗೆ ವರ್ಗಾಯಿಸಿ ಖರ್ಚು ಮಾಡಲಾಗಿದೆ. ನಿರ್ದಿಷ್ಟ ಯೋಜನಾ ಅನುದಾನವನ್ನು ಮಾರ್ಗಪಲ್ಲಟ ಮಾಡಿ ವೆಚ್ಚ ಭರಿಸಿರುವುದರಿಂದ 35.33 ಲಕ್ಷ ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ಗೊತ್ತಾಗಿದೆ




