Wednesday | August 5, 2026 |

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡಿರುವುದು ಸೇರಿದಂತೆ ಹಲವು ಲೋಪಗಳು ಕಂಡುಬಂದಿವೆ. ಈ ಸಂಬಂಧ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ಮಹಾಲೆಕ್ಕಪರಿಶೋಧಕರು (ಲೆಕ್ಕಪರಿಶೋಧನೆ–I) ಅವರ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿದೆ.

ಹಾಗೆಯೇ ಈ ಸಂಘವು ಅನುದಾನ ನೋಂದಣಿ ನಿರ್ವಹಿಸಿಲ್ಲ. ಸರ್ಕಾರಿ ಅನುದಾನವನ್ನು ಸರ್ಕಾರೇತರ ಹಣದೊಂದಿಗೆ ಬ್ಯಾಂಕ್ ಖಾತೆಗಳಲ್ಲಿ ಹೊಂದಿಸಲಾಗಿದೆ. ₹9.50 ಕೋಟಿ ರು ವೆಚ್ಚದಲ್ಲಿ  ಕೈಗೊಂಡಿದ್ದ ಚಟುವಟಿಕೆಗಳು ಮತ್ತು ಇದಕ್ಕಾಗಿ ಮಾಡಿರುವ ವೆಚ್ಚದ ವಿವರ, ದಾಖಲೆಗಳನ್ನು ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಲ್ಲ. ಚಟುವಟಿಕೆವಾರು ಪ್ರಸ್ತಾವನೆಗಳನ್ನು ಪಡೆಯದೆ ಹಾಗೂ ಸಂಘದ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸದೆ ಅನುದಾನ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ಮಹಾಲೆಕ್ಕಪರಿಶೋಧಕರು (ಲೆಕ್ಕಪರಿಶೋಧನೆ–I) ಅವರ ಕಚೇರಿಯು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಜುಲೈ 21ರಂದು ಪತ್ರ ಬರೆದಿದೆ. ಸದ್ಯ ಈ ಸಂಘಕ್ಕೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರು ಅಧ್ಯಕ್ಷರಾಗಿದ್ದಾರೆ ಎಂದು ಗೊತ್ತಾಗಿದೆ.

ಈ ಪತ್ರದ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

ಆಸ್ತಿ ನೋಂದಣಿ ನಿರ್ವಹಿಸಿಲ್ಲ ಹಾಗೂ ಆಸ್ತಿಗಳ ಮೇಲಿನ ಸವಕಳಿ ವೆಚ್ಚದಲ್ಲಿ ₹50,75,368 ಮೊತ್ತದ ಅನಿಯಮಿತವಾಗಿ  ವೆಚ್ಚ ಮಾಡಿರುವುದನ್ನು  ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

ಕರ್ನಾಟಕ ಹಣಕಾಸು ಸಂಹಿತೆ (KFC) ಯ ವಿಧಿ 162(ಬಿ) ಪ್ರಕಾರ, ಸಾರ್ವಜನಿಕ ಸಂಸ್ಥೆಗಳು ಅಥವಾ ಕಾನೂನುಬದ್ಧ ಸಂಸ್ಥೆಗಳಿಗೆ ಅನುದಾನವನ್ನು ಮಂಜೂರು ಮಾಡುವ ಇಲಾಖೆಗಳು ಅನುದಾನ ಪಾವತಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಬಿಲ್ ಅನ್ನು ಅಂಗೀಕರಿಸುವ ಮೊದಲು, ಅನುದಾನಕ್ಕೆ ಲಗತ್ತಿಸಲಾದ ಷರತ್ತುಗಳನ್ನು ಅನುದಾನ ಸ್ವೀಕರಿಸುವ ಸಂಸ್ಥೆಯು ಒಪ್ಪಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

 

 

 

ಈ ಸಂಘಗಳಿಗೆ ಬಿಡುಗಡೆ ಮಾಡಲಾದ ಅನುದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. 2021-22 ರಿಂದ 2025-26 ರ ಅವಧಿಯಲ್ಲಿ ಐಎಎಸ್ ಸಂಘಕ್ಕೆ ಒಟ್ಟು ₹9.50 ಕೋಟಿ  ಅನುದಾನ ಬಿಡುಗಡೆ ಮಾಡಿರುವುದು ಕಂಡುಬಂದಿದೆ.

2021-22ರಲ್ಲಿ (DPAR3/DSW2022, ದಿನಾಂಕ 19-03-2022) 200 ಲಕ್ಷ, 2022-23ರಲ್ಲಿ ಯಾವುದೇ ಅನುದಾನ ನೀಡಿಲ್ಲ. 2023-24ರಲ್ಲಿ (DPAR12/DSW2023, ದಿನಾಂಕ 19-12-2023) 300 ಲಕ್ಷ, 2024-25ರಲ್ಲಿ (DPAR1/DSW2025, ದಿನಾಂಕ 27-02-2025) 225 ಲಕ್ಷ, 2025-26 ರಲ್ಲಿ (DPAR1/DSW2026, ದಿನಾಂಕ 12-01-2026) 225 ಲಕ್ಷ ರು ಸೇರಿ ಒಟ್ಟಾರೆ 9. 50 ಕೋಟಿ ರು ಅನುದಾನ ನೀಡಿತ್ತು.

 

 

ಅನುದಾನ ನೋಂದಣಿ ನಿರ್ವಹಿಸಿಲ್ಲ

ಕರ್ನಾಟಕ ಹಣಕಾಸು ಸಂಹಿತೆ (KFC) ಯ ವಿಧಿ 162(ಬಿ) ಪ್ರಕಾರ, ಯಾವುದೇ ಬಿಲ್ ಅನ್ನು ಅಂಗೀಕರಿಸುವ ಮೊದಲು, ಅನುದಾನಕ್ಕೆ ಲಗತ್ತಿಸಲಾದ ಷರತ್ತುಗಳನ್ನು ಅನುದಾನ ಸ್ವೀಕರಿಸಿದ ಸಂಸ್ಥೆಯು ಒಪ್ಪಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅನುದಾನ ನೋಂದಣಿ (Grant Register) ಯಲ್ಲಿ ಮಂಜೂರಾತಿ ಪತ್ರದ ಸಂಖ್ಯೆ ಮತ್ತು ದಿನಾಂಕ, ಅನುದಾನದ ಉದ್ದೇಶ, ಅನುದಾನಕ್ಕೆ ಲಗತ್ತಿಸಲಾದ ಷರತ್ತುಗಳು (ಇದ್ದಲ್ಲಿ), ಮಂಜೂರಾದ ಅನುದಾನದ ಮೊತ್ತ, ಲೆಕ್ಕಪರಿಶೋಧನಾ ಕಚೇರಿಗೆ ಬಳಕೆ ಪ್ರಮಾಣಪತ್ರ (Utilisation Certificate – UC) ಸಲ್ಲಿಸಿದ ದಿನಾಂಕದ ವಿವರಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಆದರೆ ಲೆಕ್ಕ ಪರಿಶೋಧಕರ ಪರಿಶೀಲನೆ ವೇಳೆಯಲ್ಲಿ ಈ ಯಾವ ದಾಖಲೆಗಳು ಲಭ್ಯವಾಗಿಲ್ಲ. ಡಿಪಿಎಆರ್ ಇಲಾಖೆಯು ಪ್ರತಿ ವರ್ಷ ಮಂಜೂರು ಮಾಡಿ ಪಾವತಿಸಿದ ಅನುದಾನ, ಸ್ವೀಕರಿಸಲಾದ ಬಳಕೆ ಪ್ರಮಾಣಪತ್ರಗಳು, ಹಾಗೂ ಬಾಕಿ ಉಳಿದಿರುವ ಮೊತ್ತಗಳ ವಿವರಗಳನ್ನು ದಾಖಲಿಸಲು ಅಗತ್ಯವಾದ ಅನುದಾನ ನೋಂದಣಿ ವಹಿಯನ್ನು ಯನ್ನು ನಿರ್ವಹಿಸಿಲ್ಲ ಎಂದು ಲೆಕ್ಕ ಪರಿಶೋಧಕರು ಬಯಲು ಮಾಡಿರುವುದು ಪತ್ರದಿಂದ ತಿಳಿದು ಬಂದಿದೆ.

ಇದರಿಂದ ಸಂಸ್ಥೆಗಳಿಗೆ ಬಿಡುಗಡೆಯಾದ ಮತ್ತು ಬಳಕೆಯಾದ ನಿಜವಾದ ಮೊತ್ತವೆಷ್ಟು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಲೆಕ್ಕ ಪರಿಶೋಧಕರು ಹೇಳಿದ್ದಾರೆ.

ಸರ್ಕಾರಿ ಅನುದಾನವನ್ನು ಸರ್ಕಾರೇತರ ಹಣದೊಂದಿಗೆ ಬ್ಯಾಂಕ್ ಖಾತೆಗಳಲ್ಲಿಟ್ಟಿದೆ. ಈ ಸಂಘವು ಹಲವು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದೆ. ಸರ್ಕಾರದ ಅನುದಾನವನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿರುವ ಖಾತೆ (ಸಂಖ್ಯೆ 1003102610001652 ) ಗೆ ಜಮೆ ಮಾಡಲಾಗಿತ್ತು. ಆದರೆ, ಈ ಅನುದಾನವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇರಿಸದೆ, ಇತರೆ ಸ್ವೀಕೃತಿಗಳೊಂದಿಗೆ ಸೇರಿಸಿರುವುದನ್ನು ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.

ಐಎಎಸ್‌ ಅಧಿಕಾರಿಗಳ ಸಂಘದ ಕಟ್ಟಡ

‘ಈ ಕ್ರಮವು ಹಣಕಾಸಿನ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ತತ್ವಗಳಿಗೆ ವಿರುದ್ಧವಾಗಿದೆ. ಸರ್ಕಾರಿ ಅನುದಾನದಿಂದ ಬಂದ ಬಡ್ಡಿ ಆದಾಯವನ್ನು ಪ್ರತ್ಯೇಕವಾಗಿ ಲೆಕ್ಕಹಾಕಲಾಗಿಲ್ಲ. ಈ ಕಾರಣದಿಂದ ವಾರ್ಷಿಕ ಲೆಕ್ಕಪತ್ರದಲ್ಲಿಯೂ ಅದರ ನಿಖರತೆಯು ಕಾಣಿಸಿಲ್ಲ. ಹೀಗಾಗಿ, ಅನುದಾನಕ್ಕೆ ಸಂಬಂಧಿಸಿದ ನಿಜವಾದ ಬಾಕಿ ಮೊತ್ತವನ್ನು ಲೆಕ್ಕಪರಿಶೋಧನೆಯು ದೃಢಪಡಿಸಲು ಸಾಧ್ಯವಾಗಿಲ್ಲ,’ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಇದಲ್ಲದೆ, 31 ಮಾರ್ಚ್ 2026 ರಂದು ಸಂಘದ ಬ್ಯಾಂಕ್ ಖಾತೆಯಲ್ಲಿ ಸುಮಾರು ₹2,07,67,010.17 ಮೊತ್ತ ಉಳಿದಿರುವುದು ಕಂಡುಬಂದಿದೆ. ಅಂದರೇ ಅನುದಾನದ ಹಣ ಸಂಪೂರ್ಣವಾಗಿ ಬಳಸಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

9.50 ಕೋಟಿ ವೆಚ್ಚಕ್ಕೆ ದಾಖಲೆಗಳೆಲ್ಲಿ?

ಅದೇ ರೀತಿ ₹9. 50 ಕೋಟಿ ರು  ವೆಚ್ಚ ಮತ್ತು ಕೈಗೊಂಡ ಚಟುವಟಿಕೆಗಳ ವಿವರಗಳನ್ನು ಈ ಸಂಘವು ಸಲ್ಲಿಸಿಲ್ಲ. ಅನುದಾನ ಮಂಜೂರು ಮಾಡುವ ಆದೇಶದಲ್ಲಿ ವೆಚ್ಚದ ವಿವರಗಳು ಹಾಗೂ ಚಟುವಟಿಕೆವಾರು ವರದಿಯನ್ನು ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿಸಿತ್ತು. ಆದರೆ, ಸಂಘವು ಕೇವಲ ಬಳಕೆ ಪ್ರಮಾಣಪತ್ರಗಳನ್ನು (UCs) ಮಾತ್ರ ಸಲ್ಲಿಸಿರುವುದು ಕಂಡುಬಂದಿದೆ. ಈ ಪರಿಶೀಲನೆಯಲ್ಲಿ, 2021-22 ರಿಂದ 2024-25 ರ ಅವಧಿಗೆ ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸಲಾಗಿದೆ. ಆದರೂ 2021-22 ರಿಂದ 2023-24 ರವರೆಗಿನ ವೆಚ್ಚದ ವಿವರಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ.

ದಾಖಲೆಗಳ ಕೊರತೆ

ದಾಖಲೆಗಳ ಕೊರತೆಯಿಂದ ಅನುದಾನದ ಹಣವನ್ನು ಸರಿಯಾದ ಉದ್ದೇಶಕ್ಕೆ ಬಳಸಲಾಗಿದೆಯೇ ಎಂಬುದನ್ನು ಲೆಕ್ಕಪರಿಶೋಧನೆಯು ದೃಢಪಡಿಸಲು ಸಾಧ್ಯವಾಗಲಿಲ್ಲ ಎಂದು ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

2024-25 ನೇ ಸಾಲಿನಲ್ಲಿ ₹225 ಲಕ್ಷ ಅನುದಾನದಿಂದ ಮಾಡಲಾಗಿದೆ ಎಂದು ಸಂಘವು ತಿಳಿಸಿದೆ. ವಾರ್ಷಿಕ ನಿರ್ವಹಣೆ ಶುಲ್ಕ ₹3,18,528 ರು., ಕಟ್ಟಡ ನಿರ್ವಹಣೆಗೆ ₹7,23,231 ರು., ಕ್ರಿಕೆಟ್ ಟೂರ್ನಮೆಂಟ್‌ಗೆ ₹7,76,414 ರು., ಸಹಕಾರ ಸಂಘಗಳ ನವೀಕರಣ ಶುಲ್ಕ ₹27,800 ರು., ಉದ್ಯಾನ (ಗಾರ್ಡನ್) ನಿರ್ವಹಣೆ ಗೆ ₹1,92,000 ರು., ಲಿಫ್ಟ್ ನಿರ್ವಹಣೆ ಗೆ ₹1,88,999 ರು., ಕೀಟ ನಿಯಂತ್ರಣ ನಿರ್ವಹಣೆ ಗೆ ₹1,09,375 ರು., ಆಸ್ತಿ ತೆರಿಗೆ ಪಾವತಿಗೆ ₹7,83,909 ರು., ಬೀಳ್ಕೊಡುಗೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ₹21,10,499 ರು., ಶಾಶ್ವತ ಮದ್ಯ (Liquor) ಪರವಾನಗಿ ಶುಲ್ಕ ₹7,47,500 ರು., ಆಸ್ತಿಗಳ ಮೇಲಿನ ಸವಕಳಿ ₹50,75,368 ರು., ಬೇಸಿಗೆ ಶಿಬಿರ (Summer Camp) ವೆಚ್ಚ – ₹7,57,131 ರು., ಎಆರ್‍‌ಐಗಾಗಿ ಖರೀದಿಸಿದ್ದ ಉಪಕರಣಗಳಿಗಾಗಿ ₹9,84,809 ರು ವೆಚ್ಚವಾಗಿದೆ ಎಂದು ಹೇಳಿತ್ತು.

 

ಸಂಘವು ನೀಡಿದ್ದ ಈ ದಾಖಲೆಗಳು ಮತ್ತು ಲೆಕ್ಕಪತ್ರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದಾರೆ. 2024-25 ನೇ ಸಾಲಿಗೆ ಸಲ್ಲಿಸಲಾದ ವೆಚ್ಚದ ವಿವರಗಳು ಸಂಘದ ನೈಜ ಲೆಕ್ಕಪತ್ರಗಳೊಂದಿಗೆ ಹೊಂದಿಕೆಯಾಗಿಲ್ಲ ಎಂಬುದು ಲೆಕ್ಕಪರಿಶೋಧನೆಯಲ್ಲಿ ಬಹಿರಂಗವಾಗಿದೆ.

ವೆಚ್ಚದ ಮೊತ್ತಗಳನ್ನು ಬ್ಯಾಂಕ್ ಖಾತೆಗಳಲ್ಲಿ ಡೆಬಿಟ್ ಮಾಡಲಾಗಿದ್ದರೂ, ಬಳಕೆ ಪ್ರಮಾಣಪತ್ರದಲ್ಲಿ (UC) ತೋರಿಸಿರುವ ವೆಚ್ಚಗಳಿಗೆ ಸಂಬಂಧಿಸಿದ ಸಮರ್ಪಕ ವೌಚರ್‌ಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಿಲ್ಲ. ಸೂಕ್ತ ಲೆಕ್ಕಪತ್ರ ನಿರ್ವಹಣೆ, ಸರ್ಕಾರಿ ಅನುದಾನದ ಹಣವನ್ನು ಪ್ರತ್ಯೇಕವಾಗಿ ನಿರ್ವಹಿಸುವುದು ಹಾಗೂ ವೆಚ್ಚದ ಹೊಂದಾಣಿಕೆ (Reconciliation) ಇಲ್ಲದ ಕಾರಣ, ಅನುದಾನದ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಲಾಗಿದೆಯೇ ಹಾಗೂ ಅದು ಉದ್ದೇಶಿತ ಕಾರ್ಯಕ್ಕಾಗಿಯೇ ವ್ಯಯಿಸಲಾಯಿತೇ ಎಂಬುದನ್ನು ಲೆಕ್ಕಪರಿಶೋಧನೆಯು ದೃಢಪಡಿಸಲು ಸಾಧ್ಯವಾಗಲಿಲ್ಲ ಎಂದು ಲೆಕ್ಕ ಪರಿಶೋಧಕರು ವಿವರಿಸಿದ್ದಾರೆ.

ಹಾಗೆಯೇ ಚಟುವಟಿಕೆವಾರು ಪ್ರಸ್ತಾವನೆಗಳನ್ನು ಪಡೆಯದೆ ಹಾಗೂ ಸಂಘದ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸದೆ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕ ಹಣಕಾಸು ಸಂಹಿತೆ (KFC) ಯ ವಿಧಿ 161(ಬಿ)(1) ಪ್ರಕಾರ, ಸರ್ಕಾರವು ವಿಶೇಷವಾಗಿ ಬೇರೆ ರೀತಿಯಲ್ಲಿ ಆದೇಶಿಸದ ಹೊರತು, ಅನುದಾನ ಮಂಜೂರು ಮಾಡುವ ಪ್ರತಿಯೊಂದು ಆದೇಶದಲ್ಲೂ ಅನುದಾನ ನೀಡುವ ಉದ್ದೇಶ ಹಾಗೂ ಅದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

ಇದಲ್ಲದೆ, ವಿಧಿ 161(ಬಿ)(3)(i) ಪ್ರಕಾರ, ಯಾವುದೇ ಸಾರ್ವಜನಿಕ ಸಂಸ್ಥೆ ಅಥವಾ ಸಂಘಕ್ಕೆ ಅನುದಾನ ಬಿಡುಗಡೆ ಮಾಡುವ ಮೊದಲು, ಮಂಜೂರು ಮಾಡುವ ಪ್ರಾಧಿಕಾರವು ಸಂಸ್ಥೆಯ ಲೆಕ್ಕಪರಿಶೋಧನೆಗೊಂಡ ವಾರ್ಷಿಕ ಹಣಕಾಸು ವಿವರಗಳು. ಲೆಕ್ಕಪರಿಶೋಧಕರ ವರದಿಯ ದಾಖಲೆಗಳನ್ನು ಕಡ್ಡಾಯವಾಗಿ ಪಡೆಯಬೇಕು.

ಇದರ ಉದ್ದೇಶ, ಅನುದಾನ ಸ್ವೀಕರಿಸುವ ಸಂಸ್ಥೆಯ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಹಿಂದಿನ ಅನುದಾನವನ್ನು ಉದ್ದೇಶಿತ ಕಾರ್ಯಕ್ಕಾಗಿಯೇ ಬಳಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆಯಲ್ಲಿ, ಐಎಎಸ್ ಸಂಘವು 5 ಡಿಸೆಂಬರ್ 1990 ರಂದು ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ, 1960ರ ಅಡಿಯಲ್ಲಿ ನೋಂದಾಯಿತವಾಗಿದ್ದು, 31 ಮಾರ್ಚ್ 2025 ರ ವೇಳೆಗೆ ಅದರ Owners’ Capital Account ನಲ್ಲಿ ₹24,83,80,134 ಮೊತ್ತದ ಶಿಲ್ಕು ಇರುವುದು ಕಂಡುಬಂದಿದೆ.

ಆದಾಗ್ಯೂ, ಮುಂದಿನ ವರ್ಷ ಕೈಗೊಳ್ಳಲು ಉದ್ದೇಶಿಸಿದ್ದ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳನ್ನು ಸಂಘವು ಸಲ್ಲಿಸಿರಲಿಲ್ಲ. 2024-25ನೇ ಸಾಲಿನ ಬಳಕೆ ಪ್ರಮಾಣಪತ್ರಗಳನ್ನು ಪರಿಶೀಲಿಸಿದಾಗ, ಅನುದಾನದ ಹಣವನ್ನು ಮುಖ್ಯವಾಗಿ ಬೀಳ್ಕೊಡುಗೆ ಕಾರ್ಯಕ್ರಮಗಳ ವೆಚ್ಚ, ಮದ್ಯ ಪರವಾನಗಿ (Liquor Licence) ಶುಲ್ಕ, ನಿರ್ವಹಣಾ ವೆಚ್ಚಗಳು, ಉಪಕರಣಗಳ ಖರೀದಿ ಉದ್ದೇಶಗಳಿಗೆ ಮಾತ್ರ ಬಳಸಲಾಗಿದೆ ಎಂಬುದು ಕಂಡುಬಂದಿದೆ.

ಇದರಿಂದ 2024-25ನೇ ಸಾಲಿನಲ್ಲಿ ಯಾವುದೇ ಮಹತ್ವದ ಚಟುವಟಿಕೆಗಳನ್ನು ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೂ, ಡಿಪಿಎಆರ್ (DPAR) ಇಲಾಖೆಯು ಸಂಸ್ಥೆಯ ಹಣಕಾಸಿನ ಸ್ಥಿತಿಯನ್ನು ಪರಿಶೀಲಿಸದೇ ಹಾಗೂ ಚಟುವಟಿಕೆ ವರದಿಗಳನ್ನು ಪಡೆಯದೇ ಅನುದಾನ ಬಿಡುಗಡೆ ಮಾಡಿದೆ. ಆದ್ದರಿಂದ, ಅನುದಾನದ ಅಗತ್ಯವನ್ನು ಮೌಲ್ಯಮಾಪನ ಮಾಡದೆ ಹಾಗೂ ಸಂಘದ ಹಣಕಾಸಿನ ಸ್ಥಿತಿಯನ್ನು ಪರಿಗಣಿಸದೆ ಪ್ರಮಾಣಾನುಪಾತವಾಗಿ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಕಾರಣಗಳನ್ನು ಇಲಾಖೆ ತಿಳಿಸಬೇಕು ಎಂದು ಆಕ್ಷೇಪಣೆಯಲ್ಲಿ ವಿವರಿಸಿದೆ.

 

 

 

ಆಸ್ತಿ ನೋಂದಣಿ (Asset Register) ನಿರ್ವಹಿಸದಿರುವುದು ಹಾಗೂ ಆಸ್ತಿಗಳ ಮೇಲಿನ ಸವಕಳಿ (Depreciation) ವೆಚ್ಚದಲ್ಲಿ ₹50,75,368ರ ಅನಿಯಮಿತ ವೆಚ್ಚ ಮಾಡಿದೆ. ಕೆಎಫ್‌ಸಿ ವಿಧಿ 161(ಬಿ)(5) ರ ಟಿಪ್ಪಣಿ 3(ಅ) ಪ್ರಕಾರ, ಅನುದಾನ ಮಂಜೂರಾತಿ ಆದೇಶದಲ್ಲಿ ಸರ್ಕಾರಿ ಅನುದಾನದಿಂದ ಸಂಪೂರ್ಣವಾಗಿ ಅಥವಾ ಬಹುಪಾಲು ಖರೀದಿಸಲಾದ ಸ್ಥಿರ ಹಾಗೂ ಚರ ಆಸ್ತಿಗಳ (Immovable & Movable Assets) ಸಂಪೂರ್ಣ ದಾಖಲೆಯನ್ನು ಸಂಸ್ಥೆಯು ನಿರ್ವಹಿಸಬೇಕು ಎಂಬ ಷರತ್ತು ಕಡ್ಡಾಯವಾಗಿರಬೇಕು. ಈ ದಾಖಲೆಗಳು ರಾಜ್ಯ ಲೆಕ್ಕಪರಿಶೋಧನೆ ಅಥವಾ ಸರ್ಕಾರ ಸೂಚಿಸಿದ ಇಲಾಖೆಯ ಪರಿಶೀಲನೆಗೆ ಒಳಪಟ್ಟಿರಬೇಕು. ಮಂಜೂರು ಮಾಡುವ ಪ್ರಾಧಿಕಾರ ವಿಶೇಷ ವಿನಾಯಿತಿ ನೀಡಿದರೆ ಮಾತ್ರ ಇದರಿಂದ ವಿನಾಯಿತಿ ದೊರೆಯುತ್ತದೆ.

ಟಿಪ್ಪಣಿ 3(ಬಿ) ಪ್ರಕಾರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಇಂತಹ ಆಸ್ತಿಗಳನ್ನು ಮಾರಾಟ ಮಾಡಬಾರದು, ಅಡಮಾನ ಇಡಬಾರದು, ಅಥವಾ ಅನುದಾನ ಮಂಜೂರಾದ ಉದ್ದೇಶವನ್ನು ಹೊರತುಪಡಿಸಿ ಬೇರೆ ಉದ್ದೇಶಕ್ಕೆ ಬಳಸಬಾರದು.

ಲೆಕ್ಕಪರಿಶೋಧನೆಯಲ್ಲಿ, ಸರ್ಕಾರಿ ಅನುದಾನದಿಂದ ನಿರ್ಮಿಸಲಾದ ಆಸ್ತಿಗಳಿಗಾಗಿ ಪ್ರತ್ಯೇಕ ಆಸ್ತಿ ನೋಂದಣಿ (Asset Register) ಯನ್ನು ಐಎಎಸ್ ಸಂಘವು ನಿರ್ವಹಿಸಿಲ್ಲ ಎಂಬುದು ಕಂಡುಬಂದಿದೆ. ಇದಲ್ಲದೆ, 2024-25 ರ ವಾರ್ಷಿಕ ಲೆಕ್ಕಪತ್ರಗಳಿಗೆ ಲಗತ್ತಿಸಲಾದ Asset Schedule–9(II) ಯಲ್ಲಿ ಸರ್ಕಾರಿ ಅನುದಾನದಿಂದ ನಿರ್ಮಿಸಲಾದ ಆಸ್ತಿಗಳ ಮೌಲ್ಯವನ್ನು ತೋರಿಸಲಾಗಿಲ್ಲ. 31-03-2025ರ ವೇಳೆಗೆ ಆಸ್ತಿಯ ಮೌಲ್ಯವನ್ನು ಕೇವಲ 6 ಎಂದು ನಮೂದಿಸಲಾಗಿದೆ.

ಆದಾಗ್ಯೂ, ಸರ್ಕಾರಿ ಅನುದಾನದಿಂದ ನಿರ್ಮಿಸಲಾದ ಆಸ್ತಿಗಳ ಮೇಲೆ ₹50,75,368 ಮೊತ್ತವನ್ನು ಸವಕಳಿ (Depreciation) ವೆಚ್ಚ ಎಂದು ತೋರಿಸಲಾಗಿದೆ. ವಾಸ್ತವವಾಗಿ, Depreciation ಎನ್ನುವುದು ಕೇವಲ ಲೆಕ್ಕಪತ್ರದಲ್ಲಿನ (Accounting) ಒಂದು ಹೊಂದಾಣಿಕೆ (Book Adjustment) ಮಾತ್ರ. ಇದು ಆಸ್ತಿಯ ಮೌಲ್ಯ ಕಾಲಕ್ರಮೇಣ ಕಡಿಮೆಯಾಗುವುದನ್ನು ತೋರಿಸುತ್ತದೆ. ಇದರಿಂದ ಯಾವುದೇ ನೈಜ ಹಣದ ವೆಚ್ಚ (Actual Outflow of Funds) ಆಗುವುದಿಲ್ಲ.

ಆದ್ದರಿಂದ, ಈ ಮೊತ್ತವನ್ನು ಅನುಮತಿಸಬಹುದಾದ ವೆಚ್ಚ (Admissible Expenditure) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಲೆಕ್ಕ ಪರಿಶೋಧಕರು ಹೇಳಿರುವುದು ಗೊತ್ತಾಗಿದೆ. ಹೀಗಾಗಿ, ಡಿಪಿಎಆರ್ ಇಲಾಖೆಗೆ ಸಲ್ಲಿಸಲಾದ ಬಳಕೆ ಪ್ರಮಾಣಪತ್ರ (UC) ಅನುದಾನ ಮಂಜೂರಾದ ಉದ್ದೇಶಕ್ಕಾಗಿ ನಿಜವಾಗಿ ಮಾಡಿದ ವೆಚ್ಚವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಲೆಕ್ಕಪರಿಶೋಧನೆಯ ಅಭಿಪ್ರಾಯವಾಗಿದೆ.

 

 

 

 

‘ಹೀಗಾಗಿ ಸರಿಯಾದ ಲೆಕ್ಕಪತ್ರ ನಿರ್ವಹಣೆ, ಬಳಕೆ ಪ್ರಮಾಣಪತ್ರಗಳ (UCs) ಪರಿಶೀಲನೆ ಹಾಗೂ ನಿಯಮಾನುಸಾರ ನಿರ್ವಹಿಸಬೇಕಾದ ದಾಖಲೆಗಳನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳದೆ ಗಣನೀಯ ಪ್ರಮಾಣದ ಅನುದಾನವನ್ನು ಬಿಡುಗಡೆ ಮಾಡಿರುವುದು, ಡಿಪಿಎಆರ್ (DPAR) ಇಲಾಖೆಯಲ್ಲಿ ಹಣಕಾಸಿನ ನಿಯಂತ್ರಣ ಮತ್ತು ಮೇಲ್ವಿಚಾರಣೆ ಸಮರ್ಪಕವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಿ ಅಗತ್ಯವಾದ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳಬೇಕು,” ಲೆಕ್ಕ ಪರಿಶೋಧಕರು ಪತ್ರದಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

ಈ ಕುರಿತು ದಿ ಫೈಲ್‌, ಪ್ರತಿಕ್ರಿಯೆ ಕೋರಿ ಐಎಎಸ್‌ ಅಧಿಕಾರಿಗಳ ಸಂಘದ ಅಧಿಕೃತ ಇ ಮೈಲ್‌ ಕಳಿಸಿದೆ. ಇದುವರೆಗೂ ಸಂಘವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಘವು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯನ್ನು ನವೀಕೃತಗೊಳಿಸಲಾಗುವುದು.

Hot this week

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ 86.19 ಕೋಟಿ ರು ವೆಚ್ಚ, ಆರ್‍‌ಟಿಐ ಮಾಹಿತಿ ಬಹಿರಂಗ

ಬೆಂಗಳೂರು;  ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹಂಚಿಕೆ ಮತ್ತು ಸಾಮಾಜಿಕ...

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ...
Please Scan to make Your Contribution

Topics

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

ಒಳ ಮೀಸಲಾತಿ; ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗಕ್ಕೆ 86.19 ಕೋಟಿ ರು ವೆಚ್ಚ, ಆರ್‍‌ಟಿಐ ಮಾಹಿತಿ ಬಹಿರಂಗ

ಬೆಂಗಳೂರು;  ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳಮೀಸಲಾತಿ ಹಂಚಿಕೆ ಮತ್ತು ಸಾಮಾಜಿಕ...

ಕೆಂಪಣ್ಣ ಆಯೋಗ ವರದಿ; ಸದನದಲ್ಲಿ ಮಂಡನೆಯಾಗದಿದ್ದರೂ 9 ವರ್ಷದ ಬಳಿಕ ಭರವಸೆ ಮುಕ್ತಾಯಗೊಳಿಸಿದ ಸಮಿತಿ, ಇಲ್ಲಿ ಏನೂ ಮಾಡುವುದಕ್ಕಾಗುವುದಿಲ್ಲವೆಂದಿದ್ದೇಕೆ ತುಷಾರ್ ಗಿರಿನಾಥ್?

ಬೆಂಗಳೂರು;  ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ...

Related Articles

Popular Categories

error: Content is protected !!